ಕೌಕ್ರಾಡಿ: ಅಂಗವೈಕಲ್ಯತೆಯನ್ನು ಪರಿಗಣಿಸದೆ ಮನೆ ನೆಲಸಮ ಆರೋಪ

0

  • ಜಿಲ್ಲಾಡಳಿತ, ಅಂಗವಿಕಲ ಅಧಿನಿಯಮ ಕಚೇರಿಗೆ ದೂರು

ಉಪ್ಪಿನಂಗಡಿ: ಮನೆಯಲ್ಲಿ ೨ ಅಂಗವೈಕಲ್ಯತೆಯ ವ್ಯಕ್ತಿ ವಾಸ ಇದ್ದಾಗ್ಯೂ ಮನೆಯನ್ನು ಕೆಡವಿ ನಿರ್ಗತಿಕರನ್ನಾಗಿ ಮಾಡಿದ್ದಾರೆ ಎಂದು ಕಡಬ ತಾಲ್ಲೂಕು ಕೌಕ್ರಾಡಿ ಗ್ರಾಮದ ಮೂಡುಬೈಲು ನಿವಾಸಿ ರೋಶನ್ ಡಿ”ಸೋಜಾ ಎಂಬವರು ದ.ಕ. ಜಿಲ್ಲಾಳಿತ, ಅಂಗವಿಕಲ ವ್ಯಕ್ತಿಗಳ ಅಧಿನಿಯಮ ಕಚೇರಿಗೆ ದೂರು ನೀಡಿ, ನ್ಯಾಯ ಕೋರಿದ್ದಾರೆ.

ಕೌಕ್ರಾಡಿ ಗ್ರಾಮದ ಮೂಡುಬೈಲು ಎಂಬಲ್ಲಿ ಅಂಗವೈಕಲ್ಯತೆಯ ವ್ಯಕ್ತಿ ವಾಸ ಇದ್ದಾಗ್ಯೂ ಕೆಡವಲಾಗಿದೆ ಎಂದು ಹೇಳಲಾದ ಮನೆ

ದ.ಕ. ಜಿಲ್ಲೆಯ ಕಡಬ ತಾಲ್ಲೂಕು ಕೌಕ್ರಾಡಿ ಗ್ರಾಮದ ಮೂಡುಬೈಲು ಎಂಬಲ್ಲಿ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದ ರೋಶನ್ ಡಿಸೋಜಾ “ತನ್ನ ಹಿರಿಯರ ಲಗಾಯ್ತು ಸರ್ವೆ ನಂಬ್ರ ೧೩೮/೧ರಲ್ಲಿನ ೧.೪೫ ಎಕ್ರೆ ಭೂಮಿಯಲ್ಲಿ ಅನುಭವಿಸಿಕೊಂಡು ಬರುತ್ತಿದ್ದು, ತನ್ನ ಮನೆ ಮತ್ತು ಕೃಷಿ ಭೂಮಿಯ ಬಗ್ಗೆ ಅದರ ಮೂಲ ವಾರಸುದಾರರು ಬರಕೊಟ್ಟ ವೀಲುನಾಮೆಯ ಆಧಾರದಲ್ಲಿ ಮಾಲಕತ್ವವನ್ನು ಹೊಂದಿದ್ದೆವು, ಇದೀಗ ತಾನಿದ್ದ ಮನೆಯನ್ನು ಹಾಗೂ ತನ್ನ ಕೃಷಿ ಕೃತಾವಳಿಯನ್ನು ಜೆಸಿಬಿ ಮೂಲಕ ಕೆಡವಿ ಹಾನಿಗೊಳಿಸಿರುತ್ತಾರೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ.

ಉಪ್ಪಿನಂಗಡಿ ಸಮೀಪ ಕೌಕ್ರಾಡಿ ಗ್ರಾಮದ ಮೂಡುಬೈಲು ನಿವಾಸಿ ಲೀನಾ ಫೆರ್ನಾಂಡಿಸ್ ಮತ್ತು ಪುತ್ರ ರೋಶನ್ ಡಿ’ಸೋಜಾ

“ಸದ್ರಿ ಭೂಮಿಯು ತನ್ನ ಅಜ್ಜ ಭೂ ಸುಧಾರಣಾ ಕಾಯಿದೆಯ ಅನುಸಾರ ಸಲ್ಲಿಸಿದ್ದ ಅರ್ಜಿಯಲ್ಲಿ ನಮೂದಿಸಲ್ಪಟ್ಟಿತ್ತಾದರೂ ಎಲ್‌ಆರ್‌ವೈಟಿ. ಫಾರಂ ನಂಬ್ರ ೧೦ರಲ್ಲಿ ದಾಖಲಿಸುವಾಗ ಈ ಸರ್ವೆ ನಂಬ್ರವನ್ನು ಕೈ ಬಿಟ್ಟಿದ್ದರು. ಅರ್ಜಿ ಸಲ್ಲಿಕೆಯ ವೇಳೆ ಸಲ್ಲಿಸಲ್ಪಡುವ ಫಾರಂ ನಂಬ್ರ ೭ರಲ್ಲಿ ಈ ಸರ್ವೆ ನಂಬ್ರ ಉಲ್ಲೇಖಿತವಾಗಿರುವಾಗ ಮತ್ತು ಭೂ ಮಾಲಕರ ಯಾವುದೇ ಆಕ್ಷೇಪಣೆಯೂ ದಾಖಲಾಗದೇ ಇರುವಾಗ ಸದ್ರಿ ಸರ್ವೆ ನಂಬ್ರವನ್ನು ಕೈ ಬಿಟ್ಟಿರುವುದೇ ಅಂದಿನ ಪ್ರಮುಖ ಲೋಪವಾಗಿದೆ. ಈ ಸೂಕ್ಷತೆಯ ನಡುವೆ ಭೂ ಮಾಲಕರ ವಿಲುನಾಮೆ ಬರೆಯಿಸಿಕೊಂಡ ವ್ಯಕ್ತಿಯು ಹಣ ಬಲದ ನೆಲೆಯಲ್ಲಿ ಏಕಾಏಕಿ ಜೆಸಿಬಿ ತಂದು ಮನೆಯಲ್ಲಿದ್ದ ತಾಯಿಯನ್ನು ಹೊರಗಟ್ಟಿ ನಮ್ಮನ್ನು ನಿರ್ಗತಿಕರನ್ನಾಗಿಸಿದ್ದಾರೆ” ಎಂದು ಪ್ರಸಕ್ತ ತನ್ನ ಸಹೋದರನ ಮನೆಯಲ್ಲಿ ಆಶ್ರಯ ಪಡೆದಿರುವ ರೋಶನ್ ಸ್ಥಳಕ್ಕೆ ಭೇಟಿ ನೀಡಿರುವ “ಸುದ್ದಿ”ಯೊಂದಿಗೆ ಮಾತನಾಡುತ್ತಾ ತನ್ನ ಅಸಹಾಯಕತೆ ವ್ಯಕ್ತಪಡಿಸಿದ್ದು, ತನ್ನೊಂದಿಗೆ ಎಂಡೋಪೀಡಿತ ಕುಟುಂಬವೊಂದರ ಮನೆಯನ್ನೂ ಕೆಡವಲಾಗಿದೆ ಎಂದೂ ಆಪಾದಿಸಿದ್ದಾರೆ.

ಪೊಲೀಸ್, ಕಂದಾಯ ಇಲಾಖೆಯವರೂ ಸಹಾಯಕ್ಕೆ ಬರಲಿಲ್ಲ!!
ಜೆಸಿಬಿ. ಮೂಲಕ ಮನೆ ಕೆಡವುತ್ತಿದ್ದಾಗ ಸಹಾಯ ಬಯಸಿ ಪೊಲೀಸ್ ಇಲಾಖೆಯನ್ನು ಹಾಗೂ ಕಂದಾಯ ಇಲಾಖಾಧಿಕಾರಿಗಳನ್ನು ಸಂಪರ್ಕಿಸಿದ್ದೆನು, ಆದರೆ ಅವರಿಂದ ಸ್ಪಂದನ ದೊರೆಯಲಿಲ್ಲ. ಈ ಮಧ್ಯೆ ರಾಜ್ಯ ವಿಕಲ ಚೇತನರ ರಕ್ಷಣಾ ಸಮಿತಿಯ ಮಧ್ಯ ಪ್ರವೇಶದ ಬಳಿಕ ಪೊಲೀಸ್ ಇಲಾಖೆಯ ಡಿವೈಎಸ್ಪಿ, ಕಡಬ ವಿಶೇಷ ತಹಸೀಲ್ದಾರ್, ಪೊಲೀಸ್ ವೃತ್ತ ನಿರೀಕ್ಷಕರು ಮತ್ತಿತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ರೋಶನ್ ತಿಳಿಸಿದ್ದಾರೆ.

ಅಕ್ರಮವಾಗಿ ನೆಲಸಮ ಮಾಡಿದ್ದು ಅಪರಾಧ-ಚಂದ್ರಶೇಖರ ಪುಟ್ಟಪ್ಪ
ಅದೆಷ್ಟೋ ವರ್ಷಗಳಿಂದ ಸ್ವಾಧೀನ ಇರುವ ಮತ್ತು ಅಂಗವೈಕಲ್ಯತೆ ಇರುವ ವ್ಯಕ್ತಿ ವಾಸವಾಗಿರುವಾಗ ಅಮಾನವೀಯವಾಗಿ ವರ್ತಿಸಿ ಮನೆಯನ್ನು ಕೆಡವಿ ನೆಲಸಮ ಮಾಡಿರುವುದು ಅಪರಾಧವಾಗುತ್ತದೆ. ಪ್ರಕರಣದಲ್ಲಿನ ಸತ್ಯಾಂಶ ತಿಳಿಯುವ ತನಕವಾದರೂ ಮನೆ ಕಡೆವುವ ಕೃತ್ಯವನ್ನು ಪೊಲೀಸರು ತಡೆಗಟ್ಟಬೇಕಾಗಿತ್ತು. ಇದರ ಬಗ್ಗೆ ಸಮಗ್ರ ತನಿಖೆ ಆಗಬೇಕು, ಆ ಕುಟುಂಬಕ್ಕೆ ನ್ಯಾಯ ದೊರಕುವಂತಾಗಬೇಕು. ಚಂದ್ರಶೇಖರ ಪುಟ್ಟಪ್ಪಕಾರ್ಯಾಧ್ಯಕ್ಷ, ಕರ್ನಾಟಕ ರಾಜ್ಯ ವಿಕಲ ಚೇತನ ರಕ್ಷಣಾ ಸಮಿತಿ ಬೆಂಗಳೂರು.

ಕಾನೂನು ಉಲ್ಲಂಘನೆಯಾಗದ ರೀತಿಯಲ್ಲಿ ಕ್ರಮಕೈಗೊಳ್ಳಲಾಗುವುದು-ಜಿಲ್ಲಾಧಿಕಾರಿ
ಘಟನಾ ಸ್ಥಳಕ್ಕೆ ಉಪ ವಿಭಾಗಾಧಿಕಾರಿ ಮತ್ತು ಡಿ.ವೈ.ಎಸ್ಪಿ. ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದಾರೆ. ಅವರು ನೀಡಿರುವ ವರದಿ ಪ್ರಕಾರ ಅಲ್ಲಿ ಒಂದು ಹಳೆಯ ಮನೆ ಇತ್ತು ಮತ್ತು ಅದರಲ್ಲಿ ಯಾರೂ ವಾಸ್ತವ್ಯ ಇರಲಿಲ್ಲ. ಅಂಗವೈಕಲ್ಯತೆ ಇದ್ದವರು ಇದ್ದರು ಎಂದು ಹೇಳಿಕೊಳ್ಳುತ್ತಿದ್ದಾರೆ. ಹಾಗೇನಾದರೂ ಅವರು ಇದ್ದಿದ್ದರೆ ಅವರೀಗ ಅವರದೇ ಇನ್ನೊಂದು ಮನೆಯಲ್ಲಿ ಇದ್ದಾರೆ ಹೊರತು ಈ ಘಟನೆಯಿಂದಾಗಿ ಯಾರೂ ಬೀದಿಗೆ ಬೀದಿಗೆ ಬಿದ್ದಿಲ್ಲ. ಮನೆ ಕೆಡವಿದವರು ಮತ್ತು ದೂರು ನೀಡಿದವರ ಮಧ್ಯೆ ಭೂಮಿ ವ್ಯಾಜ್ಯ ಇದ್ದು, ಅದನ್ನು ಕಾನೂನು ಉಲ್ಲಂಘನೆ ಆಗದ ರೀತಿಯಲ್ಲಿ ಕ್ರಮಕೈಗೊಳ್ಳಲಾಗುವುದು.ಡಾ. ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ ಮಂಗಳೂರು.

LEAVE A REPLY

Please enter your comment!
Please enter your name here