ಕೊಯಿಲ:ಭಾರೀ ಗಾಳಿ, ಮಳೆಗೆ ಮನೆಗಳಿಗೆ ಹಾನಿ-ಉಪ್ಪಿನಂಗಡಿಯಲ್ಲಿ ಅಂಗಡಿಗೆ ನುಗ್ಗಿದ ನೀರು

0

 

ಕೊಯಿಲ ನಾಣ್ಯಪ್ಪ ಪೂಜಾರಿಯವರ ಮನೆಗೆ ಹಾನಿಯಾಗಿರುವುದು

ಪುತ್ತೂರು:ತಾಲೂಕಿನ ವಿವಿಧ ಕಡೆಗಳಲ್ಲಿ ಮೇ 4ರಂದು ಸಂಜೆ ಸಿಡಿಲು, ಮಿಂಚು, ಭಾರೀ ಗಾಳಿ ಸಹಿತ ಮಳೆ ಸುರಿದಿದ್ದು ಹಲವು ಕಡೆಗಳಲ್ಲಿ ಮನೆ, ಕೃಷಿ ಹಾನಿ ಸಂಭವಿಸಿರುವುದಾಗಿ ವರದಿಯಾಗಿದೆ.ಕೊಯಿಲದಲ್ಲಿ ಹಲವು ಮನೆಗಳಿಗೆ ಹಾನಿಯಾಗಿದೆ.ಉಪ್ಪಿನಂಗಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವಾಂತರದಿಂದ ಮಳೆ ನೀರು ಅಂಗಡಿ, ಹೊಟೇಲ್‌ಗೆ ನುಗ್ಗಿದೆ.ಇರ್ದೆಯಲ್ಲಿ ಮರ ಮುರಿದು ವಿದ್ಯುತ್ ಕಂಬಗಳ ಮೇಲೆ ಬಿದ್ದ ಪರಿಣಾಮ ಕಂಬಗಳು ಮುರಿದು ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.ನೆಟ್ಟಣಿಗೆಮುಡ್ನೂರು ಸೇರಿದಂತೆ ಕೆಲವೆಡೆ ಕೃಷಿಗೂ ಹಾನಿ ಸಂಭವಿಸಿದೆ.

ಬೇಬಿ ಆಚಾರಿ ಅವರ ಮನೆಗೆ ಹಾನಿಯಾಗಿರುವುದು

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಕಾರಣ ಗ್ರಾಮೀಣ ಭಾಗದ ಹಲವೆಡೆ ಧಾರಾಕಾರ ಮಳೆಯಾಗಿದೆ. ಗಾಳಿಯ ಅಬ್ಬರಕ್ಕೆ ಮರಗಳು ಉರುಳಿ ಬಿದ್ದು ವಿದ್ಯುತ್ ಕಂಬಗಳ ಮೇಲೆ ಬಿದ್ದ ಪರಿಣಾಮ ಕಂಬಗಳು ಮುರಿದು ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.ಕೆಲವೆಡೆ ಕೃಷಿಗೂ ಹಾನಿಯಾಗಿದೆ. ತಾಲೂಕಿನ ಕುಂಬ್ರ, ತಿಂಗಳಾಡಿ, ಕೆಯ್ಯೂರು, ಬಡಗನ್ನೂರು, ಅರಿಯಡ್ಕ, ಕೊಳ್ತಿಗೆ, ರಾಮಕುಂಜ, ನೆಕ್ಕಿಲಾಡಿ, ಕಡಬ, ಸುಬ್ರಹ್ಮಣ್ಯ, ವಿಟ್ಲ ಸೇರಿದಂತೆ ವಿವಿಧ ಕಡೆಗಳಲ್ಲಿ ಭಾರೀ ಗಾಳಿ, ಮಳೆಯಾಗಿದೆ ಎಂದು ವರದಿಯಾಗಿದೆ.

 

ಗುಲ್ಗೊಡಿ ನಿವಾಸಿ ಚೈತ್ರಾ ಅವರ ಮನೆಗೆ ಹಾನಿಯಾಗಿರುವುದು

ಕೊಲದಲ್ಲಿ ಮನೆಗಳಿಗೆ ಹಾನಿ: ಮೇ. 4ರಂದು ಸಂಜೆ ಬೀಸಿದ ಭಾರೀ ಗಾಳಿ ಹಾಗೂ ಮಳೆಗೆ ಕಡಬ ತಾಲೂಕು ಕೊಯಿಲ ಗ್ರಾಮದಲ್ಲಿ ಹಲವು ಮನೆಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.

ಕೊಯಿಲ ಗ್ರಾಮದ ಪಟ್ಟೆ ನಾಣ್ಯಪ್ಪ ಪೂಜಾರಿಯವರ ಮನೆಗೆ ತೆಂಗಿನ ಮರ ಬಿದ್ದು ಹಾನಿಯಾಗಿದೆ. ಬೇಬಿ ಆಚಾರಿ ಎಂಬವರ ಮನೆಯ ಹೆಂಚು ಹಾರಿ ಹೋಗಿದೆ. ಗುಲ್ಗೊಡಿ ಚೈತ್ರಾ ಎಂಬವರ ಮನೆಯ ಕಿಟಿಕಿ, ಗೋಡೆಗಳಿಗೆ ಹಾಗೂ ಮನೆಗೆ ಅಳವಡಿಸಿದ ಸಿಮೆಂಟ್ ಶೀಟುಗಳಿಗೂ ಹಾನಿಯಾಗಿದೆ ಎಂದು ವರದಿಯಾಗಿದೆ. ಸ್ಥಳಕ್ಕೆ ಕೊಯಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಹರ್ಷಿತ್ ಕುಮಾರ್, ಸದಸ್ಯ ಯತೀಶ್ ಸೀಗೆತ್ತಡಿ, ಗ್ರಾಮಕರಣಿಕ ಶೇಷಾದ್ರಿ, ಗ್ರಾಮ ಸಹಾಯಕ ಜಯಂತ್‌ರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಆಲಂಕಾರು, ರಾಮಕುಂಜ, ಪೆರಾಬೆ ಹಾಗೂ ಇನ್ನಿತರ ಭಾಗದಲ್ಲೂ ಭಾರೀ ಗಾಳಿ, ಗುಡುಗು ಸಹಿತ ಮಳೆಯಾಗಿದೆ. ಅಡಕೆ, ತೆಂಗಿನ ಮರಗಳು ಧರಶಾಯಿಯಾಗಿದೆ. ಹಲವೆಡೆ ವಿದ್ಯುತ್ ತಂತಿಗಳ ಮೇಲೆ ಮರ, ಗೆಲ್ಲುಗಳು ಬಿದ್ದು ಹಾನಿಯಾಗಿದೆ. ವಿದ್ಯುತ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

ಇನ್ನೂ 2 ದಿನ ಮಳೆ ಸಾಧ್ಯತೆ

ಬೇಸಿಗೆ ಬಿರು ಬಿಸಿಲಿನ ನಡುವೆ ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿರುವುದಾಗಿ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ದಕ್ಷಿಣ ಅರೇಬಿಯನ್ ಸಮುದ್ರದಲ್ಲಿ ಚಂಡಮಾರುತದ ಕಾರಣದಿಂದ ಮೇ ೬ ರಿಂದ ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆಯಿರುವುದಾಗಿ ಸೂಚನೆ ನೀಡಲಾಗಿದೆ.

 

ನೆಟ್ಟಣಿಗೆ ಮುಡ್ನೂರು ಗ್ರಾಮದ ಪಟ್ರೋಡಿ ಶಂಕರ ಮುಖಾರಿಯವರ ತೋಟದಲ್ಲಿರುವ ಅಡಿಕೆ ಹಾಗೂ ತೆಂಗಿನ ಮರಗಳು ಮುರಿದು ಬಿದ್ದಿದೆ.

LEAVE A REPLY

Please enter your comment!
Please enter your name here