ಗ್ರಾಮ ಪಂಚಾಯತ್ ನೌಕರರನ್ನು ಸರಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಸಚಿವರಿಗೆ ಮನವಿ

0

ನೆಲ್ಯಾಡಿ: ಗ್ರಾಮ ಪಂಚಾಯತು ನೌಕರರಿಗೆ ಸಿ ಮತ್ತು ಡಿ ದರ್ಜೆಯ ಸ್ಥಾನ ಮಾನ ನೀಡಿ ಸರಕಾರಿ ನೌಕರರನ್ನಾಗಿ ಪರಿಗಣಿಸಬೇಕೆಂದು ಕಡಬ ತಾಲೂಕು ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘದ ವತಿಯಿಂದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರರವರಿಗೆ ಸಂಘದ ಅಧ್ಯಕ್ಷೆ ಪುಷ್ಪ ಜಯಂತ್ ಕೆ ಸುವರ್ಣರವರ ನೇತೃತ್ವದಲ್ಲಿ ಮನವಿ ಮಾಡಲಾಗಿದೆ.

 


ಗ್ರಾಮ ಪಂಚಾಯತ್‌ಗಳಲ್ಲಿ ಹಲವಾರು ವರ್ಷಗಳಿಂದ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮೀಣ ಭಾಗದ ನೌಕರರಾದ ನಾವುಗಳು ಸರಕಾರದಿಂದ ಬರುವ ಪ್ರತಿಯೊಂದು ಯೋಜನೆಯ ಸೌಲಭ್ಯಗಳನ್ನು ಗ್ರಾಮೀಣ ಜನರಿಗೆ ತಲುಪಿಸುವಲ್ಲಿ ಶೇ.೧೦೦ರಷ್ಟು ಶ್ರಮ ವಹಿಸುತ್ತಿದ್ದೇವೆ. ಆದರೆ ಸರಕಾರದ ಸೌಲಭ್ಯಗಳನ್ನು ಪಡೆಯುವಲ್ಲಿ ನಾವುಗಳು ವಂಚಿತರಾಗಿರುತ್ತೇವೆ. ನಮ್ಮ ಇಲಾಖೆ ಕೆಲಸವಲ್ಲದೆ ಇತರೇ ಬೇರೆ ಇಲಾಖೆಯ ಕೆಲಸಗಳನ್ನು ನಿರ್ವಹಿಸುವಲ್ಲಿ ಯಶಸ್ವಿಯಾಗಿ ನಾವು ನಮ್ಮನ್ನು ತೊಡಗಿಸಿಕೊಂಡಿದ್ದೇವೆ. ಗ್ರಾಮ ಮಟ್ಟದಲ್ಲಿ ಜನರಿಗೆ ಸಿಗುವ ಸೌಲಭ್ಯಗಳನ್ನು ಮನೆಗೆ ತಲುಪಿಸುವಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಗ್ರಾಮ ಪಂಚಾಯತ್‌ನ ಪ್ರಗತಿಯನ್ನು ಉತ್ತುಂಗಕ್ಕೆ ಏರಿಸಲು ನಿರಂತರವಾಗಿ ಶ್ರಮ ವಹಿಸುತ್ತಿದ್ದೇವೆ. ನಮಗೆ ಸರಕಾರದಿಂದ ಸಿಗಬೇಕಾದ ಸವಲತ್ತುಗಳಾದ ಪಿಎಫ್, ಇಎಸ್‌ಐಯಿಂದ ವಂಚಿತರಾಗಿದ್ದೇವೆ. ಆದ್ದರಿಂದ ಗ್ರಾಮ ಪಂಚಾಯತು ನೌಕರರಿಗೆ ಸಿ ಮತ್ತು ಡಿ ದರ್ಜೆಯ ಸ್ಥಾನಮಾನವನ್ನು ನೀಡಿ ಸರಕಾರಿ ನೌಕರರನ್ನಾಗಿಸುವಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ವಿನಂತಿಸಿದ್ದಾರೆ. ಮನವಿಗೆ ಸಾಕಾರಾತ್ಮಕವಾಗಿ ಸ್ಪಂದಿಸಿರುವ ಸಚಿವ ಎಸ್.ಅಂಗಾರರವರು ಈ ವಿಚಾರವನ್ನು ಸರಕಾರದ ಗಮನಕ್ಕೆ ತಂದು ಸೂಕ್ತ ಪರಿಹಾರ ಕಲ್ಪಿಸಲು ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.

LEAVE A REPLY

Please enter your comment!
Please enter your name here