ಊರಿನ ಪ್ರತಿಯೊಬ್ಬನೂ ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ ಎಂದು ಘೋಷಿಸಿದರೆ…! ಗ್ರಾಮಗಳು ಲಂಚ, ಭ್ರಷ್ಟಾಚಾರ ಮುಕ್ತವಾಗುತ್ತದೆ. ರಾಜ್ಯ ದೇಶವೂ ಮುಕ್ತವಾಗುವುದಿಲ್ಲವೇ?

0

  • ಓಟಿನ ಸಂದರ್ಭದಲ್ಲಿ ಅಭ್ಯರ್ಥಿಗಳಿಂದ ಊರನ್ನು ಲಂಚ, ಭ್ರಷ್ಟಾಚಾರ ಮುಕ್ತ ಮಾಡುವ ಪ್ರತಿಜ್ಞೆ ಪಡೆಯಿರಿ.
  • ಊರಿನ ಲಂಚ, ಭ್ರಷ್ಟಾಚಾರಕ್ಕೆ ತಾವು ಆರಿಸಿದ ಜನಪ್ರತಿನಿಧಿಗಳನ್ನು ಹೊಣೆಗಾರರನ್ನಾಗಿ ಮಾಡುವ ಧೈರ್ಯ ತೋರಿಸಿ
  • ಎಷ್ಟೇ ಲಂಚ ಕೊಟ್ಟು ಡೆಲ್ಲಿಯಿಂದ ಹಳ್ಳಿಗೆ ಬಂದರೂ ಇಲ್ಲಿ ಪ್ರಾಮಾಣಿಕನಾದರೆ ಬದುಕು, ಇಲ್ಲದಿದ್ದರೆ ಬಹಿಷ್ಕಾರವೇ ಗತಿ ಎಂಬಂತಾಗಲಿ.

 

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಸಮಯದಲ್ಲಿ ಎಲ್ಲರೂ ಪ್ರಾಮಾಣಿಕರಾಗಿದ್ದರು ಭ್ರಷ್ಟಾಚಾರಿಗಳನ್ನು ದುರ್ಬಿನ್ ಹಿಡಿದು ಹುಡುಕಬೇಕಿತ್ತು, ಯಾಕೆಂದರೆ ಅವರಿಗೆ ಸಮಾಜದ ಬಹಿಷ್ಕಾರವಿತ್ತು. ಇಂದಿನ ಕಾಲದಲ್ಲಿ ಪ್ರಾಮಾಣಿಕರನ್ನು ದೊಂದಿ ಹಿಡಿದು ಹುಡುಕಬೇಕಾಗಿದೆ. ಯಾಕೆಂದರೆ ಅವರಿಗೆ ಗೌರವವೂ ಇಲ್ಲ, ಜನಪರ ಕೆಲಸ ಮಾಡಲು ಬೇಕಾದ ಅವಕಾಶ ನೀಡದೆ ವರ್ಗಾವಣೆಯೇ ಪ್ರಶಸ್ತಿ ಎಂಬ ಪರಿಸ್ಥಿತಿ ಇದೆ. ಅದನ್ನು ಬದಲಾಯಿಸೋಣವೇ, ಅದು ನಮ್ಮ ಕೈಯಲ್ಲೇ ಇದೆ. ಪ್ರಾಮಾಣಿಕರಿಗೆ ಗೌರವ, ಉತ್ತಮ ಕೆಲಸಕ್ಕೆ ಪ್ರೋತ್ಸಾಹ ನೀಡೋಣ. ಇಲ್ಲಿ ಲಂಚ, ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ ಎಂದು ಹೇಳಿ ಭ್ರಷ್ಟಾಚಾರಿಗಳಿಗೆ ಬಹಿಷ್ಕಾರ ಮಾಡೋಣ. ಎಷ್ಟೇ ಲಂಚ ಕೊಟ್ಟು ಡೆಲ್ಲಿಯಿಂದ ಹಳ್ಳಿಗೆ ಬಂದರೂ ಇಲ್ಲಿ ಪ್ರಾಮಾಣಿಕನಾದರೆ ಬದುಕು, ಇಲ್ಲದಿದ್ದರೆ ಬಹಿಷ್ಕಾರವೇ ಗತಿ ಎಂದು ತೋರಿಸಿ ಕೊಡೋಣ.

ಸುದ್ದಿ ಜನಾಂದೋಲನದಿಂದ ಆ ಕೆಲಸ ನಡೆಯುತ್ತಿದೆ. ಸುಳ್ಯ, ಪುತ್ತೂರು ಬೆಳ್ತಂಗಡಿಯಲ್ಲಿ ಉತ್ತಮ ಕೆಲಸ ಮಾಡುವವರಿಗೆ ಪುರಸ್ಕಾರ ದೊರಕುತ್ತಿದೆ. ಆದುದರಿಂದ ಪ್ರಾಮಾಣಿಕ ಅಧಿಕಾರಿಗಳ ಪಟ್ಟಿ ಬೆಳೆಯುತ್ತಿದೆ. ಬೆಳ್ತಂಗಡಿ ತಾಲೂಕಿನಲ್ಲಿ ತಾ| ಪಂ. ಕಾರ್ಯನಿರ್ವಹಣಾಧಿಕಾರಿ ಬಿ. ಕುಸುಮಾಧರ್, ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರು ರಂಜಿತ್, ಮದ್ದಡ್ಕ ತೋಟಗಾರಿಕಾ ಸಹಾಯಕ ನಿರ್ದೇಶಕರು ಲಿಖಿತ ರಾಜ್, ಕಣಿಯೂರು ಆರೋಗ್ಯವೈದ್ಯಾಧಿಕಾರಿ ಡಯಾನ ಸವಿತಾ ಇವರುಗಳು ಉತ್ತಮ ಸೇವೆ ನೀಡುತ್ತಿರುವುದಾಗಿ ಜನರು ಅಭಿಪ್ರಾಯ ಕೊಡುತ್ತಿದ್ದಾರೆ.

ಕಳೆದ ವಾರವೂ ಸುಳ್ಯ, ಪುತ್ತೂರಿನಲ್ಲಿ ಉತ್ತಮ ಸೇವೆ ಮಾಡುವವರ ಪಟ್ಟಿ ಬಂದಿತ್ತು, ಈ ವಾರವೂ ಬಂದಿದೆ. ಸುಳ್ಯದಲ್ಲಿ ಡಾ. ಹಿಮಕರ ಕೆ.ಎಸ್. ವೈದ್ಯಾಧಿಕಾರಿಗಳು ತಾಲೂಕು ಆಸ್ಪತ್ರೆ ಸುಳ್ಯ, ರಶ್ಮಿ ನೆಕ್ರಾಜೆ ಸಿ.ಡಿ.ಪಿ.ಓ ಸುಳ್ಯ, ಜಯಪ್ರಕಾಶ್ ಅಲೆಕ್ಕಾಡಿ ಪಿಡಿಓ ಪೆರುವಾಜೆ ಗ್ರಾ.ಪಂ., ಶ್ರೀಮತಿ ಸರೋಜಿನಿ ಕೇನಾಜೆ ಪಿಡಿಓ ಕನಕಮಜಲು ಗ್ರಾ.ಪಂ. ರವರ ಹೆಸರು, ಉತ್ತಮ ಸೇವೆಯ ಪಟ್ಟಿಯಲ್ಲಿದೆ.

ಪುತ್ತೂರಿನಲ್ಲಿ ಡಾ. ಜಯದೀಪ್ ದಂತ ವೈದ್ಯರು ಸರಕಾರಿ ಆಸ್ಪತ್ರೆ ಪುತ್ತೂರು, ಪುತ್ತೂರು ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ, ತಾಲೂಕು ಕಛೇರಿಯ ಪ್ರಥಮ ದರ್ಜೆ ಸಹಾಯಕ ನಾಗೇಶ್, ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಪ್ರಸನ್ನ ಹೆಬ್ಬಾರ್ ಇವರುಗಳು ಲಂಚ ರಹಿತ ಉತ್ತಮ ಸೇವೆ ನೀಡುತ್ತಿರುವುದಾಗಿ ಜನರು ಅಭಿಪ್ರಾಯ ಕೊಡುತ್ತಿದ್ದಾರೆ.

ಲಂಚಕೋರರಿಗೆ, ಭ್ರಷ್ಟಾಚಾರಿಗಳಿಗೆ ಜನರು ಶಾಪ ನೀಡುತ್ತಿದ್ದಾರೆ. ಕೀಳಾಗಿ ದರೋಡೆಕೋರರಂತೆ ನೋಡಲು, ಬಹಿಷ್ಕರಿಸಲು ಪ್ರಾರಂಭಿಸಿದ್ದಾರೆ. ಉತ್ತಮ ಕೆಲಸ ಮಾಡಬೇಕು ಇಲ್ಲದಿದ್ದರೆ ಊರಿನಿಂದ ಹೊರಗೆ ಹೋಗಬೇಕು ಎಂಬ ಸಂದೇಶ ರವಾನೆಯಾಗುತ್ತಿದೆ. ಅದಕ್ಕಿಂತ ಮುಖ್ಯವಾಗಿ ಲಂಚವಾಗಿ ಪಡೆದ ಹಣವನ್ನು ಜನತೆಗೆ ವಾಪಸ್ ಕೊಡಿಸಬೇಕು ಎಂಬ ಅಭಿಪ್ರಾಯಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಅಧಿಕಾರಿಯ ತೊಂದರೆಯ ಹೆದರಿಕೆಯಿಂದ ಅಥವಾ ಅನಗತ್ಯ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು, ನಷ್ಟ ಕಡಿಮೆ ಮಾಡಿಕೊಳ್ಳಲು ಸುಲಿಗೆಯಾಗಿ ಲಂಚದ ಹಣ ನೀಡಬೇಕಾಗಿ ಬಂದಿದ್ದರೆ ಆತ ತನ್ನ ಅನಿವಾರ್ಯ ಪರಿಸ್ಥಿತಿಯನ್ನು ವಿವರಿಸಿದರೆ ಸುದ್ದಿ ಜನಾಂದೋಲನ ವೇದಿಕೆ ಅವನ ಬೆಂಬಲಕ್ಕೆ ನಿಲ್ಲಲಿದೆ. ಸುದ್ದಿ ಜನಾಂದೋಲನದ ಸುಳ್ಯದ ಸಭೆಯಲ್ಲಿ ನ್ಯಾಯಾಧೀಶರಾದ ಯಶವಂತರು ಅಂತಹ ಸಂದರ್ಭದಲ್ಲಿ ಲಂಚ ಕೊಟ್ಟರೆ ಅದರಲ್ಲಿ ಆತನ ತಪ್ಪಿಲ್ಲವೆಂದು ಹೇಳಿದ್ದಾರೆ. ಆದುದರಿಂದ ಲಂಚವಾಗಿ ಆ ರೀತಿ ಪಡೆದ ಹಣವನ್ನು ಜನತೆಗೆ ಹಿಂತಿರುಗಿಸಬೇಕೆಂಬ ಆಂದೋಲನಕ್ಕೆ ಚಾಲನೆ ನೀಡಲಿದ್ದೇವೆ.

ಓಟಿನ ಸಂದರ್ಭ ಬಂದಾಗ ಜನತೆ ನಿಜವಾದ ರಾಜರುಗಳಾಗುವುದರಿಂದ ಈ ಸಲ ಓಟಿನ ಸಂದರ್ಭದಲ್ಲಿ ಊರನ್ನು ಲಂಚ, ಭ್ರಷ್ಟಾಚಾರ ಮುಕ್ತ ಮಾಡುವ ಘೋಷಣೆಯ ಪ್ರತಿಜ್ಞೆಯನ್ನು ಪ್ರತಿಯೊಬ್ಬ ಅಭ್ಯರ್ಥಿಯಿಂದ ಮತ್ತು ಪಕ್ಷಗಳಿಂದ ಮಾಡಿಸಿಕೊಳ್ಳಬೇಕು. ನಮ್ಮ ಸೇವೆಗಾಗಿ ಇರುವ ಅಧಿಕಾರಿಗಳು ಜನರಿಗೆ ತೊಂದರೆ ಕೊಟ್ಟು ಲಂಚವಾಗಿ ಪಡೆದ ಹಣವನ್ನು ಜನರಿಗೆ ಹಿಂತಿರುಗಿಸುವಂತೆ ಮಾಡುತ್ತೇವೆ ಇಲ್ಲದಿದ್ದರೆ ನಾವೇ ಕೊಡುತ್ತೇವೆ. ಭ್ರಷ್ಟಾಚಾರದಿಂದ ತೊಂದರೆಯಾದರೆ ಅದಕ್ಕೆ ಪರಿಹಾರ ಕೊಡಿಸುತ್ತೇವೆ ಅದಕ್ಕಾಗಿ ಆಯ್ಕೆ ಮಾಡಿ ಎಂಬ ಭರವಸೆ ನೀಡುವಂತೆ ಮಾಡಬೇಕು. ಅಧಿಕಾರಿಗಳು ಜನಪ್ರತಿನಿಧಿಗಳ, ಶಾಸಕರ, ಸಂಸದರ ನಿಯಂತ್ರಣದಲ್ಲಿರುವುದರಿಂದ ಆಯಾ ಊರಿನಲ್ಲಿ ನಡೆಯುವ ಲಂಚ, ಭ್ರಷ್ಟಾಚಾರಕ್ಕೆ ತಾವು ಆರಿಸಿದ ಜನಪ್ರತಿನಿಧಿಗಳನ್ನು ಹೊಣೆಗಾರರನ್ನಾಗಿ ಮಾಡುವ ಧೈರ್ಯ ತೋರಬೇಕು. ಆ ರೀತಿಯ ಚಿಂತನೆ ಪ್ರತಿಯೊಬ್ಬನಲ್ಲಿ ಗ್ರಾಮ ಗ್ರಾಮಗಳಲ್ಲಿ ಹರಡಿ ಪ್ರತೀ ಮನೆ ಮನೆಯಲ್ಲಿ ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ, ಉತ್ತಮ ಸೇವೆಗೆ ಪುರಸ್ಕಾರ ಎಂಬ ಘೋಷಣೆ ಮೊಳಗಬೇಕು. ಅದು ತಾಲೂಕಿನಲ್ಲಿ ಮಾತ್ರವಲ್ಲ, ರಾಜ್ಯ, ದೇಶದಲ್ಲಿಯೂ ಧ್ವನಿಸುವಂತೆ ಮಾಡಬೇಕು. ಹಾಗೆ ಮಾಡಿದರೆ ಈ ತಿಂಗಳ ಅಂತ್ಯದೊಳಗೆ ನಮ್ಮ ಊರು ಲಂಚ, ಭ್ರಷ್ಟಾಚಾರ ಮುಕ್ತವಾಗುವುದು ಖಂಡಿತ. ಇಲ್ಲದಿದ್ದರೆ ನಾವು, ನಮ್ಮ ಮಕ್ಕಳ ಭವಿಷ್ಯ ಮಾತ್ರ ಮುಳುಗುವುದಲ್ಲ, ಶ್ರೀಲಂಕಾದಂತೆ ಊರೇ ನಾಶವಾಗಬಹುದು ಎಂಬ ಎಚ್ಚರಿಕೆಯನ್ನು ಜನರ ಮುಂದೆ ಇಡುತ್ತಿದ್ದೇನೆ. -ಸಂ

LEAVE A REPLY

Please enter your comment!
Please enter your name here