ಗ್ರಾಮದಲ್ಲಿ ಗಮನಕ್ಕೆ ತರದೇ ಬೋರ್‌ವೆಲ್ ಕೊರೆದ ಆರೋಪ-ಸದಸ್ಯರ ಆಕ್ರೋಶ

0

  • ಸಭೆಗೆ ಪಿಡಿಓ ಗೈರು- ಸದಸ್ಯರ ಅಸಮಾಧಾನ
  • ಅರಿಯಡ್ಕ ಗ್ರಾ.ಪಂ ಸಾಮಾನ್ಯ ಸಭೆ

ಪುತ್ತೂರು: ಗ್ರಾ.ಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಉದ್ದೇಶಕ್ಕೆ ಬೋರ್‌ವೆಲ್ ಕೊರೆಯಲು ಬೋರ್‌ವೆಲ್ ವಾಹನ ಬರುವುದು ಸದಸ್ಯರ ಗಮನಕ್ಕೆ ಬರುತ್ತಿಲ್ಲ ಎನ್ನುವ ವಿಚಾರದಲ್ಲಿ ತೀವ್ರ ಚರ್ಚೆ, ಆಕ್ರೋಶ ಮತ್ತು ಆರೋಪ ಪ್ರತ್ಯಾರೋಪ ಅರಿಯಡ್ಕ ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ನಡೆಯಿತು.

 

ಸಭೆ ಗ್ರಾ.ಪಂ ಅಧ್ಯಕ್ಷೆ ಸೌಮ್ಯ ಬಾಲಸುಬ್ರಹ್ಮಣ್ಯ ಅವರ ಅಧ್ಯಕ್ಷತೆಯಲ್ಲಿ ಮೇ.10ರಂದು ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು. ಮಾಡ್ನೂರು ಗ್ರಾಮದ ದೋಳಂತೋಡು ಎಂಬಲ್ಲಿ ಬೋರ್‌ವೆಲ್ ಕೊರೆದ ವಿಚಾರ ನಮ್ಮ ಗಮನಕ್ಕೆ ಬಂದಿಲ್ಲ, ವಾರ್ಡ್‌ನ ಓರ್ವ ಸದಸ್ಯರಿಗೆ ಮಾತ್ರ ತಿಳಿಸಿ ಇತರ ಸದಸ್ಯರಿಗೆ ತಿಳೀಸದೇ ಇರಲು ಏನು ಕಾರಣ ಎಂದು ಸದಸ್ಯ ಮೋನಪ್ಪ ಪೂಜಾರಿ ಪ್ರಶ್ನಿಸಿದರು. ಸದಸ್ಯ ಶಂಕರ ಮಾತನಾಡಿ ವಾರ್ಡ್ ಸದಸ್ಯರಾದ ನಮ್ಮ ಗಮನಕ್ಕೆ ತಾರದೆ ಕೆಲಸಗಳು ಆಗುತ್ತದೆ ಎಂದಾದರೆ ನಾವು ಇರುವುದು ಯಾಕೆ ಎಂದು ಪ್ರಶ್ನಿಸಿದರು.
ಸದಸ್ಯೆ ಜಯಂತಿ ಪಿ ಮಾತನಾಡಿ ಬೋರ್‌ವೆಲ್ ಕೊರೆದ ವಿಚಾರ ನಮ್ಮ ಗಮನಕ್ಕೆ ಬಂದಿಲ್ಲ, ಕೆಲವರು ನಾನೊಬ್ಬನೇ ವಾರ್ಡ್ ಅಭಿವೃದ್ಧಿ ಕಾರ್ಯಕ್ಕೆ ಮತುವರ್ಜಿ ವಹಿಸುತ್ತಿದ್ದೇನೆ ಎಂದು ಪ್ರಚಾರಪಡಿಸುತ್ತಿದ್ದಾರೆ, ಶಾಸಕರ ಮುಖಾಂತರ ಅಭಿವೃದ್ಧಿ ಕಾರ್ಯ ನಡೆದರೂ ಅದನ್ನು ನಾನೇ ಮಾಡಿದ್ದು ಎಂದು ಸದಸ್ಯರು ಹೇಳಬಾರದು, ಶಾಸಕರು ಕ್ಷೇತ್ರದ ಶಾಸಕರು ಎಂದು ಹೇಳಿದರು. ಈ ವೇಳೆ ಜಯಂತಿ ಪಿ ಮತ್ತು ಸದಸ್ಯ ವಿಜಿತ್ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಮಧ್ಯ ಪ್ರವೇಶಿಸಿದ ಸದಸ್ಯೆ ಸಲ್ಮಾ ಮಾತನಾಡಿ ನಮ್ಮ ವಾರ್ಡ್‌ನ ಮುಖಾರಿಮೂಲೆ ಎಂಬಲ್ಲಿ ಕೊಳವೆಬಾವಿ ಕೊರೆಯಲಾಗಿದ್ದು ನಮ್ಮ ಗಮನಕ್ಕೆ ಬಂದಿಲ್ಲ, ನಿಮಗೆ ಬೇಕಾದಂತೆ ಮಾಡುವುದಾದರೆ ಇದಕ್ಕೆ ಅರ್ಥವಿದೆಯೇ ಎಂದು ಹೇಳಿದರು. ಸದಸ್ಯ ದಿವ್ಯನಾಥ ಶೆಟ್ಟಿ ಮಾತನಾಡಿ ಗ್ರಾಮಕ್ಕೆ ಬೋರ್‌ವೆಲ್ ಕೊರೆಯಲು ಬೋರ್‌ವೆಲ್ ವಾಹನ ಬರುವಾಗ ಪಿಡಿಓ ಅವರಿಗೆ ಮಾಹಿತಿ ಸಿಗುವುದಿಲ್ವಾ, ನಮಗೆ ಹೇಳದೇ ಇರುವುದು ಯಾಕೆ ಎಂದು ಪ್ರಶ್ನಿಸಿದರು. ಇದೇ ವಿಚಾರದಲ್ಲಿ ಸುಮಾರು ಹೊತ್ತು ಬಿಸಿಯೇರಿದ ಚರ್ಚೆ, ಆರೋಪ ಪ್ರತ್ಯಾರೋಪ ನಡೆಯಿತು. ಉಪಾಧ್ಯಕ್ಷ ಸಂತೋಷ್ ಮಣಿಯಾಣಿ ಉತ್ತರಿಸಿ ಗ್ರಾಮಕ್ಕೆ, ವಾರ್ಡ್‌ಗೆ ಬೋರ್‌ವೆಲ್ ಕೊರೆಯಲು ಬೋರ್‌ವೆಲ್ ವಾಹನ ಬಂದಾಗ ಆಯಾ ವಾರ್ಡ್‌ನ ಸದಸ್ಯರಿಗೆ ತಿಳಿಸಲು ಹೇಳಿದ್ದೇನೆ, ಅಧ್ಯಕ್ಷರೂ ಹೇಳಿದ್ದಾರೆ. ಗ್ರಾಮದಲ್ಲಿ ಯಾವುದೇ ಯೋಜನೆ ನಡೆಯುವುದಿದ್ದರೂ ಆಯಾ ವಾರ್ಡ್‌ನ ಸದಸ್ಯರಿಗೆ ತಿಳಿಸಲು ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ನಾವು ಹೇಳಿದ್ದೇವೆ. ಮುಂದಕ್ಕೆ ಎಲ್ಲವೂ ಸರಿಯಾಗಲಿದೆ ಎಂದು ಹೇಳಿದರು.

ಪಿಡಿಓ ಗೈರು-ಸದಸ್ಯರ ಆಕ್ರೋಶ
ಇಂದಿನ ಸಾಮಾನ್ಯ ಸಭೆಗೆ ಪಿಡಿಓ ಯಾಕೆ ಬಂದಿಲ್ಲ ಎಂದು ದಿವ್ಯನಾಥ ಶೆಟ್ಟಿ ಕೇಳಿದರು. ಕಾರ್ಯದರ್ಶಿ ಶಿವರಾಮ್ ಉತ್ತರಿಸಿ ಪಿಡಿಓ ಅವರು ಪ್ರಗತಿ ಪರಿಶೀಲನಾ ಸಭೆಗೆ ಹೋಗಿದ್ದಾರೆ ಎಂದು ಹೇಳಿದರು. ಆಕ್ಷೇಪಿಸಿದ ದಿವ್ಯನಾಥ ಶೆಟ್ಟಿ ಪಿಡಿಓ ಉದ್ದೇಶ ಪೂರ್ವಕವಾಗಿ ಸಭೆಗೆ ತಪ್ಪಿಸಿದ್ದಾರೆ ಅಂತ ಕಾಣುತ್ತೆ, ಇಲ್ಲಿ ಸಭೆ ಇರುವಾಗ ಪಿಡಿಓ ಇಲ್ಲದಿದ್ದರೆ ನಮ್ಮ ಪ್ರಶ್ನೆಗಳಿಗೆ ಉತ್ತರಿಸುವವರು ಯಾರು, ಕಾರ್ಯದರ್ಶಿಯವರು ಸಮರ್ಪಕ ಉತ್ತರ ನೀಡುತ್ತೀರಾ ಎಂದು ಕೇಳಿದರು. ನನಗೆ ಗೊತ್ತಿರುವ ವಿಚಾರಗಳ ಬಗ್ಗೆ ಮಾಹಿತಿ ನೀಡುತ್ತೇನೆ ಎಂದು ಕಾರ್ಯದರ್ಶಿ ಹೇಳಿದರು. ಸದಸ್ಯೆ ಸಲ್ಮಾ ಮಾತನಾಡಿ ಸಾಮಾನ್ಯ ಸಭೆಗೆ ಪಿಡಿಓ ಕಡ್ಡಾಯವಾಗಿ ಇರಬೇಕು. ಇಲ್ಲಿ ಅನೇಕ ಸಮಸ್ಯೆಗಳಿರುವಾಗ ಪಿಡಿಓ ಸಭೆಗೆ ಗೈರಾಗುವುದು ಎಷ್ಟು ಸರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪಿಡಿಓ ಇಲ್ಲದಿದ್ದರೆ ಸಭೆ ನಡೆಸಿ ಏನು ಪ್ರಯೋಜನ ಎಂದು ದಿವ್ಯನಾಥ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು. ಅಧ್ಯಕ್ಷೆ ಸೌಮ್ಯಾ ಬಾಲಸುಬ್ರಹ್ಮಣ್ಯ ಉತ್ತರಿಸಿ ಪಿಡಿಓ ಅವರಿಗೆ ತಾ.ಪಂ ಇ.ಒ ಅವರಿಂದ ಆದೇಶ ಬಂದ ಕಾರಣ ಅನಿವಾರ್ಯವಾಗಿ ಸಭೆಗೆ ಹೋಗಿದ್ದಾರೆ ಎಂದು ಹೇಳಿದರು. ಉಪಾಧ್ಯಕ್ಷ ಸಂತೋಷ್ ಮಣಿಯಾಣಿ ಮಾತನಾಡಿ ಪಿಡಿಓ ಹೋಗುವುದಕ್ಕೆ ನಾನು ಕೂಡಾ ಆಕ್ಷೇಪಿಸಿದ್ದೆ ಆದರೆ ಇ.ಒ ಅವರ ಮೌಖಿಕ ಆದೇಶ ಬಂದ ಕಾರಣ ಅವರು ಹೋಗಬೇಕಾಯಿತು ಎಂದು ಹೇಳಿದರು.

ನೀರಿನ ಬಿಲ್ ಬಾಕಿ-ವಸೂಲಿಗೆ ಆಗ್ರಹ
ಗ್ರಾ.ಪಂ ವ್ಯಾಪ್ತಿಯಲ್ಲಿ ನೀರಿನ ಬಿಲ್ ಬಹಳಷ್ಟು ಬಾಕಿಯಿದ್ದು ಅದನ್ನು ವಸೂಲಿ ಮಾಡುವ ಕುರಿತು ಚರ್ಚೆ ನಡೆಯಿತು. ಸದಸ್ಯ ಲೋಕೇಶ್ ಚಾಕೋಟೆ ಮಾತನಾಡಿ ನೀರಿನ ಬಿಲ್‌ನ್ನು ಸಾಧ್ಯವಾದಷ್ಟು ಕಲೆಕ್ಷನ್ ಮಾಡಲು ಪ್ರಯತ್ನ ಮಾಡಬೇಕು ಎಂದು ಹೇಳಿದರು. ಸಿಬ್ಬಂದಿ ಶಶಿ ಅವರು ಬಿಲ್ ಬಾಕಿ ವಿಚಾರದ ಬಗ್ಗೆ ಮಾಹಿತಿ ನೀಡಿದರು. ಉಪಾಧ್ಯಕ್ಷ ಸಂತೋಷ್ ಮಣಿಯಾಣಿ ಉತ್ತರಿಸಿ ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.

ದುರುಪಯೋಗ ಶಬ್ದ ಬಳಕೆಗೆ ಆಕ್ಷೇಪ:
ಗ್ರಾ.ಪಂ ವ್ಯಾಪ್ತಿಯಲ್ಲಿ ಸರಕಾರಿ ಜಾಗದ ಮುಖಾಂತರ ಪೈಪ್ ಲೈನ್ ಹಾಕಲಾಗಿದ್ದು ಆ ಬಳಿಕ ಆ ಜಾಗ ಅಕ್ರಮ ಸಕ್ರಮ ಮುಖಾಂತರ ಖಾಸಗಿಯವರ ಸ್ವಾಧಿನವಾಗಿದೆ. ಅಂತಹ ಕಡೆಗಳಲ್ಲಿನ ಪೈಪ್ ಲೈನ್ ತೆಗೆದಾಗ ಗ್ರಾ.ಪಂ ಹಣ ದುರುಪಯೋಗವಾಗಿದೆ ಎಂದು ಮೋನಪ್ಪ ಪೂಜಾರಿ ಆರೋಪಿಸಿದರು. ಹಣ ದುರುಪಯೋಗವಾಗಿದೆ ಎಂದು ಹೇಳಿದ್ದಕ್ಕೆ ಇತರ ಕೆಲವು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಹಣ ದುರುಪಯೋಗ ಹೇಗಾಗುತ್ತದೆ ಎಂದು ಸದಸ್ಯರಾದ ಹರೀಶ್ ರೈ ಜಾರತ್ತಾರು, ಲೋಕೇಶ್ ಚಾಕೋಟೆ ಮತ್ತಿತರರು ಪ್ರಶ್ನಿಸಿದರು. ಕೊನೆಗೆ ಮಾತನಾಡಿದ ಮೋನಪ್ಪ ಪೂಜಾರಿ ಅವರು ನನ್ನ ಹೇಳಿಕೆಯಲ್ಲಿ ಅಕ್ಷರ ತಪ್ಪಾಗಿದೆ, ಕ್ಷಮಿಸಿ ಎಂದು ಹೇಳಿದರು.

ಅಧ್ಯಕ್ಷರಿಗೆ ಅಗೌರವ ಆರೋಪ-ತೀವ್ರ ಚರ್ಚೆ
ಕೊಳವೆಬಾವಿ ಕೊರೆದ ವಿಚಾರದಲ್ಲಿ ಮತ್ತೆ ಚರ್ಚೆ ಶುರುವಾಯಿತು. ಅಧ್ಯಕ್ಷೆ ಸೌಮ್ಯ ಬಾಲಸುಬ್ರಹ್ಮಣ್ಯ ಮಾತನಾಡಿ ನಾನೋರ್ವ ಮಹಿಳೆಯಾಗಿದ್ದರೂ ಕೂಡಾ ಮೋನಪ್ಪ ಪೂಜಾರಿ ಅವರು ನನಗೆ ಅಗೌರವ ತೋರಿದ್ದಾರೆ ಎಂದು ಹೇಳಿದರು. ನಾನು ಅಗೌರವ ತೋರಿಲ್ಲ ಎಂದು ಮೋನಪ್ಪ ಪೂಜಾರಿ ಹೇಳಿದರು. ಅಧ್ಯಕ್ಷೆ ಸೌಮ್ಯ ಬಾಲಸುಬ್ರಹ್ಮಣ್ಯ ಮಾತನಾಡಿ ನೀವು ಮಾತನಾಡುವಾಗ ನನಗೆ ಯಾವ ಶಬ್ದ ಬಳಸಿದ್ದೀರಿ, ನಿಮ್ಮ ಹೇಳಿಕೆ, ನೀವು ಬಳಸಿದ ಶಬ್ದ ಎಷ್ಟು ಸರಿ ಎಂದು ಆಕ್ರೊಶ ವ್ಯಕ್ತಪಡಿಸಿದರು. ನೀವು ಅವ್ಯವಹಾರ ಮಾಡುತ್ತಿದ್ದೀರಿ ಎನ್ನುವ ಮಾತನ್ನು ಅಧ್ಯಕ್ಷರಲ್ಲಿ ಹೇಳಿದ್ದೀರಿ ಎಂಬ ವಿಚಾರ ಪ್ರಸ್ತಾಪಗೊಂಡಾಗ ಆಕ್ರೋಶ ವ್ಯಕ್ತಪಡಿಸಿದ ಲೋಕೇಶ್ ಚಾಕೊಟೆ, ಹರೀಶ್ ರೈ ಜಾರತ್ತಾರು ಹಾಗೂ ರಾಜೇಶ್ ಮಣಿಯಾಣಿ ಅವರು ಅವ್ಯವಹಾರ ಎಲ್ಲಿ ಆಗಿದೆ ತಿಳಿಸಿ, ಸುಮ್ಮನೆ ಆರೋಪ ಹೊರಿಸಬೇಡಿ ಎಂದು ಹೇಳಿದರು. ಮೋನಪ್ಪ ಪೂಜಾರಿ ಮಾತನಾಡಿ ನಾನು ಬೇಡದ ಶಬ್ದ ಬಳಕೆ ಮಾಡಿಲ್ಲ. ಮಾಣಿಯಡ್ಕಕ್ಕೆ ಬಂದ ಬೋರ್‌ವೆಲ್‌ನ್ನು ಕೆಲವರು ಶಾಸಕರ ಮುಖಾಂತರ ನಾವು ಮಾಡಿಸಿದ್ದು ಎಂದು ಹೇಳಿಕೊಂಡಿದ್ದಾರೆ, ಇದಕ್ಕೆ ನಾನು ಅಧ್ಯಕ್ಷರಿಗೆ ಕರೆ ಮಾಡಿ ಬೋರ್‌ವೆಲ್ ಬಂದಾಗ ಒಬ್ಬ ಸದಸ್ಯನೊಟ್ಟಿಗೆ ಸೇರಿ ಅವರಿಗೆ ಮಾತ್ರ ಮಾಹಿತಿ ನೀಡುವುದಾ? ನಮಗೆ ಯಾಕೆ ಮಾಹಿತಿ ನೀಡಿಲ್ಲ ಎಂದು ಕೇಳಿದ್ದೆ ಎಂದರು.

ರೈತ ಸಂವಾದ ಕಾರ್ಯಕ್ರಮ:
ಗ್ರಾ.ಪಂ ವ್ಯಾಪ್ತಿಯಲ್ಲಿ ೨ ಕಡೆ ಶೀಘ್ರದಲ್ಲೇ ರೈತ ಸಂವಾದ ಕಾರ್ಯಕ್ರಮವನ್ನು ನಡೆಸುವುದೆಂದು ತೀರ್ಮಾನಿಸಲಾಯಿತು.

ಹೆದ್ದಾರಿ ಬದಿಯಲ್ಲಿ ಚರಂಡಿಗಳು ಬ್ಲಾಕ್:
ಸದಸ್ಯ ಅಬ್ದುಲ್ ರಹಿಮಾನ್ ಮಾತನಾಡಿ ಗ್ರಾ.ಪಂ ವ್ಯಾಪ್ತಿಯ ರಾಜ್ಯ ಹೆದ್ದಾರಿ ಬದಿಯಲ್ಲಿ ಚರಂಡಿಗಳು ಬ್ಲಾಕ್ ಆಗಿದ್ದು ಮಳೆ ಬಂದಾಗ ನೀರು ಹರಿಯಲು ಸಾಧ್ಯವಾಗದೇ ಸಮಸ್ಯೆ ಉಂಟಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಗ್ರಾ.ಪಂನಿಂದ ತಿಳಿಸುವ ಕೆಲಸ ಆಗಬೇಕಾಗಿದೆ ಎಂದು ಹೇಳಿದರು. ಈ ಬಗ್ಗೆ ಸಂಬಂಧಪಟ್ಟವವರಿಗೆ ತಿಳಿಸುವುದಾಗಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಸದಸ್ಯರಾದ ಸದಾನಂದ ಮಣಿಯಾಣಿ, ಮೀನಾಕ್ಷಿ ಪಾಪೆಮಜಲು, ನಾರಾಯಣ ನಾಯ್ಕ ಚಾಕೋಟೆ, ಭಾರತಿ ವಸಂತ್, ಪುಷ್ಪಲತಾ ಮರತ್ತಮೂಲೆ, ರೇಣುಕಾ ಸತೀಶ್, ವಿನೀತಾ ಕೆ.ವಿ, ಉಷಾರೇಖಾ ರೈ, ಹೇಮಾವತಿ ಚಾಕೋಟೆ, ಅನಿತ ಆಚಾರಿಮೂಲೆ, ಪ್ರವೀಣ ಎ.ಬಿ ಉಪಸ್ಥಿತರಿದ್ದರು. ಸಿಬ್ಬಂದಿ ಪ್ರಭಾಕರ ವರದಿ ಮತ್ತು ಅರ್ಜಿ ವಾಚಿಸಿದರು. ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here