ಸಿಂಗಲ್ ಸ್ವಿಚ್ ದಾರಿ ದೀಪಗಳ ಅಳವಡಿಕೆಗೆ ಮೆಸ್ಕಾಂನಿಂದ ರೂ.46.27 ಲಕ್ಷ ದಂಡ

0

  •   ದಂಡ ಕಡಿತ, ದಾರಿದೀಪ ಅಧಿಕೃತಗೊಳಿಸಲು ಶಾಸಕರ ಜೊತೆ ಮಾತುಕತೆ
  • ನಗರಸಭೆ ಸಾಮಾನ್ಯ ಸಭೆ ನಿರ್ಣಯ

 

ಪುತ್ತೂರು: ನಗರಸಭೆ ವ್ಯಾಪ್ತಿಯಲ್ಲಿ ಕೆಲವು ಕಡೆಗಳಲ್ಲಿ ಸಿಂಗಲ್ ಸ್ವಿಚ್ಚ್‌ನ ದಾರಿ ದೀಪಗಳನ್ನು ಅಳವಡಿಸಿರುವುದಕ್ಕಾಗಿ ಮೆಸ್ಕಾಂ ಇಲಾಖೆ ಒಂದು ವರ್ಷದ ಅವಧಿಗೆ ರೂ.೪೬.೨೭ ಲಕ್ಷ ದಂಡ ವಿಧಿಸಿರುವ ವಿಚಾರ ನಗರ ಸಭೆ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪವಾಗಿ, ದಂಡವನ್ನು ಕಡಿಮೆಗೊಳಿಸುವಂತೆ ಮತ್ತು ಮುಂದೆ ದಾರಿದೀಪಗಳನ್ನು ಅಧಿಕೃತಗೊಳಿಸುವ ಕುರಿತು ಶಾಸಕರ ಜೊತೆ ಮಾತುಕತೆ ನಡೆಸುವಂತೆ ನಿರ್ಣಯಿಸಲಾಗಿದೆ.

ನಗರಸಭೆ ಸಾಮಾನ್ಯ ಸಭೆಯು ಮೇ 9ರಂದು ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರ ಅಧ್ಯಕ್ಷೆತೆಯಲ್ಲಿ ನಗರಸಭೆ ಸಭಾಂಗಣದಲ್ಲಿ ನಡೆಯಿತು.ಕೆಲವು ಕಡೆಗಳಲ್ಲಿ ದಾರಿದೀಪಗಳಿಗೆ ಮೆಸ್ಕಾಂ ವತಿಯಿಂದ ವಿದ್ಯುತ್ ಮೀಟರ್ ಅಳವಡಿಸದೆ ಸಿಂಗಲ್ ಸ್ವಿಚ್ ಅಳವಡಿಸಿರುವ ದಾರಿದೀಪಗಳಿಗೆ ವಿದ್ಯುತ್ ಸರಬರಾಜು ಮತ್ತು ವಿತರಣಾ ಸಂಹಿತೆ-೨೦೦೬ ನಿಬಂಧನೆ ೪೨.೦೫ರ ಪ್ರಕಾರ ಮತ್ತು ಮಾಪಕವಿಲ್ಲದ ದಾರಿದೀಪಗಳಿಗೆ ನಿಬಂಧನೆ ೪೨.೦೬(ಬಿ)(೧)ರಂತೆ ೧ ವರ್ಷದ ಅವಧಿಗೆ ೨ ಪಟ್ಟು ದಂಡ ವಿಧಿಸಿ ರೂ.೪೬,೨೭,೪೧೮ ವನ್ನು ಪಾವತಿಸುವಂತೆ ಮತ್ತು ಸದ್ರಿ ಸಂಪರ್ಕಗಳನ್ನು ಕಡಿತಗೊಳಿಸುವಂತೆ ಕಚೇರಿಗೆ ಬಂದಿರುವ ಪತ್ರವನ್ನು ಸಭೆಯಲ್ಲಿ ಮಂಡಿಸಲಾಯಿತು.ಉತ್ತರಿಸಿದ ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಈ ಕುರಿತು ಪುತ್ತೂರು ಮೆಸ್ಕಾಂನಿಂದ ಮೇಲಧಿಕಾರಿಗಳಿಗೆ ವರದಿ ನೀಡುವಂತೆ ಒತ್ತಾಯಿಸಲಾಗಿದೆ.ಹಾಗಾಗಿ ದಂಡವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಶಾಸಕರ ನೇತೃತ್ವದಲ್ಲಿ ಮೆಸ್ಕಾಂ ಅಧಿಕಾರಿಗಳ ಜೊತೆ ಸಭೆ ನಡೆಸಿ ಬಳಿಕ ದಾರಿ ದೀಪಗಳನ್ನು ಅಧಿಕೃತಗೊಳಿಸುವ ಕಾರ್ಯ ಮಾಡುವಂತೆ ನಿರ್ಣಯ ಕೈಗೊಳ್ಳಲಾಗುವುದು ಎಂದರು.

ನ್ಯಾಯಾಲಯದಲ್ಲಿ ಕೇಸ್ ಪೆಂಡಿಂಗ್ ವಿಚಾರಿಸಲು ಸಭೆ: ನಗರಸಭೆಗೆ ಸಂಬಂಧಿಸಿದ ವಿವಿಧ ಜಾಗದ, ದಾರಿಯ ವಿಚಾರದಲ್ಲಿ ಹಲವು ಕೇಸುಗಳು ಪೆಂಡಿಂಗ್ ಇದೆ.ಈಗಾಗಲೇ ಉಚ್ಚ ನ್ಯಾಯಾಲಯದಲ್ಲಿ ೧೩ ಕೇಸ್ ಇದೆ.ಯಾವುದು ಕೂಡಾ ತೀರ್ಮಾನ ಆಗುತ್ತಿಲ್ಲ. ಈ ನಿಟ್ಟಿನಲ್ಲಿ ನಗರಸಭೆಯ ನ್ಯಾಯವಾದಿಗಳೊಂದಿಗೆ ಸಭೆ ನಡೆಸಿ ಕೇಸುಗಳ ಬಗ್ಗೆ ಮುತುವರ್ಜಿ ವಹಿಸಲು ತಿಳಿಸಲಾಗುವುದು.ಈಗಾಗಲೇ ನಗರಸಭೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ದಾಖಲಾಗುವ ದಾವೆಗಳಿಗೆ ನಗರಸಭೆ ಪರವಾಗಿ ಉಚ್ಛನ್ಯಾಯಾಲಯದಲ್ಲಿ ಮತ್ತು ಸಿವಿಲ್ ನ್ಯಾಯಾಲಯ ಜೆಎಮ್‌ಎಫ್‌ಸಿ ಪುತ್ತೂರು ಇಲ್ಲಿ ವಾದಿಸಲು ಉಚ್ಚ ನ್ಯಾಯಾಲಯದ ನ್ಯಾಯವಾದಿ ಎ.ಕೇಶವ ಭಟ್, ಪ್ರತೀಕ್ ಎಮ್, ಹರೀಶ್ ಭಂಡಾರಿ, ಪುತ್ತೂರು ಸಿವಿಲ್ ಜೆಎಂಎಫ್‌ಸಿ ನ್ಯಾಯಾವಾದಿಗಳಾದ ಶಿವಪ್ರಸಾದ್, ನಾಗರಾಜ್, ಎನ್.ಕೆ.ಜಗನ್ನಿವಾಸ ರಾವ್, ಹೊಸದಾಗಿ ಪ್ಯಾನಲ್‌ಗೆ ಸೇರ್ಪಡೆಗೊಂಡ ವಿವೇಕಾನಂದ ಕೆ.ಎಸ್ ಅವರು ನಗರಸಭೆ ಪರವಾಗಿ ದಾವೆ ಹೂಡುವ ವಕೀಲರಾಗಿದ್ದಾರೆ ಎಂದರು.

ಜಲಸಿರಿ ಕಾಮಗಾರಿ ಸಮಸ್ಯೆ ಜಿಲ್ಲಾಧಿಕಾರಿ ನೇತೃತ್ವದಲ್ಲೇ ಸಭೆ: ನಗರಸಭೆಗೆ ಜಲಸಿರಿ ೨೪/೭ ಯೋಜನೆಯಲ್ಲಿ ನಡೆಯುವ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಕೆ ಕಾಮಗಾರಿಯಿಂದ ರಸ್ತೆಗಳು ತೀರಾ ಕೆಟ್ಟು ಹೋಗಿದೆ.ಅದರ ಸರಿ ಮಾಡದೇ ಇರುವ ಕುರಿತು ಸಾರ್ವಜನಿಕರು ನಗರಸಭೆ ಸದಸ್ಯರಿಗೆ ದೂರು ನೀಡುತ್ತಿದ್ದಾರೆ ಎಂದು ಸದಸ್ಯರಾದ ಭಾಮಿ ಅಶೋಕ್ ಶೆಣೈ, ಮನೋಹರ ಕಲ್ಲಾರೆ, ಶಶಿಪ್ರಭಾ ಅವರು ಸೇರಿದಂತೆ ಹಲವು ಸದಸ್ಯರು ಸಭೆಯಲ್ಲಿ ಪ್ರಸ್ತಾಪಿಸಿದರು.ಉತ್ತರಿಸಿದ ಅಧ್ಯಕ್ಷರು ಜಲಸಿರಿ ಕಾಮಗಾರಿ ವಿಚಾರದಲ್ಲಿ ಬಂದ ದೂರಿನಂತೆ ಈಗಾಗಲೇ ನೀರಿನ ಕೊಳವೆ ಅಳವಡಿಸುವಾಗ ಹಾನಿಗೊಂಡ ಕಾಂಕ್ರೀಟ್ ರಸ್ತೆ, ಇಂಟರ್‌ಲಾಕ್ ರಸ್ತೆ, ಡಾಮರು ರಸ್ತೆಗಳನ್ನು ದುರಸ್ತಿ ಮಾಡುವಂತೆ ಹಲವು ಬಾರಿ ತಿಳಿಸಲಾಗಿದೆ.ಇದೀಗ ಜಿಲ್ಲಾಧಿಕಾರಿಗಳ ನೇತೃತ್ವದಲ್ಲೇ ಶೀಘ್ರ ಸಭೆ ನಡೆಯಲಿದೆ ಎಂದರು.

ಮಂಜಲ್ಪಡ್ಪುವಿನಲ್ಲಿ ಕಳಪೆ ಡಾಮರೀಕರಣ: ಮಂಜಲ್ಪಡ್ಪುವಿನಲ್ಲಿ ನೂತನ ರಸ್ತೆ ಅಗಲೀಕರಣ ಕಾಮಗಾರಿಯಲ್ಲಿ ನಡೆದ ಡಾಮರೀಕರಣ ಕಳಪೆಯಾಗಿದೆ.ಇದು ನಗರ ಸಭೆ ವತಿಯಿಂದ ಮಾಡಲಾದ ಡಾಮರೀಕರಣವೇ ಎಂದು ಸದಸ್ಯ ಮಹಮ್ಮದ್ ರಿಯಾಜ್ ಪ್ರಶ್ನಿಸಿದರು.ಉತ್ತರಿಸಿದ ಅಧ್ಯಕ್ಷರು,ಡಾಮರೀಕರಣ ನಗರಸಭೆಯಿಂದ ಮಾಡಿಲ್ಲ.ಅದು ಲೋಕೋಪಯೋಗಿ ಇಲಾಖೆಯಿಂದ ಮಾಡಲಾಗಿದೆ.ಆದರೆ ಇಲ್ಲಿ ಗಮನಿಸಬೇಕಾದ ಅಂಶ ಏನೆಂದರೆ ನಗರಸಭೆಯಿಂದ ರೂ.೧೮ ಲಕ್ಷ ಮತ್ತು ಶಾಸಕರ ನಿಧಿಯಿಂದ ಲೋಕೋಪಯೋಗಿ ಇಲಾಖೆ ಮೂಲಕ ರೂ.೧ ಕೋಟಿ ಅನುದಾನದಲ್ಲಿ ಕಾಮಗಾರಿ ನಡೆದಿದೆ.ಶ್ರೀ ಮಹಾಲಿಂಗೇಶ್ವರ ದೇವರು ಪೇಟೆ ಸವಾರಿ ವೇಳೆ ಕಾಮಗಾರಿ ಮುಗಿಸುವ ಪ್ರಯತ್ನ ನಡೆದಿತ್ತು.ಮಳೆಯಿಂದಾಗಿ ಕಾಮಗಾರಿಗೆ ಅಡ್ಡಿಯಾಗಿತ್ತು ಎಂದು ಮಾಹಿತಿ ನೀಡಿದರು.

ಎಸ್‌ಎಫ್‌ಸಿ ಅನುದಾನದಲ್ಲಿ ಕೊಳವೆ ಬಾವಿ ನಿರ್ಮಾಣದ ಕುರಿತು ಪ್ರಸ್ತಾಪಕ್ಕೆ ಸಂಬಂಧಿಸಿ ಈ ಹಿಂದೆ ಅಳವಡಿಸಿದ ಕೊಳವೆ ಬಾವಿಗೆ ಕನೆಕ್ಷನ್ ಕೊಟ್ಟಿಲ್ಲ ಎಂದು ಸದಸ್ಯೆ ದೀಕ್ಷಾ ಪೈ ಪ್ರಸ್ತಾಪಿಸಿದರು.ನಗರಸಭೆ ಉಪಾಧ್ಯಕ್ಷೆ ವಿದ್ಯಾ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ, ಪೌರಾಯುಕ್ತ ಮಧು ಎಸ್ ಮನೋಹರ್, ಸದಸ್ಯರಾದ ಶಿವರಾಮ ಎಸ್, ವಸಂತ ಕಾರೆಕ್ಕಾಡು, ಗೌರಿ ಬನ್ನೂರು, ಕೆ.ಫಾತಿಮಾತ್‌ಝೋರ, ಮೋಹಿನಿ ವಿಶ್ವನಾಥ ಗೌಡ, ಲೀಲಾವತಿ ಅಣ್ಣು ನಾಯ್ಕ್, ಪದ್ಮನಾಭ ನಾಯ್ಕ ಪಡೀಲ್, ಪಿ.ಜಿ.ಜಗನ್ನಿವಾಸ ರಾವ್, ಪ್ರೇಮಲತಾ ಜಿ, ಕೆ.ಸಂತೋಷ್ ಕುಮಾರ್, ನವೀನ್ ಕುಮಾರ್ ಎಮ್, ಯಶೋಧಾ ಹರೀಶ್, ಇಂದಿರಾ ಪಿ, ರೋಹಿಣಿ ಕೇಶವ ಪೂಜಾರಿ, ಮಮತಾ ರಂಜನ್, ಮಹಮ್ಮದ್ ರಿಯಾರh ಕೆ, ಬಿ.ಶೀನಪ್ಪ ನಾಯ್ಕ, ಪೂರ್ಣಿಮ ಕೋಡಿಯಡ್ಕ ಮತ್ತು ನಗರಸಭೆ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here