ಜಲಜೀವನ್ ಮಿಷನ್: ಕೆದಂಬಾಡಿ, ಕೆಯ್ಯೂರು, ಒಳಮೊಗ್ರು ಗ್ರಾಮಗಳಿಗೆ ರೂ.5.92 ಕೋಟಿ ಅನುದಾನ ಮಂಜೂರು- ಶಿಲಾನ್ಯಾಸ, ಉದ್ಘಾಟನೆ

0

  • ಗ್ರಾಮಾಭಿವೃದ್ಧಿಯೊಂದಿಗೆ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಮಹತ್ವ : ಸಂಜೀವ ಮಠಂದೂರು

 

 

ಪುತ್ತೂರು: ಕೇಂದ್ರ ಸರಕಾರವು ಜಲಜೀವನ್ ಮಿಷನ್ ಯೋಜನೆಯಡಿ ಮನೆಮನೆಗೆ ಗಂಗೆ ಎನ್ನುವ ಕಲ್ಪನೆಯನ್ನು ಇಟ್ಟುಕೊಂಡು ಪ್ರತಿಮನೆಗೆ ನೀರು ಕೊಡುವುದು ಹಾಗೂ ಗ್ರಾಮದ ಅಭಿವೃದ್ಧಿಯೊಂದಿಗೆ ಗ್ರಾಮೀಣ ಭಾಗದ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸವನ್ನು ಮಾಡುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ಬಹಳಷ್ಟು ಯೋಜನೆಗಳನ್ನು ಹಾಗೂ ಯೋಜನೆಗಳ ಮೂಲಕ ಅನುದಾನಗಳನ್ನು ಒದಗಿಸುವ ಕಾರ್ಯವನ್ನು ಮಾಡುತ್ತಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

 

ಅವರು ಜಲಜೀವನ್ ಮಿಷನ್ ಯೋಜನೆಯಡಿ ಕೆದಂಬಾಡಿ, ಒಳಮೊಗ್ರು ಮತ್ತು ಕೆಯ್ಯೂರು ಗ್ರಾಮಗಳಿಗೆ ಮಂಜೂರಾದ ಒಟ್ಟು ರೂ.೫.೯೨ ಕೋಟಿ ಅನುದಾನದ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮವನ್ನು ಮೇ.೧೧ ರಂದು ಕೆದಂಬಾಡಿ ಗ್ರಾಪಂ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು. ಆರೋಗ್ಯ ಸೇವೆ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ಭಾರತ ಎಲ್ಲಾ ದೇಶಗಳಿಂದ ಮುಂದೆ ಸಾಗುತ್ತಿದೆ ಎಂದ ಶಾಸಕರು ಆರ್ಥಿಕವಾಗಿ ಸಮರ್ಥ ಮತ್ತು ಬಲಾಡ್ಯ ದೇಶವಾಗಿ ಹೊರಹೊಮ್ಮುತ್ತಿದೆ ಎಂದರು. ಜನರ ಆರೋಗ್ಯ ಸೇವೆಯೊಂದಿಗೆ ಗ್ರಾಮಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಎಲ್ಲರಿಗೆ ಸಮಬಾಳು, ಸಮಪಾಲು ಎಂಬ ನೆಲೆಯಲ್ಲಿ ಯಾರಿಗೂ ಬೇಧಭಾವ ಮಾಡದೆ ಅನುದಾನವನ್ನು ಸಮಾನವಾಗಿ ಹಂಚಿಕೆ ಮಾಡುವ ಕೆಲಸ ಆಗುತ್ತಿದೆ ಎಂದರು.
ಭ್ರಷ್ಟಾಚಾರಮುಕ್ತ ಪಂಚಾಯತ್, ಗ್ರಾಮವಾಗಲಿ  ಸರಕಾರ ಬಹಳಷ್ಟು ಯೋಜನೆ ಮತ್ತು ಅನುದಾನಗಳನ್ನು ಗ್ರಾಮಕ್ಕೆ ನೀಡುತ್ತಿದ್ದು ಈ ಯೋಜನೆಗಳು ಜನರಿಗೆ ಸರಿಯಾದ ರೀತಿಯಲ್ಲಿ ತಲುಪಿ ಕಾರ್ಯಗತವಾಗವಾಗಬೇಕಾದರೆ ಜನಪ್ರತಿನಿಧಿಗಳ ಸಹಕಾರ ಬಹಳ ಮುಖ್ಯ ಎಂದ ಶಾಸಕರು, ಸರಕಾರದ ಯೋಜನೆಗಳು ಗ್ರಾಮದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ನೋಡಿಕೊಳ್ಳಬೇಕಾದ ಜವಬ್ದಾರಿ ಜನಪ್ರತಿನಿಧಿಗಳ ಮೇಲಿದೆ ಎಂದರು. ಸರಕಾರದ ಯೋಜನೆಗಳು ನೇರವಾಗಿ ಫಲಾನುಭವಿಗಳಿಗೆ ತಲುಪಬೇಕು ಲಂಚ, ಭ್ರಷ್ಟಾಚಾರ ಮುಕ್ತ ಪಂಚಾಯತ್, ಗ್ರಾಮ ಆಗುವಲ್ಲಿ ಪ್ರತಿಯೊಬ್ಬರು ಪ್ರಯತ್ನಿಸಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಕೆಯ್ಯೂರು ಗ್ರಾಪಂ ಅಧ್ಯಕ್ಷೆ ಜಯಂತಿ ಎಸ್.ಭಂಡಾರಿ, ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರುಗಳು ಸಂದರ್ಭೋಚಿತವಾಗಿ ಮಾತನಾಡಿ ಕೃತಜ್ಞತೆ ಸಲ್ಲಿಸಿದರು. ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮಂಗಳೂರು ವಿಭಾಗದ ಕಾರ್ಯಪಾಲಕ ನರೇಂದ್ರ ಬಾಬುರವರು ಜಲಜೀವನ್ ಮಿಷನ್ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಕೆದಂಬಾಡಿ ಗ್ರಾಮದ ಸ್ಮಶಾನ ಮತ್ತು ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಅನುದಾನದ ಕೊರತೆ ಇದ್ದು ಸುಮಾರು ೪೦ ಲಕ್ಷ ರೂ.ನಷ್ಟು ಅನುದಾನದ ಅಗತ್ಯವಿದೆ. ಆದ್ದರಿಂದ ಶಾಸಕರು ಅನುದಾನ ಬಿಡುಗಡೆಗೊಳಿಸುವಂತೆ ಗ್ರಾಪಂ ಅಧ್ಯಕ್ಷ ರತನ್ ರೈಯವರು ಶಾಸಕರಿಗೆ ಮನವಿ ಸಲ್ಲಿಸಿದರು. ಕೆದಂಬಾಡಿ ಗ್ರಾಪಂ ಕಾರ್ಯದರ್ಶಿ ಸುನಂದ ರೈ ಮನವಿ ಪತ್ರ ವಾಚಿಸಿದರು.

ವೇದಿಕೆಯಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾಪಂ ಮಾಜಿ ಅಧ್ಯಕ್ಷೆ ಭವಾನಿ ಚಿದಾನಂದ್, ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಪುತ್ತೂರು ಸಹಾಯಕ ಕಾರ್ಯಪಾಲ ರೂಪ್ಲ ನಾಯಕ್ ಉಪಸ್ಥಿತರಿದ್ದರು. ಕೆದಂಬಾಡಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆ ಸ್ವಾಗತಿಸಿದರು. ಕೆಯ್ಯೂರು ಗ್ರಾಪಂ ಪ್ರಭಾರ ಅಭಿವೃದ್ಧಿ ಅಧಿಕಾರಿ ಸುರೇಂದ್ರ ರೈ ಇಳಂತಾಜೆ ವಂದಿಸಿದರು. ಒಳಮೊಗ್ರು ಗ್ರಾಪಂ ಸದಸ್ಯ ಮಹೇಶ್ ರೈ ಕೇರಿ ಕಾರ್ಯಕ್ರಮ ನಿರೂಪಿಸಿದರು. ಕೆಯ್ಯೂರು, ಕೆದಂಬಾಡಿ, ಒಳಮೊಗ್ರು ಗ್ರಾಪಂ ಸದಸ್ಯರುಗಳು, ಸಿಬ್ಬಂದಿಗಳು ಸಹಕರಿಸಿದ್ದರು.

ಕೆದಂಬಾಡಿ ಅಮೃತ್ ಗ್ರಾಮ-ಘೋಷಣೆ
ಸರಕಾರದ ಅಮೃತ್ ಗ್ರಾಮ ಯೋಜನೆಯಡಿ ಕೆದಂಬಾಡಿ ಗ್ರಾಮಕ್ಕೆ ರೂ.೨೫ ಲಕ್ಷ ಅನುದಾನವನ್ನು ನೀಡುವ ಮೂಲಕ ಕೆದಂಬಾಡಿ ಗ್ರಾಮವನ್ನು ಶಾಸಕ ಮಠಂದೂರುರವರು ಅಮೃತ್ ಗ್ರಾಮವನ್ನಾಗಿ ಘೋಷಣೆ ಮಾಡಿದರು. ಗ್ರಾಪಂ ಅಧ್ಯಕ್ಷ ರತನ್ ರೈ ಮಾತನಾಡಿ, ಈ ಹಿಂದಿನ ಶಾಸಕರು ತಮ್ಮ ಅವಧಿಯಲ್ಲಿ ಕೇವಲ ೮೨ ಲಕ್ಷ ರೂ. ಅನುದಾನ ಮಾತ್ರ ಮಂಜೂರು ಮಾಡಿದ್ದರು, ಆದರೆ ಸಂಜೀವ ಮಠಂದೂರುರವರು ತಮ್ಮ ೪ ವರ್ಷಗಳಲ್ಲಿ ಗ್ರಾಮಕ್ಕೆ ಸುಮಾರು ೧೫ ಕೋಟಿ ರೂ. ಅನುದಾನವನ್ನು ಮಂಜೂರುಗೊಳಿಸುವ ಮೂಲಕ ಅಭಿವೃದ್ಧಿಯ ಹರಿಕಾರರಾಗಿ ಮೂಡಿಬಂದಿದ್ದಾರೆ ಎಂದು ಹೇಳಿದರು.

1 ತಿಂಗಳೊಳಗೆ ಸ್ವಚ್ಛ ತಾಲೂಕು
ಪುತ್ತೂರು ತಾಪಂ ಕಾರ್ಯನಿರ್ವಹಣಾಧಿಕಾರಿ ಮಾತನಾಡಿ, ಜಲಜೀವನ್ ಮಿಷನ್ ಯೋಜನೆಯಡಿ ಗ್ರಾಮದ ನೀರಿನ ಸಮಸ್ಯೆಯನ್ನು ನೀಗಿಸುವ ಕೆಲಸ ಆಗುತ್ತಿದ್ದು ಮುಂದಿನ ದಿನಗಳಲ್ಲಿ ಸ್ವಚ್ಛಗ್ರಾಮ, ಬಯಲು ಕಸಮುಕ್ತ ಗ್ರಾಮವಾಗಿಸುವ ಕೆಲಸವೂ ನಡೆಯಲಿದೆ ಎಂದರು. ಈಗಾಗಲೇ ಶಾಸಕರ ಸೂಚನೆಯಂತೆ ರಸ್ತೆ ಬದಿಗಳಲ್ಲಿರುವ ಕಸ,ತ್ಯಾಜ್ಯಗಳನ್ನು ತೆರವು ಮಾಡುವ ಕೆಲಸ ಆಗಿದ್ದು ಮುಂದಿನ ೧ ತಿಂಗಳೊಳಗೆ ತಾಲೂಕನ್ನು ಕಸಮುಕ್ತ, ಸ್ವಚ್ಛ ತಾಲೂಕು ಮಾಡಲಾಗುವುದು ಇದಕ್ಕೆ ಎಲ್ಲಾ ಗ್ರಾಮಸ್ಥರ ಸಹಕಾರ ಅಗತ್ಯವಿದೆ ಎಂದು ಹೇಳಿದರು.

` ಜಲಜೀವನ್ ಮಿಷನ್ ಮನೆಮನೆಗೆ ಗಂಗೆ ಯೋಜನೆಯಡಿ ಕೆದಂಬಾಡಿ ಗ್ರಾಪಂಗೆ ೧ ಕೋಟಿ ರೂ, ಒಳಮೊಗ್ರು ಗ್ರಾಪಂಗೆ ೨.೯೨ ಕೋಟಿ ರೂ ಹಾಗೂ ಕೆಯ್ಯೂರು ಗ್ರಾಪಂಗೆ ೨ ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ. ಕೆದಂಬಾಡಿಯಲ್ಲಿ ಯೋಜನೆಗೆ ಚಾಲನೆ ನೀಡಲಾಗಿದ್ದು, ಗ್ರಾಮಸ್ಥರಿಗೆ ನೀರು ಕೊಡುವ ಕೆಲಸವೂ ಆಗಲಿದೆ.ರತನ್ ರೈ ಕುಂಬ್ರ, ಅಧ್ಯಕ್ಷರು ಕೆದಂಬಾಡಿ ಗ್ರಾಪಂ

LEAVE A REPLY

Please enter your comment!
Please enter your name here