ರಾಜ್ಯ ಸರಕಾರದ ವಿವಿಧ ಸರಕು ಮತ್ತು ಸೇವೆ ಟೆಂಡರ್ ಪೂರ್ವ ಪರಿಶೀಲನಾ ಸಮಿತಿಯಲ್ಲಿ ಪುತ್ತೂರಿನ ಕೆ.ನಂದಕುಮಾರ್

0

  • ಮಿಷನ್ ವಿವಾದ ಬಳಿಕ ಸರಕಾರದ ಮಹತ್ವದ ಕ್ರಮ | ಸಮಿತಿಗೆ ನಿವೃತ್ತ ನ್ಯಾ.ರತ್ನಕಲಾ ನೇತೃತ್ವ

ಪುತ್ತೂರು: ರಾಜ್ಯ ಸರಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಹೈಕೋರ್ಟಿನ ನಿವೃತ್ತ ನ್ಯಾ|ರತ್ನಕಲಾರವರ ಅಧ್ಯಕ್ಷತೆಯಲ್ಲಿ ಟೆಂಡರ್ ಪೂರ್ವ ಪರಿಶೀಲನಾ ಸಮಿತಿಯನ್ನು ನೇಮಿಸಿದ್ದು, ಈ ಸಮಿತಿಯಲ್ಲಿ ಓರ್ವರಾಗಿ ಪುತ್ತೂರು ಸರಕಾರಿ ನೌಕರರ ಸಮುದಾಯಭವನ(ಎನ್‌ಜಿಒ) ಕಟ್ಟಡದ ಬಳಿಯ ನಿವಾಸಿ, ಪ್ರಸ್ತುತ ಕರ್ನಾಟಕ ಪಾನೀಯ ನಿಗಮ ಬೆಂಗಳೂರು ಇದರ ಕಾರ್ಯನಿರ್ವಾಹಕ ನಿರ್ದೇಶಕರಾದ ಕೆ.ಎಸ್.ಎ.ಎಸ್ ಪದವೀಧರ ಕೆ.ನಂದಕುಮಾರ್(ಹಣಕಾಸು ವಿಷಯ ಪರಿಣತ)ರವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

 

 

ಕೆ.ನಂದಕುಮಾರ್

ನ್ಯಾ|ರತ್ನಕಲಾ

ಇತ್ತೀಚೆಗೆ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಬಳಿಕ ಎಚ್ಚೆತ್ತುಕೊಂಡಿರುವ ರಾಜ್ಯ ಸರಕಾರ ಈ ನಿರ್ಣಯ ಕೈಗೊಂಡಿದೆ ಮಾತ್ರವಲ್ಲದೆ ಈ ಸಮಿತಿಯಲ್ಲಿ ಜಲ ಸಂಪನ್ಮೂಲ ಇಲಾಖೆಯ ನಿವೃತ್ತ ಕಾರ್ಯದರ್ಶಿ ಬಿ.ಜೆ ಗುರುಪಾದ ಸ್ವಾಮಿ(ಇಂಜಿನಿಯರಿಂಗ್ ಪರಿಣತ)ರವರು ಒಳಗೊಂಡಿದ್ದಾರೆ. ೨೦೨೧ರ ಡಿಸೆಂಬರ್‌ನಲ್ಲಿ ಸರಕಾರ ಹೊರಡಿಸಿದ ಆದೇಶದಂತೆ ಈ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ವಿವಿಧ ಸರಕು ಮತ್ತು ಸೇವೆ ಪಡೆಯಲು ಕರೆಯುವ ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹಾಗೂ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಸಮಿತಿಯು ಕ್ರಮಗಳನ್ನು ಸೂಚಿಸಲಿದೆ. ಈಗಾಗಲೇ ಸರಕಾರ ಹೊರಡಿಸಿದ ಮಾರ್ಗಸೂಚಿಗಳಂತೆ ೫೦ ಕೋಟಿ ರೂ.ಗಳಿಗೂ ಹೆಚ್ಚು ಮೊತ್ತದ ಟೆಂಡರ್‌ಗಳು ಪಾರದರ್ಶಕ, ನ್ಯಾಯಸಮ್ಮತ ಆಗಿರುವ ಕುರಿತು ಸಮಿತಿ ಪರಿಶೀಲಿಸಲಿದೆ. ಯೋಜನೆಯನ್ನು ರೂಪಿಸಲಾಗಿರುವ ರೀತಿ, ಅದಕ್ಕೆ ತಗಲುವ ವೆಚ್ಚ ಮುಂತಾದುವು ಪರಿಶೀಲನೆಗೆ ಒಳಪಡಲಿದೆ.

ಕಾಮಗಾರಿಗೆ ಹಣ ಬಿಡುಗಡೆ ಮಾಡಲು ಶೇ.೪೦ ಕಮಿಷನ್ ಪಡೆಯಲಾಗುತ್ತದೆ ಎಂದು ರಾಜ್ಯದ ಗುತ್ತಿಗೆದಾರರ ಸಂಘದ ಅಧ್ಯಕ್ಷರು ದೇಶದ ಪ್ರಧಾನಿಗೆ ಪತ್ರ ಬರೆದಿದ್ದರು. ಅಲ್ಲದೆ ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾಮಗಾರಿ ಬಿಲ್ ನೀಡಲು ಶೇ.೪೦ ಲಂಚ ಕೇಳುತ್ತಿದ್ದಾರೆ ಎಂದು ಆರೋಪಿಸಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಟೆಂಡರ್‌ನಲ್ಲಿ ಪಾರದರ್ಶಕತೆ ಕಾಪಾಡಲು ಉನ್ನತ ಮಟ್ಟದ ಸಮಿತಿಯನ್ನು ರಚಿಸುವುದಾಗಿ ಹೇಳಿದ್ದರು. ಪ್ರಸ್ತುತ ಕೆ.ನಂದಕುಮಾರ್‌ರವರು ಪತ್ನಿ ಉಷಾ ಹಾಗೂ ಪುತ್ರಿ ಸ್ವಾತಿಯರೊಂದಿಗೆ ಬೆಂಗಳೂರಿನಲ್ಲಿ ವಾಸ್ತವ್ಯ ಹೊಂದಿದ್ದಾರೆ.

ಬಾಲಕೃಷ್ಣ ಹಾಗೂ ಭವಾನಿ ದಂಪತಿ ಪುತ್ರರಾಗಿರುವ ಕೆ.ನಂದಕುಮಾರ್‌ರವರು ಪುತ್ತೂರಿನ ಹೆಸರಾಂತ ಜವುಳಿ ಉದ್ಯಮಿ ಸಂಜೀವ ಶೆಟ್ಟಿಯವರ ಸಹೋದರಿಯ ಪುತ್ರರಾಗಿರುತ್ತಾರೆ. ಕೆಎಸ್‌ಎಎಸ್ ಪದವೀಧರರಾಗಿದ್ದು ಬೆಂಗಳೂರಿನ ವಿಧಾನಸೌಧದಲ್ಲಿ ಕರ್ನಾಟಕ ಆರ್ಥಿಕ ಇಲಾಖೆಯ ಉಪ ಕಾರ್ಯದರ್ಶಿಯಾಗಿ, ಆರೋಗ್ಯ ಇಲಾಖೆಯಲ್ಲಿ ಆಂತರಿಕ ಹಣಕಾಸು ಸಲಹೆಗಾರರಾಗಿ, ಗೃಹ ಇಲಾಖೆಯಲ್ಲಿನ ಪೊಲೀಸ್ ಇಲಾಖೆಯಲ್ಲಿ ಹಣಕಾಸು ಜಂಟಿ ನಿಯಂತ್ರಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮಾತ್ರವಲ್ಲದೆ ಪುತ್ತೂರಿನ ವಿವಿಧ ಶಿಕ್ಷಣ ಸಂಸ್ಥೆಗಳಿಗೆ, ದೈವ-ದೇವಸ್ಥಾನಗಳ ಅಭಿವೃದ್ಧಿಗೆ ಸರಕಾರದಿಂದ ಅನುದಾನ ಕೊಡಿಸಿದ್ದಾರೆ. ಇತ್ತೀಚೆಗೆ ಮಿನಿ ವಿಧಾನಸೌಧದ ಬಳಿ ನಿರ್ಮಾಣಗೊಂಡ ಪುತ್ತೂರಿನ ಸರಕಾರಿ ನೌಕರರ ಸಂಘದ ಸಮುದಾಯ ಭವನಕ್ಕೆ ಸರಕಾರದಿಂದ ಆರ್ಥಿಕ ನೆರವು ಕೊಡಿಸಿದ್ದಾರೆ ಅಲ್ಲದೆ ತಾಲೂಕು ಸರಕಾರಿ ನೌಕರರ ಸಂಘದ ಸಭಾಭವನದ ವೇದಿಕೆಗೆ ಶ್ರೀಮತಿ ಮತ್ತು ಶ್ರೀ ಕೆ.ನಂದಕುಮಾರ್ ಎಂದು ಹೆಸರಿಟ್ಟಿರುವುದು ಕೆ.ನಂದಕುಮಾರ್‌ರವರ ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಿದೆ.

LEAVE A REPLY

Please enter your comment!
Please enter your name here