ನರೇಂದ್ರ ಪ.ಪೂ.ಕಾಲೇಜಿನಲ್ಲಿ ನಡೆಯುತ್ತಿರುವ ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ಶಿಕ್ಷಣ ಕ್ಷೇತ್ರದಲ್ಲಿರುವ ಅಪರಿಮಿತ ಅವಕಾಶಗಳ ಬಗ್ಗೆ ವಿಶೇಷ ಉಪನ್ಯಾಸ

0

 

 


 ಪುತ್ತೂರು: ವಿದ್ಯಾರ್ಥಿ ಸಾಧಕನಾಗಬೇಕಾದರೆ ಒಳ್ಳೆಯ ಹವ್ಯಾಸಗಳ ಜೊತೆಗೆ ಕ್ರಿಯಾಶೀಲರಾಗಿ ಅಭ್ಯಾಸದ ಕಡೆ ಗಮನ ಹರಿಸಿದರೆ ಮಾತ್ರ ಉತ್ತಮ ಭವಿಷ್ಯತ್ತಿಗೆ ನಾಂದಿಯಾಗುತ್ತದೆ.ಈ ತರಬೇತಿಯನ್ನು ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿ ಜೀವನವನ್ನು ಉತ್ತಮವಾಗಿ ಸಾಗಿಸಬೇಕು. ಎಂದು ಸಂಪನ್ಮೂಲ ವ್ಯಕ್ತಿಗಳಾದ ಜೆಸಿಐಯ ರಾಷ್ಟ್ರೀಯ ತರಬೇತುದಾರರಾದ ಡಾ.ರಾಜೇಶ್ ಬೆಜ್ಜಂಗಳ ಇವರು ಹೇಳಿದರು.

 

ನರೇಂದ್ರ ಪ.ಪೂ.ಕಾಲೇಜಿನಲ್ಲಿ 10ನೇ ತರಗತಿ ಪರೀಕ್ಷೆ ಬರೆದು ಪ್ರಥಮ ಪಿಯುಸಿ ಸೇರ ಬಯಸುವ ವಿದ್ಯಾರ್ಥಿಗಳಿಗಾಗಿ ನಡೆಯುತ್ತಿರುವ ವ್ಯಕ್ತಿತ್ವ ವಿಕಸನ ಶಿಬಿರ ತರಂಗ ೨೦೨೨ ಇದರ ಮೊದಲನೇ ದಿನದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಡಾ.ರಾಜೇಶ್ ಬೆಜ್ಜಂಗಳ ಇವರು ಶಿಕ್ಷಣ ಕ್ಷೇತ್ರದಲ್ಲಿರುವ ಅಪರಿಮಿತ ಅವಕಾಶಗಳ ಎಂಬ ವಿಷಯದ ಕುರಿತು ವಿದ್ಯಾರ್ಥಿಗಳೊಡನೆ ನಡೆದ ಸಂವಾದ ಕಾರ್‍ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೇಶದ ಭವಿಷ್ಯವು ಯುವಶಕ್ತಿಯನ್ನು ಅವಲಂಬಿಸಿದೆ.ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯುವಜನಾಂಗವು ಅತ್ಯಾಧುನಿಕ ಕೌಶಲ್ಯ ಮತ್ತು ಜ್ಞಾನವನ್ನು ಹೊಂದಿರಬೇಕು ಹಾಗೂ ತನ್ನಲ್ಲಿರುವ ದೌರ್ಬಲ್ಯವನ್ನು ಅರಿತುಕೊಂಡು ಶಕ್ತಿ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಬೇಕು. ಎಂದು ಹೇಳಿದರು.

ಮನುಷ್ಯನ ಮನಸ್ಸನ್ನು ಅರಳಿಸುವ ಕಲೆ-ಚಿತ್ರಕಲೆ
ನಂತರ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ(ಸಿಬಿಎಸ್‌ಇ)ಯ ಚಿತ್ರಕಲಾ ಶಿಕ್ಷಕರಾದ ರಮೇಶ್ ಇವರು ಮನುಷ್ಯನ ಮನಸ್ಸನ್ನು ಅರಳಿಸುವ ವಿಭಿನ್ನವಾದ ವಿನೂತನ ಮಾದರಿಯ ಚಿತ್ರಕಲೆಗಳ ಪ್ರದರ್ಶನ ಜೊತೆಗೆ ವಿದ್ಯಾರ್ಥಿಗಳೇ ಮಾಡಬಹುದಾದ ಕರಕುಶಲಗಳ (ಕ್ರಾಫ್ಟ್) ತಯಾರಿಯ ಬಗ್ಗೆ ಮಾಹಿತಿಯನ್ನು ನೀಡಿದರು.ವಿದ್ಯಾರ್ಥಿಗಳನ್ನು ಗುಂಪುಗಳಾಗಿ ವಿಂಗಡಿಸಿ ವಿವಿಧ ಬಗೆಯ ಚಟುವಟಿಕೆಗಳ ಮೂಲಕ ಹಲವು ಮಾದರಿಯ ಕ್ರಾಫ್ಟ್‌ಗಳನ್ನು ತಯಾರಿಸಿದರು.

೧೦ನೇ ತರಗತಿ ವಿದ್ಯಾರ್ಥಿಗಳಿಗೆ ಆಕರ್ಷಕ ಮೋಜಿನ ಆಟಗಳನ್ನು ಕಾಲೇಜಿನ ವಿದ್ಯಾರ್ಥಿಗಳು ಆಡಿಸಿದರು. ವಿಜೇತರಿಗೆ ಪ್ರೋತ್ಸಾಹಕ ಬಹುಮಾನವನ್ನು ನೀಡಲಾಯಿತು. ಕಾರ್ಯಾಗಾರದಲ್ಲಿ ಪುತ್ತೂರು,ಬಂಟ್ವಾಳ,ಬೆಳ್ತಂಗಡಿ ತಾಲೂಕಿನ ವಿವಿಧ ಭಾಗಗಳಿಂದ ಸುಮಾರು ೬೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶ್ರೀಮತಿ ಮಧುರಾ ಮತ್ತು ಶ್ರೀಮತಿ ಅಕ್ಷತಾ ಸ್ವಾಗತಿಸಿ,ವಂದಿಸಿದರು.

LEAVE A REPLY

Please enter your comment!
Please enter your name here