ಸರ್ವೆ: ಪ್ರಗತಿ ಬಂಧು, ಸ್ವಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

0

  • ಧರ್ಮಸ್ಥಳ ಗ್ರಾ.ಯೋಜನೆಯು ಸಂಪೂರ್ಣ ಭ್ರಷ್ಟಾಚಾರ ರಹಿತವಾಗಿ ಕಾರ್ಯಾಚರಿಸುವ ಸಂಸ್ಥೆಯಾಗಿದೆ-ಆನಂದ್ ಕೆ

ಚಿತ್ರ: ಯೂಸುಫ್ ರೆಂಜಲಾಡಿ

 

ಪುತ್ತೂರು: ದೇಶದಲ್ಲಿ ಸಂಪೂರ್ಣ ಭ್ರಷ್ಟಾಚಾರ ರಹಿತವಾಗಿ ಕಾರ್ಯಾಚರಿಸುವ ಸಂಸ್ಥೆಯೊಂದಿದ್ದರೆ ಅದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾತ್ರವಾಗಿದೆ ಎಂದು ಧ.ಗ್ರಾ.ಯೋ ಪುತ್ತೂರು ತಾಲೂಕು ಯೋಜನಾಧಿಕಾರಿ ಆನಂದ್ ಕೆ ಹೇಳಿದರು.

ಮೇ.9ರಂದು ಸರ್ವೆ ಎಸ್‌ಜಿಎಂ ಪ್ರೌಢ ಶಾಲೆಯಲ್ಲಿ ನಡೆದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಸರ್ವೆ ಎ ಮತ್ತು ಬಿ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

ಧ.ಗ್ರಾ.ಯೋಜನೆಯಲ್ಲಿರುವ ಅಧಿಕಾರಿಗಳು, ಪದಾಧಿಕಾರಿಗಳು ಭ್ರಷ್ಟಾಚಾರ ರಹಿತವಾಗಿ ಕಾರ್ಯ ನಿರ್ವಹಿಸುತ್ತಿದ್ದು ಪ್ರಾಮಾಣಿಕ ಸದಸ್ಯರಿಗೆ ನ್ಯಾಯ ಸಮ್ಮತವಾದ ಸೇವೆಯನ್ನು ನೀಡುತ್ತಿದ್ದಾರೆ. ಯೋಜನೆಗೆ ಯಾವ ಪದಾಧಿಕಾರಿಗಳೇ ಬರಲಿ ಯಾರೂ ಧನದಾಹ ಹೊಂದಿದವರಾಗಲು ಸಾಧ್ಯವಿಲ್ಲ ಮತ್ತು ಅದಕ್ಕೆ ಅವಕಾಶವನ್ನೂ ಯೋಜನೆ ನೀಡುತ್ತಿಲ್ಲ. ಯೋಜನೆಯು ಪೂಜ್ಯರ ಆಶಯದಂತೆ, ಅವರ ಕನಸಿನಂತೆ ನಿರ್ಧಿಷ್ಟ ಗುರಿ ಇಟ್ಟು ಕೆಲಸ ಮಾಡುವ ಸಂಸ್ಥೆಯಾಗಿದೆ ಎಂದು ಅವರು ಹೇಳಿದರು. ೨೦೦೨ರಲ್ಲಿ ಅಸ್ತಿತ್ವಕ್ಕೆ ಬಂದ ಯೋಜನೆಯು ಈಗ ಸಾಕಷ್ಟು ಬದಲಾವಣೆ ಆಗಿದ್ದು ವಿಶೇಷವಾಗಿ ಗ್ರಾಮೀಣ ಬಡ ಜನತೆಗೆ ಆಶಾದಾಯಕ ಸಂಸ್ಥೆಯಾಗಿ ಮುನ್ನುಡೆಯುತ್ತಿದೆ ಎಂದು ಅವರು ಹೇಳಿದರು.

ನಿರುದ್ಯೋಗ ನಿವಾರಣೆಯಲ್ಲಿ ಮಹತ್ತರ ಪಾತ್ರ-ಸೀತರಾಮ ರೈ
ಪದ್ಮಶ್ರೀ ಸೋಲಾರ್ ಸಂಸ್ಥೆಯ ಮಾಲಕ ಸೀತರಾಮ ರೈ ಕೆದಂಬಾಡಿಗುತ್ತು ಮಾತನಾಡಿ ಧ.ಗ್ರಾ.ಯೋಜನೆ ಏನೆಂಬುದು ಇಡೀ ದೇಶಕ್ಕೆ ಗೊತ್ತಾಗಿದ್ದು ವ್ಯವಸ್ಥಿತ ನೆಟ್‌ವರ್ಕ್ ಇರುವ ಅಚ್ಚುಕಟ್ಟಾದ ವ್ಯವಸ್ಥೆಯೊಂದಿಗೆ ಕಾರ್ಯಾಚರಿಸುವ ಸಂಸ್ಥೆಯಾಗಿ ಧ.ಗ್ರಾ.ಯೋಜನೆ ಗುರುತಿಸಿಕೊಂಡಿದೆ ಎಂದು ಹೇಳಿದರು. ನಿರುದ್ಯೋಗ ನಿವಾರಣೆ ಮಾಡುವಲ್ಲಿ ಧ.ಗ್ರಾ.ಯೋಜನೆ ಮಹತ್ತರ ಪಾತ್ರ ವಹಿಸುತ್ತಿದ್ದು ಯೋಜನೆಯ ಸಹಕಾರ ಸಿಕ್ಕಿದರೆ ಯಾವ ಕಾರ್ಯವನ್ನೂ ಯಶಸ್ವಿಯಾಗಿ ಮಾಡಬಹುದಾಗಿದೆ ಎಂದು ಅವರು ಹೇಳಿದರು.

ಮಹಿಳೆಯೂ ಪುರುಷರಷ್ಟೇ ಸ್ಥಾನಮಾನ ಪಡೆಯುತ್ತಿದ್ದಾಳೆ-ಪುಷ್ಪಾ

ದೀಪ ಪ್ರಜ್ವಲನಗೊಳಿಸಿ ಸಭೆ ಉದ್ಘಾಟಿಸಿದ ಮುಂಡೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ಎನ್ ಮಾತನಾಡಿ ಇತ್ತೀಚಿನ ವರ್ಷಗಳಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಪುರುಷರಿಗೆ ಸಮಾನವಾದ ಸ್ಥಾನಮಾನಗಳನ್ನು ಅಲಂಕರಿಸುತ್ತಿದ್ದು ಧ.ಗ್ರಾ.ಯೋಜನೆ ಮೂಲಕ ಮಹಿಳೆಯೂ ಪುರುಷರಂತೆ ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ಹೇಳಿದರು.

ಯೋಜನೆಯ ತಾಲೂಕು ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ಮಹಾಬಲ ರೈ ಹಿಂಗಾರ ಅರಳಿಸಿ ಶುಭ ಹಾರೈಸಿದರು. ಎಲಿಯ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಗೌಡ ಎಲಿಯ, ಸರ್ವೆ ಎ ಒಕ್ಕೂಟದ ನಿರ್ಗಮನ ಅಧ್ಯಕ್ಷ ರಾಧಾಕೃಷ್ಣ ರೈ ರೆಂಜಲಾಡಿ, ಬಿ ಒಕ್ಕೂಟದ ನಿರ್ಗಮನ ಅಧ್ಯಕ್ಷ ಅಶೋಕ್ ಎಸ್.ಡಿ, ಎ ಒಕ್ಕೂಟದ ನೂತನ ಅಧ್ಯಕ್ಷ ಸುಂದರ ಬಲ್ಯಾಯ ನೆಕ್ಕಿಲು, ಬಿ ಒಕ್ಕೂಟದ ನೂತನ ಅಧ್ಯಕ್ಷ ಶಶಿಧರ್ ಎಸ್.ಡಿ ಮೊದಲಾದವರು ಸಮಯೋಚಿತವಾಗಿ ಮಾತನಾಡಿದರು. ಸರ್ವೆ ಎಸ್‌ಜಿಎಂ ಪ್ರೌಢ ಶಾಲೆಯ ಮುಖ್ಯಗುರು ಜಯಶ್ರೀ ಅಧ್ಯಕ್ಷತೆ ವಹಿಸಿದ್ದರು. ನಿರ್ಗಮನ ಪದಾಧಿಕಾರಿಗಳು ಹಾಗೂ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕೆಮ್ಮಿಂಜೆ ವಲಯ ಮೇಲ್ವಿಚಾರಕರಾದ ಮೋಹಿನಿ, ಸರ್ವೆ ಗ್ರಾಮದ ಸೇವಾ ಪ್ರತಿನಿಧಿಗಳಾದ ಚಿತ್ರ ಹಾಗೂ ರೇಖಾ ಉಪಸ್ಥಿತರಿದ್ದರು. ಸೇವಾ ಪ್ರತಿನಿಧಿ ಲತಾ ಅವರು ಎರಡೂ ಒಕ್ಕೂಟದ ವರದಿ ವಾಚಿಸಿದರು. ನೂತನ ಪದಾಧಿಕಾರಿಗಳಿಗೆ ನಿರ್ಗಮನ ಪದಾಧಿಕಾರಿಗಳು ಪುಸ್ತಕ ಹಾಗೂ ಇನ್ನಿತರ ದಾಖಲೆಗಳನ್ನು ಹಸ್ತಾಂತರಿಸುವ ಮೂಲಕ ಪದಗ್ರಹಣ ನಡೆಯಿತು.

ದಿವ್ಯ ಪ್ರಾರ್ಥಿಸಿದರು. ಎ ಒಕ್ಕೂಟದ ಅಧ್ಯಕ್ಷ ಸುಂದರ ಬಲ್ಯಾಯ ನೆಕ್ಕಿಲು ಸ್ವಾಗತಿಸಿದರು. ಉಮೇಶ್ ಎಸ್.ಡಿ ವಂದಿಸಿದರು. ಕೆದಂಬಾಡಿ ವಲಯ ಮೇಲ್ವಿಚಾರಕಿ ಶೃತಿ ಕಾರ್ಯಕ್ರಮ ನಿರೂಪಿಸಿದರು. ಸಭೆ ಮುಗಿದ ಬಳಿಕ ಜ್ಞಾನ ವಿಕಾಸ ಕೇಂದ್ರದವರಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here