ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಸುವರ್ಣ ಮಹೋತ್ಸವ

0

  • ಕುಟುಂಬ ಸಮ್ಮಿಲನ-ಸಾಧಕರಿಗೆ ಸನ್ಮಾನ
  • ಸಮಾಜಕ್ಕಾಗಿ ಕೆಲಸ ಮಾಡಿದವರನ್ನು ನಿವೃತ್ತಿ ಕಾಲದಲ್ಲೂ ನೆನಪಿನಲ್ಲಿಟ್ಟುಕೊಳ್ಳಬೇಕು-ಮಠಂದೂರು
  • ಪುತ್ತೂರಿನಲ್ಲಿ ನಿವೃತ್ತ ನೌಕರರ ಸಂಘ ಸಕ್ರಿಯ –ಎಸಿ ಗಿರೀಶ್ ನಂದನ್
  • ಜೀವನದ ಉತ್ಸಾಹಕ್ಕೆ ಮನೋಧರ್ಮ ಬದಲಾಯಿಸಬೇಕು-ಪ್ರೊ|ಎ.ವಿ.ನಾರಾಯಣ
  • ಅನುಭವಿ ಬರಹಗಾರರ ಕೃತಿ – ಪ್ರೊ|ವಿ.ಬಿ.ಅರ್ತಿಕಜೆ
  • ನಿವೃತ್ತಿ ಜೀವನದಲ್ಲಿ ಹೊಸತನವಿದೆ –ಕೆ.ಸೀತಾರಾಮ ರೈ
  • ಸಂಘದ ಮೂಲಕ ಸ್ವರ್ಣ ಸಾಧನ ಪ್ರಶಸ್ತಿಗೆ ಸಂಕಲ್ಪ-ಬಿ.ಐತ್ತಪ್ಪ ನಾಯ್ಕ್

ಪುತ್ತೂರು:ದೇಹಕ್ಕೆ ವಯಸ್ಸಾದರೂ ಮನಸ್ಸು ಯಾವಾಗಲೂ ಯುವಕರಂತಿರಬೇಕು ಎಂಬುದು ನಿಮ್ಮ ಕೆಲಸಗಳ ಮೂಲಕ ಗೊತ್ತಾಗುತ್ತಿದೆ.ಗಂಧ ತೇದಂತೆ, ಊದುಬತ್ತಿ ಉರಿದಂತೆ ಸಮಾಜಕ್ಕಾಗಿ ಕೆಲಸ ಮಾಡಿದವರನ್ನು ಅವರ ನಿವೃತ್ತಿ ಕಾಲದಲ್ಲೂ ಸಮಾಜ ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಶ್ರೀ ಮಹಾಲಿಂಗೇಶ್ವರ ದೇವಳದ ನಟರಾಜ ವೇದಿಕೆಯಲ್ಲಿ ಮೇ ೭ರಂದು ನಡೆದ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಪುತ್ತೂರು ಇದರ ಸುವರ್ಣ ಮಹೋತ್ಸವ ಸಮಾರಂಭ ಮತ್ತು ಕುಟುಂಬ ಸಮ್ಮಿಲನ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ, ಸಂಘದ ಪೂರ್ವಾಧ್ಯಕ್ಷರ ಭಾವಚಿತ್ರ ಅನಾವರಣಗೊಳಿಸಿ ಮಾತನಾಡಿದರು.

ನಿವೃತ್ತ ನೌಕರರ ಪಾಲಿಗೆ ಇದು ಕುಟುಂಬ ಸಮ್ಮಿಲನವಾದರೆ ನನ್ನ ಪಾಲಿಗೆ ನನ್ನ ೩ ಹಂತದ ಗುರುಗಳನ್ನು ಏಕಕಾಲದಲ್ಲಿ ಒಂದೇ ಕಡೆ ಕಾಣುವ ಗುರು-ಶಿಷ್ಯ ಸಮ್ಮಿಲನದ ಸಂಭ್ರಮವಾಗಿದೆ. ನನ್ನ ಪ್ರಾಥಮಿಕ ಶಾಲಾ ಗುರುಗಳಾದ ವಿಠಲ ಶೆಟ್ಟಿ, ಪ್ರೌಢಶಾಲೆಯ ಶಿಕ್ಷಕರಾದ ಕಾಂಚನ ಸುಂದರ ಭಟ್, ಕಾಲೇಜಿನ ಗುರುಗಳಾದ ಪ್ರೊ|ಎ.ವಿ.ನಾರಾಯಣ್ ಅವರನ್ನು ಇಲ್ಲಿ ಕಂಡೆ.ಇದು ನನ್ನ ಬದುಕಿನ ಅವಿಸ್ಮರಣೀಯ ಘಟನೆ ಎಂದ ಶಾಸಕರು, ಕಾಂಚನ ಸುಂದರ ಭಟ್ ಪುತ್ತೂರಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದಾಗ ನಾನು ಇಲ್ಲಿ ತಾ.ಪಂ.ಸದಸ್ಯನಾಗಿದ್ದೆ.ವಿಠಲ ಶೆಟ್ಟಿ ಅವರು ಪ್ರಾಥಮಿಕ ಶಾಲಾ ಹಂತದಲ್ಲಿ ನನ್ನನ್ನು ತಿದ್ದಿ ತೀಡಿ ಶಿಕ್ಷಣ ನೀಡಿದವರು.ಎ.ವಿ.ನಾರಾಯಣ ಅವರು ಕಾಲೇಜಿನಲ್ಲಿ ನನಗೆ ಬೋಧಿಸಿದವರು ಎಂದು ನೆನಪಿಸಿಕೊಂಡರು.ಜನರ ಸೇವೆಯೇ ಜನಾರ್ದನನ ಸೇವೆ ಎಂದು ಭಾವಿಸಿ ವೃತ್ತಿ ಕಾಲದಲ್ಲಿ ನೀವೆಲ್ಲ ಕೆಲಸ ಮಾಡಿದ್ದೀರಿ.ನಿಮ್ಮ ಆದರ್ಶಗಳೇ ಇಂದು ಕೂಡ ಸಮಾಜದಲ್ಲಿ ನಿಮಗೆ ಗೌರವ, ಆದರ ತಂದು ಕೊಡುತ್ತಿವೆ.ವೃತ್ತಿಗೆ ಮಾತ್ರವಲ್ಲ, ಪ್ರವೃತ್ತಿಗೂ ಸೈ ಎಂದು ಈಗ ನಿಮ್ಮ ಸಂಘದ ಚಟುವಟಿಕೆಗಳ ಮೂಲಕ ತೋರಿಸಿಕೊಟ್ಟಿದ್ದೀರಿ.ಸಮಾಜದ ಋಣ ತೀರಿಸುವ ಕೆಲಸ ಮಾಡುತ್ತಿದ್ದೀರಿ.ಅದಕ್ಕಾಗಿ ನಿವೃತ್ತ ನೌಕರರಲ್ಲದ,ಸಮಾಜದ ಸಾಧಕರನ್ನು ಗುರುತಿಸಿ ಗೌರವಿಸುತ್ತಿದ್ದೀರಿ.ಇವೆಲ್ಲ ದೇಹಕ್ಕೆ ವಯಸ್ಸಾದರೂ ಮನಸ್ಸು ಯಾವಾಗಲೂ ಯುವಕರಂತಿರಬೇಕುಂಬುದಕ್ಕೆ ಸಾಕ್ಷಿಯಾಗಿದೆ ಎಂದು ಮಠಂದೂರು ಹೇಳಿದರು.

ಪುತ್ತೂರಿನಲ್ಲಿ ನಿವೃತ್ತ ನೌಕರರ ಸಂಘ ಸಕ್ರಿಯ: ನಿವೃತ್ತ ಸರಕಾರಿ ನೌಕರರ ಸಂಘದ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಹೊರತಂದ `ಸ್ವರ್ಣ ಸಂಧ್ಯಾ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಸಹಾಯಕ ಕಮಿಷನರ್ ಗಿರೀಶ್ ನಂದನ್ ಅವರು ಮಾತನಾಡಿ, ನೀವೆಲ್ಲ ಒಂದು ಬಾರಿ ನಿವೃತ್ತರಾಗಿದ್ದೀರಿ.ನಾನು ಈಗಾಗಲೇ ೨ ನಿವೃತ್ತಿ ಪಡೆದಿzನೆ.ಸೈನಿಕನಾಗಿ ಕೆಲಸ ಮಾಡಿ ನಿವೃತ್ತಿಯಾಗಿ, ಬಳಿಕ ಸಹಕಾರಿ ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತಿ ಪಡೆದು ಈಗ ಎ.ಸಿ.ಯಾಗಿ ವೃತ್ತಿಯಲ್ಲಿzನೆ.ನಿವೃತ್ತಿ ಎಂದ ತಕ್ಷಣ ಬೇಸರಿಸಬೇಕಿಲ್ಲ.ನಿವೃತ್ತಿ ಬಳಿಕ ಬದುಕಿನ ಹೊಸ ಇನ್ನಿಂಗ್ಸ್ ಆರಂಭಗೊಳ್ಳುತ್ತದೆ.ಪುತ್ತೂರಿನಲ್ಲಿ ನಿವೃತ್ತ ನೌಕರರ ಸಂಘ ಸಾಕಷ್ಟು ಸಕ್ರಿಯವಾಗಿದೆ ಎಂದರು.

ಜೀವನದ ಉತ್ಸಾಹಕ್ಕೆ ಮನೋಧರ್ಮ ಬದಲಾಯಿಸಬೇಕು: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುವರ್ಣ ಮಹೋತ್ಸವ ಸ್ವಾಗತ ಸಮಿತಿ ಗೌರವಾಧ್ಯಕ್ಷ ಪ್ರೊ|ಎ.ವಿ.ನಾರಾಯಣ ಅವರು ಮಾತನಾಡಿ, ನಮ್ಮ ಜೀವನದಲ್ಲಿ ಉತ್ಸಾಹ ಇರಬೇಕು.

ಅದಕ್ಕಾಗಿ ಮನೋಧರ್ಮವನ್ನು ಬದಲಾಯಿಸಬೇಕು ಎಂದರು.ಅಗಲಿದ ನಿವೃತ್ತ ತಹಸಿಲ್ದಾರ್ ಕೋಚಣ್ಣ ರೈ ಅವರ ಕುರಿತು ಶಾಸಕರು ಸಮಾಧಾನಕರವಾದ ಮಾತುಗಳನ್ನಾಡಿದ್ದಾರೆ.ಆಗಿನ ಪುರಸಭೆ ಇರುವಾಗಲೇ ನಾವು ದರ್ಬೆ ವೃತ್ತಕ್ಕೆ `ಕೋಚಣ್ಣ ರೈ ವೃತ್ತ’ ನಾಮಕರಣಕ್ಕೆ ಮನವಿ ಮಾಡಿ ಅದಕ್ಕೆ ಬೇಕಾದ ಎನ್.ಒ.ಸಿಯನ್ನು ಕೂಡಾ ಪುರಸಭೆಗೆ ಕೊಟ್ಟಿದ್ದೆವು.ಸರಕಾರದ ನಿಯಮದ ಪ್ರಕಾರ ಪತ್ರಿಕಾ ನೋಟಿಫಿಕೇಶನ್ ಕೊಡಲಾಗಿತ್ತು.ಆ ಸಂದರ್ಭದಲ್ಲಿ ಕೋಚಣ್ಣ ರೈ ಹೆಸರು ಇಡಬಾರದೆಂದು ಯಾರೂ ಹೇಳಿಲ್ಲ.ಅಂಬೇಡ್ಕರ್ ಹೆಸರಿಗೆ ಒತ್ತಾಯ ಆಗಿತ್ತು.ಈ ನಿಟ್ಟಿನಲ್ಲಿ ಕೋರ್ಟಿನ ಮೊರೆ ಹೋಗಿವೆ.ಅದನ್ನು ಪುರಸಭೆಗೆ ಮಂಡಿಸಿವೆ ಎಂದು ಎ.ವಿ.ನಾರಾಯಣ ಹೇಳಿದರು.

ಅನುಭವಿ ಬರಹಗಾರರ ಕೃತಿ: `ಸ್ವರ್ಣ ಸಂಧ್ಯಾ’ ಸ್ಮರಣ ಸಂಚಿಕೆಯ ಸಂಪಾದಕರಾದ ಹಿರಿಯ ಸಾಹಿತಿ ಪ್ರೊ|ವಿ.ಬಿ.ಅರ್ತಿಕಜೆ ಸಂಚಿಕೆ ರೂಪು ಪಡೆದ ಬಗ್ಗೆ ಮಾತನಾಡಿ,ಅನುಭವಿ ಬರಹಗಾರರು ಕೃತಿ ಬರೆದುದರಿಂದ ಕೃತಿ ಸಂಪಾದನೆಯಲ್ಲಿ ಕಷ್ಟವಾಗಿಲ್ಲ.ಇದರ ಜೊತೆಗೆ ಸೂಕ್ತವಾದ ಹೆಸರನ್ನು ವತ್ಸಲಾರಾಜ್ಞಿ ಅವರು ನೀಡಿದ್ದಾರೆ.೫೦ಕ್ಕೆ ಸ್ವರ್ಣ ಮತ್ತು ನಿವೃತ್ತಿಗೆ ಸಂಧ್ಯಾ ಉತ್ತಮವಾದ ಅರ್ಥವಿದೆ ಎಂದರು.

ಸಾಧಕರಿಗೆ ಸಮ್ಮಾನ: ನಿವೃತ್ತ ನೌಕರರ ಸಂಘದ ಆಶ್ರಯದಲ್ಲಿ ಸುವರ್ಣ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ `ತೂಗುಸೇತುವೆಗಳ ಸರದಾರ’ ಗಿರೀಶ್ ಭಾರದ್ವಾಜ್ ಮತ್ತು `ಶಿಕ್ಷಣ ಸಂತ’ ಹರೇಕಳ ಹಾಜಬ್ಬ, `ಸಹಕಾರಿ ರತ್ನ’ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಸವಣೂರು ಸೀತಾರಾಮ ರೈ, ಲೆ|ಕರ್ನಲ್ ಜಿ.ಡಿ.ಭಟ್, ಮಾಸ್ಟರ್ ಪ್ಲಾನರಿ ಸಂಸ್ಥೆಯ ಮಾಲಕ ಎಸ್.ಕೆ.ಆನಂದ್, ಕೃಷಿ ಪಂಡಿತರಾದ ಬೆಳ್ತಂಗಡಿಯ ಬಿ.ಕೆ.ದೇವರಾವ್ ಕಿಲ್ಲೂರು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಜೊತೆಗೆ ಕೋವಿಡ್ ಸಂದರ್ಭದಲ್ಲಿ ಶಾಸಕರ ವಾರ್ ರೂಮ್ ಮೂಲಕ ೨೪/೭ ಅಂತ್ಯ ಸಂಸ್ಕಾರದ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡ ನಗರಸಭೆ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಅವರನ್ನೂ ಸನ್ಮಾನಿಸಲಾಯಿತು.ಸಮಾರೋಪ ಸಮಾರಂಭದಲ್ಲಿ ಮೂಲಿಕಾ ವೈದ್ಯೆ ಶಾರದಾ ಕೊಡಂಕಿರಿ ಅವರನ್ನು ಗೌರವಿಸಲಾಯಿತು.ಸುವರ್ಣ ಮಹೋತ್ಸವ ಸ್ವಾಗತ ಸಮಿತಿ ಉಪಾಧ್ಯಕ್ಷ ರಾಮದಾಸ್ ಗೌಡ ಎಸ್, ಎ.ರೇವತಿ ಸಾಲ್ಮರ, ಬಿ.ನಾಗಪ್ಪ ಗೌಡ ಬೊಮ್ಮೆಟ್ಟಿ, ಯು.ಮಹಮ್ಮದ್ ಹಾಜಿ, ಶಾಂತಿ ಟಿ.ಹೆಗ್ಡೆ, ಶಾಮ ಭಟ್ ಸನ್ಮಾನಿತರ ಪತ್ರ ವಾಚಿಸಿದರು.

ನಿವೃತ್ತಿ ಜೀವನದಲ್ಲಿ ಹೊಸತನವಿದೆ: ಸನ್ಮಾನ ಸ್ವೀಕರಿಸಿದ ಕೆ.ಸೀತಾರಾಮ ರೈ ವಣೂರು ಅವರು ಮಾತನಾಡಿ, ಅನೇಕ ಸಂದರ್ಭದಲ್ಲಿ ನಿವೃತ್ತಿ ಹೊಂದಿದವರು ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ.ಆದರೆ ಆ ರೀತಿಯ ಮನಸ್ಥಿತಿಯನ್ನು ಬಿಟ್ಟು ನಿವೃತ್ತಿಯಲ್ಲಿ ಹೊಸತನ ಕಾಣಬೇಕು.ಋಣಾತ್ಮಕವನ್ನು ತೆಗೆದು ಹಾಕಬೇಕೆಂದರು.ಸನ್ಮಾನ ಸ್ವೀಕರಿಸಿದ ಗಿರೀಶ್ ಭಾರದ್ವಾಜ್, ಲೆಪ್ಟಿನೆಂಟ್ ಕರ್ನಲ್ ಜಿ.ಡಿ.ಭಟ್ ಮತ್ತು ಪಿ.ಜಿ.ಜಗನ್ನಿವಾಸ ರಾವ್ ತಮ್ಮ ಅನಿಸಿಕೆ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದರು.

ಸಂಘದ ನಿರ್ಣಯ ಮಂಡನೆ: ಸಂಘದ ಸದಸ್ಯರಾದ ಮಹಾಲಿಂಗೇಶ್ವರ ಭಟ್ ಅವರು ಸಂಘದ ನಿರ್ಣಯಗಳನ್ನು ಸಭೆಯ ಮುಂದೆ ಮಂಡಿಸಿದರು.ಹಿರಿಯ ನಾಗರಿಕರಿಗೆ ಸಮಾಜದಲ್ಲಿ ಅನೇಕ ಅನುಕೂಲಗಳನ್ನು ಒದಗಿಸಬೇಕು,ಪುತ್ತೂರು ದರ್ಬೆ ವೃತ್ತಕ್ಕೆ ನಿವೃತ್ತ ತಹಸೀಲ್ದಾರ್ ದಿ.ಸಿ.ಹೆಚ್. ಕೋಚಣ್ಣ ರೈ ಅವರ ಹೆಸರಿಡುವುದು ಸೇರಿದಂತೆ ಕೆಲವೊಂದು ಪ್ರಮುಖ ವಿಚಾರಗಳ ಕುರಿತು ನಿರ್ಣಯ ಮಂಡನೆ ಮಾಡಲಾಯಿತು.

ಸಂಘದ ಮೂಲಕ ಸ್ವರ್ಣ ಸಾಧನ ಪ್ರಶಸ್ತಿಗೆ ಸಂಕಲ್ಪ: ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ.ಐತ್ತಪ್ಪ ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿ ತಾಲೂಕು ಪಿಂಚಣಿದಾರರ ಸಂಘದ ಮೂಲಕ ಆರಂಭಗೊಂಡ ಸಂಘ ಬಳಿಕ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಎಂದು ಪುನರ್ ನಾಮಕರಣವಾಯಿತು.ಒಟ್ಟು ೯೭೭ ಮಂದಿ ಸದಸ್ಯರಿರುವ ನಮ್ಮ ಸಂಘ ೫೦ ವರ್ಷಗಳಲ್ಲಿ ಮೂರು ಸ್ಮರಣ ಸಂಚಿಕೆ ಹೊರ ತಂದಿzವೆ. ರಾಷ್ಟ್ರೀಯ ಹಬ್ಬಗಳನ್ನು ವಿಜ್ರಂಭಣೆಯಿಂದ ಆಚರಿಸುತ್ತೇವೆ.ಮುಂದೆ ಪ್ರತಿ ವರ್ಷ ಮಹಾಸಭೆಯಲ್ಲಿ ಶಿಕ್ಷಣ, ಕಲೆ, ಸಾಹಿತ್ಯ, ಸಾಮಾಜಿಕ ಕ್ಷೇತ್ರವನ್ನು ಗುರುತಿಸಿ `ಸ್ವರ್ಣ ಸಾಧನ’ ಪ್ರಶಸ್ತಿ ಕೊಡುವುದಾಗಿ ದೃಢ ಸಂಕಲ್ಪ ಮಾಡಿzವೆ.ಅದೇ ರೀತಿ ಸಂಘದ ಸದಸ್ಯರಿಗೂ ೭೫,೮೦,೮೫,೯೦,೯೫,೧೦೦ ವರ್ಷಗಳಿಗೆ ಸನ್ಮಾನ ಮಾಡುವ ಮೂಲಕ ಅವರ ಜೀವನದ ಉತ್ಸಾಹ ಹೆಚ್ಚಿಸುವ ಕಾರ್ಯಕ್ರಮ ಹಾಕಿಕೊಂಡಿzವೆ ಎಂದರು.ಸಂಘದ ಕೋಶಾಧಿಕಾರಿ ನಾರ್ಣಪ್ಪ ನಾಯ್ಕ, ನಿರ್ಮಲ ಬಿಕೆ, ಕೆ.ಎಮ್.ದೇವದಾಸ ಗೌಡ, ಸೂರಪ್ಪ ಗೌಡ ಅತಿಥಿಗಳನ್ನು ಗೌರವಿಸಿದರು.ಸುವರ್ಣ ಮಹೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ, ನಿವೃತ್ತ ಶಿಕ್ಷಣ ಅಧಿಕಾರಿ ಕಾಂಚನ ಸುಂದರ ಭಟ್ ಸ್ವಾಗತಿಸಿದರು.ಕೋಶಾಧ್ಯಕ್ಷ ಶರತ್ ಕುಮಾರ್ ವಂದಿಸಿದರು.ಸಭೆಯ ಆರಂಭದಲ್ಲಿ ಪ್ರೊ|ಹರಿನಾರಾಯಣ ಮಾಡಾವು ಅವರು ರಚಿಸಿದ `ಹೊಸ ಚೇತನ’ ಎಂಬ ವೈಯುಕ್ತಿಕ ಗೀತೆಯನ್ನು ವಿದುಷಿ ಡಾ|ಶೋಭಿತಾ ಸತೀಶ್ ಅವರು ಹಾಡಿದರು.ಕಾರ್ಯಕ್ರಮ ಸಂಯೋಜನಾ ಸಮಿತಿ ಸಂಚಾಲಕ ಡಾ| ಮಾದವ ಭಟ್ ಕಾರ್ಯಕ್ರಮ ನಿರೂಪಿಸಿದರು.

ಪ್ರಥಮ ಅಧಿವೇಶನದಲ್ಲಿ ಹಿರಿಯರ ಆರೋಗ್ಯ ಸಂರಕ್ಷಣೆ ಉಪನ್ಯಾಸ: ಉದ್ಘಾಟನಾ ಸಮಾರಂಭದ ಬಳಿಕ ಪ್ರಥಮ ಅಧಿವೇಶನವಾಗಿ ಹಿರಿಯರ ಆರೋಗ್ಯ ಸಂರಕ್ಷಣೆ ಕುರಿತು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಮತ್ತು ಸುವರ್ಣ ಮಹೋತ್ಸವ ಸಮಿತಿ ಆರೋಗ್ಯ ವಿಭಾಗದ ಸಂಚಾಲಕ ಡಾ.ಶ್ರೀಪತಿ ರಾವ್ ಅವರು ಉಪನ್ಯಾಸ ನೀಡಿದರು.೯೦ ವರ್ಷ ಮೀರಿದ ಸಂಘದ ಸದಸ್ಯರಾದ ಯು.ವೆಂಕಟೇಶ ಕಿಣಿ, ಬಿ.ಎಸ್.ಕುಲಾಲ್, ಕೆ.ಗಣಪತಿ ಭಟ್, ವಿ.ಕೃಷ್ಣ, ಹಿಲ್ಡಾ ಡಿಸೋಜಾ, ಆಸೀಸ್ ಪಿಂಟೋ ಮತ್ತು ರಾಜ ನಾಕ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.ವೇದಿಕೆಯಲ್ಲಿ ಸುವರ್ಣ ಮಹೋತ್ಸವ ಸ್ವಾಗತ ಸಮಿತಿ ಅಧ್ಕಕ್ಷ ಕಾಂಚನ ಸುಂದರ ಭಟ್ ಉಪಸ್ಥಿತರಿದ್ದರು.ಸದಾಶಿವ ರೈ ಮತ್ತು ಶಿವಾನಂದ ರಾವ್ ಅತಿಥಿಗಳನ್ನು ಗೌರವಿಸಿದರು.ಸಂಘಟನಾ ಕಾರ್ಯದರ್ಶಿ ಜಗನ್ನಾಥ ರೈ ಸ್ವಾಗತಿಸಿದರು.ಪ್ರೊ|ವತ್ಸಲಾ ರಾಜ್ಞಿ ಕಾರ್ಯಕ್ರಮ ನಿರೂಪಿಸಿದರು.ಸಂಘದ ಕಾರ್ಯದರ್ಶಿ ಪಿ.ಆನಂದ ರೈ, ಕೋಶಾಧಿಕಾರಿ ಎನ್.ನಾರ್ಣಪ್ಪ ನಾಯ್ಕ, ಉಪಾಧ್ಯಕ್ಷರಾದ ಪಿ.ಚಂದ್ರಶೇಖರ್ ನಾಕ್, ನಿರ್ಮಲಾ ಅವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here