ಉಪ್ಪಿನಂಗಡಿ ದುರ್ಗಾಗಿರಿ ಸ್ಮಶಾನದ ಕಾಮಗಾರಿಯಲ್ಲಿ ಭ್ರಷ್ಟಾಚಾರ

0

  • ಸರಕಾರಿ ಹಣ ಕಬಳಿಕೆ ಕುರಿತು ದೂರು ನೀಡಿದರೂ ಸಿಗದ ಸ್ಪಂದನೆ
  • ಪತ್ರಕರ್ತ ಉದಯ ಕುಮಾರ್‌ರವರಿಂದ ಮುಖ್ಯಮಂತ್ರಿಗೆ ದೂರು

 

ಪುತ್ತೂರು; ಉಪ್ಪಿನಂಗಡಿಯ ದುರ್ಗಾಗಿರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹರಿಶ್ಚಂದ್ರ ಘಾಟ್ ಸ್ಮಶಾನಕ್ಕೆ ಮೂಲಭೂತ ಅವಶ್ಯಕತೆಗಳನ್ನು ಒದಗಿಸಲು ಸರಕಾರ ನೀಡಿದ ೧೬.೬೬ ಲಕ್ಷ ರೂ ಅನುದಾನದ ಕಾಮಗಾರಿ ನಿರ್ವಹಣೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಉಪ್ಪಿನಂಗಡಿಯ ಹಿರಿಯ ಪತ್ರಕರ್ತ ಉದಯ ಕುಮಾರ್ ಯು.ಎಲ್.ರವರು ಮುಖ್ಯಮಂತ್ರಿಯವರಿಗೆ ದೂರು ಸಲ್ಲಿಸಿದ್ದಾರೆ. ಅಸಮರ್ಪಕ ಕಾಮಗಾರಿ ನಡೆಸಿ ಸರಕಾರಿ ಹಣವನ್ನು ಕಬಳಿಸಿರುವ ಕೃತ್ಯದ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಜರುಗಿಸಬೇಕೆಂದು ದೂರು ನೀಡಿದರೂ ನಿರ್ಲಕ್ಷ್ಯ ವಹಿಸಿದ ಹಾಗೂ ಭ್ರಷ್ಟಾಚಾರ ನಿಗ್ರಹದಳಕ್ಕೆ ದೂರು ಸಲ್ಲಿಸಿದರೂ ತನಿಖೆ ನಡೆಸಲು ಸರಕಾರ ಅನುಮತಿ ನೀಡದೇ ಇರುವ ಕುರಿತು ಕ್ರಮ ಕೈಗೊಳ್ಳುವಂತೆ ಅವರು ದೂರಿನಲ್ಲಿ ಮುಖ್ಯಮಂತ್ರಿಯವರನ್ನು ಒತ್ತಾಯಿಸಿದ್ದಾರೆ.

ಭ್ರಷ್ಟಾಚಾರದ ವಿರುದ್ಧ ಪತ್ರಕರ್ತ ಉದಯ ಕುಮಾರ್ ನೀಡಿದ ದೂರಿನ ಸಾರಾಂಶ:

ಉಪ್ಪಿನಂಗಡಿ ಗ್ರಾಮದ ದುರ್ಗಾಗಿರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹರಿಶ್ಚಂದ್ರ ಘಾಟ್ ಸ್ಮಶಾನಕ್ಕೆ ಮೂಲಭೂತ ಅವಶ್ಯಕತೆಗಳನ್ನು ಒದಗಿಸಲು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರ ಆದೇಶದನ್ವಯ ಮಂಜೂರಾತಿಗೊಂಡ ೧೬.೬೬ ಲಕ್ಷ ರೂಪಾಯಿಯ ಕಾಮಗಾರಿ ಅಪೂರ್ಣವಾಗಿ ನಡೆದಿದೆ. ನಡೆದಿರುವ ಕಾಮಗಾರಿಯೂ ಕಳಪೆಯಾಗಿರುವುದರಿಂದ ಕಾಮಗಾರಿಗೆ ಸಂಬಂಧಿಸಿದ ೨ನೇ ಕಂತನ್ನು ಯಾವುದೇ ಕಾರಣಕ್ಕೂ ಪಾವತಿಸಬಾರದೆಂದು ದಿನಾಂಕ ೨೨/೨/೨೦೨೧ರಂದು ನೋಂದಾಯಿತ ಅಂಚೆ ಮೂಲಕ ಆಕ್ಷೇಪ ಸಲ್ಲಿಸಲಾಗಿದೆ. ಹಾಗಿದ್ದರೂ ಸದ್ರಿ ಆಕ್ಷೇಪಕ್ಕೆ ಯಾವುದೇ ಸ್ಪಂದನ ನೀಡದೆ ಕಾಮಗಾರಿ ಪೂರ್ಣಗೊಂಡಿದೆ ಎಂದು ಪುತ್ತೂರಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾಗಿದ್ದ ಹೇಮಚಂದ್ರರವರ ವರದಿಯನ್ನಾಧರಿಸಿ ಕಾಮಗಾರಿಯ ಎರಡನೇ ಕಂತನ್ನು ಪಾವತಿಸಲು ದ.ಕ ಜಿಲ್ಲಾಧಿಕಾರಿಯವರು ಆದೇಶ ನೀಡಿರುವುದು ಸಮಾಜ ಕಲ್ಯಾಣ ಇಲಾಖೆಯಿಂದ ಮಾಹಿತಿ ಹಕ್ಕಿನಿಂದ ತರಿಸಿಕೊಂಡ ದಾಖಲೆಯಲ್ಲಿ ತಿಳಿದು ಬಂದಿರುತ್ತದೆ. ದಾಖಲೆಗಳನ್ನು ಪರಿಶೀಲಿಸಿದಾಗ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಪರಿಶೀಲನಾ ವರದಿಯಲ್ಲಿ ಉಲ್ಲೇಖಿಸಿದ ಕಾಮಗಾರಿ ಮತ್ತದರ ಪೋಟೋಗಳು ಈ ಹಿಂದೆಯೇ ನಿರ್ಮಾಣಗೊಂಡ ಕಾಮಗಾರಿಗಳದ್ದಾಗಿದ್ದು, ಮಂಜೂರುಗೊಂಡ ೧೬.೬೬ ಲಕ್ಷ ರೂ ಮೊತ್ತದಲ್ಲಿ ಬಳಸಲು ಅಸಾಧ್ಯವಾದಂತಿರುವ ಶೌಚಾಲಯ ಹಾಗು ಸ್ನಾನ ಗೃಹ ಮತ್ತು ಇಂಟರ್‌ಲಾಕ್ ಅಳವಡಿಕೆಯನ್ನು ಮಾತ್ರ ಮಾಡಿರುವುದಾಗಿದೆ. ಮಾಡಿರುವ ಕಾಮಗಾರಿಯೂ ಕಳಪೆ ಗುಣಮಟ್ಟದಿಂದ ಕೂಡಿದ್ದು, ಇಲಾಖೆಗೆ ಸಕಾಲದಲ್ಲಿ ಸಲ್ಲಿಸಿದ ಆಕ್ಷೇಪಗಳೆಲ್ಲವೂ ಕಡೆಗಣಿಸಲ್ಪಟ್ಟಿದೆ. ಹಾಗೂ ಪರಿಶೀಲನಾ ವರದಿ ಸಲ್ಲಿಸಿದ ಪುತ್ತೂರಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು(ಗ್ರೇಡ್-೨) ಈ ಪ್ರಕರಣದಲ್ಲಿ ಸರಕಾರಕ್ಕೆ ವಂಚನೆ ಹಾಗೂ ಭ್ರಷ್ಟಾಚಾರವೆಸಗಿದ ಕೃತ್ಯವೆಸಗಿರುವುದು ಗೋಚರಿಸುತ್ತಿದೆ. ಕಾಮಗಾರಿಗೆ ಸಂಬಂಧಿಸಿ ಸಂಬಂಧಿತ ಸ್ಮಶಾನ ಸಮಿತಿಯು ೨೧/೧೧/೨೦೨೦ರಂದು ಪುತ್ತೂರು ಶಾಸಕರಿಗೆ ಲಿಖಿತ ದೂರು ಸಲ್ಲಿಸಿದ್ದು, ಸದ್ರಿ ದೂರಿಗೆ ಸಂಬಂಧಿಸಿ ಶಾಸಕರ ಕಚೇರಿಯಿಂದ ಸಮಾಜ ಕಲ್ಯಾಣ ಇಲಾಖೆಗೆ ಪತ್ರ ವ್ಯವಹಾರ ನಡೆಸಲಾಗಿದೆ ಎಂದು ತಿಳಿದು ಬಂದಿರುತ್ತದೆ. ಮಾತ್ರವಲ್ಲದೆ ಕಾಮಗಾರಿಯು ಅಪೂರ್ಣ ಹಾಗೂ ಕಳಪೆಯುಕ್ತವಾಗಿ ನಡೆದಿದೆ ಎಂದು ದಿನಾಂಕ ೨೨/೨/೨೦೨೧ರಂದು ನೋಂದಾಯಿತ ಅಂಚೆ ಮೂಲಕ ಜಿಲ್ಲಾ ಸಮಾಜ ಕಲ್ಯಾಣ ಇಲಾಖಾಧಿಕಾರಿಗೆ ಆಕ್ಷೇಪ ಪತ್ರ ಕಳುಹಿಸಿದ್ದು, ಸದ್ರಿ ಪತ್ರಕ್ಕೆ ಸಂಬಂಧಿಸಿ ಇಲಾಖೆಯಿಂದ ಈವರೆಗೆ ಯಾವುದೇ ಹಿಂಬರಹವೂ ಲಭಿಸಿರುವುದಿಲ್ಲ. ದಿನಾಂಕ ೧೬/೭/೨೦೨೧ರಂದು ದ.ಕ ಜಿಲ್ಲಾಧಿಕಾರಿಗಳಿಗೆ ಪ್ರಕರಣದ ಬಗ್ಗೆ ತನಿಖೆ ನಡೆಸಲು ಲಿಖಿತ ದೂರು ಸಲ್ಲಿಸಲಾಯಿತ್ತಾದರೂ ಅಲ್ಲಿಂದಲೂ ಯಾವುದೇ ಹಿಂಬರಹವೂ ಲಭಿಸಲಿಲ್ಲ. ದಿನಾಂಕ ೨೦/೧೧/೨೦೨೧ರಂದು ಸಮಾಜ ಕಲ್ಯಾಣ ಸಚಿವರಿಗೆ ಹಾಗೂ ರಾಜ್ಯದ ಮುಖ್ಯಮಂತ್ರಿಗಳಾದ ತಮಗೂ ಲಿಖಿತ ದೂರು ಸಲ್ಲಿಸಿದ್ದು, ಈ ತನಕ ಯಾವುದೇ ಪ್ರತಿಕ್ರಿಯೆ ಬಾರದೇ ಇರುವುದು ಅತ್ಯಂತ ನಿರಾಶೆಯನ್ನು ಮೂಡಿಸಿದೆ. ನಾಡಿನ ದೊರೆಗೆ ನೀಡಿದ ದೂರು ಕೂಡಾ ಈ ರೀತಿ ಕಡೆಗಣಿಸಲ್ಪಡುತ್ತದೆ ಎಂದಾದರೆ ಯಾವುದೇ ಸರಕಾರ ಬಂದರೂ ನಾಡಿನ ಜನತೆಯ ಬೇಡಿಕೆ ಅರಣ್ಯ ರೋದನವೇ ಎಂಬ ಪ್ರಶ್ನೆ ಕಾಡುತ್ತಿದೆ. ಈ ಮಧ್ಯೆ ಪ್ರಕರಣದ ಬಗ್ಗೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಬೇಕೆಂದು ದ.ಕ ಜಿಲ್ಲೆಯ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದಿನಾಂಕ ೧೧/೧೦/೨೦೨೧ರಂದು ಲಿಖಿತ ದೂರು ಸಲ್ಲಿಸಿದ್ದು, ಇಲಾಖೆಯು ದೂರನ್ನು ಸ್ವೀಕರಿಸಿ, ಆರೋಪಿತ ಇಲಾಖಾಧಿಕಾರಿಗಳ ವಿರುದ್ಧ ತನಿಖೆಗಾಗಿ ಪೂರ್ವಾನುಮತಿ ಪಡೆಯಲು ಸರಕಾರದ ಸಂಬಂಧಿತ ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆ ಎಂದೂ ತಿಳಿದು ಬಂದಿದೆ. ದೂರು ಸಲ್ಲಿಸಿ ೭ ತಿಂಗಳಾದರೂ ಈ ತನಕ ಸರಕಾರದಿಂದ ಅನುಮತಿ ದೊರಕದಿರುವುದು ಸರಕಾರಿ ವ್ಯವಸ್ಥೆಯ ಮೇಲೆ ಸಹಜ ಸಂಶಯ ಮೂಡಲು ಕಾರಣವಾಗಿದೆ. ದಿನಾಂಕ ೨೯/೧/೨೦೨೨ರಂದು ಜಿಲ್ಲೆಯ ಉಸ್ತುವಾರಿ ಮಂತ್ರಿಗಳಿಗೂ, ದಿನಾಂಕ ೩೦/೧/೨೦೨೨ರಂದು ಕ್ಷೇತ್ರದ ಶಾಸಕರಿಗೂ ಪ್ರಕರಣದ ಬಗೆಗಿನ ಅಮೂಲಾಗ್ರ ತನಿಖೆಯನ್ನು ಬಯಸಿ ಲಿಖಿತ ಮನವಿ ಸಲ್ಲಿಸಿದ್ದರೂ ಈ ತನಕ ಒಂದು ವಾಕ್ಯದ ಹಿಂಬರಹ ನೀಡಲೂ ಅಸಾಧ್ಯವಾಗಿರುವುದು ಒಟ್ಟು ಪ್ರಕರಣದ ಬಗ್ಗೆ ಸರಕಾರದ ನಿಲುವು ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದೆಯೋ ಎಂಬ ಶಂಕೆ ಸಹಜವಾಗಿ ಕಾಡಿದೆ. ಸರಕಾರ ನೀಡಿದ ೧೬.೬೬ ಲಕ್ಷ ರೂ ಮೊತ್ತದಲ್ಲಿ ಕನಿಷ್ಠ ಒಂದು ಉಪಯೋಗಕ್ಕೆ ಲಭಿಸುವಂತಹ ಶೌಚಾಲಯವನ್ನಾದರೂ ನಿರ್ಮಿಸಿದ್ದರೆ ನಮಗೆ ಸಂತಸವಾಗುತ್ತಿತ್ತು. ಆದರೆ ಉಪಯೋಗಿಸಲಾಗದ ರೀತಿಯಲ್ಲಿ ಶೌಚಾಲಯವನ್ನು ನಿರ್ಮಿಸಿ ವಂಚಿಸಿದ ಕೃತ್ಯವನ್ನು ಯಾರೂ ಪ್ರಶ್ನಿಸುವುದಿಲ್ಲ ಎಂದಾದರೆ ನಂಬಿಕೆಗೆ ಯೋಗ್ಯವಾದ ವ್ಯವಸ್ಥೆ ಈ ನಾಡಿನಲ್ಲಿ ಇಲ್ಲ ಎನ್ನುವುದೇ ಖಚಿತವಾಗುತ್ತಿದೆ.

ಸತತ ಮನವಿಗೂ ಕವಡೆ ಕಾಸಿನ ಬೆಲೆ ನೀಡದ ಸರಕಾರದ ಈ ನಡೆಯನ್ನು ಖಂಡಿಸಿ ನಿರಾಸೆಯಿಂದ ಅಂತಿಮವಾದ ಈ ಪತ್ರವನ್ನು ತಮಗೆ ಕಳುಹಿಸುತ್ತಿದ್ದೇನೆ. ನ್ಯಾಯ ಒದಗಿಸಲಾಗುವುದಾದರೆ ನ್ಯಾಯ ಒದಗಿಸಿ ಎಂದು ಪತ್ರಕರ್ತ ಉದಯ ಕುಮಾರ್‌ರವರು ಮುಖ್ಯಮಂತ್ರಿಯವರಿಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here