ನರೇಂದ್ರ ಪ.ಪೂ.ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರತಿಭಾ ಅನಾವರಣ ತರಂಗ-2022-ಉದ್ಘಾಟನೆ

0

ಪುತ್ತೂರು : ವ್ಯಕ್ತಿ ಬದುಕನ್ನು ರೂಪಿಸುವುದರಲ್ಲಿ ಶಿಕ್ಷಣಕ್ಕೆ ಪ್ರಮುಖ ಪಾತ್ರವಿದೆ. ವಿದ್ಯಾರ್ಥಿ ಜೀವನದಲ್ಲಿ ನಾವೇನು ಕಲಿಯುತ್ತೇವೆಯೋ ಅದು ನಮ್ಮ ಭವಿಷ್ಯವನ್ನು ರೂಪಿಸುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯಲಿ ಎಂಬ ಕಾರಣ ಶಿಕ್ಷಣ ಸಂಸ್ಥೆಗಳು ಅನೇಕ ರೀತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತದೆ. ಕಾರ್ಯಾಗಾರಗಳು ಪಠ್ಯಕ್ಕೆ ಸಂಬಂಧಿಸಿದ್ದಾಗಿರಬಹುದು ಅಥವಾ ಬದುಕನ್ನು ರೂಪಿಸುವ ಬಗೆ ಹೇಗೆ ಎಂಬ ಕುರಿತಾಗಿರಬಹುದು. ಇಂತಹ ಕಾರ್ಯಾಗಾರಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನವಾಗಲು ಸಾಧ್ಯ ಎಂದು ಪುತ್ತೂರು ನಗರ ಸಭೆಯ ಅಧ್ಯಕ್ಷ ಜೀವಂಧರ ಜೈನ್ ಹೇಳಿದರು. ನರೇಂದ್ರ ಪ.ಪೂ.ಕಾಲೇಜಿನಲ್ಲಿ 10ನೇ ತರಗತಿ ಪರೀಕ್ಷೆ ಬರೆದು ಪ್ರಥಮ ಪಿಯುಸಿ ಸೇರ ಬಯಸುವ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಮೂರು ದಿನಗಳ ಕಾರ್ಯಾಗಾರ ತರಂಗ-2022 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀಕಾಂತ ಕೊಳತ್ತಾಯರವರು ಮಾತನಾಡಿ ಶೈಕ್ಷಣಿಕ ಕಾಲ ಘಟ್ಟದಲ್ಲಿ ಪಠ್ಯದ ಜೊತೆಗೆ ಇನ್ನಿತರ ಚಟುವಟಿಕೆಗಳಲ್ಲಿ ನಮ್ಮನ್ನು ಹೆಚ್ಚು ಸಕ್ರಿಯರಾಗಿಸುವ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಇಂತಹ ಕಾರ್ಯಾಗಾರದಲ್ಲಿ ಹೆಚ್ಚು ಭಾಗವಹಿದ್ದಲ್ಲಿ ವಿದ್ಯಾರ್ಥಿಗಳು ಕ್ರಿಯಾತ್ಮಕ ಯೋಚನೆಗಳಿಗೆ ತಮ್ಮನ್ನು ತೆರೆದುಕೊಳ್ಳುತ್ತಾರೆ. ಈ ಮೂಲಕ ವಿದ್ಯಾರ್ಥಿಗಳು ತಮಗೆ ಅವಶ್ಯವಿರುವ ಮಾಹಿತಿಯನ್ನು ಪಡೆದುಕೊಂಡು ತಮ್ಮ ಯೋಚನೆಗಳನ್ನು ಕ್ರಿಯಾತ್ಮಕವಾಗಿ ಬದಲಾಯಿಸಿಕೊಳ್ಳಬಹುದು. ಬದುಕಿನ ಧ್ಯೇಯವನ್ನು ಮರೆಯದೆ ಗೆಲುವಿನತ್ತ ಮುನ್ನುಗ್ಗಿದರೆ ಜೀವನ ಸಾರ್ಥಕವಾಗುತ್ತದೆ. ಎಂದು ಹೇಳಿದರು. ಕಾರ್ಯಾಗಾರದಲ್ಲಿ ಪುತ್ತೂರು,ಬಂಟ್ವಾಳ, ಬೆಳ್ತಂಗಡಿ ತಾಲೂಕಿನ ವಿವಿಧ ಭಾಗಗಳಿಂದ ಸುಮಾರು 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಸಂತೋಷ ಬಿ., ಕಾರ್‍ಯಕ್ರಮದ ಸಂಪನ್ಮೂಲ ವ್ಯಕ್ತಿ ಜೆಸಿಐಯ ರಾಷ್ಟ್ರೀಯ ತರಬೇತುದಾರ ಡಾ.ರಾಜೇಶ್ ಬೆಜ್ಜಂಗಳ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಸ್ವಾಗತಿಸಿ ಮಾತನಾಡಿ ಆಧುನಿಕ ಹಾಗೂ ಸ್ಪರ್ಧಾತ್ಮಕ ಜಗತ್ತಿಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸಿಕೊಳ್ಳಲು ಶಿಕ್ಷಣದ ಜೊತೆಗೆ ಕಾರ್ಯಾಗಾರಗಳ ಅವಶ್ಯಕತೆಯಿದೆ. ಶಿಕ್ಷಣ ಕ್ಷೇತ್ರದಲ್ಲಿ ಅಪರಿಮಿತ ಅವಕಾಶಗಳಿದ್ದು ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು.ಸಮಾಜದ ಆಸ್ತಿಗಳಾಗಿ ಹೊರಹೊಮ್ಮಬೇಕಾಗಿದೆ ಎಂದು ಹೇಳಿದರು. ಉಪನ್ಯಾಸಕಿ ರೇಣುಕಾ ವಂದಿಸಿದರು. ಮಧುರಾ ಕಾರ್‍ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here