ಮಾಯಿಲಕೋಟೆಗೆ ಸೀತಾರಾಮ ಕೆದಿಲಾಯ ಭೇಟಿ, ಸಭೆ

0

  • ಭಾರತ ಜಗತ್ತನ್ನು ಜೋಡಿಸುವ ದೇಶ: ಕೆದಿಲಾಯ

 

ನೆಲ್ಯಾಡಿ: ಭಾರತ ಪರಿಕ್ರಮ ಸಂತ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಮುಖಂಡ ಸೀತಾರಾಮ ಕೆದಿಲಾಯರವರು ಮೇ. 12ರಂದು ಮಧ್ಯಾಹ್ನ ಜೀರ್ಣೋದ್ಧಾರಗೊಂಡು ಪ್ರತಿಷ್ಠಾ ಮಹೋತ್ಸವ ಸಂಭ್ರಮದಲ್ಲಿರುವ ಕೊಕ್ಕಡ ಸೀಮೆ ಮಾಯಿಲಕೋಟೆ ದೈವ ಸನ್ನಿಧಿಗೆ ಭೇಟಿ ನೀಡಿದರು.

 


ಪ್ರತಿಷ್ಠಾ ಮಹೋತ್ಸವ ಸಮಿತಿ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಮಕೃಷ್ಣ ದೇವಾಡಿಗ ಹಾಗೂ ಸಮಿತಿ ಪದಾಧಿಕಾರಿಗಳು ಸ್ವಾಗತಿಸಿ, ಬರಮಾಡಿಕೊಂಡರು. ಬಳಿಕ ನಡೆದ ಸಭೆಯಲ್ಲಿ ಮಾತನಾಡಿದ ಸೀತಾರಾಮ ಕೆದಿಲಾಯರವರು, ಭಗವಂತ ಭಕ್ತರ ನಡುವೆಯೇ ಇದ್ದು, ಭಕ್ತರ ಭಕ್ತಿಯ ಪರವಶನಾಗಿರುತ್ತಾನೆ. ಭಕ್ತಿ ಇರುವಲ್ಲಿ ಶಕ್ತಿ ಇರುತ್ತದೆ, ಶಕ್ತಿಗೆ ಜಗತ್ತು ತಲೆಬಾಗುತ್ತದೆ. ಕಲಿಯುಗದಲ್ಲಿ ಸಂಘವೇ ಶಕ್ತಿಯ ರೂಪದಲ್ಲಿ ಅವತರಿಸಿ ಬರುತ್ತದೆ. ಜಾತಿ ಎಂದಿಗೂ ಗೆಲ್ಲುವುದಿಲ್ಲ, ಎಲ್ಲಿ ಪ್ರೀತಿ ಇರುತ್ತದೆಯೋ ಅಲ್ಲಿ ಎಲ್ಲಾ ಜಾತಿಗಳೂ ತಲೆಬಾಗುತ್ತವೆ. ಜಾತಿ ಒಡೆಯುತ್ತದೆ, ಪ್ರೀತಿ ಎಲ್ಲರನ್ನೂ ಜೋಡಿಸುತ್ತದೆ. ಇಂತಹ ಕೆಲಸ ಮಾಯಿಲಕೋಟೆಯಲ್ಲಿ ನಡೆದಿದೆ ಎಂದರು. ಎಲ್ಲಾ ದೇಶಗಳು ಜಗತ್ತನ್ನು ಗೆಲ್ಲುವುದಕ್ಕೆ ಹೊರಟಿವೆ. ಆದರೆ ಭಾರತ ಜಗತ್ತನ್ನು ಜೋಡಿಸುವ ದೇಶವಾಗಿದೆ ಎಂದು ಹೇಳಿದ ಅವರು, ಪ್ರಕೃತಿಯಲ್ಲಿರುವ ಜೀವರಾಶಿಗಳಿಗೆ ನಾಳೆಯ ಚಿಂತನೆ ಇರುವುದಿಲ್ಲ, ಅವು ಎಲ್ಲರಿಗಾಗಿ ಬದುಕುತ್ತವೆ. ಆದರೆ ಸೃಷ್ಟಿಯಲ್ಲಿ ನಾಳೆಯ ಕುರಿತು ಚಿಂತಿಸುವುದು ಮನುಷ್ಯ ಮಾತ್ರ. ಹಾಗಾಗಿ ಮನುಷ್ಯ ಪೂಜಿಸುವ ಬದಲು ದ್ವೇಷಿಸುತ್ತಾನೆ. ದೇವರಂತಹ ಬದುಕನ್ನು ಪ್ರಕೃತಿ ಮನುಷ್ಯನಿಗೆ ಕಳಿಸುತ್ತದೆ. ಮನುಷ್ಯನಲ್ಲಿರುವ ಅಹಂಕಾರ ದೂರ ಆಗಬೇಕು ಎಂದು ಹೇಳಿದರು.

ಪ್ರತಿಷ್ಠಾ ಮಹೋತ್ಸವ ಸಮಿತಿ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಸಂದರ್ಭೋಚಿತವಾಗಿ ಮಾತನಾಡಿದರು. ಪ್ರತಿಷ್ಠಾ ಮಹೋತ್ಸವ ಸಮಿತಿ ಪ್ರಧಾನ ಸಂಚಾಲಕ ಬಿ.ಜಯರಾಮ ನೆಲ್ಲಿತ್ತಾಯ ಸ್ವಾಗತಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಮಕೃಷ್ಣ ದೇವಾಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here