“ಜಲಸಿರಿ” ಯೋಜನೆ: ಪುತ್ತೂರು ನಗರ ಸಭೆಯಿಂದ ಲಿಖಿತ ಉತ್ತರಕ್ಕೆ ಆಗ್ರಹ

0

  • 34-ನೆಕ್ಕಿಲಾಡಿಯಲ್ಲಿ ಗ್ರಾಮಸ್ಥರಿಂದ ಪ್ರತಿಭಟನೆ-ಕಾಮಗಾರಿಗೆ ತಡೆ

ಉಪ್ಪಿನಂಗಡಿ: “ಜಲಸಿರಿ” ಯೋಜನೆಯಲ್ಲಿ ಪುತ್ತೂರು ನಗರಕ್ಕೆ ನೀರು ಸರಬರಾಜು ಸಂಬಂಧಿಸಿ 2ನೇ ಹಂತದಲ್ಲಿ ಕಾಮಗಾರಿ ನಡೆಯುತ್ತಿದ್ದು, 34-ನೆಕ್ಕಿಲಾಡಿ ಗ್ರಾಮಕ್ಕೆ ಉಚಿತ ನೀರು ಒದಗಿಸುವ ಬಗ್ಗೆ ಕೇಳಲಾದ ಅಪೇಕ್ಷಿತ ಪತ್ರಕ್ಕೆ ಪುತ್ತೂರು ಪುರಸಭೆಯಿಂದ ಲಿಖಿತ ಉತ್ತರ ನೀಡುವಂತೆ ಆಗ್ರಹಿಸಿ, ನೆಕ್ಕಿಲಾಡಿ ಗ್ರಾಮದ ಬೊಳಂತಿಲದಲ್ಲಿ ನಡೆಯುತ್ತಿದ್ದ ಕಾಮಗಾರಿಯ ವಿರುದ್ಧ ಗ್ರಾಮಸ್ಥರು ಪ್ರತಿಭಟಿಸಿ ತಡೆ ಒಡ್ಡಿದ್ದಾರೆ.

ಜಲಸಿರಿ ಯೋಜನೆಗೆ ಸಂಬಂಧಿಸಿದಂತೆ ನೆಕ್ಕಿಲಾಡಿಯ ಬೊಳಂತಿಲದಲ್ಲಿ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದ್ದು, ಈ ಕಾಮಗಾರಿ ಮುಂದುವರಿಸಬೇಕಾದರೆ ನಗರ ಸಭೆಯಿಂದ ನೆಕ್ಕಿಲಾಡಿ ಗ್ರಾಮಕ್ಕೆ ಉಚಿತ ನೀರು ಒದಗಿಸುವ ಬಗ್ಗೆ ಲಿಖಿತ ಉತ್ತರ ನೀಡಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ್ ನೇತೃತ್ವದಲ್ಲಿ ಜಮಾಯಿಸಿ ಆಗ್ರಹಿಸಿದ ಪ್ರತಿಭಟನಾಕಾರರು ಸ್ಥಳದಲ್ಲಿದ್ದ ಇಂಜಿನಿಯರ್ ಮನಿ ಅವರೊಂದಿಗೆ ಮಾತುಕತೆ ನಡೆಸಿ, ಪುತ್ತೂರು ನಗರ ಸಭೆಯಿಂದ ಲಿಖಿತ ಉತ್ತರ ನೀಡಿದ ಬಳಿಕ ಕಾಮಗಾರಿ ನಡೆಸುವಂತೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಸಿದ ಇಂಜಿನಿಯರ್ ಮನಿ “ನಮ್ಮದು ಕಾಮಗಾರಿ ನಿರ್ವಹಣೆ ಮಾಡುವಂತದ್ದು, ಈ ಬಗ್ಗೆ ನಗರ ಸಭೆಯೊಂದಿಗೆ ವ್ಯವಹರಿಸುವಂತೆ ತಿಳಿಸಿದರು”. ಇದಕ್ಕೆ ಪಟ್ಟುಬಿಡದ ಗ್ರಾಮಸ್ಥರು ಕಾಮಗಾರಿ ನಿಲ್ಲಿಸುವಂತೆ ಆಗ್ರಹಿಸಿದರು. ಇದಕ್ಕೆ ಸಮ್ಮತಿಸಿದ ಇಂಜಿನಿಯರ್ ಕಾಮಗಾರಿ ನಿಲ್ಲಿಸುವುದಾಗಿ ತಿಳಿಸಿದರು.

ಸರ್ಕಾರದ ನಿಯಮಾವಳಿಯನ್ನು ಸ್ಪಷ್ಟಪಡಿಸಲಿ-ಪ್ರಶಾಂತ್
ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ್ ಮಾತನಾಡಿ “ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಸುತ್ತಿದ್ದಾರೆ. ಜಲಸಿರಿ ಯೋಜನೆಯಲ್ಲಿ ಗ್ರಾಮಕ್ಕೆ ಉಚಿತ ನೀರು ಕೊಡುವಂತೆ ಕೇಳಿಕೊಂಡಿದ್ದೇವೆ ಮತ್ತು ಯೋಜನೆಯಲ್ಲಿ ಸರ್ಕಾರದ ನಿಯಮಾವಳಿ ಏನು ಎನ್ನುವುದನ್ನು ಸ್ಪಷ್ಟಪಡಿಸಬೇಕು ಮತ್ತು ಗ್ರಾಮಕ್ಕೆ ಉಚಿತ ನೀರು ಒದಗಿಸಿಕೊಡುವಂತೆಯೂ ಕೇಳಿಕೊಳ್ಳಲಾಗಿದೆ, ಇದಕ್ಕೆ ನಗರ ಸಭೆಯಿಂದ ಸ್ಪಂದನೆ ದೊರೆತಿಲ್ಲ, ಆದ ಕಾರಣ ಲಿಖಿತ ಪತ್ರ ನೀಡದ ತನಕ ಇಲ್ಲಿ ಕಾಮಗಾರಿ ನಡೆಸಲು ಅವಕಾಶ ನೀಡುವುದಿಲ್ಲ” ಎಂದು ತಿಳಿಸಿದರು.

ನದಿ, ನೀರು ನಮ್ಮ ಹಕ್ಕು-ಯುನಿಕ್
ಪುತ್ತೂರು ನಗರಕ್ಕೆ ನೀರು ಸರಬರಾಜು ಆಗುತ್ತಿರುವುದು ನಮ್ಮ ನೆಕ್ಕಿಲಾಡಿ ಗ್ರಾಮದಲ್ಲಿ ಹರಿಯುವ ಕುಮಾರಧಾರ ನದಿಯಿಂದ ಅದಾಗ್ಯೂ ಇದರ ಸ್ಥಾವರ ಇರುವುದೂ ನಮ್ಮ ಗ್ರಾಮದಲ್ಲಿ. ಇದರ ಸಲುವಾಗಿ ಪೈಪ್‌ಲೈನ್ ಕಾಮಗಾರಿ ನಡೆಯುವುದು ನಮ್ಮ ಗ್ರಾಮದ ಮೂಲಕವೇ ಆಗಿರುತ್ತದೆ. ಆದ ಕಾರಣ ನದಿ ಮತ್ತು ನೀರು ನಮ್ಮ ಹಕ್ಕು ಆಗಿದ್ದು, ನಾವು ಇದನ್ನು ಕೇಳುತ್ತಿದ್ದು, ದಿನಕ್ಕೆ ಕನಿಷ್ಠ 10 ಲಕ್ಷ ಲೀಟರ್ ನೀಡು ಕೊಡುವ ಬಗ್ಗೆ ನಗರ ಸಭೆಯವರು ಲಿಖಿತವಾಗಿ ನೀಡುವ ತನಕ ಕಾಮಗಾರಿ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಸ್ಥಳೀಯ ನಿವಾಸಿ ಅಬ್ದುಲ್ ರಹಿಮಾನ್ ಯುನಿಕ್ ತಿಳಿಸಿದರು. ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ವಿಜಯಕುಮಾರ್, ಹರೀಶ್ ದರ್ಬೆ, ಸುಜಾತ, ವೇದಾವತಿ, ಗೀತಾ, ರತ್ನಾವತಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶೇಕಬ್ಬ ಹಾಜಿ, ಅಬ್ದುಲ್ ಹಮೀದ್, ಗ್ರಾಮಸ್ಥರಾದ ಸದಾನಂದ, ಕರುಣಾಕರ, ತನಿಯಪ್ಪ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here