ಕಾನನ ಮಧ್ಯೆ ಕಂಗೊಳಿಸುತ್ತಿದೆ ಹಣಿಯೂರು ಗುತ್ತಿನ ಚಾವಡಿ-ಮೇ14-18 : ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ನೇಮೋತ್ಸವ

0

ನಿಶಾಕಿರಣ್ ಬಾಳೆಪುಣಿ

 

 

ಪರಶುರಾಮ ಸೃಷ್ಟಿಯ ತುಳುನಾಡಿನ ಅನಾದಿಕಾಲದ ಸಂಪ್ರದಾಯ, ಆಚಾರ ವಿಚಾರಗಳು, ಆಚರಣೆಗಳೆಲ್ಲವೂ ಹೆಚ್ಚಾಗಿ ಇಲ್ಲಿನ ಕುಟುಂಬ ಕೂಡು ಪದ್ದತಿಯ ಮೇಲೆ ಅವಲಂಬಿತವಾಗಿದೆ. ಅವಿಭಕ್ತ ಕುಟುಂಬ ಪದ್ದತಿಯಿಂದ ಸದಸ್ಯರು ಕವಲು ಕವಲಾಗಿ ಹೋಗುವ ಸಂದರ್ಭದಲ್ಲಿ ತರವಾಡು ಮನೆ ಎಂಬ ಪರಿಕಲ್ಪನೆ ಬಂದು, ತರವಾಡಿನಲ್ಲಿ ವರ್ಷಕ್ಕೊಮ್ಮೆ ಕುಟುಂಬ ಸದಸ್ಯರೆಲ್ಲ ಏಕಮನಸ್ಸಿನಿಂದ ಕೂಡಿ ದೇವರು ದೈವಗಳ ಆರಾಧನೆಯಲ್ಲಿ ತೊಡಗಿಸುತ್ತಾ ಬಂದರು. ಈ ತರವಾಡು ಸಂಪ್ರದಾಯ ಆಧುನಿಕ ಕಾಲದಲ್ಲೂ ಹಳೆಯ ಸಂಪ್ರದಾಯ, ಹೊಸ ವೈಭವತೆಯೊಂದಿಗೆ ತುಳುನಾಡಿನ ಅಲ್ಲಲ್ಲಿ ಸಾಕಾರಗೊಳ್ಳುತ್ತಿದೆ.

೨೨೫ ವರ್ಷಗಳ ಇತಿಹಾಸವಿರುವ ಹಣಿಯೂರು ಕುಟುಂಬದ ಮಂದಿಯಲ್ಲಿ ಇದೀಗ ಸಂಭ್ರಮ ಮನೆ ಮಾಡಿದೆ. ತಾವು ಆರಾಧಿಸಿಕೊಂಡು ಬರುತ್ತಿರುವ ದೈವಗಳಿಗೆ ದೈವಸ್ಥಾನ, ಪ್ರತಿಷ್ಠೆಯ ಸಂಕೇತದ ಗುತ್ತಿನ ಮನೆ ನಿರ್ಮಿಸಿ ದೈವಗಳಿಗೆ ಸರಿಯಾದ ನೆಲೆ ಕಲ್ಪಿಸಿ ಭಕ್ತಿ ಭಾವದಿಂದ ಆರಾಧಿಸಿಕೊಂಡು ಬರಲು ಕುಟುಂಬಿಕರು ಕಾಯಾ ವಾಚಾ ಮನಸಾ ತ್ರಿಕರಣಪೂರ್ವಕವಾಗಿ ಸಂಕಲ್ಪ ಮಾಡಿಕೊಂಡು ಇದೀಗ ಅದರ ಸಮರ್ಪಣಾ ಸಮಯದಲ್ಲಿ ಇದ್ದಾರೆ.

೨೨೫ ವರ್ಷಗಳ ಹಿಂದೆ ಹಣಿಯೂರು ಕುಟುಂಬದ ಯಜಮಾನರಾದ ಧೂಮಣ್ಣ ನಾಕ್ ರವರು ವರ್ಕಾಡಿಯ ಪಾಡದಿಂದ ಬಂದು ಧೂಮಾವತಿ, ಪಂಜುರ್ಲಿ, ಜೊತೆ ಕಲ್ಲುರ್ಟಿ, ಅಮ್ಮನವರು ಸೇರಿದಂತೆ ಪರಿವಾರ ದೈವಗಳನ್ನು ಆರಾಧಿಸಿಕೊಂಡು ಬಂದಿದ್ದರು. ೧೯೮೫ ರಲ್ಲಿ ಅಂದಿನ ಯಜಮಾನರಾದ ಸುಬ್ಬಯ್ಯ ನಾಕ್ ರವರು ಪ್ರತ್ಯೇಕ ದೈವಸ್ಥಾನ ನಿರ್ಮಾಣ ಕುರಿತಂತೆ ಕುಟುಂಬದ ಸದಸ್ಯ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಮುಂದಾಳು ಡಾ. ಕೆ.ಸಿ. ನಾಕ್ ರವರಲ್ಲಿ ಪ್ರಸ್ತಾಪಿಸಿದಾಗ ಸುಬ್ಬಯ್ಯ ನಾಕ್ ರವರಿಂದ ೧೦ ಸೆಂಟ್ಸ್ ಜಾಗವನ್ನು ಕುಟುಂಬದ ಪರವಾಗಿ ಪಡೆದು ಟ್ರಸ್ಟ್ ನೊಂದಾಯಿಸಿ ೧೯೮೭ ರಲ್ಲಿ ನೂತನ ದೈವ ಚಾವಡಿ ನಿರ್ಮಿಸಿ ಪುನರ್ ಪ್ರತಿಷ್ಠಾಪಿಸಲಾಗಿತ್ತು.

ಕುಟುಂಬ ಸದಸ್ಯರಿಂದ ಜಾಗ ದಾನ: ಇತ್ತೀಚೆಗಿನ ವರ್ಷಗಳ ಹಿಂದೆ ಕಲ್ಲುರ್ಟಿ ದೈವದ ಕೋಲದಲ್ಲಿ ಆದ ದೈವ ನುಡಿಯಂತೆ ಹಾಗೂ ದೈವಜ್ಞ ಸಿ.ವಿ. ಪೊದುವಾಳ್ ರವರ ನೇತೃತ್ವದಲ್ಲಿ ಇಟ್ಟ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಂತೆ ಪ್ರತ್ಯೇಕ ಜಾಗದಲ್ಲಿ ದೈವಸ್ಥಾನ, ತರವಾಡು ಗುತ್ತಿನ ಮನೆ ನಿರ್ಮಾಣಕ್ಕೆ ಕುಟುಂಬಿಕರು ಸಂಕಲ್ಪಿಸಿಕೊಂಡಿದ್ದರು. ದೈವ ಪ್ರೇರಣೆ ಎಂಬಂತೆ ಕುಟುಂಬದ ಸದಸ್ಯರಾದ ಬಾಲಕೃಷ್ಣ ನಾಕ್, ರಾಧಾಕೃಷ್ಣ ನಾಕ್, ಶ್ರೀನಿವಾಸ ನಾಕ್, ಪುರುಷೋತ್ತಮ ನಾಕ್‌ಹಾಗೂ ಅಶೋಕ್ ನಾಕ್ ರವರು ತಮ್ಮ ಸ್ವಂತ ಜಮೀನಿನಲ್ಲಿ ಒಂದಂಶವನ್ನು ಕೊಡುಗೆಯಾಗಿ ನೀಡಿದುದರ ಫಲವಾಗಿ ವಿಸ್ತಾರವಾದ ೨ ಎಕರೆ ಪ್ರದೇಶದಲ್ಲಿ ಪ್ರಕೃತಿ ರಮಣೀಯವಾದ ಕಾನನದ ಮಧ್ಯ ಭಾಗದಲ್ಲಿ ಹಣಿಯೂರು ಕುಟುಂಬದ ಗುತ್ತಿನ ಚಾವಡಿ, ದೈವಸ್ಥಾನ, ಅತಿಥಿ ಗೃಹ ನಿರ್ಮಾಣವಾಗಿದೆ.

೧.೨೫ ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ: ೨೦೨೧ ಜೂನ್ ೪ ರಂದು ಭೂಮಿ ಪೂಜೆ ನಡೆದು ಕೇವಲ ೯ ತಿಂಗಳ ಅವಧಿಯಲ್ಲಿ ಸುಂದರವೂ, ವೈಭವತೆಯನ್ನು ಸಾರುವ ೧೨೦೦ ಚ.ಅಡಿ ವಿಸ್ತೀರ್ಣದ ತರವಾಡು ಗುತ್ತಿನ ಮನೆ, ೪೦೦ ಚ.ಅಡಿ ವಿಸ್ತೀರ್ಣದ ಧೂಮಾವತಿ ಬಂಟ ದೈವಸ್ಥಾನ, ೮೦೦ ಚ.ಅಡಿ ವಿಸ್ತೀರ್ಣದಲ್ಲಿ ಕುಟುಂಬಿಕದ ಅನುಕೂಲತೆಗಾಗಿ ಅತಿಥಿ ಗೃಹ, ಶೌಚಾಲಯದಂತಹ ಮೂಲಭೂತ ವ್ಯವಸ್ಥೆಗಳನ್ನು ಸುಮಾರು ೧.೨೫ ಕೋಟಿ ವೆಚ್ಚದಲ್ಲಿ ಮಾಡಲಾಗಿದೆ.
ದೈವ ಸಾನ್ನಿಧ್ಯಗಳು: ವಾಸ್ತುಶಿಲ್ಪಿ ಪ್ರಸಾದ್ ಮುನಿಯಂಗಳರವರ ನಿರ್ದೇಶನದಂತೆ, ಜಿಲ್ಲೆಯ ಪ್ರಮುಖ ದೇವಸ್ಥಾನಗಳ ಕಾಷ್ಠಶಿಲ್ಪಿ ಹರೀಶ್ ಆಚಾರ್ಯ ಸಂಪಿಗೆಯವರ ನೇತೃತ್ವದಲ್ಲಿ ದೈವಸ್ಥಾನ, ಗುತ್ತಿನ ಮನೆ ನಿರ್ಮಾಣಗೊಂಡಿದೆ. ಪ್ರಧಾನ ದೈವಸ್ಥಾನದಲ್ಲಿ ಧೂಮಾವತಿ ಬಂಟ, ಗುಳಿಗನ ಕಟ್ಟೆ, ಗುತ್ತಿನ ಮನೆಯಲ್ಲಿ ಶ್ರೀ ವೆಂಕಟರಮಣ ದೇವರ ಕೋಣೆ, ದೀಪಾರಾಧನೆಯ ದುರ್ಗೆ, ವರ್ಣರ ಪಂಜುರ್ಲಿ, ಜೊತೆ ಕಲ್ಲುರ್ಟಿ, ಕೊರತಿ ಹಾಗೂ ಇತರೇ ಪರಿವಾರ ದೈವಗಳ ಸಾನ್ನಿಧ್ಯ ಪ್ರತಿಷ್ಠಾಪನೆಗೊಳ್ಳಲಿದೆ.

ಕುಟುಂಬಿಕರ ಸಹಕಾರ: ಭೂಮಿ ಪೂಜೆಯ ಬಳಿಕ ೨೦೨೨ರ ಏಪ್ರಿಲ್ ತಿಂಗಳಲ್ಲಿ ಜೀರ್ಣೋದ್ಧಾರ ಕಾಮಗಾರಿಗಳು ಮುಕ್ತಾಯವಾಗಬಹುದೆಂಬ ಕುಟುಂಬಿಕರ ಮನಃಸಂಕಲ್ಪ ಎಣಿಕೆಯಂತೆ ದೈವಾನುಗ್ರಹದಿಂದ ಕೂಡಿ ಬಂದಿದೆ. ಕುಟುಂಬದ ಸದಸ್ಯರ ಶ್ರಮದಾನ, ದೈಹಿಕ ಮತ್ತು ಮಾನಸಿಕವಾದ ಪರಿಶ್ರಮದ ಫಲವಾಗಿ ಕುಟುಂಬದ ಕೇಂದ್ರ ಬಿಂದು ಕಂಗೊಳಿಸಲಾರಂಭಿಸಿದೆ.

ಮುಂದಿನ ಯೋಜನೆ: ಕುಟುಂಬಿಕರ ಮತ್ತು ಸ್ಥಳೀಯ ಸಾರ್ವಜನಿಕರ ಅನುಕೂಲತೆಗಾಗಿ ಸಭಾಭವನ ನಿರ್ಮಾಣದ ಯೋಜನೆ ಹಾಕಿಕೊಳ್ಳಲಾಗಿದೆ.
ಪುನರ್ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಭರದ ಸಿದ್ದತೆ: ಮೇ ೧೪ ರಿಂದ ೧೮ ರವರೆಗೆ ದೈವಗಳ ಪುನರ್ ಪ್ರತಿಷ್ಠೆ, ಕಲಶಾಭಿಷೇಕ, ತರವಾಡು ಗುತ್ತಿನ ಮನೆಯ ಗೃಹಪ್ರವೇಶ, ಶ್ರೀ ದೈವಗಳ ನೇಮೋತ್ಸವವು ಬ್ರಹ್ಮಶ್ರೀ ಕುಂಟುಕುಡೇಲು ರಘುರಾಮ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಸುಮಾರು ೧೦ ಸಾವಿರಕ್ಕೂ ಮಿಕ್ಕಿ ಊರ ಪರವೂರ ಭಕ್ತಾಭಿಮಾನಿಗಳು ಆಗಮಿಸಲಿದ್ದು, ಪ್ರತಿನಿತ್ಯ ಅನ್ನಸಂತರ್ಪಣೆ ನಡೆಯಲಿದೆ. ಕಾರ್ಯಕ್ರಮದ ವ್ಯವಸ್ಥೆಗೆ ಭರದ ಸಿದ್ದತೆ ನಡೆದಿದ್ದು, ವಿಶಾಲ ಪಾಕಿಂಗ್ ವ್ಯವಸ್ಥೆ, ಮಳೆಯಿಂದ ರಕ್ಷಣೆಗಾಗಿ ವಿಶಾಲ ಶೀಟ್ ಪೆಂಡಲ್ ವ್ಯವಸ್ಥೆ ಮಾಡಲಾಗಿದೆ. ಸಭಾ ಕಾರ್ಯಕ್ರಮ, ಧಾರ್ಮಿಕ ಕಾರ್ಯಕ್ರಮ ಮತ್ತು ನೇಮೋತ್ಸವಗಳಿಗಾಗಿ ಸಕಲ ಏರ್ಪಾಡುಗಳು ನಡೆದಿದ್ದು, ಕುಟುಂಬಿಕರು ಹಗಲು ರಾತ್ರಿ ಕಾರ್ಯಕ್ರಮದ ಯಶಸ್ಸಿಗಾಗಿ ಶ್ರಮಿಸುತ್ತಿದ್ದಾರೆ. ಮೇ ೧೪ ರಂದು ಊರ ಪರವೂರ ಭಕ್ತರ ಸಹಕಾರದೊಂದಿಗೆ ಹೊರೆಕಾಣಿಕೆ ಸಮರ್ಪಣೆಯಾಗಲಿದೆ. ಮಾಣಿ ಮೈಸೂರು ರಸ್ತೆಯ ಕಬಕ ಜಂಕ್ಷನ್ ನಿಂದ ಅರ್ಕ ಭಜನಾ ಮಂದಿರದ ರಸ್ತೆಯಲ್ಲಿ ಸಾಗಿ ಹಣಿಯೂರು ತರವಾಡು ಮನೆಗೆ ಹೊರೆಕಾಣಿಕೆ ಮೆರವಣಿಗೆ ಚೆಂಡೆಮೇಳದೊಂದಿಗೆ ಸಾಗಿಬರಲಿದೆ.

ಕುಟುಂಬಿಕರ, ಊರವರ ಸಹಕಾರ ಸಾಕಾರಗೊಂಡಿದೆ

ಪ್ರತ್ಯೇಕ ತರವಾಡು, ದೈವಸ್ಥಾನ ನಿರ್ಮಿಸಿ ದೈವಾರಾಧಾನೆ ಮಾಡಿ ಕುಟುಂಬಿಕರ ಏಳ್ಗೆಗಾಗಿ ಶ್ರಮಿಸುವ ಯೋಗ ಭಾಗ್ಯ ನಮಗೆ ದೊರೆತಿದೆ. ಕುಟುಂಬದ ಎಲ್ಲಾ ಸದಸ್ಯರ ನಿರಂತರ ಶ್ರಮ, ಸಹಕಾರದಿಂದ ಅತ್ಯಂತ ಸುಂದರವಾದ ತರವಾಡು, ದೈವಸ್ಥಾನ ನಿರ್ಮಾಣಗೊಂಡಿದೆ. ಪ್ರತಿಷ್ಠೆ ಮತ್ತು ನೇಮೋತ್ಸವದ ವಿವಿಧ ಕಾರ್ಯಕ್ರಮಗಳು ಕೇವಲ ಕುಟುಂಬಿಕರು, ಬಂಧುಗಳಲ್ಲದೇ ಊರವರು ಪಾಲ್ಗೊಂಡು ನಡೆಸಬೇಕೆಂಬ ಆಶಯ ನಮ್ಮದು. ಕುಟುಂಬಿಕರ ಮತ್ತು ಸಾರ್ವಜನಿಕರ ಅನುಕೂಲತೆಗಾಗಿ ಮುಂದೆಯೂ ಹಲವು ಯೋಜನೆ ಹಾಕಿಕೊಳ್ಳಲಾಗಿದೆ. ಡಾ. ಕೆ.ಸಿ. ನಾಕ್ ಅಧ್ಯಕ್ಷರು, ಹಣಿಯೂರು ಫ್ಯಾಮಿಲಿ ಡೈಟಿಸ್ ಟ್ರಸ್ಟ್ (ರಿ.) ಪುತ್ತೂರು

LEAVE A REPLY

Please enter your comment!
Please enter your name here