ಉಡುಪಿ ಮಠದ ಪರ್ಯಾಯವೂ ಇಸುಬು ಬ್ಯಾರಿಯ ಬಾಳೆಲೆಯೂ….

0

ಇನ್ನೂ ಬೆಳಗಾಗಿರಲಿಲ್ಲ. ಐದು ಗಂಟೆಗೇ ಫೋನ್ ರಿಂಗಣಿಸಿತು. “ಸರ್ ಬಾಳೆಲೆ ಕೊಯ್ಯಲು ಇವತ್ತು ಬರಲೇ” ಎಂದ ಆ ಕಡೆಯ ಧ್ವನಿ ಕೇಳಿ ಗಲಿಬಿಲಿಯಾದೆ. ಹೌದು, ಅದು ಕುಂಬ್ರದ ಇಸುಬುಬ್ಯಾರಿಯ ಧ್ವನಿ. ಕಳೆದ ಮೂರು ವರ್ಷದಿಂದ ಬಾಳೆಲೆ ಕೊಯ್ಯುವ ಈ ಇಸುಬು ನನ್ನ ಪಾಲಿಗೆ ನಾಪತ್ತೆಯಾಗಿದ್ದರು. ಹಾಗಂತ ಈ ನಡುವೆ ನಾನು ಯಾರಿಗೂ ಎಲೆ ಮಾರಿಲ್ಲ. ಕಾರಣ ಎಲೆ ಖರೀದಿಸುವವರು ಬೇರೆ ಯಾರೂ ನಮ್ಮೂರಲ್ಲಿಲ್ಲ .ಅಡಿಕೆ ತೆಂಗು ಮೆಣಸಿಗೆ ಹೋಲಿಸಿದರೆ ಕರಾವಳಿಯ ಕೃಷಿಕರಿಗೆ ಎಲೆ ವ್ಯಾಪಾರ ಖಂಡಿತವಾಗಿಯೂ ಲಾಭದಾಯಕವಲ್ಲ.ಯಾರೋ ಬರ್ತಾರೆ, ಕೊಯ್ಯುತ್ತಾರೆ, ಅಂಗಳಕ್ಕೆ ಬಂದು ಇಷ್ಟು ಆಯ್ತು ಎಂದು ಚಿಲ್ಲರೆ ದುಡ್ಡು ಕೊಟ್ಟು ಹೋಗುತ್ತಾರೆ. ಅಷ್ಟಕ್ಕೆ ಆ ಅವ್ಯವಹಾರ ಮುಗಿಯುತ್ತದೆ. ಇಸುಬು ನನ್ನ ತೋಟದಿಂದ ಕಳೆದ 30 ವರ್ಷದಿಂದ ಬಾಳೆ ಎಲೆ ಕೊಯ್ಯುವ ಒಬ್ಬ ಸಾದಾಸೀದಾ ವ್ಯಕ್ತಿ. ಅವರ ಪ್ರಕಾರ ಅವರ ಟೀಮ್ ವಾರಕ್ಕೆ ನಮ್ಮ ಸುತ್ತಮುತ್ತಲಿನ ಗ್ರಾಮಗಳ ತೋಟದಿಂದ ಲಕ್ಷಕ್ಕಿಂತ ಹೆಚ್ಚು ತುಂಡು ಬಾಳೆ ಎಲೆಗಳನ್ನು ಕೊಯ್ದು ಕರಾವಳಿಯ ಮತ್ತು ಕೇರಳದ ದೇವಾಲಯಗಳಿಗೆ ಕಳಿಸುತ್ತಾರೆ.

 

30ವರ್ಷ ನಿರಂತರವಾಗಿ ಉಡುಪಿ ಮಠಕ್ಕೆ ಎಲೆ ರವಾನಿಸುತ್ತಿದ್ದ ಇಸುಬು ಕಳೆದ ಮೂರು ವರ್ಷದಿಂದ ಸೋತು ಸುಣ್ಣವಾಗಿದ್ದರು. ಕಾರಣ ಕೋರೊನ ಮತ್ತು ಇತ್ತೀಚಿನ ಮತೀಯ ಭಿನ್ನಾಭಿಪ್ರಾಯ.

“ಈಗ ಮಠಕ್ಕೆ ಎಲೆ ಹಾಕುತ್ತಿಲ್ಲವೇ” ಸಹಜವಾಗಿಯೇ ಪ್ರಶ್ನಿಸಿದೆ.
“ಸರ್ ಯಾಕೋ ನಮ್ಮಿಂದ ಅವರು ಖರೀದಿಸುವುದಿಲ್ಲ. ಬದಲಾಗಿ ಕೇರಳ ಮತ್ತು ಕರ್ನಾಟಕದ ಬೇರೆ ಸುಮಾರು 18 ದೇವಾಲಯಗಳಿಗೆ ನಾವೀಗ ಎಲೆ ರವಾನಿಸುತ್ತೇವೆ. ಮಠ ಸಿಗದಿರಬಹುದು, ದೇವಸ್ಥಾನ ಸಿಕ್ಕಿದೆ. ನಮಗೆ ಅಷ್ಟು ಸಾಕು” ಎನ್ನುತ್ತಾರೆ ಇಸುಬು.ಹಿಂದೆ ಈ ಇಸುಬು ತಿಂಗಳಿಗೊಂದು ಬಾರಿ ಬಾಳೆಲೆ ಕಡಿಯಲು ಬರುತ್ತಿದ್ದರು. ಕೆಲಸ ಮುಗಿಸಿ ಜಗಲಿಯಲ್ಲಿ ಕೂತು ಉಡುಪಿ ಮಠದ ಕಥೆ ಹೇಳುತ್ತಿದ್ದರು. ಹಾಗಂತ ಇವರು ಯಾವತ್ತೂ ಮಠಕ್ಕೆ ಹೋದವರಲ್ಲ.ಉಡುಪಿಯಲ್ಲಿ ಪರ್ಯಾಯ ಬಂದರೆ ಸಾಕು, ತಿಂಗಳಿಗೆ ಎರಡು ಸಾರಿ ಬರುವುದು. “ಸರ್, ಮಠದಲ್ಲಿ ಪರ್ಯಾಯ. ಎಂದು ಸಂಭ್ರಮಿಸುವ ಇಸುಬು ಬ್ಯಾರಿ ಹಿಂದೂ ದೇವಾಲಯಗಳಲ್ಲಿ ಪರ್ವಗಳು ಇದ್ದಷ್ಟು ತನ್ನ ಬದುಕು ಗಟ್ಟಿ ಎಂದು ನಂಬಿಕೊಂಡು ಬಂದವರು…..

ಬರಹ- ನರೇಂದ್ರ ರೈ ದೇರ್ಲ
ಫೇಸ್ಬುಕ್ ಗೋಡೆಯಿಂದ

LEAVE A REPLY

Please enter your comment!
Please enter your name here