ಭ್ರಷ್ಟಾಚಾರದ ಬಗ್ಗೆ ಜಾಗೃತರಾಗದಿದ್ದರೆ ಶ್ರೀಲಂಕಾದ ಪರಿಸ್ಥಿತಿ-ಕಸಾಪ ಕಚೇರಿಯಲ್ಲಿ ಲಂಚ, ಭ್ರಷ್ಟಾಚಾರ ವಿರುದ್ಧದ ಬ್ಯಾನರ್ ಅನಾವರಣಗೊಳಿಸಿ ಎಸಿಬಿ ಎಸ್ಪಿ

0

  •  ಸುದ್ದಿ ಆಂದೋಲನ ಜನರ ಜೀವನಕ್ಕೆ ಬಹಳ ಹತ್ತಿರವಾದ ವಿಷಯ
  •  ಉತ್ತಮ ಕೆಲಸಕ್ಕೆ ಪುರಸ್ಕಾರ ಸಿ.ಎ. ಸೈಮನ್ ಶ್ಲಾಘನೆ
  •  ತಾಲೂಕಿನ ಕಸಾಪ ಕಾರ್ಯಕ್ರಮದಲ್ಲಿ ಲಂಚ ಭ್ರಷ್ಟಾಚಾರ ವಿರುದ್ಧ ಜಾಗೃತಿ

ಕಸಾಪ ಕಚೇರಿಯಲ್ಲಿ ಲಂಚ ಭ್ರಷ್ಟಾಚಾರ ವಿರುದ್ಧದ ಬ್ಯಾನರ್ ಅನಾವರಣಗೊಳಿಸಲಾಯಿತು.

ಪುತ್ತೂರು: ಜನರು ಭ್ರಷ್ಟಾಚಾರದ ಬಗ್ಗೆ ಜಾಗೃತರಾಗದೇ ಹೋದರೆ, ಶ್ರೀಲಂಕಾಕ್ಕೆ ಎದುರಾದ ಪರಿಸ್ಥಿತಿ ನಮ್ಮಲ್ಲೂ ಉದ್ಭವವಾಗಬಹುದು. ಆದ್ದರಿಂದ ಜನರನ್ನು ಜಾಗೃತಿ ಮೂಡಿಸಿ, ಭ್ರಷ್ಟಾಚಾರ ನಿರ್ಮೂಲನೆಗೆ ಮುಂದಾದ ಸುದ್ದಿಯ ಪರಿಕಲ್ಪನೆ ವಿಶಿಷ್ಠವಾಗಿದೆ ಎಂದು ಭ್ರಷ್ಟಾಚಾರ ನಿಗ್ರಹ ದಳದ ಪಶ್ಚಿಮ ವಲಯದ ಪೊಲೀಸ್ ವರಿಷ್ಠಾಧಿಕಾರಿ ಸಿ.ಎ. ಸೈಮನ್ ಅಭಿಪ್ರಾಯಪಟ್ಟರು.

 

ದರ್ಬೆಯ ಶ್ರೀರಾಮ ಸೌಧದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್‌ನ ಪುತ್ತೂರು ಘಟಕದ ಕಚೇರಿಯಲ್ಲಿ ಏ. ೧೩ರಂದು ಲಂಚ – ಭ್ರಷ್ಟಾಚಾರ ವಿರುದ್ಧದ ಫಲಕವನ್ನು ಅನಾವರಣ ಮಾಡಿ ಅವರು ಮಾತನಾಡಿದರು. ವರದಿ ಮಾಡುವುದಷ್ಟೇ ಮಾಧ್ಯಮಗಳ ಜವಾಬ್ದಾರಿಯಲ್ಲ. ಜನರನ್ನು ಜಾಗೃತಗೊಳಿಸುವುದು, ಜನರನ್ನು ಎಚ್ಚರಗೊಳಿಸುವುದೂ ಮಾಧ್ಯಮಗಳ ಜವಾಬ್ದಾರಿ. ಜನರನ್ನು ಯಾವ ದಿಶೆಯಲ್ಲಿ ಮುನ್ನಡೆಸಿದರೆ ಉತ್ತಮ ಎನ್ನುವ ಕಾಯಕದಲ್ಲಿ ಸುದ್ದಿ ತೊಡಗಿಸಿಕೊಂಡಿದ್ದು, ಕಾನೂನಿನ ಚೌಕಟ್ಟಿನೊಳಗಡೆ ಈ ಅಭಿಯಾನಕ್ಕೆ ನೆರವಾಗುತ್ತೇವೆ. ಎಲ್ಲೆಲ್ಲಿ ಕಾನೂನು ಕ್ರಮ ಜರುಗಿಸಲು ಸಾಧ್ಯವೋ, ಅಲ್ಲಲ್ಲಿ ಖಂಡಿತಾ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದ ಅವರು, ಸುದ್ದಿ ಹಮ್ಮಿಕೊಂಡಿರುವ ಆಂದೋಲನ ಯಶಸ್ವಿಯಾಗಲಿ ಎಂದು ಹಾರೈಸಿದರು.

ಭ್ರಷ್ಟಾಚಾರಕ್ಕೆ ಬೇರೆ ಬೇರೆ ಮಜಲುಗಳಿರುತ್ತವೆ. ಹಣ ನೀಡುವುದಷ್ಟೇ ಭ್ರಷ್ಟಾಚಾರ ಅಲ್ಲ. ನಮಗೆ ಸಿಗಬೇಕಾದ ಸರ್ಕಾರಿ ಸೌಲಭ್ಯಗಳು ಸಿಗದೇ ಇರುವುದು ಕೂಡ ಭ್ರಷ್ಟಾಚಾರವೇ. ನಮ್ಮ ಸೌಲಭ್ಯಗಳನ್ನು ಪಡೆದುಕೊಳ್ಳಲು ನಾವು ಭಿಕ್ಷೆ ಬೇಡುವಂತೆ ಆಗಬಾರದು. ಇದನ್ನು ನೀಡುವುದಕ್ಕೆ ಸರ್ಕಾರ ಬಾಧ್ಯಸ್ಥ. ಇಂತಹ ಭ್ರಷ್ಟಾಚಾರವನ್ನು ತಡೆಗಟ್ಟಲು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ೩೧ ಸೆಕ್ಷನ್‌ಗಳಿವೆ. ಇದಕ್ಕೆ ಸಾಕಷ್ಟು ಬಲ ಇದೆ. ಆದರೂ ಕಾಯ್ದೆ ಯಶಸ್ವಿಯಾಗಬೇಕಾದರೆ ಜನಜಾಗೃತಿ ಅಗತ್ಯ. ಇದು ಸರ್ಕಾರಿ ನೌಕರರಿಗಷ್ಟೇ ಅಲ್ಲ, ಎಲ್ಲರಿಗೂ ಸಂಬಂಧಪಟ್ಟ ವಿಚಾರ. ಶ್ರೀಲಂಕಾದಲ್ಲಿ ವ್ಯವಸ್ಥೆಯ ಅಧಃಪತನಕ್ಕೆ ಭ್ರಷ್ಟಾಚಾರ ಮೂಲ ಕಾರಣ. ಜನರು ಜಾಗೃತರಾಗದೇ ಇದ್ದರೆ, ಇಂತಹ ವ್ಯವಸ್ಥೆಯೂ ನಮ್ಮ ಮುಂದೆ ಎದುರಾಗಬಹುದು. ಆದ್ದರಿಂದ ಸುದ್ದಿ ಹಮ್ಮಿಕೊಂಡಿರುವ ಲಂಚ – ಭ್ರಷ್ಟಾಚಾರ ವಿರುದ್ಧದ ಆಂದೋಲನ ಜನರ ಜೀವನಕ್ಕೆ ಬಹಳ ಹತ್ತಿರವಾದ ವಿಷಯ ಎಂದರು.

ಕಸಾಪ ಕೋಶಾಧಿಕಾರಿ ಡಾ| ಹರ್ಷಕುಮಾರ್ ರೈ ವಂದಿಸಿ, ಗಡಿನಾಡ ಧ್ವನಿಯ ಅಬೂಬಕ್ಕರ್ ಆರ್ಲಪದವು ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ದರ್ಬೆಯ ಶ್ರೀರಾಮ ಸೌಧದ ಹೊರಭಾಗದಲ್ಲಿ ಬ್ಯಾನರ್ ಅನ್ನು ಇಡಲಾಯಿತು.

ಮುಂಬೈಯಲ್ಲಿ ನಡೆದ ಘಟನೆ. ವೃದ್ಧರೊಬ್ಬರು ಮನೆ ಬಾಡಿಗೆ ನೀಡಲಿಲ್ಲ ಎಂದು ಯಜಮಾನ ಮನೆಯಿಂದ ಹೊರ ಹಾಕುತ್ತಾನೆ. ಇದನ್ನು ನೋಡಿದ ಪತ್ರಕರ್ತರೊಬ್ಬರು ಫೊಟೋ ತೆಗೆದು, ವರದಿ ಮಾಡಲು ಮುಂದಾಗುತ್ತಾರೆ. ಆಗಲೇ ತಿಳಿದದ್ದು – ಆ ವ್ಯಕ್ತಿ ಯಾರು ಎಂದು. ಅವರು ಭಾರತದ ಪ್ರಧಾನಿಯಾಗಿದ್ದ ಗುಲ್ಜರಿಲಾಲ್ ನಂದ. ನಮ್ಮಲ್ಲಿ ಉತ್ತಮ ಅಧಿಕಾರಿ, ಜನಪ್ರತಿನಿಧಿಗಳು ಇದ್ದಾರೆ ಎನ್ನುವುದಕ್ಕೆ ಇದು ಉದಾಹರಣೆ. ಇಂತಹ ಅಧಿಕಾರಿಗಳನ್ನು ಗುರುತಿಸುವ `ಉತ್ತಮ ಕೆಲಸಕ್ಕೆ ಪುರಸ್ಕಾರ’ ಯೋಚನೆ ಉತ್ತಮವಾಗಿದೆ. ಸಿ.ಎ. ಸೈಮನ್, ಪೊಲೀಸ್ ವರಿಷ್ಠಾಧಿಕಾರಿ, ಭ್ರಷ್ಟಾಚಾರ ನಿಗ್ರಹ ದಳ ಪಶ್ಚಿಮ ವಲಯ

ಆಡಳಿತವೂ ನಮ್ಮದೇ ಜವಾಬ್ದಾರಿ: ಅರ್ತಿಕಜೆ

 

ಹಿರಿಯ ಸಾಹಿತಿ ಪ್ರೊ. ವಿ.ಬಿ. ಅರ್ತಿಕಜೆ ಮಾತನಾಡಿ, ಮತ ನೀಡುವುದಷ್ಟೇ ನಮ್ಮ ಜವಾಬ್ದಾರಿಯಲ್ಲ. ಇಲ್ಲಿನ ಆಡಳಿತವನ್ನು ಸುಸ್ಥಿತಿಯಲ್ಲಿ ನಡೆಸುವುದೂ ಕೂಡ ನಮ್ಮ ಜವಾಬ್ದಾರಿ. ಆದ್ದರಿಂದ ಲಂಚ ಅಥವಾ ಭ್ರಷ್ಟಾಚಾರವನ್ನು ತಡೆಯುವುದೂ ಕೂಡ ನಮ್ಮದೇ ಜವಾಬ್ದಾರಿ. ಇದಕ್ಕಿರುವ ಮಾರ್ಗವೆಂದರೆ, ಲಂಚ ನೀಡದೇ ಇರುವುದು. ಲಂಚಕ್ಕೆ ಕೈ ಮುಂದೆ ಚಾಚಿದರೂ, ಲಂಚ ನೀಡಬೇಡಿ. ಯಾರು ಕಳ್ಳ ಕೆಲಸ ಮಾಡುತ್ತಾರೋ, ಅವರು ಮಾತ್ರ ಲಂಚ ನೀಡುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಬೇಕು. ನಮ್ಮೂರಿನಲ್ಲಿ ಲಂಚ ನಿಂತಾಗ, ಪಕ್ಕದ ಊರಿನಲ್ಲೂ ಇಂತಹ ಆಂದೋಲನ ಯಶಸ್ವಿಯಾಗುತ್ತದೆ. ಇದು ವ್ಯಾಪಿಸಿ, ದೇಶಾದ್ಯಂತ ಭ್ರಷ್ಟಾಚಾರ ನಿರ್ಮೂಲನೆ ಆಗುವಂತಾಗಲಿ ಎಂದು ಹಾರೈಸಿದರು.

ಜನರ ಆಂದೋಲನ: ಡಾ.ಯು.ಪಿ.ಶಿವಾನಂದ್

 


ಆಂದೋಲನದ ಬಗ್ಗೆ ಮಾತನಾಡಿದ ಸುದ್ದಿ ಜನಾಂದೋಲನದ ರೂವಾರಿ ಡಾ. ಯು.ಪಿ. ಶಿವಾನಂದ್, ಇದು ಸುದ್ದಿಯ ಆಂದೋಲನವಲ್ಲ. ಜನರ ಆಂದೋಲನ. ಯಾರೆಲ್ಲಾ ಫಲಕ, ಬ್ಯಾನರ್ ಅಳವಡಿಸುತ್ತಾರೋ ಅವರ ಆಂದೋಲನ. ಬಹಳ ವರ್ಷಗಳ ಹಿಂದೆ ಭ್ರಷ್ಟಾಚಾರಿಗಳನ್ನು ಗುರುತಿಸುವ ಕೆಲಸ ಮಾಡಿದ್ದೆವು. ಆದರೆ ಇಂದು ಉತ್ತಮ ಅಧಿಕಾರಿಗಳನ್ನು ಗುರುತಿಸುವ ಕೆಲಸ ಮಾಡುತ್ತಿzವೆ. ಲಂಚ ತೆಗೆದುಕೊಳ್ಳದೇ ಇರುವ ಅಧಿಕಾರಿಗಳನ್ನು ಪಟ್ಟಿ ಮಾಡಿzವೆ. ಅವರನ್ನು ಗುರುತಿಸುವ ಕೆಲಸ ಮಾಡುತ್ತೇವೆ. ಸಾಮ, ದಾನ, ಬೇಧದ ಮಾರ್ಗವನ್ನು ಅನುಸರಿಸುತ್ತಿzವೆ. ಇದು ಆಗದೇ ಇದ್ದಾಗ ಕಾನೂನು, ಶಿಕ್ಷೆಯ ದಾರಿ ಬೇಕಾಗುತ್ತದೆ. ಇಂತಹ ದಂಡದ ಮಾರ್ಗವನ್ನು ಎಸಿಬಿ ಅಧಿಕಾರಿಗಳು ಕೈಗೊಳ್ಳುತ್ತಾರೆ. ಇದೀಗ ಜನರು ಭ್ರಷ್ಟಾಚಾರಿಗಳನ್ನು ಬಹಿಷ್ಕರಿಸುವ ಶಿಕ್ಷೆಯನ್ನು ನೀಡಲಿದ್ದಾರೆ ಎಂದರು.

ಸಾಹಿತ್ಯ ಜೀವನದ ಭಾಗ. ಜನಜೀವನಕ್ಕೆ ಅಗತ್ಯವಿರುವ ನಿರ್ಣಯಗಳನ್ನು ತೆಗೆದುಕೊಳ್ಳುವ ಜವಾಬ್ದಾರಿ ಸಾಹಿತ್ಯ ಪರಿಷತ್‌ಗೆ ಇದೆ. ಈ ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಪುತ್ತೂರು ಘಟಕ ಇಂದು ಉತ್ತಮ ಕೆಲಸವನ್ನು ಹಮ್ಮಿಕೊಂಡಿದೆ. ಇದೀಗ ಎಸಿಬಿ ಕೂಡ ಈ ಜನಜಾಗೃತಿಗೆ ಕೈಜೋಡಿಸಿದ್ದು, ಹೆಚ್ಚಿನ ಬಲ ಬಂದಿದೆ. ಗಾಂಧೀಜಿ ಅವರ ಆಶಯದಂತೆ ಸ್ವಾತಂತ್ರ್ಯ ಎಂದರೆ, ಜನರು ಸ್ವಾವಲಂಬಿಗಳಾಗಿ, ತಲೆ ಎತ್ತಿ ಬದುಕುವುದು. ಇದು ಸಾಕಾರವಾಗಲಿ ಎಂದರು.

ಕಸಾಪ ಕಾರ್ಯಕ್ರಮಗಳಲ್ಲಿ ಜನಜಾಗೃತಿ: ಉಮೇಶ್ ನಾಯಕ್

ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಮಾತನಾಡಿ, ಪ್ರೊ| ವಿ.ಬಿ. ಅರ್ತಿಕಜೆ ಅವರ ಮಾರ್ಗದರ್ಶನ ಪಡೆದುಕೊಂಡು, ಕಸಾಪ ಸದಸ್ಯರ ನಿರ್ಧಾರದಂತೆ ಭ್ರಷ್ಟಾಚಾರ ವಿರೋಧಿಸುವ ಬ್ಯಾನರ್ ಅಳವಡಿಸುವ ದಿಟ್ಟ ಕ್ರಮವನ್ನು ಕೈಗೊಂಡಿzವೆ. ಡಾ. ಯು.ಪಿ. ಶಿವಾನಂದ್ ಅವರು ದಿಟ್ಟತನದ ಆಂದೋಲನವನ್ನು ಹಮ್ಮಿಕೊಂಡಿದ್ದಾರೆ. ಸಾಮಾಜಿಕ ಕಳಕಳಿಯ ಈ ಅಭಿಯಾನ ಯಶಸ್ವಿಯಾಗಬೇಕು. ಪುತ್ತೂರು ಕಸಾಪದಡಿ ೩೨ ಗ್ರಾಮಗಳಿವೆ. ಮುಂದೆ ಈ ೩೨ ಗ್ರಾಮಗಳಲ್ಲಿ ಕಾರ್ಯಕ್ರಮ ಹಮ್ಮಿಕೊಂಡಾಗ, ಭ್ರಷ್ಟಾಚಾರ ವಿರೋಧಿಸುವ ಜನಜಾಗೃತಿಯನ್ನು ಕಸಾಪ ಹಮ್ಮಿಕೊಳ್ಳಲಿದೆ ಎಂದು ಘೋಷಿಸಿದರಲ್ಲದೆ, ಭ್ರಷ್ಟಾಚಾರ ಎಂದರೆ ದೇಶದ್ರೋಹ ಎಂಬ ಅರಿವು ಮೂಡಿಸಲಾಗುವುದು ಎಂದರು.

LEAVE A REPLY

Please enter your comment!
Please enter your name here