ಅಪಾಯಕಾರಿಯಾಗಿರುವ ಹೆದ್ದಾರಿ ಬದಿಯ ನೆಡುತೋಪು-ಮಳೆಗಾಲಕ್ಕೂ ಮುನ್ನ ಕೊಂಬೆ ಕತ್ತರಿಸುವ ಕೆಲಸವಾಗಲಿ

0

ಉಪ್ಪಿನಂಗಡಿ: ಬಿರು ಬೇಸಿಗೆಯಲ್ಲಿ ನೆರಳು ನೀಡುವ ಹೆದ್ದಾರಿ ಬದಿಯ ನೆಡುತೋಪುಗಳು ಮಳೆಗಾಲದ ಸಂದರ್ಭ ಅಪಾಯಕಾರಿಯಾಗಿಯೂ ಪರಿಣಮಿಸುತ್ತಿವೆ. ಆದ್ದರಿಂದ ಹೆದ್ದಾರಿಗೆ ಚಾಚಿಕೊಂಡು ಅಪಾಯಕ್ಕೆ ಆಹ್ವಾನ ನೀಡುವ ಮರಗಳ ರೆಂಬೆ, ಕೊಂಬೆಗಳನ್ನು ಕತ್ತರಿಸುವ ಕೆಲಸವಾಗಬೇಕಿದೆ.


ಹೆದ್ದಾರಿಯಲ್ಲಿ ಹೋಗುವವರಿಗೆ ನೆರಳಿನ ಆಶ್ರಯವಿರಲಿ ಹಾಗೂ ಅರಣ್ಯ ಸಂಪತ್ತು ಬೆಳೆಯಲಿ ಎಂದು ಅರಣ್ಯ ಇಲಾಖೆಯು ರಸ್ತೆ ಬದಿ ಗಿಡಗಳನ್ನು ನೆಟ್ಟಿದ್ದು, ಅವುಗಳ ಈಗ ಬೆಳೆದು ಮರಗಳಾಗಿವೆ. ಬಿ.ಸಿ.ರೋಡು- ಅಡ್ಡಹೊಳೆ ಹೆದ್ದಾರಿಯಲ್ಲಿದ್ದ ಭಾರೀ ಗಾತ್ರದ ಸಾವಿರಾರು ಮರಗಳು ಹೆದ್ದಾರಿ ಚುತುಷ್ಪಥ ಕಾಮಗಾರಿಗಾರಿ ಈಗಾಗಲೇ ಧರಾಶಾಹಿಯಾಗಿವೆ. ಆದರೆ ಉಪ್ಪಿನಂಗಡಿಯಿಂದ ಸುಬ್ರಹ್ಮಣ್ಯಕ್ಕೆ ತೆರಳುವ ಹಳೆಗೇಟು- ಮರ್ಧಾಳ ರಸ್ತೆಯಲ್ಲಿ ಹೀಗೆ ನೆಟ್ಟ ನೂರಾರು ಮರಗಳು ಈಗ ಬೆಳೆದು ನಿಂತಿದ್ದು, ಅವುಗಳಲ್ಲಿ ಕೆಲವು ಮರಗಳ ರೆಂಬೆ- ಕೊಂಬೆಗಳು ರಸ್ತೆಯ ಮೇಲೆಯೇ ಚಾಚಿಕೊಂಡಿದ್ದು, ಅಪಾಯಕಾರಿಯಾಗಿವೆ.

ಮುಂಗಾರು ಆಗಮನದ ಮೊದಲು ಈ ಭಾಗದಲ್ಲಿ ಗಾಳಿ- ಮಳೆ- ಸಿಡಿಲಿನ ಅಬ್ಬರ ಜೋರು. ಇಂತಹ ಮರದ ಕೊಂಬೆಗಳು ಗಾಳಿಗೆ ಸಿಲುಕಿ ಉರುಳಿ ಬೀಳುವ ಸಂಭವವೂ ಇದೆ. ಈ ಹಿಂದಿನ ಮಳೆಗಾಲದ ಸಂದರ್ಭದಲ್ಲಿಯೂ ಚಲಿಸುತ್ತಿರುವ ವಾಹನಗಳ ಮೇಲೆ ಇಂತಹ ಮರಗಳ ರೆಂಬೆಗಳು ಚಲಿಸುತ್ತಿರುವ ವಾಹನದ ಮೇಲೆ ಮುರಿದು ಬಿದ್ದು ಅಪಾಯವುಂಟಾದ ಉದಾಹರಣೆಯಿದೆ. ಈ ಬಾರಿಯೂ ಪೆರಿಯಡ್ಕ ಸೇರಿದಂತೆ ಹಲವು ಕಡೆಗಳಲ್ಲಿ ಮರಗಳ ಕೊಂಬೆಗಳು ಹೆದ್ದಾರಿಯ ಮೇಲೆಯೇ ಬಾಗಿಕೊಂಡ ಸ್ಥಿತಿಯಲ್ಲಿದ್ದು, ಮತ್ತೊಮ್ಮೆ ಅಪಾಯವನ್ನುಂಟು ಮಾಡುವ ಸಾಧ್ಯತೆ ಇದೆ. ಅಲ್ಲದೇ, ಕೆಲವು ಕಡೆ ವಿದ್ಯುತ್ ತಂತಿಗಳ ಮೇಲೆಯೂ ಮರಗಳ ರೆಂಬೆಗಳು ಬಾಗಿಕೊಂಡಿವೆ. ಆದ್ದರಿಂದ ಮೆಸ್ಕಾಂ ಇಲಾಖೆ ಹಾಗೂ ಆಯಾ ವ್ಯಾಪ್ತಿಯ ಗ್ರಾ.ಪಂ.ಗಳು ಹೀಗೆ ಅಪಾಯಕಾರಿಯಿರುವ ಮರಗಳನ್ನು ಪಟ್ಟಿ ಮಾಡಿ ಅರಣ್ಯ ಇಲಾಖೆಯಿಂದ ಅನುಮತಿ ಪಡೆದು, ಅವುಗಳ ಕೊಂಬೆ ತೆರವಿಗೆ ಮುಂದಾಗಬೇಕಿದೆ ಎಂಬುದು ಸಾರ್ವಜನಿಕರ ಆಗ್ರಹ.

LEAVE A REPLY

Please enter your comment!
Please enter your name here