ಕೋಡಿಂಬಾಡಿ ಗ್ರಾ.ಪಂ. ವ್ಯಾಪ್ತಿಯ ಹಲವು ಸಮಸ್ಯೆಗಳನ್ನು ವಿರೋಧಿಸಿ, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೇ.23ರಂದು ಪ್ರತಿಭಟನೆ

0

  • ಪತ್ರಿಕಾಗೋಷ್ಠಿಯಲ್ಲಿ ಜಗನ್ನಾಥ ಶೆಟ್ಟಿ ನಡುಮನೆ, ಜಯಪ್ರಕಾಶ್ ಬದಿನಾರು ಹೇಳಿಕೆ

ಪುತ್ತೂರು: ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಲವು ಸಮಸ್ಯೆಗಳನ್ನು ವಿರೋಧಿಸಿ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೇ 23ರಂದು ವಲಯ ಕಾಂಗ್ರೆಸ್ ಸಹಯೋಗದೊಂದಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕೋಡಿಂಬಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಜಗನ್ನಾಥ ಶೆಟ್ಟಿ ನಡುಮನೆ ಮತ್ತು ಜಯಪ್ರಕಾಶ್ ಬದಿನಾರು ಹೇಳಿದ್ದಾರೆ.

 

ಮೇ 18ರಂದು ಸುದ್ದಿ ಸ್ಟುಡಿಯೋದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು ಮೇ 23ರಂದು ಬೆಳಿಗ್ಗೆ ಗ್ರಾಮ ಪಂಚಾಯತ್ ಕಛೇರಿ ಎದುರು ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.

ಜಗನ್ನಾಥ ಶೆಟ್ಟಿ ನಡುಮನೆ ಮಾತನಾಡಿ, ಕೋಡಿಂಬಾಡಿ ಗ್ರಾಮ ಪಂಚಾಯತ್‌ಗೆ 6 ಲಕ್ಷ ರೂ ವೆಚ್ಚದಲ್ಲಿ ಘನತ್ಯಾಜ್ಯ ವಿಲೇವಾರಿಗೆ ವಾಹನವನ್ನು ಖರೀದಿಸಲಾಗಿದೆ. ಅದನ್ನು ಪಂಚಾಯತ್ ಆವರಣದಲ್ಲಿ ನಿಲ್ಲಿಸಲಾಗಿದೆ. ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ 10 ಸೆಂಟ್ಸ್ ಜಾಗವನ್ನು ಬೆಳ್ಳಿಪ್ಪಾಡಿ ಗ್ರಾಮದ ಸರ್ವೆ ನಂಬರ್‌ 74ರಲ್ಲಿ ಮೀಸಲಿಟ್ಟು ಆರ್‌ಟಿಸಿ ಕೂಡ ಆಗಿದೆ. ಇಲ್ಲಿ ಸರಕಾರಿ ಜಾಗ ಉಳಿದಿದೆ. ಇಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕವನ್ನು ಮಾಡಿ ಕೊಡುತ್ತೇವೆ ಎಂದು ಕಂದಾಯ ಇಲಾಖೆ ಹೇಳಿದರೆ ಪಂಚಾಯತ್‌ನವರು ಒಪ್ಪಿಕೊಳ್ಳುವುದಿಲ್ಲ. ಈಗಾಗಲೇ ಖರೀದಿ ಮಾಡಿರುವ ಘನತ್ಯಾಜ್ಯ ವಿಲೇವಾರಿ ವಾಹನವನ್ನು ಹೀಗೆಯೇ ಉಳಿಸಿಕೊಂಡರೆ ಅದು ಕೂಡ ಒಂದೆರಡು ತಿಂಗಳಲ್ಲಿ ತ್ಯಾಜ್ಯವಾಗುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.

ಕೋಡಿಂಬಾಡಿ ಗ್ರಾಮದ ಸಂಜೀವಿನಿ ಒಕ್ಕೂಟದ ಎಂ.ಬಿ.ಕೆ. ವಿಚಾರ ಪ್ರಸ್ತಾಪಿಸಿದ ಜಗನ್ನಾಥ ಶೆಟ್ಟಿಯವರು 2018ರಲ್ಲಿ ಸರ್ಕಾರ ಹೊರಡಿಸಿದ ಸುತ್ತೋಲೆಯ ಪ್ರಕಾರ ಸಂಜೀವಿನಿ ಒಕ್ಕೂಟದ ಎಂಬಿಕೆ ಆಯ್ಕೆಗೆ ಕನಿಷ್ಠ ಪಿಯುಸಿ ಪಾಸ್ ಆಗಿರಬೇಕು, ಎಸ್‌ಸಿ/ಎಸ್ಟಿ, ವಿಕಲಚೇತನರು ಅಥವಾ ವಿಧವೆಯರಿಗೆ ಪ್ರಾತಿನಿಧ್ಯ ನೀಡಬೇಕೆನ್ನುವ ನಿಯಮವಿದೆ. ಇದ್ಯಾವುದೂ ಮಾನದಂಡಗಳು ಇಲ್ಲದ ವ್ಯಕ್ತಿಯನ್ನು ಎಂಬಿಕೆಯಾಗಿ ಆಯ್ಕೆ ಮಾಡಿದ್ದಾರೆ. 22-09-2021ರಂದು 5 ಜನ ಪಂಚಾಯತ್ ಸದಸ್ಯರು ಸೇರಿಕೊಂಡು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಮನವಿ ಸಲ್ಲಿಸಿದ್ದೆವು. ಇದನ್ನು ಪರಿಶೀಲಿಸಿದ ಇಒರವರು, ಎಂಬಿಕೆ ಆಯ್ಕೆ ಅಸಿಂಧುವಾಗಿದ್ದು, ಅಮಾನತು ಮಾಡಲಾಗಿದೆ ಎಂದು 2022 ಜನವರಿ 25ರಂದು ಆದೇಶ ಮಾಡಿದ್ದರು. ಮಾ12ರಿಂದ 19ರವರೆಗೆ 8 ದಿನಗಳ ಕಾಲಾವಕಾಶ ಇಟ್ಟು, ಎಂಬಿಕೆ ಆಯ್ಕೆಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಪ್ರತೀ ಅಂಗನವಾಡಿಗಳಿಗೆ ನೋಟಿಫಿಕೇಶನ್ ಮಾಡಿದ್ದರು. ಅರ್ಜಿಗಳನ್ನು ತರಿಸಿಕೊಂಡಿದ್ದರು, ಪಂಚಾಯತ್‌ನಲ್ಲಿ ತೆಗೆದುಕೊಂಡಿದ್ದರು. ಬಳಿಕ ತಾಲೂಕು ಪಂಚಾಯತ್‌ಗೆ ತರಿಸಿಕೊಂಡಿದ್ದರು. ಮುಂದಕ್ಕೆ ಯಾವುದೇ ಕ್ರಮಗಳಾಗಿಲ್ಲ. ಈ ಬಗ್ಗೆ ಸಿಇಒ ಅವರಿಗೆ 23-03-2022ರಂದು ಐದು ಜನ ಪಂಚಾಯತ್ ಸದಸ್ಯರು ಸೇರಿಕೊಂಡು ಮನವಿ ನೀಡಿದ್ದೆವು. ಇಒರವರು ಈ ವಿಚಾರವನ್ನು ಯಾಕೆ ಮುಂದೂಡುತ್ತಿದ್ದಾರೆ ಎನ್ನುವುದು ತಿಳಿಯುತ್ತಿಲ್ಲ. ತಾ.ಪಂ. ಇಒರವರು ಯಾವುದೋ ಜಾಲದಲ್ಲಿ ಸಿಲುಕಿಕೊಂಡು, ಬ್ಲ್ಯಾಕ್ ಮೇಲ್‌ಗೆ ಒಳಗಾಗುತ್ತಿದ್ದಾರೋ ಎಂದು ಕೇಳಲು ಬಯಸುತ್ತೇನೆ ಎಂದು ಹೇಳಿದರು.

ಜಯಪ್ರಕಾಶ್ ಬದಿನಾರು ಮಾತನಾಡಿ, ಹಿಂದೆ ಪಂಚಾಯತ್‌ನಲ್ಲಿ 9/11 ಆಗುತ್ತಿದ್ದು, ಈಗ ಮಂಗಳೂರಿಗೆ ಶಿಫ್ಟ್ ಮಾಡಿದ್ದಾರೆ. ಇದರಿಂದ ಗ್ರಾಮಾಂತರ ಭಾಗದ ಜನರಿಗೆ ಸಮಸ್ಯೆಯಾಗುತ್ತಿದ್ದು, ಪಂಚಾಯತ್ ಮಟ್ಟದಲ್ಲಿ ಅದನ್ನು ಮಾಡಬೇಕೆಂದು ಒತ್ತಾಯಿಸುತ್ತಿದ್ದೇವೆ. ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲ ಜನರು ಸೋಕ್ ಪಿಟ್ ಮಾಡಿದ್ದಾರೆ. ಅವರಿಗೆ ಮೆಟೀರಿಯಲ್ ಮೊತ್ತ ಇನ್ನೂ ಪಾವತಿಯಾಗಿಲ್ಲ. ದಾರಂದಕುಕ್ಕುವಿನಲ್ಲಿ ಶಾಸಕರ ಅನುದಾನದಲ್ಲಿ ಅಂಗನವಾಡಿ ಕೇಂದ್ರ ನಿರ್ಮಾಣಗೊಂಡು ಮೂರು ತಿಂಗಳಾಗಿದೆ. ಉದ್ಘಾಟನೆಗೆ ನಾಲ್ಕು ಬಾರಿ ದಿನಾಂಕ ನಿಗದಿಯಾಗಿತ್ತು. ಆದರೆ, ಇನ್ನೂ ಉದ್ಘಾಟನೆ ಆಗಿಲ್ಲ. ಆದ್ದರಿಂದ ಇದನ್ನು ಆದಷ್ಟು ಬೇಗ ಉದ್ಘಾಟಿಸಿ ಮಕ್ಕಳಿಗೆ ಬಿಟ್ಟುಕೊಡಬೇಕು ಎಂದು ಆಗ್ರಹಿಸಿದರು. 94ಸಿಯಲ್ಲಿ ಗಿರಿಯಪ್ಪ ಎನ್ನುವವರಿಗೆ ಶಾಸಕರ ಒತ್ತಡದ ಮೇರೆಗೆ ಕಂದಾಯ ಇಲಾಖೆಯವರು ನಿರಂತರವಾಗಿ ಜಾಗ ಅಳತೆ, ತೆರವುಗೊಳಿಸುವಂತೆ ಹೇಳುವುದು ಇತ್ಯಾದಿ ಮಾಡುತ್ತಿದ್ದಾರೆ. ಇದನ್ನು ಸರಿಪಡಿಸಬೇಕು, ಇಲ್ಲದೇ ಇದ್ದಲ್ಲಿ ಕೋಡಿಂಬಾಡಿ ಗ್ರಾಮದಲ್ಲಿ ಎಲ್ಲೆಲ್ಲಿ 94 ಸಿ ಆಗಿದೆಯೋ ಅದೆಲ್ಲವನ್ನೂ ಸಮಂಜಸವಾಗಿ ತನಿಖೆ ಮಾಡಲು ಶಾಸಕರು ತಹಶೀಲ್ದಾರ್‌ಗೆ ಆದೇಶ ಮಾಡಬೇಕು ಎಂದ ಜಯಪ್ರಕಾಶ್ ಅವರು ಪರನೀರು ಎಂಬಲ್ಲಿ ಕೆಲವೊಂದು ಬಡ ಕುಟುಂಬದವರು ರಸ್ತೆಯಿಲ್ಲದೆ ಪರದಾಡುತ್ತಿದ್ದಾರೆ. ಕೋರ್ಟ್ ಕಚೇರಿಗೆ ಅಲೆದಾಡಿದ್ದಾರೆ. ಅವರಿಗೂ ನ್ಯಾಯ ಸಿಗಬೇಕು ಎಂದರು. ಕಂದಾಯ ಇಲಾಖೆಯವರು ಪ್ರತಿಭಟನೆಯ ದಿನ ಬರಬೇಕು. ಕಾಂಪೋಸ್ಟ್ ಪೈಪ್‌ಗಳು ಸ್ಟಾಕ್ ಇದ್ದು, ಅದನ್ನು ಅರ್ಹರಿಗೆ ವಿತರಿಸಬೇಕು, ಇಲ್ಲದೇ ಇದ್ದಲ್ಲಿ ಸೂಕ್ತ ಸ್ಪಷ್ಟೀಕರಣ ನೀಡಬೇಕು ಎಂಬ ನೆಲೆಯಲ್ಲಿ ಮೇ 23ರಂದು ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದರು.

LEAVE A REPLY

Please enter your comment!
Please enter your name here