ಡಾ ಕಿರಣ್ ಕುಮಾರ್ ಗಾನಸಿರಿ ಸಾರಥ್ಯದ `ಗಾನಸಿರಿ’ಗೆ 2022ರ ಪ್ರತಿಷ್ಠಿತ ‘ಆರ್ಯಭಟ’ ಅಂತಾರಾಷ್ಟ್ರೀಯ ಪ್ರಶಸ್ತಿ

0

ಪುತ್ತೂರು: ಸುಗಮ ಸಂಗೀತ ಹಾಗೂ ಭಾರತೀಯ ಕಲಾ ಪ್ರಾಕಾರಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ 2002ರಲ್ಲಿ ಸ್ಥಾಪನೆಗೊಂಡ ಖ್ಯಾತ ಗಾಯಕ, ಸಂಗೀತ ಗುರು ಡಾ.ಕಿರಣ್ ಕುಮಾರ್ ಗಾನಸಿರಿಯವರ ಕನಸಿನ ಕೂಸು ಪುತ್ತೂರಿನ ಗಾನಸಿರಿ ಕಲಾ ಕೇಂದ್ರವು 2022ನೇ ಸಾಲಿನ ಪ್ರತಿಷ್ಟಿತ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದೆ.

ಮೇ 11ರಂದು ಈ ಬಗ್ಗೆ ಸುದ್ದಿ ಸ್ಟುಡಿಯೋದಲ್ಲಿ ಸುದ್ದಿಗೋಷ್ಠಿ ನಡೆಸಿ ಸಂತಸ ಹಂಚಿಕೊಂಡ ಗಾನಸಿರಿ ಸಂಸ್ಥೆಯ ಸಂಸ್ಥಾಪಕರು, ಅಧ್ಯಕ್ಷರೂ ಆಗಿರುವ ಡಾ| ಕಿರಣ್ ಕುಮಾರ್ ಗಾನಸಿರಿಯವರು, ಗಾನಸಿರಿ ಕಲಾಕೇಂದ್ರವು ಕಳೆದ ೨೦ ವರ್ಷ ಗಳಲ್ಲಿ ಸಂಸ್ಥೆಯು ೨೧ ಸಾವಿರ ವಿದ್ಯಾರ್ಥಿಗಳಿಗೆ ಗಾಯನ ತರಬೇತಿ ನೀಡಿರುವುದು ರಾಜ್ಯದಲ್ಲೇ ಒಂದು ದಾಖಲೆಯಾಗಿದೆ. ಸಂಸ್ಥೆಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳ ಗಾಯನ ತಂಡವನ್ನು ಕಟ್ಟಿಕೊಂಡು ನಾಡಿನಾದ್ಯಂತ ಇದುವರೆಗೆ ೨೦೦೦ಕ್ಕೂ ಅಧಿಕ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿರುವ ಗಾನಸಿರಿ ಗಾಯನ ತಂಡವು ದ.ಕ. ಜಿಲ್ಲೆಯಾದ್ಯಂತ ಮನ ಮಾತಾಗಿದೆ. ಸಂಸ್ಥೆಯ ಸೇವೆಯನ್ನು ಗುರುತಿಸಿ ಗಾನಸಿರಿ ಕಲಾಕೇಂದ್ರಕ್ಕೆ ೨೦೨೨ನೇ ಸಾಲಿನ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಮೇ 25ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಹಿರಿಯ ನಟಿ ಭಾರತೀ ವಿಷ್ಣುವರ್ಧನ್ ಸಹಿತ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ್ ಜೋಷಿ ಸೇರಿದಂತೆ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ನೆರವೇರಲಿದೆ. ಈ ಸಮಾರಂಭದಲ್ಲಿ ಗಾನಸಿರಿ ತಂಡದಿಂದ ಗೀತ ಮಾಧುರ್ಯ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಆರ್ಯಭಟ ಪ್ರಶಸ್ತಿಯು ಸಂಸ್ಥೆಯ ಮುಡಿಗೇರಿದ ಸಂಭ್ರಮದ ಹಿನ್ನೆಲೆಯಲ್ಲಿ ಮೇ ೧೬ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ `ಮುಸ್ಸಂಜೆ ಮಧುರಗಾನ’ ಎನ್ನುವ ಸುಗಮ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಡಾ| ಕಿರಣ್ ಕುಮಾರ್ ಗಾನಸಿರಿಯವರ ಜೊತೆಗೆ ಡಾಕಿರಣ್ ಕುಮಾರ್‌ರ ಶಿಷ್ಯೆ, ರಾಜ್ಯಮಟ್ಟದ ಗಾನ ಕಲಾರತ್ನ ಪ್ರಶಸ್ತಿ ಪುರಸ್ಕೃತ ಗಾಯಕಿ ಶ್ರೀಲಕ್ಷ್ಮಿ ಎಸ್ ಪುತ್ತೂರು ಮತ್ತು ಗಾನಸಿರಿಯ ಪ್ರಸಿದ್ಧ ಗಾಯಕ ವರುಣ್ ಕುಮಾರ್ ಎಸ್. ಪುತ್ತೂರು ಹಾಡಲಿದ್ದಾರೆ ಎಂದು ಡಾ| ಕಿರಣ್ ಕುಮಾರ್ ಮಾಹಿತಿ ನೀಡಿದರು.

ಸಂಸ್ಥೆಯು ಕಳೆದ ೨೦ ವರ್ಷಗಳಿಂದ ಪುತ್ತೂರಿಗೆ ಸುಗಮ ಸಂಗೀತದ ಪರಿಕಲ್ಪನೆಯನ್ನು ಪರಿಚಯಿಸಿಕೊಂಡು ತರಬೇತಿ ನೀಡುತ್ತಾ ಬರುತ್ತಿದೆ. ಸಂಸ್ಥೆಯು ಪುತ್ತೂರು, ಉಪ್ಪಿನಂಗಡಿ, ಸುಳ್ಯ, ವಿಟ್ಲ, ಕುದ್ಮಾರು, ಕಾಣಿಯೂರು, ಕೊಕ್ಕಡ, ಮುರ ಮೊಗ್ರು, ಊಂತನಾಜಿ ಶಾಖೆಗಳ ಮೂಲಕ ೬೩೦ ವಿದ್ಯಾರ್ಥಿಗಳಿಗೆ ಸುಗಮ ಸಂಗೀತ ತರಬೇತಿ ನೀಡುತ್ತಿದೆ. ಗಾನಸಿರಿಯಲ್ಲಿ ತರಬೇತಿ ಪಡೆಯುತ್ತಿರುವ ನೂರಾರು ವಿದ್ಯಾರ್ಥಿಗಳು ನಾಡಿನಾದ್ಯಂತ ಟಿ.ವಿ ವಾಹಿನಿಗಳಲ್ಲಿ, ಪ್ರತಿಷ್ಟಿತ ವೇದಿಕೆಗಳಲ್ಲಿ ಮಿಂಚುತ್ತಿದ್ದಾರೆ. ಇಲ್ಲಿ ಕಲಿತ ಅದಷ್ಟು  ಮಂದಿ ವಿದ್ಯಾರ್ಥಿಗಳು ಗಾಯನವನ್ನೇ  ವೃತ್ತಿಯಾಗಿಸಿಕೊಂಡಿರುತ್ತಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಗಾನಸಿರಿ ಕಲಾಕೇಂದ್ರದ ಸಹಶಿಕ್ಷಕಿ ಶ್ರೀಲಕ್ಷ್ಮೀ ಎಸ್., ಪೋಷಕರಾದ ಜಯರಾಮ್ ಬಿ.ಕೆ., ಕವಿತಾ ದಿನಕರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here