ಪುತ್ತೂರಿನ ನೃತ್ಯೋಪಾಸನಾ ಕಲಾ ಕೇಂದ್ರದ ಮಂಗಳೂರು ಶಾಖೆ ಉದ್ಘಾಟನೆ

0

  • ಮಂಗಳೂರು ವಿವಿಯಲ್ಲಿ ಭರತನಾಟ್ಯ ಅಧ್ಯಯನ ಕೇಂದ್ರ ಅವಶ್ಯ: ವೇಣು ಶರ್ಮಾ

ಮಂಗಳೂರು: ಮಂಗಳೂರು ನಗರದ ಕಾರ್‌ಸ್ಟ್ರೀಟ್ ದಯಾನಂದ ಪೈ, ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಪುತ್ತೂರಿನ ನೃತ್ಯೋಪಾಸನಾ ಕಲಾ ಕೇಂದ್ರದ ಮಂಗಳೂರು ಶಾಖೆಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ನಾಟ್ಯರಾಣಿ ಶಾಂತಲಾ ಪ್ರಶಸ್ತಿ ಪುರಸ್ಕೃತ ನೃತ್ಯಗುರು ವಿದ್ವಾನ್ ಉಳ್ಳಾಲ ಮೋಹನ ಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ನಮ್ಮ ಕಲೆ, ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಭರತನಾಟ್ಯದ ಕೊಡುಗೆ ಅಪಾರವಾದ್ದು. ವಿದ್ಯಾರ್ಥಿಗಳು ಶ್ರದ್ಧೆಯಿಂದ ನೃತ್ಯವನ್ನು ಕಲಿಯಬೇಕಾಗಿದ್ದು, ಇದು ಜೀವನಕ್ಕೆ ದಾರಿದೀಪವಾಗಲು ಸಾಧ್ಯ ಎಂದರು. ಮಂಗಳೂರು ಆಡ್ ಐಡಿಯಾದ ಮುಖ್ಯಸ್ಥ ವೇಣು ಶರ್ಮಾ ಮಾತನಾಡಿ, ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿಯಲ್ಲಿ ಕಲೆ, ಸಂಸ್ಕೃತಿಗಳ ಕಲಿಕೆಗೆ ಹೆಚ್ಚಿನ ಆದ್ಯತೆ ಇದೆ. ಮಂಗಳೂರು ವಿಶ್ವವಿದ್ಯಾಲಯ ಕೂಡ ಸಂಗೀತ, ನೃತ್ಯ ಕಲೆಗಳನ್ನು ಅಕಾಡೆಮಿಕ್ ಆಗಿ ಕಲಿಸುವತ್ತ ಚಿಂತಿಸಬೇಕು. ಅಲ್ಲದೆ ಭರತನಾಟ್ಯದ ಸಮಗ್ರ ಕಲಿಕೆಯ ಸಲುವಾಗಿ ಭರತನಾಟ್ಯ ಅಧ್ಯಯನ ಕೇಂದ್ರ ತೆರೆಯಲು ಮುಂದಾಗಬೇಕು ಎಂದು ಹೇಳಿದರು. ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಮಾತನಾಡಿ ಹೊಸದಾಗಿ ಜಿಲ್ಲಾ ಕೇಂದ್ರದಲ್ಲಿ ನೃತ್ಯ ತರಗತಿ ಆರಂಭಿಸುತ್ತಿರುವ ಈ ಕಲಾಕೇಂದ್ರಕ್ಕೆ ಯಶಸ್ಸು ಸಿಗಲಿ. ಸನಾತನ ಭಾರತೀಯ ನೃತ್ಯ ಕಲೆಗಳು ಇನ್ನಷ್ಟು ಬೆಳವಣಿಗೆ ಕಾಣಬೇಕು ಎಂದು ಆಶಿಸಿದರು. ಕಾರ್‌ಸ್ಟ್ರೀಟ್ ಪ್ರಥಮ ದರ್ಜೆ ಕಾಲೇಜಿನ ಉಪ ಪ್ರಾಂಶುಪಾಲ ಡಾ.ಜಯಕರ ಭಂಡಾರಿ ಮಾತನಾಡಿ ಕಲೆ, ಸಂಸ್ಕೃತಿಯನ್ನು ಪೋಷಿಸುವ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ಮುಂದಡಿ ಇರಿಸಬೇಕು ಎಂದರು. ಕಾಲೇಜು ಪ್ರಾಂಶುಪಾಲ ಪ್ರೊ.ರಾಜಶೇಖರ ಹೆಬ್ಬಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸಾಂಸ್ಕೃತಿಕವಾಗಿ ದೂರವಾಗುತ್ತಿರುವ ಈಗಿನ ಸನ್ನಿವೇಶದಲ್ಲಿ ಭಾರತೀಯ ಕಲೆಗಳ ಪೋಷಣೆಗೆ ಇಂತಹ ನೃತ್ಯ ತರಗತಿಗಳು ಪೂರಕವಾಗಿದೆ. ಪ್ರತ್ಯೊಬ್ಬರಲ್ಲೂ ಸಂಗೀತ, ನೃತ್ಯ ಕಲೆಗಳು ಹುಟ್ಟಿನಿಂದ ಸಾವಿನ ವರೆಗೂ ಜತೆಯಲ್ಲೇ ಇರುತ್ತವೆ ಎಂದರು.

ಈ ಸಂದರ್ಭ ನೃತ್ಯಗುರು ವಿದ್ವಾನ್ ಉಳ್ಳಾಲ ಮೋಹನ ಕುಮಾರ್ ಮತ್ತು ಅವರ ಪುತ್ರಿ ವಿದುಷಿ ರಾಜಶ್ರೀ ಅವರನ್ನು ಗೌರವಿಸಲಾಯಿತು. ನೃತ್ಯೋಪಾಸನಾ ಕಲಾಕೇಂದ್ರದ ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ ಮಂಗಳೂರಿನಲ್ಲಿ ಪ್ರತಿ ಮಂಗಳವಾರ ಭರತನಾಟ್ಯ ನೃತ್ಯ ತರಗತಿ ನಡೆಸಲಾಗುವುದು ಎಂದರು. ಪೋಷಕ ಗಣೇಶ್ ಪ್ರಸಾದ್ ವಂದಿಸಿದರು. ಉಪನ್ಯಾಸಕಿ ವಿದ್ಯಾ ಎಸ್. ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here