ಸಾಹಿತ್ಯ ಸಂಭ್ರಮ-ಪುಸ್ತಕ ಹಬ್ಬ ಸಮಾರೋಪ

0

 

  • ಡಾ| ಶ್ರೀಧರ್ ಹೆಚ್.ಜಿ.ಗೆ ಪ್ರೊ| ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ ಪ್ರದಾನ
  • ಕೊರತೆ ತುಂಬುವ ಯತ್ನ ಶ್ರೀಧರ್ ಮಾಡಿದ್ದಾರೆ – ಡಾ| ತಾಳ್ತಜೆ ವಸಂತ ಕುಮಾರ
  • ಕಾದಂಬರಿಯಿಂದ ಬರೆಯುವ ಸುಖ ಅನುಭವಿಸಿದ್ದೇನೆ – ಡಾ| ಶ್ರೀಧರ್ ಹೆಚ್.ಜಿ
  • ಎಲೆಮರೆ ಕಾಯಿಯಂತಿರುವವರನ್ನು ಗುರುತಿಸಿ ಪ್ರಶಸ್ತಿ ಪ್ರದಾನ – ಪ್ರೊ. ಎಚ್.ಟಿ. ಪೋತೆ
  • ಪ್ರಶಸ್ತಿ ಸೀಮೋಲ್ಲಂಘನ ಮಾಡಿದೆ – ಶ್ರೀಶೈಲ
  • ಮೊಬೈಲ್ ಕ್ಷಣಕ್ಕೆ, ಪುಸ್ತಕದಿಂದ ಜೀವನದುದ್ದಕ್ಕೆ ಆನಂದ – ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ
  • ಡಾ. ಹೆಚ್.ಜಿ. ಅವರ ಕಾದಂಬರಿಗೆ ಜ್ಞಾನಪೀಠ ಲಭಿಸಲಿ – ಉಮೇಶ್ ನಾಯಕ್

ಪುತ್ತೂರು: ಕನ್ನಡ ಸಾಹಿತ್ಯ ಪರಿಷತ್‌ನ ಪುತ್ತೂರು ತಾಲೂಕು ಘಟಕ ಮತ್ತು ಜ್ಞಾನಗಂಗಾ ಪುಸ್ತಕ ಮಳಿಗೆಯ ಸಹಯೋಗದೊಂದಿಗೆ ಕಳೆದ ಮೂರು ದಿನಗಳಿಂದ ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್‌ನಲ್ಲಿ ನಡೆಯುತ್ತಿರುವ ಸಾಹಿತ್ಯ ಸಂಭ್ರಮ- ಪುಸ್ತಕ ಹಬ್ಬದ ಸಮಾರೋಪ ಸಮಾರಂಭ ಮೇ ೮ರಂದು ನಡೆಯಿತು. ಸಮಾರೋಪ ಸಮಾರಂಭದ ಆರಂಭದಲ್ಲಿ ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ| ಶ್ರೀಧರ್ ಹೆಚ್.ಜಿ ಅವರಿಗೆ ಪ್ರೊ| ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.


ಕೊರತೆ ತುಂಬುವ ಯತ್ನ ಶ್ರೀಧರ್ ಮಾಡಿದ್ದಾರೆ: ಕಲಬುರುಗಿಯ ಪ್ರೊ| ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನವು ಕೊಡಮಾಡುವ ಪ್ರೊ| ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಿದ ಮುಂಬಯಿ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ| ತಾಳ್ತಜೆ ವಸಂತ ಕುಮಾರ ಅಭಿನಂದನಾ ಮಾತುಗಳನ್ನಾಡಿ, ಕರ್ನಾಟಕದ ನೆಲದಲ್ಲಿ ಅಶೋಕನ ಶಿಲಾಶಾಸನ ಆಶ್ಚರ್ಯ ಚಕಿತವಾಗಿ ಲಭಿಸುತ್ತದೆ. ಅಂತಹ ವಿಚಾರವನ್ನು ಮುಂದಿಡುವ ವೇದೋಷ್ಕರ್ಷ, ಕಾದಂಬರಿಯಾಗದೆ ಉತ್ತಮ ರೀತಿಯಲ್ಲಿ ಮೂಡಿ ಬಂದಿದೆ. ಕನ್ನಡದ ಕೊರತೆಯನ್ನು ತುಂಬುವ ಪ್ರಯತ್ನವನ್ನು ಡಾ. ಶ್ರೀಧರ್ ಹೆಚ್.ಜಿ. ಮಾಡಿದ್ದಾರೆ ಎಂದರು.

ಕಾದಂಬರಿಯಿಂದ ಬರೆಯುವ ಸುಖ ಅನುಭವಿಸಿದ್ದೇನೆ: ಪ್ರಶಸ್ತಿ ಪುರಸ್ಕೃತಗೊಂಡ ಡಾ| ಶ್ರೀಧರ್ ಹೆಚ್.ಜಿ. ಮಾತನಾಡಿ, ಕನಸಿನಲ್ಲಿ ಯೋಚಿಸದ ಸಂಗತಿ ಇಂದು ಆಗಿದೆ. ಕಾದಂಬರಿ ಬರೆಯಲು ಹೊರಟಾಗ ನಮ್ಮ ಹೂತೋಟವೇ ತಕ್ಷಶಿಲೆ ಆಗಿತ್ತು. ಚಪಡ  ಕಾದಂಬರಿ ಕುರಿತು ಹಲವಾರು ಮಂದಿ ಕರೆ ಮಾಡಿದ್ದಾರೆ. ತೆಲುಗಿಗೂ ಅನುವಾದ ಮಾಡಲು ಅನುಮತಿ ಕೇಳಿದ್ದಾರೆ. ಈ ನಿಟ್ಟಿನಲ್ಲಿ ಸಂತೋಷ ತಂದಿದೆ ಎಂದರು.

ಎಲೆಮರೆ ಕಾಯಿಯಂತಿರುವವರನ್ನು ಗುರುತಿಸಿ ಪ್ರಶಸ್ತಿ ಪ್ರದಾನ: ಅಧ್ಯಕ್ಷತೆ ವಹಿಸಿದ್ದ ಕಲಬುರಗಿ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ ಎಚ್.ಟಿ. ಪೋತೆ ಮಾತನಾಡಿ, ನಮ್ಮ ಪ್ರತಿಷ್ಠಾನದಲ್ಲಿ ಅರ್ಜಿ ಕರೆಸಿ ಯಾರಿಗೂ ಪ್ರಶಸ್ತಿ ಕೊಟ್ಟಿಲ್ಲ. ಎಲೆಮರೆಯ ಕಾಯಿಯಂತೆ ಸಾಹಿತ್ಯದ ಕೆಲಸ ಮಾಡುವವರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡುತ್ತೇವೆ. ಡಾ| ಶ್ರೀಧರ್ ಹೆಚ್.ಜಿ. ಅವರ ಒಟ್ಟು ಸಾಧನೆ ಮುಂದಿಟ್ಟು ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದೆವು. ಕಳೆದ ೧೨ ವರ್ಷಗಳಿಂದ ಈ ಪ್ರಶಸ್ತಿ ಕೊಡುತ್ತಿzವೆ. ಪುತ್ತೂರು ಸುಂದರ, ಸ್ವಚ್ಚ ನಗರ. ಸಂಸ್ಕೃತಿ ಕಲೆಯಿಂದ ನಮ್ಮಿಂದಲೂ ಒಂದು ಹೆಜ್ಜೆ ನೀವು ಮುಂದಿದ್ದೀರಿ ಎಂದರು.

ಪ್ರಶಸ್ತಿ ಸೀಮೋಲಂಘನ ಮಾಡಿದೆ: ಪ್ರಾಸ್ತಾವಿಕವಾಗಿ ಮಾತನಾಡಿದ ಕಲಬುರಗಿ ವಿವಿಯ ವಿಶ್ರಾಂತ ಪ್ರಾಂಶುಪಾಲ ಡಾ| ಶ್ರೀಶೈಲ ನಾಗರಾಳ, ಎಲ್ಲೆಲ್ಲಿ ಸಾಹಿತ್ಯಾಸಕ್ತ ಸಂಬಂಧ ಇದೆಯೋ ಅಲ್ಲಿ ಪ್ರತಿಷ್ಠಾನ ತನ್ನ ಕಾರ್ಯಕ್ರಮ ಮಾಡುವ ಮೂಲಕ ಪ್ರಶಸ್ತಿ ಕಲಬುರಗಿಗೆ ಮಾತ್ರ ಸೀಮಿತವಲ್ಲ ಎಂದು ತೋರಿಸಿಕೊಟ್ಟಿದೆ. ಇಲ್ಲಿ ಪ್ರಶಸ್ತಿಯ ಸೀಮೋಲಂಘನ ಆಗಿದೆ ಎಂದರು. ವಿವೇಕಾನಂದ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಶ್ರಿಪತಿ ಕಲ್ಲೂರಾಯ ಶುಭ ಹಾರೈಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ಎಂ.ಬಿ. ಕಟ್ಟಿ ವಂದಿಸಿದರು.

ಮೊಬೈಲ್ ಕ್ಷಣಕ್ಕೆ, ಪುಸ್ತಕದಿಂದ ಜೀವನದುದ್ದ ಆನಂದ: ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ| ಮಲ್ಲೇಪುರಂ ಜಿ. ವೆಂಕಟೇಶ ಮಾತನಾಡಿ, ಟಿವಿ ಸೇರಿದಂತೆ ಹಲವು ಸಾಮಾಗ್ರಿಗಳು ಮನೆಗೆ ಬಂದರೆ ಅದು ಮತ್ತೆ ದುರಸ್ಥಿಗೆ ಹೊರ ಹೋಗುತ್ತದೆ. ಪುಸ್ತಕ ಮನೆಯೊಳಗೆ ಬಂದರೆ ಸದಾ ಉಳಿಯುತ್ತದೆ. ಪುಸ್ತಕ ಕೊಡುವಂತಹ ಆನಂದ ಬೇರೆ ಯಾವುದು ಕೊಡುವುದಿಲ್ಲ. ಇವತ್ತು ಕೈಗೆ ಮೊಬೈಲ್ ಇದ್ದರೂ ನಮ್ಮ ನಂಬರ್ ನಮಗೆ ಮರೆಯುತ್ತವೆ. ಮೊಬೈಲ್ ಒಂದು ಕ್ಷಣ ಮಾತ್ರ ಉಪಯೋಗ. ಪುಸ್ತಕ ಜೀವನ ಪೂರ್ತಿ, ಎಲ್ಲದಕ್ಕಿಂತ ಮಿಗಿಲಾದ ಆನಂದ ಕೊಡುತ್ತವೆ ಎಂದ ಅವರು, ಮಕ್ಕಳಲ್ಲಿ ಪುಸ್ತಕ ಪ್ರೀತಿ ಬೆಳೆಸಬೇಕೆಂದರು. ಸಾಹಿತ್ಯದ ಮೂಲಕ ಹಿರಿಯರು ಮನಸ್ಸುಗಳನ್ನು ಕಟ್ಟುವ ಕೆಲಸ ಮಾಡಿದ್ದಾರೆ. ಸಾಹಿತ್ಯ ಮೇಳದ ಜೊತೆಗೆ ಪುಸ್ತಕ ಮೇಳವು ಇರಬೇಕು. ಇವರೆಡು ಸಂಸ್ಕೃತಿಯ ಕಣ್ಣುಗಳಿದ್ದಂತೆ ಎಂದ ಅವರು ಡಾ ಶ್ರೀಧರ್ ಹೆಚ್.ಜಿ ಅವರಿಗೆ ಪ್ರೊ. ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ ನೀಡಿ ಗೌರವಿಸಿzವೆ. ಅವರು ಮುಂದೆ ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ಪಡೆಯುವಂತಾಗಲಿ ಅವರು ಆ ಪ್ರಶಸ್ತಿಗೆ ಅರ್ಹರು ಎಂದರು.

ಡಾ ಹೆಚ್.ಜಿ. ಅವರ ಕಾದಂಬರಿಗೆ ಜ್ಞಾನಪೀಠ ಲಭಿಸಲಿ: ಸಮಾರೋಪದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಮಾತನಾಡಿ, ಪ್ರೋ ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ ಕನ್ನಡ ಸಾಹಿತ್ಯ ಪರಿಷತ್‌ಗೆ ಸಂದ ಗೌರವ ಎಂದ ಅವರು, ಡಾ ಹೆಚ್ ಜಿ ಅವರ ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಲಿ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಸಮಿತಿ ಕೋಶಾಧ್ಯಕ್ಷ ಬಿ.ಐತ್ತಪ್ಪ ನಾಯ್ಕ್, ಪುತ್ತೂರು ಘಟಕದ ಕಾರ್ಯದರ್ಶಿ ಹರಿಣಿ ಪುತ್ತೂರಾಯ ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಪರಿಷತ್‌ನ ಪುತ್ತೂರು ಘಟಕದ ಕಾರ್ಯದರ್ಶಿ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಸ್ವಾಗತಿಸಿದರು. ಜ್ಞಾನಗಂಗಾ ಪುಸ್ತಕ ಮಳಿಗೆಯ ಪ್ರಕಾಶ್ ಕೊಡೆಂಕೀರಿ ವಂದಿಸಿದರು. ಪ್ರಾಂಶುಪಾಲ ಸುಬ್ಬಪ್ಪ ಕೈಕಂಬ ಕಾರ್ಯಕ್ರಮ ನಿರೂಪಿಸಿದರು. ಬೆಳಗ್ಗಿನ ಅವಧಿಯಲ್ಲಿ ಪ್ರೊ. ವಿ.ಬಿ. ಅರ್ತಿಕಜೆಯವರ ಹಾಸ್ಯ ಸಾಹಿತ್ಯ ಮತ್ತು ಚಿಂತನ ಸಾಹಿತ್ಯ ಕುರಿತು ವಿಚಾರಗೋಷ್ಠಿ ನಡೆಯಿತು.

LEAVE A REPLY

Please enter your comment!
Please enter your name here