ಅಗಲಿದ ಸಾಹಿತಿ ಟಿ.ಜಿ. ಮುಡೂರು ಅವರಿಗೆ ಪಂಜದಲ್ಲಿ ನುಡಿನಮನ

0

  • ವೈಕುಂಠ ಸಮಾರಾಧನೆ ಕಾರ್ಯಕ್ರಮ, ಸಾಕ್ಷ್ಯಚಿತ್ರ ಪ್ರದರ್ಶನ

 

ಪುತ್ತೂರು: ಅಗಲಿದ ಹಿರಿಯ ಸಾಹಿತಿ ವಿದ್ವಾನ್ ಟಿ.ಜಿ. ಮುಡೂರು ಅವರ ವೈಕುಂಠ ಸಮಾರಾಧನೆಯು ಮೇ. ೮ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆದಿದ್ದು, ಇದೇ ದಿನ ಸಾರ್ವಜನಿಕ ನುಡಿನಮನ, ಮುಡೂರು ಬದುಕು ಬರಹಗಳು ಅನಾವರಣ ಹಾಗೂ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು.

ಮುಡೂರು ಅವರ ಪತ್ನಿ ಶ್ರೀಮತಿ ಕಮಲ ಮತ್ತು ಮನೆಯವರು ಟಿ.ಜಿ.ಮುಡೂರು ಅವರ ಭಾವಚಿತ್ರದ ಎದುರು ದೀಪ ಬೆಳಗಿಸಿದರು. ಬಳಿಕ ಮುಡೂರು ಬದುಕು ಮತ್ತು ಸಾಧನೆಗಳ ಕುರಿತು ಸುದ್ದಿ ಮೀಡಿಯಾ ಕ್ರಿಯೇಷನ್ಸ್ ತಯಾರಿಸಿದ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.

ನಂತರ ಮುಡೂರು ಸಾಹಿತ್ಯ ಮತ್ತು ಚಿಂತನೆಗಳ ಬಗ್ಗೆ ಉಪನ್ಯಾಸಕ ಡಾ|ನರೇಂದ್ರ ರೈ ದೇರ್ಲ, ಮುಡೂರು ಗದ್ಯ ಸಾಹಿತ್ಯದ ಬಗ್ಗೆ ಸಂಶೋಧಕ ಡಾ|ಸುಂದರ ಕೇನಾಜೆ, ಮುಡೂರು ಬದುಕಿನ ಬಗ್ಗೆ ವಿಶ್ರಾಂತ ಉಪನ್ಯಾಸಕ ರಾಧಾಕೃಷ್ಣ ಕಲ್ಚಾರ್, ಸಹಕಾರಿ ಧುರೀಣ ಜಾಕೆ ಮಾಧವ ಗೌಡ ಮಾತನಾಡಿದರು. ಆರಾಧನಾ ಸಮಿತಿ ಪರವಾಗಿ ಅಧ್ಯಕ್ಷ ಚಿನ್ನಪ್ಪ ಗೌಡ ಸಂಕಡ್ಕ, ಜೇಸೀಐ ಪಂಜ ಪಂಚಶ್ರೀ ಪರವಾಗಿ ಪೂರ್ವಾಧ್ಯಕ್ಷ ಶಶಿಧರ ಪಳಂಗಾಯ, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಪರವಾಗಿ ಅಧ್ಯಕ್ಷ ಚಂದ್ರಶೇಖರ ಪೇರಾಲು ನುಡಿನಮನ ಸಲ್ಲಿಸಿದರು.
ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿ ಡಾ|ಚಿನ್ನಪ್ಪ ಗೌಡ, ಮುಡೂರು ಅವರ ಅಳಿಯ ಹಾಗೂ ಸುದ್ದಿ ಸಮೂಹ ಸಂಸ್ಥೆಗಳ ಮಾಲಕ ಡಾ.ಯು.ಪಿ.ಶಿವಾನಂದ ಮಾತನಾಡಿದರು. ಲಂಚ ಭ್ರಷ್ಟಾಚಾರ ಮುಕ್ತ ಸಮಾಜದ ಆಶಯ ಟಿ.ಜಿ.ಮುಡೂರು ಅವರದ್ದೂ ಆಗಿದ್ದು ಸುದ್ದಿಯ ಜನಾಂದೋಲನಕ್ಕೆ ಮುಡೂರರು ನೀಡಿದ ಬೆಂಬಲ ಮತ್ತು ಮಾರ್ಗದರ್ಶನವನ್ನು ನೆನಪಿಸಿಕೊಂಡ ಡಾ.ಯು.ಪಿ.ಶಿವಾನಂದರು ಅದಕ್ಕಾಗಿ ಅವರ ನೆನಪಿನಲ್ಲಿ ಲಂಚ ಭ್ರಷ್ಟಾಚಾರ ವಿರೋಧಿ ಫಲಕವನ್ನು ವಿತರಿಸಿದರು.

ಮುಡೂರು ಅವರ ಪುತ್ರ ಸವಿತಾರ ಮುಡೂರು ನುಡಿನಮನ ಸಲ್ಲಿಸಿ ಧನ್ಯವಾದ ಸಮರ್ಪಿಸಿದರು. ಬಳಿಕ ಮುಡೂರು ಅವರ ಗೌರವಾರ್ಥ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಆಗಮಿಸಿದ್ದ ನೂರಾರು ಮಂದಿ ಮುಡೂರು ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ಪತ್ರಕರ್ತ ದುರ್ಗಾಕುಮಾರ್ ನಾಯರ್‌ಕೆರೆ, ಸೋಮಶೇಖರ ನೇರಳ ಕಾರ್ಯಕ್ರಮ ನಿರೂಪಿಸಿದರು.

ಇದೇ ವೇಳೆ ಮುಡೂರು ಅವರ ಕುರಿತು ಅವರ ಮನೆಯವರು ಮತ್ತು ಕುಟುಂಬಿಕರ ಅನಿಸಿಕೆಗಳನ್ನೊಳಗೊಂಡ ದೃಶ್ಯ ಚಿತ್ರಣ ಹಾಗೂ ಮುಡೂರು ಅವರ ಕುರಿತು ಡಾ. ಪುರುಷೋತ್ತಮ ಬಿಳಿಮಲೆಯವರು ಮಾಡಿದ ಆಕಾಶವಾಣಿ ಭಾಷಣವನ್ನು ಪ್ರಸಾರ ಮಾಡಲಾಯಿತು.

ನುಡಿನಮನ ಮತ್ತು ವೈಕುಂಠ ಸಮಾರಾಧನೆ ಕಾರ್ಯಕ್ರಮವನ್ನು ಸುದ್ದಿ ಚಾನೆಲ್ ನೇರಪ್ರಸಾರ ಮಾಡಿತು. ವೇದಿಕೆಯಲ್ಲಿ ಅಳವಡಿಸಲಾದ ಬೃಹತ್ ಎಲ್‌ಇಡಿ ಪರದೆ ಹಾಗೂ ಎರಡು ಬೃಹತ್ ಟಿವಿಗಳಲ್ಲಿ ಕೂಡಾ ಕಾರ್ಯಕ್ರಮದ ವೀಕ್ಷಣೆಗೆ ಅವಕಾಶ ಮಾಡಲಾಗಿತ್ತು.

ಟಿ.ಜಿ. ಮುಡೂರು ಅವರ ಪುತ್ರಿಯರಾದ ಶ್ರೀಮತಿ ಶೋಭಾ ಶಿವಾನಂದ ಊರುಬೈಲು, ಶ್ರೀಮತಿ ಗೀತಾ ಪುಂಡರೀಕ ಅಡ್ಪಂಗಾಯ, ಡಾ. ಮಮತಾ ಕಿರಣ್ ಉಳುವಾರ, ಸೊಸೆ ಲತಾ ಮುಡೂರು, ಅಳಿಯಂದಿರು, ಮೊಮ್ಮಕ್ಕಳು , ಮರಿಮಕ್ಕಳು, ಕುಟುಂಬಸ್ಥರು, ಹಿತೈಷಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

ಮುಡೂರು ಅವರ ಗದ್ಯ ಸಾಹಿತ್ಯ ಅತ್ಯಂತ ಮೌಲ್ಯಯುತವಾದದ್ದು. ಸಾಹಿತ್ಯ *ಪರಂಪರೆಗೆ ಮೌಲ್ಯವನ್ನು ತಂದುಕೊಟ್ಟದ್ದು. ಮತ್ತು ತೀವ್ರತರದ ಪರಿಣಾಮವನ್ನು ಕೊಟ್ಟಂತಹದ್ದು. ಅವರ ಸಾಹಿತ್ಯದ ಮರು ಓದು ಇಂದಿನ ತಲೆಮಾರಿಗೆ ಹೊಸ ಚಿಂತನೆ ಮೂಡಿಸಬಲ್ಲುದು. – ಡಾ| ಸುಂದರ್ ಕೇನಾಜೆ

 ಶಿಕ್ಷಣವನ್ನು ಶಿಕ್ಷೆಯ ಮೂಲಕವೇ ನೀಡಿದ್ದರೂ ಅವರ ಪಾಠಗಳು ಮಾದರಿಯಾಗಿತ್ತು. ಶಿಷ್ಯರನ್ನು ದಾರಿಗೆಡದಂತೆ ಎಚ್ಚರ ವಹಿಸಿತ್ತು. ಶಿಷ್ಯರಲ್ಲಿದ್ದ ಆಸಕ್ತಿದಾಯಕ ವಿಚಾರಗಳನ್ನು ಪ್ರಚೋದಿಸಿ ಅವರ ಬೆಳವಣಿಗೆಗೆ ಕಾರಣರಾಗಿದ್ದು, ಮುಡೂರರ ದೊಡ್ಡ ಗುಣ. ರಾಧಾಕೃಷ್ಣ ಕಲ್ಚಾರು

ದೇಶಕ್ಕೆ ಮಹಾತ್ಮಾಗಾಂಧಿ ಹೇಗೆ ಮಾದರಿಯಾಗಿ ಬದುಕಿದ್ದಾರೋ, ಪಂಜ ಪರಿಸರದಲ್ಲಿ ಮುಡೂರು ಹಾಗೆಯೇ ಗಾಂಧಿಯಂತೆಯೇ ಬದುಕಿದವರು. ಜನರಿಗೆ ಇಷ್ಟವಾಗಿ ಬದುಕಿದವರು. ಮುಡೂರು ಅವರು ಇಷ್ಟಪಟ್ಟಂತೆ ನಾವೆಲ್ಲಾ ಬದುಕುವುದಕ್ಕೆ ನಿರ್ಧಾರ ಮಾಡಬೇಕು. ಕೊನೆಯವರೆಗೂ ಜೀವನೋತ್ಸಾಹವನ್ನು ಉಳಿಸಿಕೊಂಡ ಮುಡೂರು ಅತ್ಯಂತ ಶ್ರೇಷ್ಠ ವ್ಯಕ್ತಿ. ಆ ಶ್ರೇಷ್ಠತನ ನಮಗೆ ಮಾದರಿಯಾಗಬೇಕು. ಪಂಜದಲ್ಲಿ ಅವರ ನೆನಪು ಶಾಶ್ವತವಾಗಿರಲು ಅವರ ಹೆಸರಿನ ವೃತ್ತ ನಿರ್ಮಾಣ ಅಥವಾ ಪುತ್ಥಳಿ ನಿರ್ಮಾಣ ಆಗಬೇಕು. – ಡಾ.ಯು.ಪಿ. ಶಿವಾನಂದ

 ಸಾಂಸ್ಕೃತಿಕ ಜಗತ್ತಿನಲ್ಲಿ ಪಂಜದಂತಹ ಪ್ರದೇಶದಲ್ಲಿ ಗುರುತಿಸುವಂತೆ ಮಾಡಿದವರು ಟಿ.ಜಿ. ಮುಡೂರರು. ಅವರ ಸಾಹಿತ್ಯದ ಸಂಘರ್ಷಗಳು ಆ ಬಳಿಕದ ತಲೆಮಾರಿಗೆ ಆದರ್ಶಯುತವಾಗಿ ಬಂದಿದೆ. ಹಳ್ಳಿಯ ಶಿಕ್ಷಕರಾಗಿ, ರೈತ ಬದುಕಿನ ಪ್ರತಿನಿಧಿಯಾಗಿ ಟಿ.ಜಿ.ಮುಡೂರು ನಮ್ಮ ಮುಂದಿದ್ದರುಡಾ| ನರೇಂದ್ರ ರೈ ದೇರ್ಲ

 ಟಿ.ಜಿ.ಮುಡೂರರು ಎಂದೂ ಹೊಗಳಿಕೆ ಬಯಸಿದವರಲ್ಲ. ಅವರನ್ನು ಸರಿಯಾಗಿ ತಿಳಿದುಕೊಂಡವರಿಗೆ ಅವರ ಸಹಾಯದ ಗುಣ ತಿಳಿದಿದೆ. ವ್ಯಕ್ತಿಯ ಅಭ್ಯುದಯಕ್ಕಾಗಿ, ವಿದ್ಯೆ ಮತ್ತು ಆರೋಗ್ಯಕ್ಕಾಗಿ ಅವರು ಮಾಡಿದ ಅನೇಕ ಸಹಾಯಗಳ ದೃಷ್ಟಾಂತ ನಮ್ಮ ಮುಂದಿದೆ. ಯುವಕರನ್ನು ಒಟ್ಟು ಸೇರಿಸಿ ಅವರು ಕಟ್ಟಿದ ಸಂಘ ಸಂಸ್ಥೆಗಳು ಇಂದಿಗೂ ಸಮಾಜಮುಖಿಯಾಗಿದೆ.ಜಾಕೆ ಮಾಧವ ಗೌಡ

ಪಂಜವನ್ನು ಬೆಳಗಿದವರು ಅವರು. ಅವರಿಂದ ಬೆಳಗಿದ ಪಂಜವು ಅವರನ್ನು ಸದಾಕಾಲ ನೆನಪಿಸುವಂತಾಗಬೇಕು. ಇದಕ್ಕಾಗಿ ಟಿ.ಜಿ. ಮುಡೂರು ಪ್ರತಿಷ್ಠಾನವೊಂದನ್ನು ಕೌಟುಂಬಿಕ ನೆಲೆ ಮತ್ತು ಸಾಮಾಜಿಕ ನೆಲೆಯಲ್ಲಿ ಸ್ಥಾಪಿಸಿ ಅದರ ಮೂಲಕ ನಿರಂತರ ಕಾರ್ಯಕ್ರಮಗಳಾಗಬೇಕು. ಯಾವ ಯೋಜನೆಗೆ ಅವರ ಹೆಸರಿಟ್ಟರೂ ಅದು ಅನ್ವಯವೇ ಆಗುತ್ತದೆ.ಡಾ| ಚಿನ್ನಪ್ಪ ಗೌಡ

LEAVE A REPLY

Please enter your comment!
Please enter your name here