ವಿಶ್ವ ರೆಡ್‌ಕ್ರಾಸ್ ದಿನದ ಪ್ರಯುಕ್ತ ಯುವ ರೆಡ್‌ಕ್ರಾಸ್ ಸದಸ್ಯರಿಗೆ `ಒಂದು ದಿನದ ಮಾಹಿತಿ, ತರಬೇತಿ ಕಾರ್ಯಾಗಾರ’

0

  • ಆಪತ್ಕಾಲದಲ್ಲಿ ವ್ಯಕ್ತಿಯನ್ನು ಬದುಕಿಸುವ ಕೌಶಲ ಬೆಳೆಸಿಕೊಳ್ಳಿ-ಗಿರೀಶ್ ನಂದನ್

ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ವಿದ್ಯಾರ್ಥಿಗಳು ತನ್ನ ಶೈಕ್ಷಣಿಕ ಸಂದರ್ಭದಲ್ಲಾಗಲಿ ಅಥವಾ ಕಲಿಕೆ ಬಳಿಕದ ಉದ್ಯೋಗ ಸಂದರ್ಭದಲ್ಲಾಗಲಿ, ಯಾವುದಾದರೂ ಅನಾಹುತ ನಡೆದಲ್ಲಿ ಆ ಅನಾಹುತದಿಂದ ತನ್ನನ್ನು ಹಾಗೂ ಇತರರನ್ನು ಬದುಕಿಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಕೌಶಲಗಳನ್ನು ಜೀವನದಲ್ಲಿ ಬೆಳೆಸಿಕೊಳ್ಳುವಂತಾಗಬೇಕು ಎಂದು ಸಹಾಯಕ ಆಯುಕ್ತ ಗಿರೀಶ್ ನಂದನ್‌ರವರು ಹೇಳಿದರು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಪುತ್ತೂರು ತಾಲೂಕು ಘಟಕ ವತಿಯಿಂದ ವಿವೇಕಾನಂದ ಪಾಲಿಟೆಕ್ನಿಕ್ ಪುತ್ತೂರು, ವಾರಣಾಸಿ ಡೆವಲಪ್‌ಮೆಂಟ್ ಆಂಡ್ ರಿಸರ್ಚ್ ಫೌಂಡೇಶನ್ ಇದರ ಸಹಯೋಗದಲ್ಲಿ ವಿಶ್ವ ರೆಡ್‌ಕ್ರಾಸ್ ದಿನದ ಪ್ರಯುಕ್ತ ಯುವ ರೆಡ್‌ಕ್ರಾಸ್ ಸದಸ್ಯರಿಗೆ `ಒಂದು ದಿನದ ಮಾಹಿತಿ ಮತ್ತು ತರಬೇತಿ ಕಾರ್ಯಾಗಾರ’ವು ಮೇ ೮ ರಂದು ನೆಹರುನಗರ ವಿವೇಕಾನಂದ ಪಾಲಿಟೆಕ್ನಿಕ್ ಸಭಾಂಗಣದಲ್ಲಿ ಜರಗಿದ್ದು, ಇದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಬಳಿಕ ಸ್ಥಾಪಕರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯ್ದು ಮಾತನಾಡಿದರು. ಕಾಲೇಜುಗಳಲ್ಲಿನ ಶೈಕ್ಷಣಿಕ ಅವಧಿಯ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಜೀವನದ ಪಾಠದ ಅಗತ್ಯ ಬಹಳಷ್ಟು ಬೇಕಾಗಿದೆ. ಜೀವ ಬದುಕಿಸುವ ಕೌಶಲಗಳನ್ನು ವಿದ್ಯಾರ್ಥಿದಿಸೆಯಲ್ಲಿಯೇ ಬೆಳೆಸಿಕೊಂಡರೆ ಅಗತ್ಯ ಸಂದರ್ಭದಲ್ಲಿ ಇಂತಹ ಕೌಶಲಗಳು ನೆರವಿಗೆ ಬರಬಹುದು. ವಿದ್ಯಾರ್ಥಿಗಳು ಕಾರನ್ನು ಚಲಾಯಿಸುವಾಗ ಸೀಟ್ ಬೆಲ್ಟ್, ದ್ವಿಚಕ್ರ ವಾಹನ ಚಲಾಯಿಸುವಾಗ ಹೆಲ್ಮೆಟ್‌ನ್ನು ಕಡ್ಡಾಯವಾಗಿ ಧರಿಸಿಕೊಂಡಾಗ ಆಕ್ಸಿಡೆಂಟ್ ಸಂದರ್ಭದಲ್ಲಿ ಜೀವವನ್ನು ಕಾಪಾಡಿಕೊಳ್ಳಬಹುದು. ದ್ವಿಚಕ್ರ ವಾಹನ ಸಂದರ್ಭದಲ್ಲಿ ಹೆಲ್ಮೆಟ್ ಧರಿಸದೆ ಬ್ರೈನೆ ಡೆಡ್ ಹಾಗೂ ಬೆನ್ನು ಮೂಳೆ ಮುರಿತಗೊಂಡು ಜೀವ ಕಳಕೊಂಡವರ ಸಂಖ್ಯೆ ಬಹಳಷ್ಟಿದೆ ಎಂದು ಅಂಕಿ-ಅಂಶಗಳು ಹೇಳುತ್ತವೆ. ಆದ್ದರಿಂದ ರಸ್ತೆ ಸುರಕ್ಷತೆಯ ದೃಷ್ಟಿಯಿಂದ ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಅಮೂಲ್ಯ ಜೀವವನ್ನು ಉಳಿಸಿಕೊಳ್ಳಿ ಎಂದರು.

ಅಧ್ಯಕ್ಷತೆ ವಹಿಸಿದ ವಿವೇಕಾನಂದ ಪಾಲಿಟೆಕ್ನಿಕ್‌ನ ಅಧ್ಯಕ್ಷ ವಿಶ್ವೇಶ್ವರ ಭಟ್ ಬಂಗಾರಡ್ಕರವರು ಮಾತನಾಡಿ, ಸಮಾಜದಲ್ಲಿ ಸೇವೆ ಹೆಸರಿನಲ್ಲಿ ಸಂಘಟನೆಗಳು ಆರಂಭವಾದದ್ದು ನಾವು ಕಂಡಿದ್ದೇವೆ. ಕೆಲವೊಂದು ಸಂಘಟನೆಗಳು ಶಕ್ತಿಯುತವಾಗಿ ಸಮಾಜದಲ್ಲಿ ಪ್ರಭಾವ ಬೀರಿದ್ದು ಇದೆ. ಇನ್ನು ಕೆಲವು ದುರ್ಬಲವಾದದ್ದು ಇದೆ. ಯಾವುದೇ ಸಂಘಟನೆಗಳಲ್ಲಿ ನಿರ್ದಿಷ್ಟ ಯೋಜನೆ, ಗುರಿ ಹಾಗೂ ಸಿದ್ಧಾಂತಗಳಿದ್ದಾಗ ರೆಡ್‌ಕ್ರಾಸ್, ರೋಟರಿಯಂತಹ ಸಂಘಟನೆಗಳಾಗಿ ಯಶಸ್ವಿ ಸಂಘಟನೆಗಳಾಗಿ ದೀರ್ಘಕಾಲ ಬಾಳ್ವಿಕೆ ಬರುತ್ತದೆ. ರೆಡ್‌ಕ್ರಾಸ್ ಸಂಸ್ಥೆಯು ಜ್ವಲಂತವಾಗಿ ಇಡೀ ಮೂಲೆ-ಮೂಲೆಗಳಲ್ಲಿ ಪಸರಿಸಿ ನೆಲೆ ನಿಂತಿದೆ. ನೈಸರ್ಗಿಕ ವಿಕೋಪ ಅಥವಾ ಯಾವುದೇ ದುರಂತದ ಸಂದರ್ಭದಲ್ಲಿ ಜನರನ್ನು ಬದುಕಿಸುವ ಕಾಯಕವನ್ನು ಮುಂದುವರೆಸುವ ನಿಟ್ಟಿನಲ್ಲಿ ರೆಡ್‌ಕ್ರಾಸ್ ಸಂಸ್ಥೆ ಬೆಳೆದು ನಿಂತಿದೆ ಎಂದ ಅವರು ವಿದ್ಯಾರ್ಥಿಗಳು ತಮ್ಮ ವೃತ್ತಿ ಬದುಕಿನಲ್ಲಿ ಅಥವಾ ಶೈಕ್ಷಿಣಿಕ ಬದುಕಿನ ಜೊತೆಗೆ ಕೆಲವೊಂದು ಕೌಶಲಗಳನ್ನು ಹವ್ಯಾಸವಾಗಿ ಜೀವನದಲ್ಲಿ ಬೆಳೆಸಿಕೊಳ್ಳುವಂತಾಗಬೇಕು. ಯಾರು ನಿಜವಾದ ಸಮಾಜ ಸೇವೆ ಮಾಡುತ್ತಾರೋ ಅವರಿಗೆ ಸಮಾಜ ಎಂದಿಗೂ ಸ್ಪಂದಿಸುತ್ತದೆ. ಸಮಾಜದ, ಸಮುದಾಯದ ಬಗ್ಗೆ ಒಳ್ಳೇದು ಮಾಡಬೇಕೆನ್ನು ಕಾಳಜಿಯನ್ನು ಪ್ರತಿಯೋರ್ವರು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಅವರು ಹೇಳಿದರು.
ವಿವೇಕಾನಂದ ಪಾಲಿಟೆಕ್ನಿಕ್‌ನ ಜಯಲಕ್ಷ್ಮೀ ಪ್ರಾರ್ಥಿಸಿದರು. ಉದ್ಘಾಟನಾ ಸಂದರ್ಭದಲ್ಲಿ ಫಿಲೋಮಿನಾ ಕಾಲೇಜಿನ ರೆಡ್‌ಕ್ರಾಸ್ ಘಟಕದ ನಿರ್ದೇಶಕಿ ಡಾ|ಕೆ.ಮಾಲಿನಿ ಉಪಸ್ಥಿತರಿದ್ದರು. ವಿವೇಕಾನಂದ ಪಾಲಿಟೆಕ್ನಿಕ್‌ನ ಪ್ರಾಂಶುಪಾಲ ಗೋಪಿನಾಥ್ ಶೆಟ್ಟಿ ಎಂ.ರವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಪುತ್ತೂರು ತಾಲೂಕು ಘಟಕದ ಕೋಶಾಧಿಕಾರಿ ಅಬ್ದುಲ್ ರಹಿಮಾನ್ ಯೂನಿಕ್, ನಿರ್ದೇಶಕ ರಫೀಕ್ ರೋಯಲ್, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಅಧ್ಯಕ್ಷ ನವೀನ್‌ಚಂದ್ರ ನಾಕ್‌ರವರು ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಪುತ್ತೂರು ತಾಲೂಕು ಘಟಕದ ಸಭಾಪತಿ ಸಂತೋಷ್ ಶೆಟ್ಟಿ ಎಸ್ ವಂದಿಸಿದರು. ರೆಡ್‌ಕ್ರಾಸ್ ಪುತ್ತೂರು ಇದರ ಕಾರ್ಯಕ್ರಮ ಉಪಸಮಿತಿ ಮುಖ್ಯಸ್ಥ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನ್ಹಸ್ ಕಾರ್ಯಕ್ರಮ ನಿರೂಪಿಸಿದರು.

ಮಾನವೀಯ ಸೇವೆಯ ಸ್ವಯಂಸೇವಾ ಸಂಸ್ಥೆ…
೧೯ನೇಯ ಶತಮಾನದಲ್ಲಿ ಯುರೋಪ್‌ನಲ್ಲಿ ಯುದ್ಧಗಳು ನಡೆಯುತ್ತಿರುವಾಗ ಗಾಯಳು ಸೈನಿಕರ ಪರಿಸ್ಥಿತಿ ಚಿಂತಾಜನಕವಾಗಿತ್ತು. ಅವರನ್ನು ಯುದ್ಧ ಭೂಮಿಯಿಂದ ಆಸ್ಪತ್ರೆಗೆ ಸಾಗಿಸುವವರು ಯಾರೂ ಇರಲಿಲ್ಲ. ಹೀಗಿರುವಾಗ ೧೮೫೯ರ ಫ್ರಾಂಕ್-ಆಸ್ಟ್ರೀಯನ್ ಯುದ್ಧದ ಸಂದರ್ಭದಲ್ಲಿ ಆ ಪರಿಸ್ಥಿತಿಯನ್ನು ನೋಡಿ ಸ್ವಿಸ್ ಬಿಸಿನೆಸ್‌ಮೆನ್ ಜಾನ್ ಹೆನ್ರಿ ಡುನಂಟ್‌ರವರು ಸೈನಿಕರಿಗೆ ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆಗಳನ್ನು ಮಾಡಿದರು. ಯುದ್ಧದ ತರುವಾಯ ೧೮೬೩ರಲ್ಲಿ ಜಿನೇವಾ ಒಪ್ಪಂದವಾಯ್ತು. ಆ ಒಪ್ಪಂದದ ಮೇರೆಗೆ ೧೮೬೪ರಲ್ಲಿ ರೆಡ್‌ಕ್ರಾಸ್ ಸಂಸ್ಥೆಯು ಪ್ರಾರಂಭವಾಯಿತು. ಕೆಲವು ದೇಶಗಳಲ್ಲಿ ಇದಕ್ಕೆ ರೆಡ್ ಕ್ರೆಸೆಂಟ್ ಮೂವ್ಮೆಂಟ್ ಎನ್ನುವ ಹೆಸರು ಕೂಡ ಇದೆ. ರೆಡ್‌ಕ್ರಾಸ್ ಸೊಸೈಟಿ ಇದರ ಸ್ಥಾಪಕರಾದ ಹೆನ್ರಿ ಡುನಂಟ್‌ರವರ ಜನ್ಮ ದಿನವಾದ ೧೮೨೮ ಮೇ ೮ರಂದು ರೆಡ್‌ಕ್ರಾಸ್ ದಿನ ಎಂದು ಅಂತಾರಾಷ್ಟ್ರೀಯವಾಗಿ ಆಚರಿಸಲಾಗುತ್ತಿದೆ.
-ಗೋಪಿನಾಥ್ ಶೆಟ್ಟಿ ಎಂ, ಪ್ರಾಂಶುಪಾಲರು, ವಿವೇಕಾನಂದ ಪಾಲಿಟೆಕ್ನಿಕ್

ಯುವಸಮುದಾಯಯೇ ಸಂಪನ್ಮೂಲ..
ನಮ್ಮ ಪರಿಸರ, ನಮ್ಮ ಯಾಂತ್ರಿಕ ಬದುಕು, ನಮ್ಮ ಸಮಾಜ ಇವೆಲ್ಲವುದರ ಬಗ್ಗೆ ನಾವು ಚಿಂತನೆ ಮಾಡಬೇಕಾಗಿದೆ. ಇತರರಿಗೆ ನೋವು ಮಾಡದಂತೆ ಮಾದರಿಯಾಗಬೇಕು. ನಮ್ಮ ದೇಶ ಯುವ ಸಮುದಾಯ ಕೂಡಿರತಕ್ಕಂತಹ ದೇಶ. ಆದ್ದರಿಂದ ದೇಶದ ಯುವ ಸಮುದಾಯವು ದೇಶದಲ್ಲಿ ಅದ್ಬುತವಾದ ಅಮೂಲಾಗ್ರ ಬದಲಾವಣೆ ತರಬಲ್ಲಂತಹ ಸಂಪನ್ಮೂಲವಾಗಿದ್ದಾರೆ. ಈ ನಿಟ್ಟಿನಲ್ಲಿ ಈ ರೆಡ್‌ಕ್ರಾಸ್ ಸಂಸ್ಥೆಯು ಕೆಲವೊಂದು ವಿಚಾರಗಳನ್ನು ಹಾಕಿಕೊಂಡು ನಿರ್ದಿಷ್ಟ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳು ಇದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಂಡು ಭವಿಷ್ಯ ಕಟ್ಟಿಕೊಳ್ಳುವುದರ ಮುಖಾಂತರ ಸಮಾಜ ಸೇವೆಗೆ ಮುಂದಾಗಬೇಕು.
-ಸಂಜೀವ ಮಠಂದೂರು, ಶಾಸಕರು, ಪುತ್ತೂರು

LEAVE A REPLY

Please enter your comment!
Please enter your name here