ಮೇ.16ರಿಂದ  ಪ್ರಾಥಮಿಕ, ಪ್ರೌಢಶಾಲೆಗಳು ಪ್ರಾರಂಭ-ಕೊಂಬೆಟ್ಟು ಶಾಲೆಯಲ್ಲಿ ತಾ|ಮಟ್ಟದ ಪ್ರಾರಂಭೋತ್ಸವ

0

ಪುತ್ತೂರು:ಕೊರೋನಾ ಮಹಾಮಾರಿಯಿಂದಾಗಿ ಎರಡು ವರ್ಷ ಶಾಲೆಗಳು ಪೂರ್ಣಪ್ರಮಾಣದಲ್ಲಿ ನಡೆಯದೇ, ಪರೀಕ್ಷೆಯೇ ಇಲ್ಲದೇ ಮಕ್ಕಳು ಉತ್ತೀರ್ಣರಾಗಿದ್ದಾರೆ.2021-22ನೇ ಸಾಲಿನಲ್ಲಿ ಶಾಲೆಗಳು ಕೊನೆಯ ಆರು ತಿಂಗಳು ಮಾತ್ರವೇ ಸರಿಯಾಗಿ ನಡೆದು, ಪರೀಕ್ಷೆಗಳು ನಡೆದಿತ್ತು.ಇದೀಗ ಮತ್ತೆ ನಾಲ್ಕನೇ ಅಲೆ ಬಂದೇ ಬಿಟ್ಟಿದ ಎಂಬ ಪ್ರಚಾರ ಮತ್ತು ಅನುಮಾನಗಳ ನಡುವೆ ಮೇ 16ಕ್ಕೆ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಪ್ರಾರಂಭಗೊಳ್ಳಲಿದ್ದು ರಜೆಯ ಮಜಾ ಅನುಭವಿಸಿದ್ದ ಮಕ್ಕಳು ಶಾಲೆಗಳಿಗೆ ತೆರಳಲು ಸಿದ್ಧರಾಗುತ್ತಿದ್ದಾರೆ.

ಪುತ್ತೂರಿನಲ್ಲಿ ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ ಪುತ್ತೂರು ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜು ವಿಭಾಗದ ಪ್ರೌಢಶಾಲೆಯಲ್ಲಿ ನಡೆಯಲಿದೆ.ಶಾಸಕ ಸಂಜೀವ ಮಠಂದೂರು ಅವರು ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಮತ್ತು ಸಾಧಕರನ್ನು ಸನ್ಮಾನಿಸುವ ಕಾರ್ಯಕ್ರಮ ನಡೆಯಲಿದೆ.

 

ಮೇ ೧೬ ರಂದು ಬೇಸಿಗೆ ರಜೆ ಕಳೆದು ೧ರಿಂದ ೯ ನೇ ತರಗತಿಯ ಮಕ್ಕಳು ಶಾಲೆಗೆ ಆಗಮಿಸಲಿದ್ದು ಅವರಲ್ಲಿ ಕಲಿಕೆಯ ಅಂತರವನ್ನು ಕಡಿಮೆ ಮಾಡಲು ಯೋಜಿಸಲಾಗಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಕಲಿಕೆಯ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ `ಕಲಿಕಾ ಚೇತರಿಕೆ’ ಅಥವಾ `ಕಲಿಕೆ ಪುನಶ್ಚೇತನ ಕಾರ್ಯಕ್ರಮ’ ಎಂಬ ಸಮಗ್ರ ಕಲಿಕೆಯ ಮಾದರಿಯನ್ನು ಶಿಕ್ಷಕರು ಅನುಸರಿಸಲಿದ್ದಾರೆ.ಸರ್ಕಾರಿ ಶಾಲೆಗಳ ಪುನರಾರಂಭದ ಮೊದಲು ಶಿಕ್ಷಕರು ಮಕ್ಕಳಿಗೆ `ಕಲಿಕೆ ಚೇತರಿಕೆ ಕಾರ್ಯಕ್ರಮ’ಕ್ಕಾಗಿ ತರಬೇತಿ ನೀಡಲಿದ್ದಾರೆ. ಶಿಕ್ಷಣ ಇಲಾಖೆಯ ತಜ್ಞರ ಪ್ರಕಾರ, ಪ್ರಸ್ತುತ ಶೈಕ್ಷಣಿಕ ವರ್ಷಕ್ಕೆ (2022-2023) ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲಿ ವಿವಿಧ ಶೈಕ್ಷಣಿಕ ನಿಯತಾಂಕಗಳಲ್ಲಿ ಉತ್ತಮ ಸಾಧನೆ ಮಾಡಲು ಈ ಕಾರ್ಯಕ್ರಮವನ್ನು ಜಾರಿಗೊಳಿಸುವ ನಿರೀಕ್ಷೆಯಿದೆ.೧೦ನೇ ತರಗತಿಯ ವಿದ್ಯಾರ್ಥಿಗಳಿಗೆ ಸೇತುಬಂಧ ಕಾರ್ಯಕ್ರಮ ನಡೆಯಲಿದೆ.ಇಲಾಖೆಯಿಂದ ಸರಬರಾಜಾಗಿರುವ ಪಠ್ಯ ಪುಸ್ತಕಗಳನ್ನು ಇಲ್ಲಿನ ಶಾಲೆಗೆ ತಲುಪಿಸುವ ಕೆಲಸ ಮಾಡಲಾಗಿದೆ.ಶೇ.೪೦ ಪೂರ್ಣಗೊಂಡಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅವರು ತಿಳಿಸಿದ್ದಾರೆ.

ಶಿಕ್ಷಕರಿಗೆ ತರಬೇತಿ: ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಶಿಕ್ಷಕರಿಗೆ ಕ್ಷೇತ್ರ ಸಂಪನ್ಮೂಲ ಕೇಂದ್ರಗಳಲ್ಲಿ ತರಬೇತಿಯನ್ನು ನೀಡಲಾಗಿದೆ.ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್ ಅವರು ಶಿಕ್ಷಕರಿಗೆ ವಿವಿಧ ಮಾಹಿತಿಯನ್ನು ಈಗಾಗಲೇ ನೀಡಿದ್ದಾರೆ. ಮೇ ೫ರಿಂದ ಮೇ ೧೩ರ ತನಕ ೫೪೦ ಶಿಕ್ಷಕರಿಗೆ ಕಲಿತಾ ಚೇತರಿಕೆ ತರಬೇತಿ ನೀಡಲಾಗಿದೆ. 1 ರಿಂದ 7ನೇ ತರಗತಿಯಲ್ಲಿ ಬೋಧಿಸುವ ಎಲ್ಲಾ ಶಿಕ್ಷಕರಿಗೆ ಜಿಲ್ಲಾ ಹಂತದಲ್ಲಿ ತರಬೇತಿ ಪಡೆದ ನುರಿತ ಸಂಪನ್ಮೂಲ ಶಿಕ್ಷಕರಿಂದ ತರಬೇತಿ ನೀಡಲಾಗಿದೆ. ಕೊರೋನಾ ಸಂದರ್ಭದಲ್ಲಿ ಕೊರತೆಯಾಗಿರುವ ಕಲಿಕಾ ಸಮನ್ವತೆಯನ್ನು ಸಂಪಾದಿಸಲು ಈ ತರಬೇತಿ ನೀಡಿದೆ.ಮೇ ೧೩ರಂದು ಬಿಇಒ ಅವರ ನೇತೃತ್ವದಲ್ಲಿ ತರಬೇತಿ ಕಾರ್ಯಕ್ರಮ ಪುತ್ತೂರು ಬಿ.ಆರ್‌ಸಿಯಲ್ಲಿ ನಡೆದಿದೆ.

ಪ್ರಾರಂಭೋತ್ಸವಕ್ಕೆ ಸಿದ್ದತೆ: ಪ್ರಾರಂಭೋತ್ಸವಕ್ಕಾಗಿ ಶಾಲಾ ಶಿಕ್ಷಕರು, ಪೋಷಕರು, ದಾನಿಗಳು, ಎಸ್‌ಡಿಎಂಸಿ ಸಮುದಾಯದ ಸಹಭಾಗಿತ್ವದೊಂದಿಗೆ ಶಾಲಾ ಆವರಣದ ಸ್ವಚ್ಛತೆ, ಶಾಲಾ ಕೊಠಡಿಯೊಳಗೆ ಶುಚಿತ್ವ, ಕುಡಿಯುವ ನೀರು, ಶೌಚಾಲಯ ಸ್ವಚ್ಚತೆ, ಅಡುಗೆ ಕೋಣೆ ಸಿದ್ದತೆ ಮಾಡಲಾಗಿದೆ.

ಪಠ್ಯಪುಸ್ತಕ ಬ್ಯಾಂಕ್: ಕಳೆದ ಶೈಕ್ಷಣಿಕ ವರ್ಷದಲ್ಲಿ 1 ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎಲ್ಲಾ ವಿದ್ಯಾರ್ಥಿಗಳಿಂದ ಪಠ್ಯಪುಸ್ತಕಗಳನ್ನು ಸಂಗ್ರಹಿಸಲಾಗಿದ್ದು, ಫಲಿತಾಂಶ ಘೋಷಣೆ ಆದ ದಿನದಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಿಸಲಾಗಿತ್ತು.ರಜೆ ಅವಧಿಯಲ್ಲಿ ಪಠ್ಯಪುಸ್ತಕಗಳನ್ನು ಓದಿಕೊಂಡು ಬರಲು ಸೂಚನೆ ನೀಡಲಾಗಿದೆ.

ಪ್ರಾರಂಭದ ದಿನದಿಂದಲೇ ಮಳೆಬಿಲ್ಲು,ಆಟದ ಹಬ್ಬ
ಕರ್ನಾಟಕ ಸರಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ ರಾಜ್ಯ ಕಚೇರಿಯಿಂದ ಸಮಗ್ರ ಆಯುಕ್ತರ ಕಚೇರಿ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ ಬೆಂಗಳೂರು ರಾಜ್ಯ ಶಿಕ್ಷಕರ ಮತ್ತು ತರಬೇತಿ ಸಂಸ್ಥೆ ನಿರ್ದೇಶನಾಲಯ ಬೆಂಗಳೂರು ಇದರ ವತಿಯಿಂದ ಪ್ರಸ್ತುತ ಎಲ್ಲಾ ಸಾಹಿತ್ಯಗಳು ಶಿಕ್ಷಕರಿಗೆ ದೊರೆತ್ತಿದ್ದು, ಮೇ ೧೬ರಿಂದ ಮೇ ೩೧ರ ತನಕ ದಿನಕ್ಕೊಂದು ವಿಚಾರದ ಮೂಲಕ ಮಕ್ಕಳನ್ನು ಶೈಕ್ಷಣಿಕ ಬೆಳವಣಿಗೆಗಳಿಗೆ ಅಣಿಗೊಳಿಸಲು ಅನುಷ್ಠಾನಗೊಳಿಸಲಾಗುತ್ತಿದೆ.ಶಾಲಾ ಪ್ರಾರಂಭದ ೧೪ ದಿನ `ಮಳೆ ಬಿಲ್ಲು’ ವಿಶೇಷ ಕಾರ್ಯಕ್ರಮ ಮಾಡಲಾಗುತ್ತಿದೆ.ಆಟದ ಹಬ್ಬ, ಆಟಿಕೆ ತಯಾರಿಕೆ, ಎರಡು ದಿನ ನಾಟಕ ಹಬ್ಬ, ಚಿತ್ರ ಚಿತ್ತಾರ ಕಲಾ ಹಬ್ಬ, ಚಿತ್ರ ಜಗತ್ತು, ಕಥೆಗಳ ಹಬ್ಬ, ಕವಿತೆ ಕಟ್ಟೋಣ ಹಾಡು ಹಾಡೋಣ, ಪರಿಸರ ಹಬ್ಬ, ಗಣಿತದ ಗಮ್ಮತ್ತು, ಇತಿಹಾಸದ ಹಬ್ಬ ನಾವಿನ್ನೂ ಮರೆತಿಲ್ಲ, ಅಡುಗೆ ಮನೆಯಲ್ಲಿ ವಿಜ್ಞಾನ, ಗೊಂಚಲು ಸಾಂಸ್ಕೃತಿಕ ಸಂಭ್ರಮ, ಶಾಲೆ ಸಿಂಗಾರ ಹೀಗೆ ೧೪ ದಿನದ ಕಾರ್ಯಕ್ರಮಗಳು ನಡೆಯಲಿದೆ.

 

ಕೋವಿಡ್ ಸಾಂಕ್ರಾಮಿಕ  ಸನ್ನಿವೇಶದಿಂದಾಗಿ ಶಾಲಾ ಶಿಕ್ಷಣದಿಂದ ದೂರ ಉಳಿದ ಮಕ್ಕಳನ್ನು ಶಾಲೆಯ ಸನ್ನಿವೇಶಕ್ಕೆ ಆತ್ಮೀಯವಾಗಿ ಆಹ್ವಾನಿಸಲು, ಕಲಿಕಾ ಪ್ರಕ್ರಿಯೆಗೆ ಮರುಹೊಂದಾಣಿಕೆ ಮಾಡಿಕೊಳ್ಳಲು, ಹೊಸ ಶಿಕ್ಷಣ ನೀತಿ -೨೦೨೦ರ ಆಶಯದಂತೆ ೧ ರಿಂದ ೩ನೇ ತರಗತಿಯ ಮಕ್ಕಳಿಗೆ ಮೂರು ತಿಂಗಳ `ವಿದ್ಯಾಪ್ರವೇಶ’ ಎಂಬ ವಿನೂತನ ಕಾರ್ಯಕ್ರಮ ತಾಲೂಕಿನ ಎಲ್ಲಾ ಪ್ರಾಥಮಿಕ ಶಾಲೆಗಳಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.ಇದು ಮಕ್ಕಳನ್ನು ಬೌದ್ಧಿಕವಾಗಿ, ದೈಹಿಕವಾಗಿ, ಮಾನಸಿಕವಾಗಿ ಹಾಗೂ ಭಾವನಾತ್ಮಕವಾಗಿ ಸಿದ್ದಗೊಳಿಸುವುದರ ಚೌಕಟ್ಟನ್ನು ಒದಗಿಸಿಕೊಡುತ್ತದೆ.ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ತಾಲೂಕಿನ ಎಲ್ಲಾ 12 ರಿಂದ 14 ವರ್ಷದ ಮಕ್ಕಳಿಗೆ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಲಸಿಕಾಕರಣ ಮಾಡಲಾಗಿದೆ. ಸಿ.ಲೋಕೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಪುತ್ತೂರು

ಬಿಇಒ ಅವರಿಂದ ಶಿಕ್ಷಕರಿಗೆ ತರಬೇತಿ

LEAVE A REPLY

Please enter your comment!
Please enter your name here