ನೇತ, ನೀತಿ, ನಿಯತ್ ಇರುವ ಏಕೈಕ ಪಕ್ಷ ಬಿಜೆಪಿ-ಬಿಜೆಪಿ ಹಿಂದುಳಿದ ಮೋರ್ಚಾಗಳ ವಿಶೇಷ ಸಭೆಯಲ್ಲಿ ಶಾಸಕ ಸಂಜೀವ ಮಠಂದೂರು

0

ಪುತ್ತೂರು: ಪಕ್ಷಕ್ಕೆ ನೇತ, ನೀತಿ, ನಿಯತ್ ಇರಬೇಕು. ಈ ಮೂರನ್ನು ಹೊಂದಿರುವ ಏಕೈಕ ಪಕ್ಷ ಬಿಜೆಪಿ. ಇಲ್ಲಿ ನಾಯಕ, ನೀತಿ, ಬದ್ದತೆ ಇರುವುದರಿಂದ ಕಾರ್ಯಕರ್ತ ತನಗೆ ಕೊಟ್ಟ ಜವಾಬ್ದಾರಿಯನ್ನು ತನಗಿಂದ ಹೆಚ್ಚಿನ ರೀತಿಯಲ್ಲಿ ಕೆಲಸ ಮಾಡುತ್ತಾನೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.


ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಮೇ.13ರಂದು ನಡೆದ ಪುತ್ತೂರು ಗ್ರಾಮಾಂತರ ಮತ್ತು ನಗರ ಮಂಡಲದ ಬಿಜೆಪಿ ಹಿಂದುಳಿದ ವರ್ಗಗಳ ವಿಶೇಷ ಅಪೇಕ್ಷಿತರ ಸಭೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿರುವ ಹಿಂದುಳಿದ ವರ್ಗದಲ್ಲಿರುವ ಎಲ್ಲಾ ಜನರು ರಾಷ್ಟ್ರದ ನಾಯಕತ್ವದ ಮುಖ್ಯವಾಹಿನಿಗೆ ಬರಬೇಕೆಂಬ ನಿಟ್ಟಿನಲ್ಲಿ ಸರ್ವೋಚ್ಚ ನ್ಯಾಯಾಲಯ ಕೊಟ್ಟ ತೀರ್ಪಿನಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಂದಷ್ಟು ಚರ್ಚೆ ಮಾಡಿ ಹಿಂದುಳಿದ ವರ್ಗದ ಸಮುದಾಯಕ್ಕೆ ಚುನಾವಣೆಯಲ್ಲಿ ಯಾವ ರೀತಿಯ ನ್ಯಾಯ ಕೊಡಬೇಕೆಂಬ ತೀರ್ಮಾನ ಮಾಡುವ ಸಂಗತಿ ಮುಂದಿನ ದಿನಗಳಲ್ಲಿ ಆಗಲಿದೆ. ಈ ನಿಟ್ಟಿನಲ್ಲಿ ಪಕ್ಷ ಪ್ರತಿಯೊಬ್ಬರ ಮನಸ್ಸನ್ನು ತಲುಪಿದಾಗ ಎಲ್ಲರಿಗೂ ನ್ಯಾಯ ಕೊಡಬೇಕು. ದೇಶದಲ್ಲಿ ಅಧಿಕಾರ ಕೊಡಬೇಕು. ಹಿಂದುಳಿದ ಜನರು ಕೂಡಾ ದೇಶದ ಚುಕ್ಕಾಣಿ ಹಿಡಿಯಬೇಕು. ಅದಕ್ಕಾಗಿ ಬೂತ್ ಮಟ್ಟದಿಂದ ರಾಷ್ಟ್ರಮಟ್ಟದ ತನಕ ಎಲ್ಲಾ ಸಮುದಾಯವನ್ನು ಮನಸ್ಸಿನಲ್ಲಿ ಬಿಜೆಪಿ ವಿವಿಧ ಮೋರ್ಚಾ, ಪ್ರಕೋಷ್ಠದ ಮೂಲಕ ಕೋಟ್ಯಾಂತರ ಕಾರ್ಯಕರ್ತರಿಗೆ ನಾಯಕತ್ವ ಕೊಡುತ್ತಿದೆ. ನಾಯಕತ್ವ ಕೊಡಲು ಪಕ್ಷಕ್ಕೆ ನೇತ, ನೀತಿ, ನಿಯತ್ ಇರಬೇಕು. ಇದನ್ನು ಹೊಂದಿರುವ ಏಕೈಕ ಪಕ್ಷ ಬಿಜೆಪಿ ಎಂದ ಅವರು ಕಾರ್ಯಕರ್ತ ತನಗೆ ಕೊಟ್ಟ ಜವಾಬ್ದಾರಿಯನ್ನು ತನಗಿಂದ ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ಮಾಡಿದ್ದರಿಂದ ಪಕ್ಷ ಬಹಳ ಎತ್ತರಕ್ಕೆ ತಲುಪಿದೆ. ಅರ್ಹತೆ ಮತ್ತು ಬದ್ಧತೆ ನೋಡಿ ಪಕ್ಷ ಜವಾಬ್ದಾರಿ ಕೊಟ್ಟಿದೆ. ಈ ನಡುವೆ ದೇಶದ ಸಂಸ್ಕೃತಿಯನ್ನು ಗೌರವಿಸಬೇಕು. ಸಮಾಜದಲ್ಲಿ ಇತಿಹಾಸ ನಿರ್ಮಾಣ ಮಾಡಿದವರ ಹೆಸರನ್ನು ಶಾಶ್ವತ ಉಳಿಸಲು ಕೆಲಸ ಮಾಡುವ ಮೂಲಕ ಹಿಂದುಳಿದ ವರ್ಗಗಳಿಗೆ ನ್ಯಾಯ ಕೊಡುವ ಕೆಲಸ ಆಗಿದೆ ಎಂದರು.

ಭ್ರಷ್ಟಾಚಾರ ರಹಿತ ಸರಕಾರ:
ಬಿಜೆಪಿ ಹಿಂದುಳಿದ ಮೋರ್ಚಾಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಡಬ್ಬಿ ಅವರು ಮಾತನಾಡಿ ಬಿಜೆಪಿ ಸರಕಾರ ಬಂದ ಬಳಿಕ ದೇಶದಲ್ಲಿ ತಳಮಟ್ಟದ ಜನರಿಗೂ ಬ್ಯಾಂಕಿಂಗ್ ಸೌಲಭ್ಯ ನೀಡಿದೆ. ಜನ್‌ದನ್ ಮೂಲಕ ಉಚಿತ ಬ್ಯಾಂಕ್ ಖಾತೆ ಮಾಡಿಸಿ ಸರಕಾರದ ಸೌಲಭ್ಯವನ್ನು ನೇರ ಫಲಾನುಭವಿಗಳ ಖಾತೆಗೆ ಕೊಡುವ ಮೂಲಕ ಭ್ರಷ್ಟಾಚಾರ ರಹಿತವಾದ ಆಡಳಿತ ನೀಡಲಾಯಿತು. ತಳಮಟ್ಟದ ಜನರಿಗೆ ಸರಕಾರದ ಸೌಲಭ್ಯದ ಮಾಹಿತಿ ನೀಡುವ ಕೆಲಸವನ್ನು ಬಿಜೆಪಿ ಹಿಂದುಳಿದ ಮೋರ್ಚಾದ ಕಾರ್ಯಕರ್ತರು ಯಶಸ್ವಿಯಾಗಿ ಮಾಡಿದ್ದಾರೆ ಎಂದರು.

ಪುತ್ತೂರಿನಲ್ಲಿ ಯಶಸ್ವಿ ಸಮಾವೇಶ ಮಾಡೋಣ:
ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಅವರು ಮಾತನಾಡಿ ಹಿಂದುಳಿದ ವರ್ಗಕ್ಕೆ ಸಂಬಂಧಪಟ್ಟ ಸಣ್ಣ ಸಣ್ಣ ಸಮಾಜನ್ನು ಸೇರಿಸಿಕೊಂಡು ಮಹಾಶಕ್ತಿ ಕೇಂದ್ರದ ತನಕ ಸಂಘಟನೆಯನ್ನು ಗಟ್ಟಿ ಮಾಡಿ ಪ್ರತಿ ಬೂತ್‌ನಲ್ಲೂ ಹಿಂದುಳಿದ ವರ್ಗಗಳ ತಂಡ ಪರಿಣಾಮಕಾರಿ ಕೆಲಸ ಆಗಿದೆ. ಮುಂದೆ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಮೋರ್ಚಾದ ಸಮಾವೇಶ ನಡೆಯುವುದಿದ್ದರೆ ಅದು ಪುತ್ತೂರಿನಲ್ಲಿ ನಡೆಯಲಿದೆ. ಈ ನಿಟ್ಟಿನಲ್ಲಿ ಸಮಾವೇಶವನ್ನು ನಾವು ಯಶಸ್ವಿ ಮಾಡೋಣ ಎಂದರು.

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ ಆರ್.ಸಿ.ನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಒಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ವಿಠಲ ಪೂಜಾರಿ, ನಗರ ಅಧ್ಯಕ್ಷ ಶಿವರಾಮ ಸಪಲ್ಯ, ರಾಜ್ಯ ಕಾರ್ಯಕಾರಿಣಿ ಸದಸ್ಯ ಜಾವಗಲ್ ಕೃಷ್ಣ ಮೂರ್ತಿ, ಸಾಮಾಜಿಕ ಜಾಲತಾಣದ ರಾಜ್ಯ ಪ್ರಮುಖ್ ರಾಮಚಂದ್ರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋನಪ್ಪ ದೇವಸ್ಯ, ಬಿಜೆಪಿ ಮಂಡಲದ ಜಲ್ಲಾ ಕಾರ್ಯದರ್ಶಿ ಜಯಂತಿ ನಾಯಕ್ ಉಪಸ್ಥಿತರಿದ್ದರು. ಒಬಿಸಿ ಮೋರ್ಚಾ ನಗರ ಮಂಡಲದ ಜೋತಿ ಆರ್ ನಾಯಕ್ ಪ್ರಾರ್ಥಿಸಿದರು. ಹಿಂದುಳಿದ ಮೋರ್ಚಾದ ಗ್ರಾಮಾಂತರ ಮಂಡಲದ ಅಧ್ಯಕ್ಷ ಸುನಿಲ್ ದಡ್ಡು ಸ್ವಾಗತಿಸಿದರು. ಪ್ರವೀಣ್ ಪ್ರಭು ವಂದಿಸಿದರು. ಸದಾನಂದ ಮಣಿಯಾಣಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here