ಸಂಕಷ್ಟದಲ್ಲಿರುವರನ್ನೇ ದೋಚಲು ಯತ್ನ-ಲಕ್ಷದ ಆಸೆ ತೋರಿಸಿ ನಾಲ್ಕು ಸಾವಿರ ಪಡೆಯಲು ಮುಂದಾದ ವ್ಯಕ್ತಿ

0

ಉಪ್ಪಿನಂಗಡಿ: ಅಪಘಾತಕ್ಕೀಡಾಗಿ ಸುಧೀರ್ಘ ಕಾಲದ ಚಿಕಿತ್ಸೆಗೆ ತುತ್ತಾಗಿರುವ ಮಗನ ಚಿಕಿತ್ಸೆಗೆ ಸಹಾಯ ಹಸ್ತ ನೀಡಿ ಎಂದು ಸಾರ್ವಜನಿಕರಲ್ಲಿ ವಿನಂತಿಸಿದ ಬಡಪಾಯಿ ಕುಟುಂಬವೊಂದನ್ನು ದೋಚಲು ಯತ್ನಿಸಿದ ಘಟನೆ ವರದಿಯಾಗಿದೆ.

ಇಲ್ಲಿನ ಪೆರಿಯಡ್ಕ ಕಿಂಡೋವು ಮನೆ ನಿವಾಸಿ ಶೇಖರ್ ಪೂಜಾರಿ ಎಂಬವರ ಮಗ ಕಾಲೇಜು ವಿದ್ಯಾರ್ಥಿ ವಂದಿತ್ ಎಸ್. ಕಳೆದ ಜನವರಿ ತಿಂಗಳಲ್ಲಿ ಬಸ್ಸಿನಿಂದ ಬಿದ್ದು ಗಂಭೀರ ಗಾಯಗೊಂಡು ಚಿಕಿತ್ಸೆಗೆ ಒಳಗಾಗಿದ್ದಾರೆ. ಚಿಕಿತ್ಸೆಗೆ ಹೆಚ್ಚಿನ ಹಣದ ಅಗತ್ಯತೆ ಮೂಡಿದ ಕಾರಣ ದಾನಿಗಳ ಸಹಕಾರ ಬಯಸಿ ಸಾಮಾಜಿಕ ಜಾಲತಾಣಗಳಲ್ಲಿ ಮನವಿಯನ್ನು ಹರಿಯಬಿಡಲಾಗಿತ್ತು.

ಈ ಮನವಿಯನ್ನು ಗಮನಿಸಿದ ವ್ಯಕ್ತಿಯೋರ್ವರು ತಾವು ಗುಲ್ಬರ್ಗದ ಪ್ರಖ್ಯಾತ ದರ್ಗಾವೊಂದರ ಸಾಮಾಜಿಕ ಸೇವಾ ಯೋಜನೆಯ ಪದಾಧಿಕಾರಿ ಎಂದೂ ಪರಿಚಯಿಸಿ, `ನಿಮ್ಮ ಸಮಸ್ಯೆಯನ್ನು ಪರಿಶೀಲಿಸಿ ಸಮಾಜದ ಮುಂದೆ ಪ್ರಸ್ತಾಪಿಸಲಾಗಿತ್ತು. ೧.೯೮ ಲಕ್ಷ ರೂಪಾಯಿ ಸಂಗ್ರಹಣೆಗೊಂಡಿದೆ. ಈ ಮೊತ್ತವನ್ನು ಪಡೆಯಲು ತಾವು ಖುದ್ದಾಗಿ ಬರುವಿರೋ ಅಥವ ನಾವು ಬಂದು ಕೊಡಬೇಕಾ’ ಎಂದು ತಿಳಿಸಿದ್ದರು. ೧.೯೮ ಲಕ್ಷದ ದೊಡ್ಡ ಮೊತ್ತ ಸಿಗುವುದಾದರೆ ಗುಲ್ಬರ್ಗಕ್ಕೆ ಹೋಗುವುದಕ್ಕೆ ಮನಸ್ಸು ಮೂಡಿ, ವಿಚಾರವನ್ನು ಉಪ್ಪಿನಂಗಡಿಯ ಪಂಚಾಯತ್ ಸದಸ್ಯ ಯು.ಟಿ. ತೌಶಿಫ್ ರವರ ಗಮನಕ್ಕೆ ತರಲಾಯಿತು. ದೂರದ ಗುಲ್ಭರ್ಗದ ಸಂಘ ಸಂಸ್ಥೆಗಳ ಬಗ್ಗೆ ಪೂರ್ಣ ಮಾಹಿತಿ ಹೊಂದಿರದ ಅವರು ನಲಪ್ಪಾಡ್ ಹಾಗೂ ಯು.ಟಿ. ಖಾದರ್ ಮೂಲಕ ಗುಲ್ಬರ್ಗದ ಕಾಂಗ್ರೆಸ್ ಮುಖಂಡರ ಸಂಪರ್ಕ ಸಾಧಿಸಿ ಸಂಸ್ಥೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ವೇಳೆ ಸದ್ರಿ ಸಂಸ್ಥೆಯು ಬಹಳಷ್ಟು ಮಂದಿಗೆ ಆರ್ಥಿಕ ಸಹಾಯ ಒದಗಿಸುತ್ತಿದೆ ಎಂಬ ವಿಚಾರವು ತಿಳಿಯಿತ್ತಾದರೂ ಸದ್ರಿ ಸಂಸ್ಥೆ ಶೇಖರ್ ಪೂಜಾರಿ ಮಗನಿಗೆ ಹಣಕಾಸಿನ ಸಹಾಯ ಒದಗಿಸುವ ಬಗ್ಗೆ ಯಾವುದೇ ನಿರ್ಧಾರ ತಳೆದಿಲ್ಲ ಎಂದು ತಿಳಿದು ಬಂತು. ಕೂಡಲೇ ಪೋನಾಯಿಸಿದ ವ್ಯಕ್ತಿಯ ಬಗ್ಗೆ ವಿಚಾರಿಸಿದಾಗ ಆತನಿಗೂ ದರ್ಗಾದ ಸಮಿತಿಗೂ ಯಾವುದೇ ಸಂಬಂಧವಿಲ್ಲವೆಂದೂ ತಿಳಿಯಲ್ಪಟ್ಟಿತ್ತು.

ಇದೊಂದು ವಂಚನಾ ತಂಡದ ಕೃತ್ಯವೆನ್ನುವುದು ಖಚಿತವಾದೊಡನೆ ಆತನಿಗೆ ಖುದ್ದು ಗುಲ್ಬರ್ಗಕ್ಕೆ ಬರಲು ಕಷ್ಟವಾಗುತ್ತಿದೆ. ನೀವು ಕೊಡುವ ಮೊತ್ತವನ್ನು ಬ್ಯಾಂಕ್ ಖಾತೆಗೆ ವರ್ಗಾಹಿಸಿ ಎಂದು ತಿಳಿಸಲಾಯಿತು. ನಮ್ಮದೇನೇ ಕೊಡುಗೆ ಇದ್ದರೂ ಹಣವನ್ನು ಪಾವತಿಸುವ ಯಾ ಸ್ವೀಕರಿಸುವ ಪೋಟೋ ದಾಖಲೆ ಬೇಕಾಗಿರುವುದರಿಂದ ನಾವೇ ಬಂದು ನಿಮಗೆ ಹಣ ಕೊಡುತ್ತೇವೆ. ಸದ್ಯ ನೀವು ವಾಹನದ ಪೆಟ್ರೋಲ್ ಬಾಬ್ತು ೪೦೦೦ ರೂ. ಮೊತ್ತವನ್ನು ನನ್ನ ಖಾತೆಗೆ ಪೋನ್ ಪೇ ಮಾಡಿ ಎಂದು ತಿಳಿಸುತ್ತಾನೆ. ನೀವು ಕೊಡಲು ಉದ್ದೇಶಿಸಿದ ೧.೯೮ ಲಕ್ಷ ರೂ ಮೊತ್ತದಿಂದಲೇ ನಾಲ್ಕು ಸಾವಿರವನ್ನು ಮುರಿದುಕೊಂಡು ಬನ್ನಿ. ಎಂದು ತಿಳಿಸಿದ ಬಳಿಕ ಪೋನಾಯಿಸುವುದನ್ನೇ ನಿಲ್ಲಿಸಿರುತ್ತಾನೆ.

ಮೊದಲೇ ಸಂಕಷ್ಟದಲ್ಲಿದ್ದು ಅನ್ಯರ ಸಹಾಯ, ಸಹಕಾರ ಪಡೆಯಲು ಯಾಚಿಸುತ್ತಿದ್ದ ಮಂದಿಯನ್ನೂ ಈ ವಂಚಕರ ತಂಡ ವಂಚಿಸಲು ಮುಂದಾಗುತ್ತಿದೆ ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸುವುದು ಅಗತ್ಯ.

LEAVE A REPLY

Please enter your comment!
Please enter your name here