ರಾಷ್ಟ್ರದಲ್ಲಿ ಸಂಚಲನ ಮಾಡಲಿರುವ ಒಳಮೊಗ್ರು ಗ್ರಾ. ಪಂ. ನಿರ್ಣಯ

0

  • `ಲಂಚ, ಭ್ರಷ್ಟಾಚಾರ ಮುಕ್ತ ಒಳಮೊಗ್ರು ಗ್ರಾ.ಪಂ.’ ಐತಿಹಾಸಿಕ ಘೋಷಣೆ
  • ಉತ್ತಮ ಸೇವೆಯವರ, ಲಂಚ, ಭ್ರಷ್ಟಾಚಾರದವರ ಹೆಸರೂ ಪ್ರಚಾರವಾಗಲಿ

ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮ ಪಂಚಾಯತ್‌ನವರು ಐತಿಹಾಸಿಕ ನಿರ್ಣಯ ಕೈಗೊಂಡಿದ್ದಾರೆ. ಪಂಚಾಯತ್ ಆಡಳಿತ ಮಂಡಳಿ ಅಧಿಕಾರಿ ವರ್ಗದವರು ತಮ್ಮ ಪಂಚಾಯತ್ ವ್ಯಾಪ್ತಿಯಲ್ಲಿ ಯಾವುದೇ ಲಂಚ, ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡುವುದಿಲ್ಲ, ಉತ್ತಮ ಸೇವೆ ನೀಡುತ್ತೇವೆ. ಪಂಚಾಯತ್‌ನ್ನು ಲಂಚ, ಭ್ರಷ್ಠಾಚಾರ ಮುಕ್ತ ಮಾಡುವುದಾಗಿ ಘೋಷಿಸಿದ್ದಾರೆ. ಇದು ಚರಿತ್ರಾರ್ಹ ನಿರ್ಣಯ. ಇಡೀ ದೇಶದಲ್ಲಿ, ರಾಜ್ಯದಲ್ಲಿ ಲಂಚ, ಭ್ರಷ್ಟಾಚಾರ ಅಬ್ಬರಿಸುತ್ತಿರುವಾಗ ದಿನ ಬೆಳಗಾದರೆ ಲಂಚ, ಭ್ರಷ್ಟಾಚಾರದ ಪ್ರಕರಣಗಳು ಬೆಳಕಿಗೆ ಬರುತ್ತಿರುವಾಗ ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮ ಪಂಚಾಯತ್‌ನ ಲಂಚ, ಭ್ರಷ್ಟಾಚಾರ ಮುಕ್ತ ಪಂಚಾಯತ್‌ನ ನಿರ್ಣಯ ಇಡೀ ದೇಶದಲ್ಲಿ ಸಂಚಲನ ಮೂಡಿಸಿ ಇತಿಹಾಸ ನಿರ್ಮಿಸಲಿದೆ. ದೇಶದಲ್ಲಿಯೇ ಲಂಚ, ಭ್ರಷ್ಟಾಚಾರ ಮುಕ್ತ ಪ್ರಥಮ ಗ್ರಾಮ ಪಂಚಾಯತ್ ಎನಿಸಿ ದಾಖಲೆ ನಿರ್ಮಿಸಲಿದೆ. ಸುದ್ದಿಜನಾಂದೋಲನ ವೇದಿಕೆ ಇದನ್ನು ದೆಹಲಿಯಲ್ಲಿ ಮತ್ತು ರಾಜ್ಯದಲ್ಲಿ ಪ್ರಚಾರ ಮಾಡಿ ಅದು ರಾಷ್ಟ್ರವ್ಯಾಪಿಯಾಗಿ ಮಾದರಿಯಾಗಿ ಹರಡಲು ಸಹಾಯ ಮಾಡಲಿದೆ.

ಪುತ್ತೂರು ತಾಲೂಕಿನ ಇತರ ಪಂಚಾಯತ್‌ಗಳಲ್ಲಿ ಲಂಚ, ಭ್ರಷ್ಟಾಚಾರ ಮುಕ್ತ ಗ್ರಾಮ ಪಂಚಾಯತ್ ಆಂದೋಲನ ನಡೆಯಲಿದೆ. ಸುಳ್ಯದಲ್ಲಿ ನಡೆದ ಸುದ್ದಿಜನಾಂದೋಲನ ಸಭೆಯಲ್ಲಿ ಪೆರುವಾಜೆ, ಮಂಡೆಕೋಲು, ಮರ್ಕಂಜ, ಮುರುಳ್ಯ ಪಂಚಾಯತ್‌ನವರು ತಮ್ಮ ಗ್ರಾಮ ಪಂಚಾಯತ್‌ನ್ನು ಲಂಚ, ಭ್ರಷ್ಟಾಚಾರ ಮುಕ್ತ ಪಂಚಾಯತನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ದಾರೆ. ಇತರ ಕೆಲವು ಪಂಚಾಯತ್‌ನ ಜನರು ಕೈಜೋಡಿಸಿದ್ದಾರೆ.

ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ, ಉತ್ತಮ ಸೇವೆಗೆ ಪುರಸ್ಕಾರ ಸುದ್ದಿಜನಾಂದೋಲನದಿಂದಾಗಿ ಜನರಲ್ಲಿ ಉತ್ತಮ ಪರಿಣಾಮ ಬೀರಿದೆ. ಅಧಿಕಾರಿಗಳಲ್ಲಿ, ಜನಪ್ರತಿನಿಧಿಗಳಲ್ಲಿ ಜಾಗೃತಿ ಉಂಟಾಗಿದೆ. ಲಂಚ ಕಡಿಮೆಯಾಗುತ್ತಿದೆ. ಜನರಿಂದ ಹಣ ಸುಲಿಗೆ ನಿಂತಿದೆ. ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಸೇವೆ ದೊರಕುತ್ತಿದೆ ಎಂದು ಜನರು ಹೇಳಲಾರಂಭಿಸಿದ್ದಾರೆ. ಇದು ಯಶಸ್ವಿಯಾಗಿ ಆಗಲು ತಾಲೂಕಿನಲ್ಲಿ ಉತ್ತಮ ಕೆಲಸ ಮಾಡುವವರನ್ನು ಗುರುತಿಸಬೇಕಾಗಿದೆ. ಪುತ್ತೂರು ತಾಲೂಕಿನಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಪುತ್ತೂರಿನ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಆಶಾಜ್ಯೋತಿ ಪುತ್ತೂರಾಯ, ನಗರಸಭಾ ಪೌರಾಯುಕ್ತ ಮಧು ಎಸ್. ಮನೋಹರ್, ಒಳಮೊಗ್ರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್. ಇವರುಗಳು ಉತ್ತಮ ಸೇವೆ ನೀಡುತ್ತಿರುವುದಾಗಿ ಜನರು ಅಭಿಪ್ರಾಯ ಕೊಡುತ್ತಿದ್ದಾರೆ.

ಸುಳ್ಯ ತಾಲೂಕಿನಲ್ಲಿ ಸುಳ್ಯದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ. ಮಹಾದೇವ, ಎ.ಡಿ.ಎಲ್.ಆರ್. ವೆಂಕಟೇಶ್, ಪಶು ಸಂಗೋಪನಾ ಇಲಾಖೆಯ ಡಾ| ನಿತಿನ್ ಪ್ರಭು, ಸುಬ್ರಹ್ಮಣ್ಯ ಎಸ್.ಐ. ಜಂಬೂರಾಜ್ ಮಹಾಜನ್, ತಾಲೂಕು ಕಚೇರಿಯ ಕಿಯೋಸ್ಕ್ ಕೇಂದ್ರದಲ್ಲಿರುವ ಕುಮಾರಸ್ವಾಮಿ, ಸುಳ್ಯ ತಾಲೂಕು ಪಂಚಾಯತ್ ಕಚೇರಿ ಮ್ಯಾನೇಜರ್ ಹರೀಶ್ ರಾವ್‌ರವರ ಹೆಸರು ಉತ್ತಮ ಸೇವೆಯ ಪಟ್ಟಿಯಲ್ಲಿ ಜನರಿಂದ ಕೇಳಿಬರುತ್ತಿದೆ. ಇದೇ ರೀತಿ ಗ್ರಾಮ ಪಂಚಾಯತ್‌ನಿಂದ ಹಿಡಿದು ತಾಲೂಕಿನವರೆಗೆ ಉತ್ತಮ ಕೆಲಸ ಮಾಡುವವರನ್ನು ಜನರು ಗುರುತಿಸಿ ಕಳುಹಿಸಿದರೆ ಅವರನ್ನು ಸಾರ್ವಜನಿಕವಾಗಿ ಗುರುತಿಸಿ ಗೌರವಿಸಲಾಗುವುದು. ಅದೇ ರೀತಿ ಲಂಚ, ಭ್ರಷ್ಟಾಚಾರ ಮಾಡುವವರ ಹೆಸರನ್ನು ಆಧಾರ ಸಹಿತ ಕಳುಹಿಸಿರಿ. ಅವರನ್ನು ಸಾರ್ವಜನಿಕವಾಗಿ ಬಹಿಷ್ಕರಿಸಲಾಗುವುದು.
ದೆಹಲಿಯಲ್ಲಿ ನೆಲೆಸಿರುವ ದ.ಕ. ಮತ್ತು ಉಡುಪಿ ಜಿಲ್ಲೆಯವರು ಸೇರಿ ಮೇ೧ರಂದು ನಡೆಸಿದ ನಮ್ಮೂರು ನಮ್ಮ ಹೆಮ್ಮೆ ಎಂಬ ಸಭೆಯಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಚಿಂತನೆ ನಡೆಸಿದ್ದಾರೆ. ಅದು ಸಂಪೂರ್ಣವಾಗಿ ಮತ್ತು ಪಾರದರ್ಶಕವಾಗಿ ಜನರನ್ನು ತಲುಪಲು ಲಂಚ, ಭ್ರಷ್ಟಾಚಾರ ಮುಕ್ತ ಜಿಲ್ಲೆ ಆಗಬೇಕೆಂದು ವಿಚಾರ ಮಂಡನೆ ಮಾಡಿದ್ದಾರೆ. ಸುದ್ದಿ ಜನಾಂದೋಲನ ಭ್ರಷ್ಟಾಚಾರದ ವಿರುದ್ಧ ಮಾಡುತ್ತಿರುವ ಆಂದೋಲನಕ್ಕೆ ಬೆಂಬಲ ಘೋಷಿಸಿದ್ದಾರೆ. ಅದೇ ರೀತಿ ಮೇ. 29ರಂದು ನಡೆಯುವ ಸಭೆಯಲ್ಲಿ ಆ ವಿಷಯವನ್ನು ಮುಂದುವರೆಸಲಿದ್ದಾರೆ. ಆ ಮೂಲಕ ಇಲ್ಲಿ ನಡೆಯುವ ಸುದ್ದಿ ಜನಾಂದೋಲನಕ್ಕೆ ಇನ್ನೂ ಹೆಚ್ಚು ಶಕ್ತಿ ತುಂಬಲಿದ್ದಾರೆ ಎಂದು ತಿಳಿಸಲು ಸಂತೋಷ ಪಡುತ್ತೇನೆ.

LEAVE A REPLY

Please enter your comment!
Please enter your name here