ನೀರಿಂಗಲೂ ಇಲ್ಲ: ಅಂತರ್ಜಲ ವ್ಯದ್ಧಿಯೂ ಆಗಿಲ್ಲ-ನೀರು ಪಾಲಾಯಿತೇ ಕೋಟಿ ರೂ. ?

0

ಉಪ್ಪಿನಂಗಡಿ: ಕೃಷಿ ಚಟುವಟಿಕೆ ಹಾಗೂ ಅಂತರ್ಜಲವನ್ನು ವೃದ್ಧಿಸುವ ಮೂಲ ಉzಶದಿಂದ ಉಪ್ಪಿನಂಗಡಿ ಗ್ರಾಮದ ನಾಲಾಯ ಗುಂಡಿ ಎಂಬಲ್ಲಿ ಅಂದಾಜು ಒಂದು ಕೋಟಿ ರೂ. ವೆಚ್ಚದಲ್ಲಿ ಕಳೆದ ಮೂರು ವರ್ಷಗಳ ಹಿಂದೆ ನಿರ್ಮಾಣವಾದ ಕಿಂಡಿ ಅಣೆಕಟ್ಟಿನಲ್ಲಿ ಮೂಲ ಉzಶವೇ ನೀರು ಪಾಲಾಗುವಂತಾಗಿದೆ.

೧೬.೧೯ ಹೆಕ್ಟೇರ್ ಅಂದರೆ ೪೦ ಎಕರೆ ಕೃಷಿ ಪ್ರದೇಶದಲ್ಲಿ ಅಂತರ್ಜಲ ಅಭಿವೃದ್ಧಿಯ ಉದ್ದೇಶದಿಂದ ನೇತ್ರಾವತಿ ನದಿಯನ್ನು ಸೇರುವ ಸಣ್ಣ ಹೊಳೆಗೆ ನಾಲಾಯ ಗುಂಡಿ ಎಂಬಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ವತಿಯಿಂದ ಅಂದಾಜು ಒಂದು ಕೋಟಿ ರೂ. ವೆಚ್ಚದಲ್ಲಿ ಕಿಂಡಿ ಅಣೆಕಟ್ಟೊಂದು ನಿರ್ಮಾಣಗೊಂಡು ೨೦೦೧೯ರ ಡಿಸೆಂಬರ್‌ನಲ್ಲಿ ಇದು ಉದ್ಘಾಟನೆಗೊಂಡಿತ್ತು. ಹೊಳೆಯಲ್ಲಿ ನೀರ ಹರಿವು ಇರುವ ಸಂದರ್ಭವಾದ ನವೆಂಬರ್, ಡಿಸೆಂಬರ್ ತಿಂಗಳ ಅವಧಿಯಲ್ಲಿ ಇದಕ್ಕೆ ಹಲಗೆ ಅಳವಡಿಸಿದಾಗ ಮಾತ್ರ ಕಿಂಡಿ ಅಣೆಕಟ್ಟಿನೊಳಗೆ ಉತ್ತಮ ನೀರು ಶೇಖರಣೆಗೊಳ್ಳಲು ಸಾಧ್ಯ. ಈ ಸಮಯದಲ್ಲಿ ಹಲಗೆ ಅಳವಡಿಸಿದರೆ, ಮಳೆಗಾಲ ಆರಂಭವಾಗುವಾಗ ಹೊಳೆಯಲ್ಲಿಯೂ ನೀರ ಹರಿವು ಆರಂಭವಾಗುವುದರಿಂದ ಹಲಗೆಗಳನ್ನು ತೆಗೆದಿಡಬೇಕು. ಹಲಗೆಗಳನ್ನು ಜೋಡಿಸಿಡಲೆಂದೇ ಕಿಂಡಿ ಅಣೆಕಟ್ಟು ಬಳಿ ಪ್ರತ್ಯೇಕ ಕೊಠಡಿ ನಿರ್ಮಿಸಲಾಗಿದೆ. ಪ್ರತಿ ವರ್ಷ ಇದೇ ರೀತಿ ನಿರ್ವಹಣೆ ಮಾಡಿಕೊಂಡು ಬರಬೇಕಿತ್ತು. ಆದರೆ ಇಲ್ಲಿ ಅದು ಪರಿಪೂರ್ಣವಾಗಿ ನಡೆದದ್ದು ಉದ್ಘಾಟನೆಯ ವರ್ಷ ಮಾತ್ರ.

೨೦೧೯ರ ಡಿಸೆಂಬರ್ ತಿಂಗಳಲ್ಲಿ ನಡೆದ ಉದ್ಘಾಟನಾ ಸಂದರ್ಭ ಕಿಂಡಿ ಅಣೆಕಟ್ಟಿನಲ್ಲಿ ನೀರು ಶೇಖರಣೆಗೊಳಿಸಿದ್ದರಿಂದ ಪ್ರತಿ ಬಾರಿಯೂ ಬೇಸಿಗೆಯಲ್ಲಿ ನೀರಿಲ್ಲದೆ ಬರಡಾಗಿರುತ್ತಿದ್ದ ಈ ಹೊಳೆಯು ಆ ವರ್ಷ ನೀರಿನಿಂದ ಮೈದುಂಬಿಕೊಂಡಿತ್ತು. ಇದು ಪರಿಸರದ ಅಂತರ್ಜಲ ಅಭಿವೃದ್ಧಿಗೆ ಕಾರಣವಾದರೆ, ಇನ್ನೊಂದೆಡೆ ಕಿಂಡಿ ಅಣೆಕಟ್ಟಿನೊಳಗೆ ನಿಂತ ಜಲರಾಶಿಯು ಪ್ರವಾಸಿಗರನ್ನೂ ಆಕರ್ಷಿಸತೊಡಗಿತ್ತು. ಬಳಿಕ ಬಂದ ಮಳೆಗಾಲದಲ್ಲಿ ಗೇಟಿಗೆ ಅಳವಡಿಸಿದ್ದ ಹಲಗೆಗಳನ್ನು ತೆಗೆಯಲಾಯಿತು. ಶೇಖರಣಗೊಂಡಿದ್ದ ನೀರು ಮುಂದಕ್ಕೆ ಹರಿಯಿತು. ಮಳೆಗಾಲ ಮುಗಿದು ೨೦೨೧ರಲ್ಲಿ ಮತ್ತೆ ಬೇಸಿಗೆಕಾಲ ಬಂದಾಗ ಮೊದಲಿಗೆ ಕಿಂಡಿ ಅಣೆಕಟ್ಟಿಗೆ ಹಲಗೆ ಅಳವಡಿಸುವ ಕಾರ್ಯ ನಡೆಯದಿದ್ದರೂ, ಮಳೆಗಾಲ ಆರಂಭಕ್ಕೆ ಎರಡು ತಿಂಗಳ ಮೊದಲು ಹಲಗೆ ಅಳವಡಿಸಲಾಗಿತ್ತು. ಆದ್ದರಿಂದ ಆಳೆತ್ತರಕ್ಕಿಂತಲೂ ಹೆಚ್ಚು ನೀರು ಶೇಖರಣೆಗೊಳ್ಳಬೇಕಾದ ಸ್ಥಳದಲ್ಲಿ ಮೊಣಕಾಲುದ್ದದಷ್ಟು ಮಾತ್ರ ನೀರು ಅಲ್ಲಿ ಸಂಗ್ರಹವಾಗುವಂತಾಯಿತು.

ಆದರೆ ಇಲ್ಲಿ ಒಂದು ಕೋಟಿ ರೂಪಾಯಿ ಸಾರ್ವಜನಿಕರ ಹಣ ಪೋಲಾಗಿದ್ದು ಬಿಟ್ಟರೆ ನೀರಿಂಗಿಸುವ ಕಾರ್ಯವೂ ಆಗಿಲ್ಲ. ಅಂತರ್ಜಲದ ಅಭಿವೃದ್ಧಿಯೂ ಆಗಿಲ್ಲ. ಈ ಪ್ರದೇಶದ ರೈತರ ಕನಸೂ ಈಡೇರಿಲ್ಲ. ಅಣೆಕಟ್ಟಿನ ಮೇಲೆ ಜೀಪು, ರಿಕ್ಷಾಗಳಂತಹ ವಾಹನಗಳನ್ನು ಆ ಕಡೆಯಿಂದ ಈ ಕಡೆ ದಾಟಿಸಬಹುದಾಗಿದೆ. ಆದರೂ ಸೇತುವೆಯಿಂದ ದಾಟುವ ಈ ವಾಹನಗಳು ಈ ಕಡೆಯ ರಸ್ತೆಗೆ ತಿರುಗಲು ಬಹಳ ಕಷ್ಟಪಡಬೇಕಾದ ಸನ್ನಿವೇಶ ಇಲ್ಲಿದೆ. ಯಾಕೆಂದರೆ ಕಿಂಡಿ ಅಣೆಕಟ್ಟಿನ ನೇರಕ್ಕೆ ಧರೆಯಿದ್ದು, ಇಕ್ಕಟ್ಟಾದ ಈ ಪ್ರದೇಶದಲ್ಲಿ ಕಿಂಡಿ ಅಣೆಕಟ್ಟಿನಿಂದ ಈ ರಸ್ತೆಗೆ `ಎಲ್’ ರೂಪ ಇದೆ. ರಸ್ತೆಯೂ ಇಲ್ಲಿ ಸಮರ್ಪಕವಾಗಿಲ್ಲ. ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯು ನೀಡಿದ ಅಂದಾಜು ಪಟ್ಟಿಯಲ್ಲಿ ಈ ಕಾಮಗಾರಿಗೆ ಅಂದಾಜು ಒಂದು ಕೋಟಿ ರೂ. ಎಂದು ಇದ್ದು, ಆದರೆ ಕಿಂಡಿ ಅಣೆಕಟ್ಟು ಉದ್ಘಾಟನಾ ಸಂದರ್ಭ ಕೆಲವರು ಶಾಸಕರಿಗೆ ಶುಭ ಕೋರಿ ಹಾಕಿದ ಬ್ಯಾನರ್‌ನಲ್ಲಿ ಇದಕ್ಕೆ ಒಂದು ಕೋಟಿ 40 ಲಕ್ಷ ಮಂಜೂರಾಗಿದೆ ಎಂದಿದೆ. ಏನೇ ಆದರೂ ಇದಕ್ಕೆ ಹಾಕಿದ ಹಣ ವ್ಯರ್ಥವಾಗಿದ್ದಂತೂ ನಿಜ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ರೀತಿ ಹಣ ಪೋಲಾಗಲು ಬಿಡದೇ ಈ ಕಿಂಡಿ ಅಣೆಕಟ್ಟಿನ ನಿರ್ವಹಣೆಯನ್ನು ವರ್ಷಂಪ್ರತಿ ಮಾಡಿ ಇದು ಜನೋಪಯೋಗಿ ಆಗುವಂತೆ ಮಾಡಬೇಕೆನ್ನುವುದೇ ಸಾರ್ವಜನಿಕರ ಒತ್ತಾಯ.

2022ರಲ್ಲಿ ಇಲ್ಲಿನ ಪರಿಸ್ಥಿತಿ ಇದೆಲ್ಲಕ್ಕಿಂತಲೂ ಸಂಪೂರ್ಣ ಭಿನ್ನವಾಗಿದೆ. ಕಿಂಡಿ ಅಣೆಕಟ್ಟಿದ್ದರೂ ಅದಕ್ಕೆ ಹಲಗೆ ಅಳವಡಿಸಿ ನೀರನ್ನು ಶೇಖರಿಸಿಡುವ ಕಾರ್ಯ ನಡೆಯದ್ದರಿಂದಾಗಿ ಹೊಳೆಯು ಸಂಪೂರ್ಣ ಬತ್ತಿ ಬರಡಾಗುವಂತಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ,ಒಂದು ಕೋಟಿ ರೂ. ವೆಚ್ಚ ಮಾಡಿದರೂ ಈ ಕಿಂಡಿ ಅಣೆಕಟ್ಟು ರೈತರ ಉಪಯೋಗಕ್ಕೆ ಸಿಗದಂತಾಗಿದೆ.

LEAVE A REPLY

Please enter your comment!
Please enter your name here