ಹವಾಮಾನ ಆಧಾರಿತ ಬೆಳೆ ವಿಮೆ-ಜೂ.30 ವಿಮಾ ಕಂತು ಪಾವತಿಸಲು ಅಂತಿಮ ಸಿನ

0

ಪುತ್ತೂರು : ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯು ಕೇಂದ್ರ ಸರಕಾರ ನೀಡಿರುವ ಮಾನದಂಡಗಳ ಆಧಾರದಲ್ಲಿ ಅಧಿಸೂಚಿತ ತೋಟಗಾರಿಕೆ ಬೆಳೆಗಳನ್ನು ಬೆಳೆದ ರೈತರಿಗೆ ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಉಂಟಾದಲ್ಲಿ ವಿಮಾ ನಷ್ಟ ಪರಿಹಾರವನ್ನು ಪಡೆಯಲು ಅವಕಾಶವನ್ನು ಕಲ್ಪಿಸುತ್ತದೆ. ಈ ಯೋಜನೆಯನ್ನು ಮುಂಗಾರು ಹಂಗಾಮಿಗೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ನಗರ ಸ್ಥಳೀಯಾಡಳಿತ ಸಂಸ್ಥೆ ಹಾಗೂ ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಸದರಿ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಮತ್ತು ಕರಿಮೆಣಸು ಬೆಳೆಗಳನ್ನು ಅಧಿಸೂಚಿಸಿ ಆದೇಶ ಹೊರಡಿಸಲಾಗಿದ್ದು, ೨೦೨೨ರ ಮುಂಗಾರು ಹಂಗಾಮಿಗೆ ಸಂಬಂಧಿಸಿ ವಿಮಾ ಕಂತು ಪಾವತಿಸಲು ಜೂ.೩೦ ಅಂತಿಮ ದಿನವಾಗಿರುತ್ತದೆ. ಈ ಯೋಜನೆಯು ಅಧಿಸೂಚಿತ ಬೆಳೆಗಳಿಗೆ ಬ್ಯಾಂಕ್‌ಗಳಿಂದ (ರಾಷ್ಟ್ರೀಕೃತ ಬ್ಯಾಂಕ್/ ಖಾಸಗಿ/ ಸಹಕಾರಿ ಬ್ಯಾಂಕ್‌ಗಳು) ಬೆಳೆ ಸಾಲ ಪಡೆದ ಹಾಗೂ ಬೆಳೆ ಸಾಲ ಹೊಂದಿಲ್ಲದ ರೈತರಿಗೆ ಐಚ್ಚಿಕವಾಗಿರುತ್ತದೆ. ಈ ಯೋಜನೆಯಡಿ ತೋಟಗಾರಿಕೆ ರೈತರು ಅಧಿಸೂಚಿತ ಬೆಳೆಗಳಿಗೆ ಸಂಬಂಧಿಸಿ ಸಾಲ ಪಡೆದುಕೊಂಡಿರುವ ಬ್ಯಾಂಕ್‌ಗಳ ಮೂಲಕ ಹಾಗೂ ಸಾಲ ಪಡೆಯದಿರುವ ರೈತರು ಉಳಿತಾಯ ಖಾತೆಯನ್ನು ಹೊಂದಿರುವ ಬ್ಯಾಂಕ್‌ಗಳ ಮೂಲಕ ವಿಮಾ ಕಂತುಗಳನ್ನು ಪಾವತಿಸಿ ಯೋಜನೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

ಈ ಯೋಜನೆಯ ಅನುಷ್ಠಾನವನ್ನು ಕರ್ನಾಟಕ ಸರ್ಕಾರದಿಂದ ಅಭಿವೃದ್ದಿಪಡಿಸಲಾದ Online portal (samrakshane.karnataka.gov.in) ಮೂಲಕ ಮಾತ್ರವೇ ರೈತರ ವಿವರಗಳನ್ನು ನೊಂದಾಯಿಸಿ ವಿಮಾ ಪಾಲಿಸಿ ಹೊಂದಲು ಅವಕಾಶ ಕಲ್ಪಿಸಲಾಗಿದೆ.

ಈ ಯೋಜನೆಯಡಿ ೨೦೨೨ರ ಮುಂಗಾರು ಹಂಗಾಮಿನಲ್ಲಿ ಸ್ಥಳೀಯ ನಿರ್ಧಿಷ್ಟ ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂಕುಸಿತ ಮತ್ತು ಮೇಘಸ್ಫೋಟ (Cloud Burst) ಇವುಗಳಿಂದ ಬೆಳೆನಷ್ಟ ಸಂಭಂವಿಸಿದಲ್ಲಿ ಬೆಳೆವಿಮೆ ಮಾಡಿಸಿರುವ ರೈತರು ಈ ಬಗ್ಗೆ ಸಂಬಂಧಪಟ್ಟ ಹಣಕಾಸು ಸಂಸ್ಥೆ (Bank) ಅಥವಾ ಅನುಷ್ಠಾನಗೊಳಿಸುವ ವಿಮಾ ಸಂಸ್ಥೆಗಳ ಕಛೇರಿಗಳಿಗೆ ಹಾನಿ ಸಂಭವಿಸಿದ ೭೨ ಗಂಟೆಗೊಳಗಾಗಿ ಬೆಳೆ ವಿವರ, ಹಾನಿಯ ವ್ಯಾಪ್ತಿ ಹಾಗೂ ಹಾನಿಯ ಕಾರಣಗಳನ್ನು ಲಿಖಿತವಾಗಿ ನೀಡತಕ್ಕದ್ದು, ಇಂತಹ ಸಂಧರ್ಭದಲ್ಲಿ ಉಂಟಾಗುವ ನಷ್ಟದ ನಿರ್ಧರಣೆಯನ್ನು ವೈಯಕ್ತಿಕವಾಗಿ ನಿರ್ಧರಿಸಿ ಬೆಳೆವಿಮಾ ನಷ್ಟ ಪರಿಹಾರವನ್ನು ವಿಮಾ ಸಂಸ್ಥೆಯು ಕಂದಾಯ, ತೋಟಗಾರಿಕೆ ಹಾಗೂ ಕೃಷಿ ಇಲಾಖೆಗಳ ಸಮನ್ವಯದೊಂದಿಗೆ ಇತ್ಯರ್ಥ ಪಡಿಸುತ್ತದೆ. ಇದರ ಹೊರತು ಸಾಮಾನ್ಯ ಸಂಧರ್ಭಗಳಲ್ಲಿ ಬೆಳೆ ನಷ್ಟಗಳನ್ನು ಜಿಲ್ಲಾ ಸಮಿತಿ ಹಾಗೂ ಸರ್ಕಾರಗಳು ಅನುಮೋದಿಸಿರುವ Term Sheet ಗಳಲ್ಲಿನ Pay out structure, duration, indexಗಳನ್ನು ಮಾತ್ರ ಪರಿಗಣಿಸಿ ಬೆಳೆ ವಿಮಾ ನಷ್ಟ ಪರಿಹಾರವನ್ನು ವಿಮಾ ಸಂಸ್ಥೆಗಳು ಲೆಕ್ಕ ಹಾಕಿ ಇತ್ಯರ್ಥ ಪಡಿಸುತ್ತವೆ.

 

ಹಣಕಾಸು ಸಂಸ್ಥೆಗಳಿಂದ ಬೆಳೆ ಸಾಲವನ್ನು ಹೊಂದಿಲ್ಲದ ತೋಟಗಾರಿಕೆ ರೈತರು ನಿಗದಿತ ಅರ್ಜಿಯೊಂದಿಗೆ ಜಮೀನಿನ ಪಹಣಿ ಪ್ರತಿ(ಖಖಿಅ), ಉಳಿತಾಯ ಖಾತೆ ಪಾಸ್ ಪುಸ್ತಕ, ಆಧಾರ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ಹೊಂದಿಲ್ಲದಿದ್ದಲ್ಲಿ ಸರ್ಕಾರದ ಇತರೆ ಯಾವುದೇ ಅಧಿಕೃತ ಗುರುತಿನ ಚೀಟಿ, ಸ್ವಯಂ ಘೋಷಿಸಿ ದೃಢೀಕರಿಸಿದ ಜಮೀನಿನ ಬೆಳೆ ಪತ್ರ ಹಾಗೂ ಪ್ರಿಮಿಯಂ ವಿಮಾ ಮೊತ್ತದೊಂದಿಗೆ ಸಲ್ಲಿಸಿ ನೊಂದಣಿ ಮಾಡಿಸಿಕೊಳ್ಳಬಹುದು.

ಈ ಯೋಜನೆಯಡಿ ವಿಮಾ ನಷ್ಟ ಪರಿಹಾರವನ್ನುAdhar Card enabled RTGS/NEFT ಮೂಲಕ ಇತ್ಯರ್ಥಪಡಿಸಲಾಗುವ ಕಾರಣ ಎಲ್ಲಾ ರೈತರು ಆಧಾರ್ ಕಾರ್ಡ್ ಮಾಹಿತಿಗಳನ್ನು ಒದಗಿಸಲು ಕೋರಲಾಗಿದೆ.

ಈ ಯೋಜನೆಯನ್ನು ಭಾರತ ಸರ್ಕಾರ ಹಾಗೂ ಕರ್ನಾಟಕ ಸರ್ಕಾರಗಳು ರೈತ ಸಮುದಾಯಕ್ಕೆ ಉಪಯುಕ್ತವಾದ ಯೋಜನೆಯಾಗಿಸಲು ಉದ್ದೇಶಿಸಿರುವುದರಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದರಿ ಯೋಜನೆಯ ಲಾಭವನ್ನು ಪಡೆಯಲು ಕೋರಲಾಗಿದೆ. ಹೆಚ್ಚಿನ ವಿವರಗಳಿಗೆ ಸ್ಥಳೀಯ ವಾಣಿಜ್ಯ/ಗ್ರಾಮೀಣ ಸಹಕಾರಿ ಬ್ಯಾಂಕ್/ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರದ ತೋಟಗಾರಿಕೆ ಅಥವಾ ಕೃಷಿ ಅಧಿಕಾರಿಗಳು/ತಾಲೂಕು ಮಟ್ಟದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು/ಜಿಲ್ಲಾ ತೋಟಗಾರಿಕೆ ಉಪನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.

LEAVE A REPLY

Please enter your comment!
Please enter your name here