ಶಾಂತಿನಗರ ಮಹಾವಿಷ್ಣು ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವಕ್ಕೆ ಹೊರೆಕಾಣಿಕೆ ಸಮರ್ಪಣೆ, ತುಲಾಭಾರ ಸೇವೆ

0

ಪುತ್ತೂರು: ಮೇ 7ರಂದು ನಡೆಯಲಿರುವ 34ನೇ ನೆಕ್ಕಿಲಾಡಿ ಗ್ರಾಮದ ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವಕ್ಕೆ ಮೇ 6ರಂದು ಹಸಿರು ಹೊರೆ ಕಾಣಿಕೆ ಸಮರ್ಪಿಸಲಾಯಿತು.

ಬೆಳಿಗ್ಗೆ ನಿತ್ಯ ಮಹಾಪೂಜೆ ಜರಗಿತು. ಬಳಿಕ ಶಾಂತಿನಗರ ಶ್ರೀ ಸತ್ಯನಾರಾಯಣ ಪೂಜಾ ಮೈದಾನದಿಂದ ದೇವಸ್ಥಾನದವರೆಗೆ ಮೆರವಣಿಗೆ ಮೂಲಕ ಸಾಗಿ ಹಸಿರು ಹೊರೆ ಕಾಣಿಕೆ ಸಮರ್ಪಿಸಲಾಯಿತು.‌ ಈ ಸಂದರ್ಭದಲ್ಲಿ ತುಲಾಭಾರ ಸೇವೆ ನಡೆಸಲಾಯಿತು. ಬಳಿಕ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಿತು.

ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಮೇ 7ರಂದು ಶ್ರೀ ಮಹಾವಿಷ್ಣು, ಶ್ರೀ ಮಹಾಗಣಪತಿ, ನಾಗದೇವರುಗಳು ಹಾಗೂ ಶ್ರೀ ರಕ್ತೇಶ್ವರಿ, ಮಹಿಷಂದಾಯ, ಪಂಜುರ್ಲಿ, ಗುಳಿಗ ದೈವಗಳು ಹಾಗೂ ವೃಕ್ಷರಾಜ ಅಶ್ವತ್ಥ ಪ್ರತಿಷ್ಠಾ ವಾರ್ಷಿಕ ಮಹೋತ್ಸವ ಮತ್ತು ಶ್ರೀ ದೇವರಿಗೆ ರಂಗಪೂಜೆ ನಡೆಯಲಿದ್ದು ಬೆಳಿಗ್ಗೆ ನಿತ್ಯ ಮಹಾಪೂಜೆ, ಶ್ರೀ ಗಣಪತಿ ಹವನ, ಕಲಶಪೂಜೆ ಪ್ರಾರಂಭ, ಅಶ್ವತ್ಥ ಕಲ್ಪೋಕ್ತ ಪೂಜೆ, ಶ್ರೀ ರಕ್ತೇಶ್ವರೀ ಸಹಿತ ಪರಿವಾರ ದೈವಗಳಿಗೆ ತಂಬಿಲ, ಶ್ರೀ ನಾಗದೇವರಿಗೆ ತಂಬಿಲ, ಶ್ರೀ ಸತ್ಯನಾರಾಯಣ ಪೂಜೆ, ಕಲಶಪೂಜೆ ಮತ್ತು ಕಲಶಾಭಿಷೇಕ ನಡೆಯಲಿದೆ. ಈ ಸಂದರ್ಭದಲ್ಲಿ ಮಡಂತ್ಯಾರು ಶ್ರುತಿಲಯ ಕ್ಲಾಸಿಕಲ್ಸ್ ನ ವಿದುಷಿ ಶ್ಯಾಮಲಾ ನಾಗರಾಜ ಭಟ್ ಕುಕ್ಕಿಲ ಮತ್ತು ಬಳಗದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಜರಗಲಿದೆ. ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದ್ದು ಅಪರಾಹ್ನ 3ರಿಂದ 7ರವರೆಗೆ ಶ್ರೀರಾಮ ಭಜನಾ ಮಂಡಳಿ ಆದರ್ಶನಗರ, ಶ್ರೀ ಶಾರದಾ ಮಹಿಳಾ ಭಜನಾ ಮಂಡಳಿ ರಾಮನಗರ ಉಪ್ಪಿನಂಗಡಿ, ಶ್ರೀ ಕಾಳಿಕಾಂಬಾ ಭಜನಾ ಮಂಡಳಿ ಉಪ್ಪಿನಂಗಡಿ, ಧರ್ಮಶ್ರೀ ಭಜನಾ ಮಂಡಳಿ ಕೋಡಿಂಬಾಡಿ ಮತ್ತು ಶಾಂತಿನಗರ ಶ್ರೀ ಮಹಾವಿಷ್ಣು ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ಜರಗಲಿದೆ. ರಾತ್ರಿ ದೇವಳದ ಮೊಕ್ತೇಸರ ಪುರುಷೋತ್ತಮ ಪ್ರಭು ಹನಂಗೂರು ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮಹೇಶ್ ನಿಟಿಲಾಪುರರವರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಧನ್ಯಕುಮಾರ್ ರೈ ಬಿಳಿಯೂರುಗುತ್ತು ಮತ್ತು ಬ್ರಹ್ಮಕಲಶಾಭಿಷೇಕ ಉತ್ಸವ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಧಾರ್ಮಿಕ ಸಭೆಯ‌ ನಂತರ ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ಮೂಲ್ಕಿ ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ತಂಡದವರಿಂದ ಕಾವ್ಯಶ್ರೀ ಅಜೇರು ಭಾಗವತಿಕೆಯಲ್ಲಿ ಯಕ್ಷಗಾನ ಬಯಲಾಟ ‘ಗರುಡೋದ್ಭವ’ ನಡೆಯಲಿದೆ.‌

LEAVE A REPLY

Please enter your comment!
Please enter your name here