ಇಲಾಖೆಗಳಲ್ಲಿ ದುಡ್ಡು ಕೊಡದೆ ಯಾವುದೇ ಕೆಲಸಗಳಾಗುತ್ತಿಲ್ಲ-ಪುತ್ತೂರಿನಲ್ಲಿ ಭ್ರಷ್ಟಾಚಾರಕ್ಕೆ ಶಾಸಕರು, ಬಿಜೆಪಿಯೇ ನೇರ ಕಾರಣ

0

  • ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದಾಲಿ ಆರೋಪ

ಪುತ್ತೂರು: ಪ್ರಸ್ತುತ ಸರಕಾರಿ ಇಲಾಖೆಗಳಲ್ಲಿ ಇತಿಹಾಸ ಕಂಡರಿಯದಷ್ಟರ ಮಟ್ಟಿಗೆ ಭ್ರಷ್ಟಾಚಾರ ನಡೆಯುತ್ತಿದ್ದು ದುಡ್ಡು ಕೊಡದೆ ಇಲಖೆಯಲ್ಲಿ ಯಾವುದೇ ಕೆಲಸಗಳು ನಡೆಯುತ್ತಿಲ್ಲ.ಇಂತಹ ಭ್ರಷ್ಟಾಚಾರದ ವಾತಾವರಣ ನಿರ್ಮಾಣಕ್ಕೆ ಶಾಸಕರು ಮತ್ತು ಬಿಜೆಪಿ ಪಕ್ಷ ನೇರ ಕಾರಣವಾಗಿದೆ ಎಂದು ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯೂ ಆಗಿರುವ ಎಚ್.ಮಹಮ್ಮದ್ ಆಲಿಯವರು ಸುದ್ದಿಗೋಷ್ಟಿಯಲ್ಲಿ ಆರೋಪಿಸಿದ್ದಾರೆ.

ಸರಕಾರಿ ಇಲಾಖೆಯಲ್ಲಿ ನಡೆಯುವ ಭ್ರಷ್ಟಾಚಾರ, ಲಂಚಾವತಾರದಿಂದ ಜನಸಾಮಾನ್ಯರಿಗಾಗುವ ಸಮಸ್ಯೆಗಳ ಪ್ರತಿಪಕ್ಷ ಕಾಂಗ್ರೆಸ್ ಕಳೆದ ನಾಲ್ಕು ವರ್ಷಗಳಿಂದ ಧ್ವನಿ ಎತ್ತುವ ಕೆಲಸ ಮಾಡಿಕೊಂಡು ಬಂದಿದೆ.ಆದರೆ ಶಾಸಕ ಸಂಜೀವ ಮಠಂದೂರುರವರು ಪುತ್ತೂರಿನ ಸರಕಾರಿ ಇಲಾಖೆಗಳಲ್ಲಿ ಹಾಗೂ ಬೇರೆ ಬೇರೆ ಕಡೆಗಳಲ್ಲಿ ನಡೆಯುವ ಭ್ರಷ್ಟಾಚಾರವನ್ನು ತಡೆಯುವ ಕೆಲಸ ಮಾಡದೆ ಅದನ್ನು ಪ್ರೋತ್ಸಾಹಿಸುವ ಕೆಲಸ ಮಾಡಿಕೊಂಡು ಬಂದಿದ್ದಾರೆ ಎಂದು ಆರೋಪಿಸಿದ ಆಲಿಯವರು, ಪುತ್ತೂರಿನಲ್ಲಿ ಬೃಹತ್ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದರೂ ಅದನ್ನು ತಡೆಯುವ ಬಗ್ಗೆ ಶಾಸಕರು ಏನು ಕ್ರಮ ಕೈಗೊಂಡಿದ್ದಾರೆ?ಭ್ರಷ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಅಸೆಂಬ್ಲಿಯಲ್ಲಿ ಎಷ್ಟು ಸಲ ಮಾತನಾಡಿದ್ದಾರೆ? ಅವರ ಮೇಲೆ ಮೇಲಧಿಕಾರಿಗಳಿಗೆ ಎಷ್ಟು ದೂರು ನೀಡಿದ್ದಾರೆ? ಎಂದು ಪ್ರಶ್ನಿಸಿದರಲ್ಲದೆ, ಇದ್ಯಾವುದನ್ನೂ ಮಾಡದೆ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ ಕಾಂಗ್ರೆಸ್ ಪಕ್ಷದ ನಾಯಕರ ಮೇಲೆ ದೂರು ಕೊಟ್ಟು ಬೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.ಜನರಿಗೆ ಸಮಸ್ಯೆ ಉಂಟಾದಾಗ ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ವಿರೋಧ ಪಕ್ಷದವರ ಜವಾಬ್ದಾರಿ ಎಂದು ಹೇಳಿದ ಆಲಿ, ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸಿಗರು ಬಿಜೆಪಿಯವರ ಬಗ್ಗೆ ಆರೋಪಿಸಿದರೆ, ನಿಮ್ಮ ಹೆಸರಿಗೆ ಕಳಂಕ ಉಂಟಾಗುವುದಾದರೆ, ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿ ಇದ್ದರೂ ಕೂಡ ರಾಜಾರೋಷವಾಗಿ ಭ್ರಷ್ಟಾಚಾರ ನಡೆಯುತ್ತಿರುವಾಗ ನಿಮ್ಮ ಹೆಸರಿಗೆ ಕಳಂಕ ಬರುವುದಿಲ್ಲವೇ? ಎಂದು ಪ್ರಶ್ನಿಸಿದರು.ಇಲ್ಲಿನ ಶಾಸಕರು ಸರಿ ಇರುತ್ತಿದ್ದರೆ, ಇಲ್ಲಿನ ಅಧಿಕಾರಿಗಳು ರಾಜಾರೋಷವಾಗಿ ಲಂಚ ತೆಗೆದುಕೊಳ್ಳುವಾಗ ಲಂಚ ತೆಗೆದುಕೊಳ್ಳದಂತೆ ಅವರಿಗೆ ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದರು.ಆದರೆ ಅವರು ಹಾಗೆ ಮಾಡದೆ ಭ್ರಷ್ಟ ಅಧಿಕಾರಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡಿದ್ದಕ್ಕೆ ಬಿಜೆಪಿಗರು ದೂರು ಕೊಟ್ಟ ಕೂಡಲೇ ನಾವು ಸುಮ್ಮನೆ ಕೂರುತ್ತೇವೆ ಎಂದುಕೊಂಡಿದ್ದರೆ ಅದು ಬಿಜೆಪಿಗರ ಭ್ರಮೆ.ಶಾಸಕರು ತಮ್ಮ ಭ್ರಷ್ಟಾಚರದ ಬಗ್ಗೆ ಮಾತನಾಡದೆ, ಹೆದರಿಕೆಯಿಂದ ಉತ್ತರ ನೀಡದೆ ಮೌನವಾಗಿದ್ದಾರೆ. ಆದರೆ ಅವರು ಭ್ರಷ್ಟಾಚಾರದ ಬಗ್ಗೆ ನೇರ ಸಂವಾದ ನಡೆಸಿದರೆ ನಾವು ದಾಖಲೆ ಸಮೇತ ಪ್ರೂವ್ ಮಾಡುತ್ತೇವೆ ಎಂದು ಆಲಿ ಹೇಳಿದರು.

ಅಕ್ರಮ ಸಕ್ರಮ, ೯೪ಸಿ ಸಹಿತ ಹಲವಾರು ಯೋಜನೆಗಳ ಮಂಜೂರಾತಿಗೆ ಲಕ್ಷಾಂತರ ಹಣ ನೀಡಬೇಕಾಗಿದೆ.ಹಣ ನೀಡದೆ ಯಾವ ಅಧಿಕಾರಿಗಳೂ ಜನಸಾಮಾನ್ಯರ ಫೈಲು ಮುಟ್ಟುವುದಿಲ್ಲ. ಇವತ್ತು ಕಂದಾಯ ಇಲಾಖೆ, ಸರ್ವೆ ಇಲಾಖೆ, ರಿಜಿಸ್ಟ್ರಾರ್ ಇಲಾಖೆ, ಆರ್‌ಟಿಒ ಇಲಾಖೆಯಿಂದ ಎಷ್ಟೆಷ್ಟು ಮಾಮೂಲಿ ಹೋಗುತ್ತದೆ ಎಂದು ನಮ್ಮಲ್ಲಿ ಮಾಹಿತಿ ಇದೆ ಎಂದು ಆಲಿ ಹೇಳಿದರು. ಮಿನಿವಿಧಾನಸೌಧದಲ್ಲಿ ರಾಜಾರೋಷವಾಗಿ ಭ್ರಷ್ಟಾಚಾರ ನಡೆಯುತ್ತಾ ಇದ್ದರೂ ಅಲ್ಲಿ ಶಾಸಕರ ಕಛೇರಿ ಇರುವುದು ಯಾವ ಪುರುಷಾರ್ಥಕ್ಕಾಗಿ? ಅಲ್ಲಿ ಶಾಸಕರ ಕಛೇರಿ ಇದೆಯೆಂದಾದರೆ ಇಂತಹ ಭ್ರಷ್ಟಾಚಾರ ನಡೆಯುತ್ತಿರಲಿಲ್ಲ ಎಂದು ಆಲಿ ಹೇಳಿದರು. ಇಷ್ಟೊಂದು ದೊಡ್ಡ ಪ್ರಮಾಣದ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿರುವ ಇಲ್ಲಿನ ಶಾಸಕರು ಲಂಚ ಭ್ರಷ್ಟಾಚಾರ ವಿರುದ್ಧದ ಸುದ್ದಿಯ ಆಂದೋಲನದಲ್ಲಿ ಫೋಸ್ ಕೊಡುತ್ತಿದ್ದಾರೆ. ನಿಜವಾಗಿಯೂ ಅವರಿಗೆ ಈ ವಿಚಾರದಲ್ಲಿ ನೈತಿಕತೆ ಇದೆಯೇ ಎಂದು ಆಲಿ ಪ್ರಶ್ನಿಸಿದರು.

ಭ್ರಷ್ಟಾಚಾರದ ಬಗ್ಗೆ ಬಿಜೆಪಿ ನಾಯಕರೇ ಹೇಳಿದ್ದಾರೆ: ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಮಾತನಾಡಿ ಕಂದಾಯ ಇಲಾಖೆಯಲ್ಲಿ ಅಕ್ರಮ ಸಕ್ರಮದಲ್ಲಿ ಕೋಟ್ಯಾಂತರ ರೂಪಾಯಿಯ ಭ್ರಷ್ಟಾಚಾರ ನಡೆಯುತ್ತಿದೆ. ಈ ವಿಷಯ ಸಮಿತಿ ಅಧ್ಯಕ್ಷರುಗಳಿಗೆ, ಎಲ್ಲಾ ಸದಸ್ಯರುಗಳಿಗೆ, ಅಧಿಕಾರಿಗಳಿಗೆ ಗೊತ್ತಿದೆ. ಕಂದಾಯ ಇಲಾಖೆಯ ಒಂದು ಸಿಟ್ಟಿಂಗ್‌ನಲ್ಲಿ ಮಾಮೂಲಿ ಎಲ್ಲರಿಗೂ ತಲುಪುತ್ತದೆ ಎಂದು, ಬಿಜೆಪಿ ಕಛೇರಿಯಲ್ಲಿ ಅಕ್ರಮ ಸಕ್ರಮದ ವ್ಯವಹಾರ ನಡೆಯುತ್ತಿದೆ.ಪ್ರತಿ ಸೆಂಟ್ಸ್‌ಗೆ ಎಷ್ಟೆಷ್ಟು ಎಂದು ಅಲ್ಲಿ ತೀರ್ಮಾನವಾಗುತ್ತದೆ ಎಂದು ಬಿಜೆಪಿಯ ಓರ್ವ ನಾಯಕರೇ ಹೇಳಿದ್ದಾರೆ ಎಂದು ಆರೋಪಿಸಿದ ಅವರು, ೭೩೦ ಕೋಟಿ ರೂಪಾಯಿಯ ಕಾಮಗಾರಿ ನಡೆಸಲಾಗಿದೆ ಎನ್ನುತ್ತಾರೆ.ಇದರಲ್ಲಿ ಶೇ.೪೦ ಎಲ್ಲಿಗೆ ಹೋಗುತ್ತದೆ? ಎಷ್ಟೆಷ್ಟು ಹೋಗುತ್ತದೆ ಎಂದು ಕೇಳಿದರು. ಪತ್ರಿಕಾಗೋಷ್ಟಿಯಲ್ಲಿ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಕೇಶವ ಪಡೀಲು ಉಪಸ್ಥಿತರಿದ್ದರು.

ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಕ್ಕೆ ದೂರುಕೊಟ್ಟರೆ ಸುಮ್ಮನಾಗುತ್ತೇವೆಂದು ಕೊಂಡಿದ್ದರೆ ಅದು ಬಿಜೆಪಿ ಭ್ರಮೆ ಭ್ರಷ್ಟಾಚಾರದ ಬಗ್ಗೆ ನೇರ ಸಂವಾದ ನಡೆಸಿದರೆ ದಾಖಲೆ ಸಮೇತ ಪ್ರೂವ್ ಮಾಡ್ತೇವೆ

ದೂರು ಕೊಟ್ಟರೆ ಎಫ್‌ಐಆರ್ ಆಗುತ್ತದೆ-ಅದು ಮುಖ್ಯವಲ್ಲ ನೈತಿಕತೆಯಿದ್ದರೆ ಮಹಾಲಿಂಗೇಶ್ವರನ ನಡೆಯಲ್ಲಿ ಹೇಳಲಿ

ಬಿಜೆಪಿಯ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ನಾಯಕರು ಜನತೆಗೆ ತಿಳಿಸಿದಕ್ಕಾಗಿ ಅವರ ಮೇಲೆ ಕೋರ್ಟ್‌ಗೆ ಹೋಗಿದ್ದಾರೆ.ಬಿಜೆಪಿಗರಿಗೆ ಆತ್ಮಸಾಕ್ಷಿ ಇದ್ದರೆ, ನಾವು ಎಲ್ಲಿಯೂ ಅವ್ಯವಹಾರ ಮಾಡಲಿಲ್ಲ. ಭ್ರಷ್ಟಾಚಾರಕ್ಕೆ ಸಹಕಾರ ನೀಡಲಿಲ್ಲ.ಬಿಜೆಪಿ ಕಛೇರಿಯಲ್ಲಿ ಯಾವುದೇ ಅವ್ಯವಹಾರದ ಬಗ್ಗೆ, ಭ್ರಷ್ಟಾಚಾರದ ಬಗ್ಗೆ ನಾವು ಎಲ್ಲಿಯೂ ಮಾತನಾಡಲಿಲ್ಲ ಎಂದು ಪುತ್ತೂರು ಶ್ರೀ ಮಹಾಲಿಂಗೇಶ್ವರನ ನಡೆಯಲ್ಲಿ ಹೇಳಲಿ ಎಂದು ಸವಾಲು ಹಾಕಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ದೂರುಕೊಟ್ಟರೆ ಎಫ್‌ಐಆರ್ ಆಗುತ್ತದೆ. ಅದು ಮುಖ್ಯವಲ್ಲ.ಅವರಿಗೆ ಆತ್ಮಸಾಕ್ಷಿ ಇದ್ದರೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹೇಳಲಿ ಎಂದರು.

LEAVE A REPLY

Please enter your comment!
Please enter your name here