ಊರಿನ ಕೋಳಿಗೆ ವೈರಸ್ ಅಟ್ಯಾಕ್: ಜುಟ್ಟು ಕರಟಿ ಗಂಟೆಯೊಳಗೆ ಸಾಯುತ್ತಿದೆ ನಾಟಿ ಕೋಳಿಗಳು

0

ಪುತ್ತೂರು: ನಾಟಿ ಕೋಳಿಗಳಿಗೆ ಪ್ರತೀ ಬಾರಿಯಂತೆ ಈ ಬಾರಿಯೂ ವೈರಸ್ ಅಂಟಿಕೊಂಡಿದೆ. ಈ ಬಾರಿ ನಾಟಿ ಕೋಳಿಗಳಲ್ಲಿ ವಿಚಿತ್ರ ವೈರಸ್ ಕಾಣಿಸಿಕೊಂಡಿದ್ದು ಕ್ಷಣ ಮಾತ್ರದಲ್ಲಿ ಕೋಳಿಗಳು ಸತ್ತು ಹೋಗುತ್ತಿರುವ ಘಟನೆಗಳು ಗ್ರಾಮೀಣ ಭಾಗದಲ್ಲಿ ಕಂಡು ಬಂದಿದೆ.


ಸಾಧಾರಣವಾಗಿ ನಾಟಿ ಕೋಳಿಗಳಿಗೆ ಕೊಕ್ಕರೆ ರೋಗಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಬೇಸಿಗೆಯ ಕೊನೇ ದಿನಗಳಲ್ಲಿ ಎಪ್ರಿಲ್ ಅಥವಾ ಮೇ ತಿಂಗಳಲ್ಲಿ ಕೊಕ್ಕರೆ ರೋಗ ಕಾಣಿಸಿಕೊಳ್ಳುತ್ತದೆ. ಈ ಬಾರಿ ಕೊಕ್ಕರೆ ರೋಗದ ಜೊತೆಗೆ ಕೋಳಿಯ ತಲೆಗೆ ವೈರಸ್ ಬಾಧಿಸಿದೆ. ಆರೋಗ್ಯದಿಂದ ಇರುವ ಕೋಳಿಯ ತಲೆಯ ಜುಟ್ಟು (ಕೊಟ್ಟು) ಹಠಾತ್ತನೆ ಕಪ್ಪು ಬಣ್ಣಕ್ಕೆ ತಿರುಗಿ ಕೊಟ್ಟು ಶಕ್ತಿ ಹೀನವಾಗುತ್ತದೆ. ಆ ಬಳಿಕ ಗಂಟೆಯೊಳಗೆ ಕೋಳಿ ಪೂರ್ಣವಾಗಿ ತನ್ನ ಶಕ್ತಿಯನ್ನು ಕಳೆದುಕೊಂಡು ನಡೆದಾಡಲು ಸಾಧ್ಯವಾಗದೆ ಕ್ಷಣ ಮಾತ್ರದಲ್ಲಿ ಸತ್ತು ಹೋಗುತ್ತಿರುವ ದೃಶ್ಯಗಳು ಗ್ರಾಮೀಣ ಭಾಗದಲ್ಲಿ ಕಳೆದ ಒಂದು ತಿಂಗಳಿಂದ ಕಾಣಿಸಿಕೊಂಡಿದೆ. ಊರಿನ ಕೋಳಿ ಸಾಕಾನಿಕೆ ಮಾಡುವ ಮಂದಿಗೆ ಇದರಿಂದ ಸಾವಿರಾರು ರೂ ನಷ್ಟ ಸಂಭವಿಸಿದೆ. ಔಷಧಿ ಕುಡಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂಬ ಮಾತುಗಳು ಕೇಳಿ ಬಂದಿದೆ. ಒಂದು ಕೋಳಿಯಲ್ಲಿ ಈ ವೈರಸ್ ಕಾಣಿಸಿಕೊಂಡರೆ ಊರಿಡೀ ಹಬ್ಬುತ್ತಿರುವುದು ಕೋಳಿ ಸಾಕಾಣಿಕೆದಾರರ ಆತಂಕಕ್ಕೆ ಕಾರಣವಾಗಿದೆ.

ಸಾಧಾರಣವಾಗಿ ಕೋಳಿಗಳಲ್ಲಿ ಕೊಕ್ಕರೆ ರೋಗ ಕಾಣಿಸಿಕೊಳ್ಳುತ್ತದೆ. ಕೋಳಿಯ ಕಣ್ಣಿನ ಭಾಗ ದಪ್ಪವಾಗುತ್ತಾ ಬಳಿಕ ಕೋಳಿ ಶಕ್ತಿ ಹೀನವಾಗುತ್ತದೆ. ಇದು ವೈರಸ್ ಕಾಯಿಲೆಯಾಗಿದೆ. ವೈರಸ್ ಅಟ್ಯಾಕ್ ಆಗದಂತೆ ವರ್ಷಕ್ಕೆ ಎರಡು ಬಾರಿ ವ್ಯಾಕ್ಸಿನೇಷನ್ ಕೊಡೊಸಬೇಕಾಗುತ್ತದೆ. ಕೋಳಿ ಸಾಕುವವರು ಕೋಳಿಯನ್ನು ಪುತ್ತೂರಿನ ಪಶು ವೈದ್ಯ ಆಸ್ಪತ್ರೆಗೆ ತರಬಹುದು ಅಥವಾ ಹೆಚ್ಚು ಕೋಳಿ ಇದ್ದಲ್ಲಿ ಸ್ಥಳಕ್ಕೆ ಬಂದು ವ್ಯಾಕ್ಸಿನೇಶನ್ ಕೊಡುವ ವ್ಯವಸ್ಥೆಯೂ ಇದೆ. –ಡಾ. ಪ್ರಸನ್ನ ಹೆಬ್ಬಾರ್, ತಾಲೂಕು ಪಶು ವೈದ್ಯಾಧಿಕಾರಿ, ಪುತ್ತೂರು

LEAVE A REPLY

Please enter your comment!
Please enter your name here