ಮೇ. 9 : ಭಾರತೀಯ ಸಂಗೀತಶಾಸ್ತ್ರ ದಿನಾಚರಣೆ ಘೋಷಣೆ

0

ಪುತ್ತೂರು: ಸಂಗೀತ-ನಾಟ್ಯ ಸಂಸ್ಥೆ ನಡೆಸುತ್ತಿದ್ದ ಕಲಾವಿದ ವಿದ್ವಾಂಸರೂ, ಮೇರು ಶಾಸ್ತ್ರಕಾರರೂ ಆಗಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಮಹಾಮಹೋಪಾಧ್ಯಾಯ ಡಾ|ರಾ. ಸತ್ಯನಾರಾಯಣರವರ ಜನ್ಮದಿನವಾದ ಮೇ 9, ಇನ್ನು ಮುಂದೆ ಭಾರತೀಯ ಸಂಗೀತಶಾಸ್ತ್ರ ದಿನ ಆಗಿ ಆಚರಣೆಗೆ ಬರಲಿದೆ.

ಈ ಕುರಿತ ಅಧಿಕೃತ ಘೋಷಣೆಯನ್ನು ಮೈಸೂರಿನ ಮಹಾರಾಜ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ರವರು ಮೇ 9ರಂದು ಸಂಜೆ ಮೈಸೂರಿನ ಜೆಎಲ್‌ಬಿ ರಸ್ತೆಯಲ್ಲಿರುವ ಶ್ರೀ ವಾಸುದೇವಾಚಾರ್ಯ ಭವನದಲ್ಲಿ ಬ್ರಹ್ಮವಿದ್ಯಾ, ರಸಋಷಿ ಸಂಶೋಧನಾ ಕೇಂದ್ರ, ಸ್ವಾ.ರಾ.ಸಾ.ಧಾ. ಚನ್ನಪಟ್ಟಣ, ವೀಣಾ ವಿಶ್ವೇಶ್ವರನ್ ಅಂತಾರಾಷ್ಟ್ರೀಯ ಪ್ರತಿಷ್ಠಾನ, ಅಮೆರಿಕಾ ಇದರ ಆಶ್ರಯದಲ್ಲಿ ನಡೆಯಲಿರುವ ಸಂಗೀತಶಾಸ್ತ್ರ ದಿನಾಚರಣೆ, ಗ್ರಂಥ ಲೋಕಾರ್ಪಣೆ ಮತ್ತು ಕಲೋತ್ಸವಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾಡಲಿದ್ದಾರೆ.

ಶಾಸಕ ಎಸ್.ಎ.ರಾಮದಾಸ್, ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಸ.ಚಿ.ರಮೇಶ್, ಮೇರು ಸಂಗೀತ ವಿದ್ವಾಂಸ ಡಾ.ರಾ.ವಿಶ್ವೇಶ್ವರನ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಮೊದಲು ಸಂಜೆ 6 ಗಂಟೆಯಿಂದ ಕಾಂಚನ ಸಹೋದರಿಯರಾದ ಕಾಂಚನ ಶ್ರೀರಂಜನಿ ಮತ್ತು ಕಾಂಚನ ಶ್ರುತಿರಂಜನಿಯವರಿಂದ ಮತ್ತು ಸಹ ವಿದ್ವಾಂಸರಿಂದ ವಿಶೇಷ ಸಂಗೀತ ಕಾರ್ಯಕ್ರಮ ನಡೆಯಲಿದೆ. ಮೇ 10 ಹಾಗೂ 11ರಂದು ಖ್ಯಾತ ಕಲಾವಿದರಿಂದ ಸಂಗೀತ-ನೃತ್ಯ-ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ನಡೆಯಲಿವೆ ಎಂದು ಕಾಂಚನ ಶ್ರೀ ಲಕ್ಷ್ಮೀನಾರಾಯಣ ಸಂಗೀತ ಕಲಾಶಾಲೆಯ ಕಾರ್ಯದರ್ಶಿಯಾಗಿರುವ ರೋಹಿಣಿ ಸುಬ್ಬರತ್ನಂರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here