ಅಂಬಿಕಾ ಪದವಿ ಕಾಲೇಜಿನಲ್ಲಿ ತತ್ತ್ವಜ್ಞಾನಿಗಳ ದಿನಾಚರಣೆ ಕಾರ್ಯಕ್ರಮ

0

  • ಶಂಕರಾಚಾರ್ಯರರ ಬಗೆಗಿನ ಅನುಸಂಧಾನ ಅಗತ್ಯ : ಡಾ.ವಿನಾಯಕ ಭಟ್ಟ ಗಾಳಿಮನೆ

ಪುತ್ತೂರು: ದೇವ ಜೀವರ ಭಾವೈಕ್ಯವನ್ನು ಜಗತ್ತಿಗೆ ತೋರಿಕೊಟ್ಟವರು ಶಂಕರಾಚಾರ್ಯರು. ವಿವಿಧ ಆಚರಣೆಗಳ ಮೂಲಕ ವೈರುಧ್ಯಗಳಲ್ಲಿ ಬದುಕುತ್ತಿದ್ದ ಜನರಿಗೆ ಪಂಚಾಯತನ ಪೂಜೆಯ ಕಲ್ಪನೆಯನ್ನು ನೀಡಿ ಇಡಿಯ ಹಿಂದೂ ಸಮಾಜವನ್ನು ಒಗ್ಗೂಡಿಸಿದವರು. ಅವರನ್ನು ಅರಿಯುವುದೇ ನಮ್ಮ ಬದುಕಿಗೆ ಹೊಸ ದಾರಿದೀಪವಾಗುತ್ತದೆ. ರಾಷ್ಟ್ರ, ಭಕ್ತಿ ಹಾಗೂ ತತ್ತ್ವಜ್ಞಾನದ ನೆಲೆಯಲ್ಲಿ ಭಗವಾನ್ ಶಂಕರರ ಅನುಸಂಧಾನ ನಡೆಯಬೇಕು ಎಂದು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ ಹೇಳಿದರು.

ಅವರು ಕಾಲೇಜಿನ ತತ್ತ್ವಶಾಸ್ತ್ರ ವಿಭಾಗದ ಆಶ್ರಯದಲ್ಲಿ ಗುರುವಾರ ಆಯೋಜಿಸಲಾದ ‘ಶಂಕರಾಚಾರ್ಯರ ಜನ್ಮಜಯಂತಿ – ತತ್ತ್ವಜ್ಞಾನಿಗಳ ದಿನ’ ಆಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ನಮ್ಮ ಸಂಸ್ಕೃತಿ ಸಂಸ್ಕಾರ ಆಚರಣೆಗಳಿಗೆ ಹಾನಿಯಾಗಿದ್ದ ಕಾಲದಲ್ಲಿ ಶಂಕರಾಚಾರ್ಯರು ಅವತಾರಪುರುಷರಾಗಿ ಕಾಣಿಸಿಕೊಂಡು ಹಿಂದೂ ಸಮಾಜದ ಉಳಿವು ಹಾಗೂ ಬೆಳವಣಿಗೆ ಕಾರಣೀಭೂತರೆನಿಸಿಕೊಂಡರು. ಆರಾಧನೆಯಿಂದಲೇ ಜೀವನದ ಸಮಾರಾಧನೆ ಎಂಬ ಭಾವನೆಯನ್ನು ಜನಮಾನಸದಲ್ಲಿ ಬೇರೂರುವಂತೆ ಮಾಡಿದರು. ತತ್ತ್ವಜ್ಞಾನ ಎಂಬುದು ವಿಜ್ಞಾನದ ಆತ್ಯಂತಿಕವಾದ ಲಕ್ಷ್ಯವೇ ಆಗಿದೆ ಎಂದು ನಾವು ಇಂದೂ ಒಪ್ಪುವಂತೆ ತೋರಿಸಿಕೊಟ್ಟರು. ಎಲ್ಲೆಡೆಯೂ ದ್ವೈತ ಭಾವವೇ ತುಂಬಿದ್ದಾಗ ಅದ್ವೈತದ ಸಾರವನ್ನು ಉಣಬಡಿಸಿದರು ಎಂದು ಹೇಳಿದರು.

ಪ್ರಸ್ತಾವನೆಗೈದ ತತ್ತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ವಿ.ತೇಜಶಂಕರ ಸೋಮಯಾಜಿ ಮಾತನಾಡಿ ಪ್ರಪಂಚದ ನಾನಾ ದೇಶಗಳ ಮೇಲೆ ವಿದೇಶೀ ದಾಳಿಗಳಾದ ನಂತರ ದೇಸೀಯವಾದ ಸಂಸ್ಕೃತಿ ಅಳಿದುಹೋದ ಉದಾಹರಣೆಗಳನ್ನು ಕಾಣುತ್ತೇವೆ. ಆದರೆ ಭಾರತದಲ್ಲಿ ಮಾತ್ರ ಅನೇಕಾನೇಕ ದಾಳಿಗಳ ನಂತರವೂ ಮೂಲ ಸಂಸ್ಕೃತಿ ಹಾಗೆಯೇ ಬೇರೂರಿ ನಿಂತಿದೆ. ಶಂಕರಾಚಾರ್ಯರು ಹಾಕಿಕೊಟ್ಟ ಭದ್ರ ಬುನಾದಿ ಸಂಸ್ಕೃತಿಯ ಉಳಿವಿನಲ್ಲಿ ಆಧಾರಸ್ಥಂಭವೆನಿಸಿದೆ ಎಂದು ನುಡಿದರು.

ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಮಾತನಾಡಿ ಶಂಕರಾಚಾರ್ಯರ ಬದುಕು ಹಾಗೂ ಸಂದೇಶಗಳು ಇಂದಿನ ದಿನಮಾನಗಳಲ್ಲೂ ಅತ್ಯಂತ ಪ್ರಸ್ತುತವಾಗಿಯೇ ಉಳಿದುಕೊಂಡಿವೆ. ಅವರು ನೀಡಿದ ಸೌಂದರ್ಯ ಲಹರಿ, ಲಲಿತಾ ಪಂಚಕದಂತಹ ಅನೇಕ ಕೃತಿಗಳನ್ನು ನಿರಂತರವಾಗಿ ಪಠಣ ಮಾಡುವ ಮೂಲಕ ಬದುಕಿನ ಸಾರ್ಥಕ್ಯ ಹೊಂದುತ್ತಿರುವಂತಹ ಅಸಂಖ್ಯ ಮಂದಿ ನಮ್ಮ ನಡುವಿದ್ದಾರೆ. ಕತ್ತಲೆಯನ್ನು ಹೋಗಲಾಡಿಸಲು ಬೆಳಕು ಬೇಕಾದಂತೆ ಅಜ್ಞಾನವನ್ನು ಹೋಗಲಾಡಿಸಲು ಜ್ಞಾನ ಬೇಕು. ಅಂತಹ ಜ್ಞಾನರಾಶಿಯನ್ನು ನಮಗಿತ್ತವರು ಶಂಕರಾಚಾರ್ಯರು ಎಂದು ಅಭಿಪ್ರಾಯಪಟ್ಟರು.

ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ, ಕಾಲೇಜಿನ ಐಕ್ಯುಎಸಿ ಘಟಕದ ಸಂಯೋಜಕ ಚಂದ್ರಕಾಂತ ಗೋರೆ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪಂಚಮಿ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಪ್ರಿಯಾ ಸ್ವಾಗತಿಸಿ, ದೀಕ್ಷಾ ವಂದಿಸಿದರು. ವಿದ್ಯಾರ್ಥಿನಿ ವರೇಣ್ಯ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here