ವಿವೇಕಾನಂದದಲ್ಲಿ ರ್‍ಯಾಂಕ್ ವಿಜೇತರಿಗೆ ಅಭಿನಂದನೆ

0

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ವಿವೇಕಾನಂದ ಸಮೂಹ ಸಂಸ್ಥೆಗಳ ಪದವಿ ಪರೀಕ್ಷೆಯ ರ್‍ಯಾಂಕ್ ವಿಜೇತರಿಗೆ ಅಭಿನಂದನಾ ಸಮಾರಂಭ ಅಭಿನಂದನಮ್ ವಿವೇಕಾನಂದ ಕಾಲೇಜಿನ ಕೇಶವ ಸಂಕಲ್ಪ ಸಭಾಭವನ ಮೇ. 6ರಂದು ಜರಗಿತು.

ಮಂಗಳೂರು ಮಂಗಳಾದೇವಿ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದ ಮಾತನಾಡಿ, ವಿದ್ಯೆಯ ಆಸಕ್ತಿ ಹಾಗೂ ಪರಿಶ್ರಮವೇ ಸಾಧನೆಗೆ ಮೂಲ. ಇದರ ಜೊತೆಗೆ ಆತ್ಮವಿಶ್ವಾಸದಿಂದ ಮುನ್ನುಗ್ಗುವ ಛಲ ಬೆಳೆಸಿಕೊಳ್ಳಿ. ಭಾರತದಲ್ಲಿ ಹಲವಾರು ಪ್ರತಿಭೆಗಳಿದ್ದರೂ, ಅವರಲ್ಲಿ ಆತ್ಮವಿಶ್ವಾಸದ ಕೊರತೆ ಇರುವುದನ್ನು ನಾವು ಗಮನಿಸಬಹುದು. ಇದರಿಂದಾಗಿ ಹಿನ್ನಡೆಯೂ ಆಗಿದೆ. ಸಾಧನೆಯ ಹಾದಿಯಲ್ಲಿ ಮುನ್ನುಗ್ಗಲು ಮನಸ್ಸಿನ ಬಲ ಅತೀ ಅಗತ್ಯ ಎಂದ ಅವರು, ಕುಟುಂಬದ ರಕ್ಷಣೆಯೂ ನಿಮ್ಮ ಜವಾಬ್ದಾರಿ ಎನ್ನುವುದನ್ನು ಮರೆಯದಿರಿ ಎಂದು ನೆನಪಿಸಿದರು.


ಆರ್‌ಎಸ್‌ಎಸ್ ದಕ್ಷಿಣ ಮಧ್ಯ ಕ್ಷೇತ್ರ ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ ಮಾತನಾಡಿ, ಶಾಲೆ – ಕಾಲೇಜು ಸಾಮಾಜಿಕ ಪರಿವರ್ತನೆಯ ಕೇಂದ್ರ. ಹಿಂದೆ ಹಳ್ಳಿಗಳಲ್ಲಿ ಜನಪದ ಗೀತೆಗಳನ್ನು ಮಕ್ಕಳಿಗೆ ಹೇಳುತ್ತಾ, ಶಿಕ್ಷಣವನ್ನು ನೀಡುತ್ತಿದ್ದರು. ಅಲ್ಲಿ ಸಂಸ್ಕಾರವೂ ಸಿಗುತ್ತಿತ್ತು. ಸಂಸ್ಕಾರ ಇಲ್ಲದ ಶಿಕ್ಷಣ ಶಿಕ್ಷಣವೇ ಅಲ್ಲ ಎಂದ ಅವರು, ಸಮಾಜಕಾರ್ಯದಲ್ಲೂ ವಿದ್ಯಾರ್ಥಿಗಳನ್ನು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು.


ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್ ಪಿ. ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ರ್‍ಯಾಂಕ್ ಪಡೆದ ಸಾಧಕರನ್ನು ಸನ್ಮಾನಿಸಿ, ಅವರ ಪೋಷಕರನ್ನೂ ಅಭಿನಂದಿಸಲಾಯಿತು. ವಿವೇಕಾನಂದ ಪದವಿ ಕಾಲೇಜಿನ ವಿದ್ಯಾರ್ಥಿಗಳಾದ ಬಿಎಸ್ಸಿಯಲ್ಲಿ ೨ನೇ ರ್‍ಯಾಂಕ್ ಪಡೆದಭಟ್ ದಿವ್ಯಾ ಎಸ್., ೩ನೇ ರ್‍ಯಾಂಕ್ ಪಡೆದ ಅನುಶ್ರೀ ಭಟ್, ೬ನೇ ರ್‍ಯಾಂಕ್ ಪಡೆದ ಶಿವಾನಿ ಮಲ್ಯ ಹಾಗೂ ಬಿಎನಲ್ಲಿ ೧೦ನೇ ರ್‍ಯಾಂಕ್ ಪಡೆದ ಸುಮಾ ವೈ. ಭಟ್ ಅವರನ್ನು ಸನ್ಮಾನಿಸಲಾಯಿತು.

ಇಂಜಿನಿಯರಿಂಗ್ ಪರೀಕ್ಷೆಯಲ್ಲಿ 3ನೇ ರ್‍ಯಾಂಕ್ ಪಡೆದ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನ ರಂಜನ್ ಎಂ. ಹಾಗೂ ೮ನೇ ರ್‍ಯಾಂಕ್ ಪಡೆದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ಇಂಜಿನಿಯರಿಂಗ್‌ನ ಕೃತಿಕಾ ಕೆ. ಅವರನ್ನು ಸನ್ಮಾನಿಸಲಾಯಿತು. ಬಿಎಡ್ ಪರೀಕ್ಷೆಯಲ್ಲಿ 4ನೇ ರ್‍ಯಾಂಕ್ ಪಡೆದ ಬಿಎಡ್‌ನ ದಿವ್ಯಾ ಹಾಗೂ ಕಾನೂನು ಪರೀಕ್ಷೆಯಲ್ಲಿ 4ನೇ ರ್‍ಯಾಂಕ್ ಪಡೆದ ಬದ್ರುದ್ದೀನ್ ಬಿ. ಹಾಗೂ 8ನೇ ರ್‍ಯಾಂಕ್ ಪಡೆದ ಸಿಂಧು ಬಿ. ಅವರನ್ನು ಸನ್ಮಾನಿಸಲಾಯಿತು. ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಕೃಷ್ಣ ಭಟ್ ಸ್ವಾಗತಿಸಿ, ಅಚ್ಯುತ ನಾಯಕ್ ವಂದಿಸಿದರು. ಬಿಎಡ್ ಕಾಲೇಜಿನ ಶಿಕ್ಷಕಿ ಕೃಷ್ಣವೇಣಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here