ಒಳಮೊಗ್ರು ಗ್ರಾಪಂ: ಮಹಿಳಾ ವಿಶೇಷ ಗ್ರಾಮಸಭೆ, ಸ್ವಯಂರಕ್ಷಣಾ ತರಬೇತಿ

0

  • ಮಹಿಳೆಯರು ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಬೇಕು: ಭವಾನಿ

 

ಪುತ್ತೂರು: ಒಳಮೊಗ್ರು ಗ್ರಾಮ ಪಂಚಾಯತಿಯ 2021-22 ನೇ ಸಾಲಿನ ಮಹಿಳಾ ವಿಶೇಷ ಗ್ರಾಮ ಸಭೆಯು ಮೇ.೦೫ ರಂದು ನಡೆಯಿತು. ಕಾನೂನು ಮಾಹಿತಿ ನೀಡಿದ ಸಂಪ್ಯ ಪೊಲೀಸ್ ಠಾಣೆಯ ಉಪನಿರೀಕ್ಷಕಿ (ಪ್ರೊಬೆಷನರಿ ) ಭವಾನಿಯವರು ಮಾತನಾಡಿ, ಮಹಿಳೆಯರು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗಬೇಕು, ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವ ಛಲವನ್ನು ಬೆಳೆಸಿಕೊಳ್ಳಬೇಕು ಎಂದರು. ತಮಗೆ ಕಿರುಕುಳ ಆಗುತ್ತಿದೆ ಎಂಬುದು ಗೊತ್ತಾದರೆ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಬೀಟ್ ಪೊಲೀಸ್‌ಗೆ ಮಾಹಿತಿ ನೀಡಬೇಕು. ಕೆಲಸದ ಜಾಗದಲ್ಲಾಗಲಿ ಅಥವಾ ಇತರ ಕಡೆಗಳಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯವನ್ನು ನಿಲ್ಲಿಸುವ ಸಲುವಾಗಿ ಪೊಲೀಸ್ ಇಲಾಖೆ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಇದಕ್ಕೆ ಮುಖ್ಯವಾಗಿ ಮಹಿಳೆಯರು ಸಹಕಾರ ನೀಡಬೇಕು, ತಮಗಾದ ಅನ್ಯಾಯವನ್ನು ಹೇಳಿಕೊಳ್ಳುವ ಧೈರ್ಯವನ್ನು ಮಾಡಬೇಕು, ಯಾವುದೇ ಕಾರಣಕ್ಕೂ ಮಹಿಳೆಯರು ಎದೆಗುಂದುವ ಅಗತ್ಯವಿಲ್ಲ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸೂಪರ್ ವೈಸರ್ ಆರತಿಯವರು ಇಲಾಖಾ ಮಾಹಿತಿಯನ್ನು ನೀಡಿದರು. ಗ್ರಾಮ ಸಭೆಯ ನಂತರ ಮಹಿಳೆಯರಿಗೆ ಸ್ವಯಂ ರಕ್ಷಣಾ ತರಬೇತಿ ನಡೆಯಿತು. ಮಹಿಳೆಯರು ಯಾವ ರೀತಿಯಲ್ಲಿ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಬಹುದು, ಅನ್ಯರ ದಾಳಿಯಿಂದ ಹೇಗೆ ಬಜಾವ್ ಆಗಬಹುದು ಎಂಬ ಬಗ್ಗೆ ಸ್ವರಕ್ಷಾ ಫಾರ್ ವಿಮನ್ ಟ್ರಸ್ಟ್‌ನ ಕಾರ್ತಿಕ್ ಕಟೀಲ್ ರವರು ಸ್ವಯಂ ರಕ್ಷಣಾ ತರಬೇತಿಯನ್ನು ನೀಡಿದರು.

ವೇದಿಕೆಯಲ್ಲಿ ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಉಪಾಧ್ಯಕ್ಷೆ ಸುಂದರಿ ಉಪಸ್ಥಿತರಿದ್ದರು. ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್ ಸ್ವಾಗತಿಸಿ, ವಂದಿಸಿದರು. ಕಾರ್ಯದರ್ಶಿ ಜಯಂತಿ, ಸಿಬ್ಬಂದಿಗಳಾದ ಕೇಶವ, ಜಾನಕಿ, ಗುಲಾಬಿ ಸಹಕರಿಸಿದ್ದರು. ಸಭೆಯಲ್ಲಿ ಗ್ರಾಪಂ ಸದಸ್ಯರುಗಳು, ವಿವಿಧ ಸಂಘ ಸಂಸ್ಥೆ, ಸ್ವಸಹಾಯ ಸಂಘದ ಸದಸ್ಯೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here