ಹಾರಾಡಿ ಶಾಲೆಯ ನೂತನ ಕೊಠಡಿ ಉದ್ಘಾಟನೆ, ತಾ|ಮಟ್ಟದ ಶೈಕ್ಷಣಿಕ ಸೌಲಭ್ಯಗಳ ವಿತರಣೆ

0

  • ಶಿಕ್ಷಣದ ಪರಿವರ್ತನೆಯಿಂದ ದೇಶ ಮತ್ತೊಮ್ಮೆ ಜಗದ್ಗುರುವಾಗಲಿದೆ-ಬಿ.ಸಿ.ನಾಗೇಶ್
  • ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ – ಸಂಜೀವ ಮಠಂದೂರು

  • ಜಿಲ್ಲೆಯಲ್ಲಿ ಶೇ.100 ಫಲಿತಾಂಶ ಪಡೆದ ಶಾಲೆಗಳು ಪುತ್ತೂರು ತಾಲೂಕಿನಲ್ಲಿ ಹೆಚ್ಚು-ಸಿ.ಲೊಕೇಶ್

ಪುತ್ತೂರು:ಈ ಬಾರಿ ರಾಜ್ಯದ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು 15ಸಾವಿರ ಶಿಕ್ಷಕರ ನೇಮಕಾತಿ ನಡೆಯಲಿದೆ.ಮೇ 25ಕ್ಕೆ ಅವರಿಗೆ ಪರೀಕ್ಷೆ ನಡೆಯಲಿದೆ.ಇದರ ಜೊತೆಗೆ ಮುಂದೆ ೭ ಸಾವಿರ ಶಾಲಾ ಕೊಠಡಿ ಕಟ್ಟಲು ಸರಕಾರ ನಿಶ್ಚಯಿಸಿದೆ.ಒಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ಪದ್ಧತಿಯನ್ನು ಜಾರಿ ಮಾಡುವ ಮೂಲಕ ಈ ದೇಶ ಮತ್ತೊಮ್ಮೆ ಜಗದ್ಗುರುವಾಗುವ ಪ್ರಯತ್ನ ಮಾಡಲಿದ್ದೇವೆ.ಇದಕ್ಕೆ ಶಿಕ್ಷಕರ ಸಹಕಾರ ಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.

ಹಾರಾಡಿ ಶಾಲೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಎರಡು ಕೊಠಡಿಗಳ ಉದ್ಘಾಟನೆ ನೆರವೇರಿಸಿ, ರೂ.೫ ಕೋಟಿ ವೆಚ್ಚದಲ್ಲಿ ತಾಲೂಕಿನ ೯೫ ಸರಕಾರಿ ಪ್ರಾಥಮಿಕ ಶಾಲೆಗಳು, ೯೦ ಪ್ರೌಢಶಾಲೆಗಳು, ೫ ಪದವಿ ಪೂರ್ವ ಕಾಲೇಜು ಮತ್ತು ೨ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳಿಗೆ ಬೆಂಚ್ ಡೆಸ್ಕ್, ಸ್ಮಾರ್ಟ್ ಕ್ಲಾಸ್ ಪರಿಕರಗಳು ಮತ್ತು ಶುದ್ಧ ಕುಡಿಯುವ ನೀರಿನ ಘಟಕ.ಮತ್ತು ೨೧೫ ಅಂಗನವಾಡಿಗಳಿಗೆ ಕುಡಿಯುವ ನೀರಿನ ಘಟಕ ಹಸ್ತಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಸರಕಾರ ಶಿಕ್ಷಣ ಇಲಾಖೆಗೆ ಅತೀ ಹೆಚ್ಚು ಅನುದಾನ ಖರ್ಚು ಮಾಡುತ್ತದೆ.ಸರ್ವ ಶಿಕ್ಷಣ ಅಭಿಯಾನದ ಮೂಲಕ ಅಟಲ್ ಬಿಹಾರಿ ವಾಜಪೇಯಿ ಅವರು ಶಿಕ್ಷಣಕ್ಕೆ ಒತ್ತುಕೊಟ್ಟಿದ್ದರು.ದೀನ್‌ದಯಾಳ್ ಅಂತ್ಯೋದಯದಿಂದ ಕಟ್ಟಕಡೆಯ ವ್ಯಕ್ತಿಯ ಅಭಿವೃದ್ಧಿ ಬಿಜೆಪಿಯ ಕನಸಾಗಿತ್ತು.ಶಿಕ್ಷಣ, ಶಿಕ್ಷಕರ ವಾತಾವರಣವನ್ನವರು ನಿರ್ಮಿಸಿದರು.ಮೋದಿಯವರು ಇನ್ನೂ ಮುಂದಕ್ಕೆ ಹೋಗಿ ಬೇಟಿ ಪಡಾವೋ ಬೇಟಿ ಬಚಾವೋ ಕಾರ್ಯಕ್ರಮ ಮಾಡಿದರು. ಇದರಿಂದ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ ಮಾಡಲಾಯಿತು.ಸ್ವಾತಂತ್ರ್ಯ ಹೋರಾಟಗಾರರ ಎಲ್ಲಾ ಲೇಖನ ಓದಿ ಈ ದೇಶ ಮತ್ತೊಮ್ಮೆ ಸ್ವಾಭಿಮಾನಿ, ಸ್ವಾವಲಂಬಿಯಾಗಿ ಪ್ರಪಂಚದ ಗುರುವಾಗಬೇಕೆಂದರು.೧೯೬೮ರಲ್ಲಿ ಇಂದಿರಾಗಾಂಧಿ ಹೊಸ ಶಿಕ್ಷಣ ನೀತಿ ತಂದರು.೧೯೮೬ರಲ್ಲಿ ರಾಜೀವ ಗಾಂಧಿ, ಬಳಿಕ ೯೨ರಲ್ಲಿ ಅದನ್ನೇ ಮೋಡಿಫೈ ಮಾಡಿದ್ದರು.ಯಾವ ಶಿಕ್ಷಣ ವ್ಯವಸ್ಥೆಯೂ ಆಮೂಲಾಗ್ರ ಬದಲಾವಣೆ ಮಾಡಿಲ್ಲ.ಮಕ್ಕಳನ್ನು ಇಟ್ಟುಕೊಂಡು ಶಿಕ್ಷಣ ಪದ್ಧತಿಯನ್ನು ಯೋಚನೆ ಮಾಡಿದ್ದಿಲ್ಲ.ಮಕ್ಕಳಿಗೆ ಏನು ಕೊಡಬೇಕೆಂಬ ಶಿಕ್ಷಣ ಇರಬೇಕು.ಈಗ ಹೊಸ ಶಿಕ್ಷಣ ನೀತಿಯಲ್ಲಿ ಮಗುವನ್ನು ಮುಖ್ಯವಾಗಿಟ್ಟುಕೊಂಡು ಶಿಕ್ಷಣ ನೀತಿ ನಡೆಯುತ್ತಿದೆ.ಮಗುವಿನಲ್ಲಿರುವ ಶಕ್ತಿಯನ್ನು ಗುರುತಿಸಿ ಆ ಶಕ್ತಿಯ ಮೂಲಕ ಶಿಕ್ಷಕರು ಯೋಚನೆ ಮಾಡಿ ಮಗುವಿಗೆ ನೆಮ್ಮದಿಯ ಶಿಕ್ಷಣ ಕೊಡಬೇಕು.ಶಿಕ್ಷಕರು ಇದಕ್ಕೆ ತಯಾರಾಗಬೇಕು ಎಂದು ಬಿ.ಸಿ.ನಾಗೇಶ್ ಹೇಳಿದರು.

ಜ್ಞಾನಾಭಿವೃದ್ಧಿಗೆ ಮಾತೃ ಭಾಷೆಯ ಶಿಕ್ಷಣ: ಇವತ್ತು ಇಂಗ್ಲಿಷ್ ಮೀಡಿಯಂ ಶಾಲೆ ಕೊಡಿ ಎಂಬ ಬೇಡಿಕೆ ಹೆಚ್ಚಾಗಿದೆ.ಎಲ್ಲೋ ಒಂದು ಕಡೆ ಬ್ರಿಟೀಷರ ಮೆಕಾಲೆ ಶಿಕ್ಷಣ ನಮ್ಮನ್ನು ಆ ಸ್ಥಿತಿಗೆ ತಂದಿದೆ.ಅದಕ್ಕಾಗಿ ಹೊಸ ಮಾದರಿ ಶಾಲೆಗಳನ್ನು ಯೋಜನೆ ಮಾಡುತ್ತೇವೆ.ಹೊಸ ಮಾದರಿ ಶಾಲೆಯಲ್ಲಿ ಮಕ್ಕಳಿಗೆ ಜ್ಞಾನಾಭಿವೃದ್ಧಿಯಾಗಬೇಕಾದರೆ ಮಾತೃಭಾಷೆಯಲ್ಲಿ ಶಿಕ್ಷಣ ಕೊಡುವ ಕೆಲಸ ಆಗುತ್ತದೆ.ಆ ಜ್ಞಾನದ ಅಭಿವೃದ್ಧಿಗೆ ಮಾದರಿ ಶಾಲೆಗಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ.ಇಲ್ಲಿ ಕಟ್ಟಡ, ಸಮವಸ್ತ್ರಕ್ಕಿಂತ ಮಿಗಿಲಾಗಿ ಪ್ರತಿ ತರಗತಿಗೆ ಶಿಕ್ಷಕರು, ಪ್ರತಿ ತರಗತಿಗೂ ಕೊಠಡಿ, ಇದರ ಜೊತೆಗೆ ಸ್ಪೋಕನ್ ಇಂಗ್ಲೀಷ್ ಕಲಿಸುವ ಪ್ರಯತ್ನ ನಡೆಯಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದರು.ಇದೇ ಸಂದರ್ಭದಲ್ಲಿ ಶಿಕ್ಷಣ ಸಚಿವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.

ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ:

ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಕೋವಿಡ್ ಬಳಿಕ ನಾವೆಲ್ಲ ಸಹಜ ಜೀವನಕ್ಕೆ ಬಂದ ಬಳಿಕ ಮಕ್ಕಳ ಪ್ರತಿಭೆ ಹೊರ ಸೂಸುವ ಕೆಲಸ ಆಗುತ್ತಿದೆ.ಎಸ್‌ಎಸ್‌ಎಲ್‌ಸಿಯ ಫಲಿತಾಂಶ ಪುತ್ತೂರಿಗೆ ಕೀರ್ತಿ ತಂದಿದೆ.ದೇಶದ ಮಾನಸಿಕತೆಯನ್ನು ಬದಲಾವಣೆ ಮಾಡಲು ಶಿಕ್ಷಣದಲ್ಲಿ ಬದಲಾವಣೆ ಮಾಡಬೇಕೆಂದು ಮೆಕಾಲೆ ಹೇಳಿದ್ದ.ಇವತ್ತು ಸರಕಾರ ಮೆಕಾಲೆ ಪದ್ಧತಿಯ ಬದಲಿಗೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಆಮೂಲಾಗ್ರ ಬದಲಾವಣೆ ಮಾಡುವ ಮೂಲಕ ಮತ್ತೊಮ್ಮೆ ದೇಶ ಜಗತ್ತಿನ ಗುರು ಸ್ಥಾನಕ್ಕೆ ಕೊಂಡೊಯ್ಯಲಿದೆ ಎಂದರು.

ಕೇಂದ್ರೀಯ ವಿದ್ಯಾಲಯದ ಮಾದರಿಯಲ್ಲಿ ಹಳ್ಳಿಯಲ್ಲೂ ಕೂಡಾ ಕರ್ನಾಟಕ ಪಬ್ಲಿಕ್ ಸ್ಕೂಲ್ ಇರಬೇಕೆಂದು ಕರ್ನಾಟಕ ಸರಕಾರ ಕಳೆದ ನಾಲ್ಕು ವರ್ಷಗಳಿಂದ ಇಂತಹ ಬದಲಾವಣೆ ತಂದಿದೆ. ಇದರಿಂದಾಗಿ ಹಳ್ಳಿಯ ಶಾಲೆಗಳು ಕೂಡಾ ಖಾಸಗಿ ಶಾಲೆಗಿಂತ ಏನೂ ಕಡಿಮೆ ಇಲ್ಲ ಎಂದರಲ್ಲದೆ, ಸರಕಾರ ಗುರಿ ಕೊಟ್ಟಂತೆ ಹಾರಾಡಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡುತ್ತೇನೆ ಎಂದರು.ಇದೇ ಸಂದರ್ಭದಲ್ಲಿ ಶಾಲೆಯ ವತಿಯಿಂದ ಶಾಸಕರನ್ನು ಗೌರವಿಸಲಾಯಿತು.

 

ವಿದ್ಯಾರ್ಥಿಗಳಿಗೆ ಸನ್ಮಾನ

ವಿದ್ಯಾರ್ಥಿಗಳಿಗೆ ಸನ್ಮಾನ, ಶಿಕ್ಷಕರಿಗೆ ಗೌರವ: ಎಸ್‌ಎಸ್‌ಎಲ್‌ಸಿಯಲ್ಲಿ ೬೨೫ ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಅಭಯ್‌ಶಂಕರ್ ಕೆ., ಆತ್ಮೀಯ ಎಂ ಕಶ್ಯಪ್, ಅಭಿಜ್ಞಾ ಆರ್, ವಿಠಲ್ ಜೇಸಿ ಪ್ರೌಢಶಾಲೆಯ ಧನ್ಯಶ್ರೀ, ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಶ್ರಾವ್ಯಲಕ್ಷ್ಮೀ ಕೆ, ಧೃತಿ ಕೆಮ್ಮಿಂಜೆ, ಅತಿಥಿ ಕೆ, ಸುದಾನ ವಸತಿಯುತ ಪ್ರೌಢಶಾಲೆಯ ಅರ್ಪಿತಾ ಶೇಟ್, ಉಪ್ಪಿನಂಗಡಿ ಶ್ರೀರಾಮ ಹೈಸ್ಕೂಲ್‌ನ ಕೃಷ್ಣಪ್ರಿಯ ಕೆ.ಎಸ್,,ಕೊಂಬೆಟ್ಟು ಪ್ರೌಢಶಾಲೆಯ ಅಭಿಲಾಷ ದೋಟ, ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಪೂರ್ವಿ, ರಾಮಕುಂಜೇಶ್ವರ ಶಾಲೆಯ ಜೀವನ್ ಎಸ್., ವಿವೇಕಾನಂದ ಶಾಲೆಯ ವಿವೇಕನಾರಾಯಣ, ಮಯೂರ್ ಟಿ.ಆರ್, ಪ್ರತ್ಯೇಶ್ ಆಚಾರ್ಯ ಅವರನ್ನು ಸಚಿವರು ಸನ್ಮಾನಿಸಿದರು.ಹಾರಾಡಿ ಶಾಲೆ ತಾಲೂಕಿನಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆಯಾಗಿದ್ದು ಈ ಶಾಲೆಯ ಶಿಕ್ಷಕರನ್ನು ಶಿಕ್ಷಣ ಸಚಿವರು ಹೂಗುಚ್ಚ ನೀಡಿ ಗೌರವಿಸಿದರು.

                                                                  ಶಿಕ್ಷಕರಿಗೆ ಸನ್ಮಾನ

ಕಿರುಚಿತ್ರ ಬಿಡುಗಡೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಂದರ್ಭ ಮನೆ ಮನೆ ಭೇಟಿಯ ವೇಳೆ ಮಾಹಿತಿ ಸಂಗ್ರಹಿಸಿ ಕಬಕ ಶಾಲೆಯ ಹಾರಾಡಿ ಮಕ್ಕಳೇ ಅಭಿನಯಿಸಿದ ಕಿರುಚಿತ್ರ `ಭರವಸೆಯೇ ಬಾಳಿನ ಬೆಳಕು’ ಅದರ ಪೋಸ್ಟರ್‌ನ್ನು ಶಿಕ್ಷಣ ಸಚಿವರು ಬಿಡುಗಡೆಗೊಳಿಸಿದರು.ರಾಮಕುಂಜ ಶಾಲೆಯ ಶಿಕ್ಷಕ ಮಲ್ಲೇಶಯ್ಯ, ಹಾರಾಡಿ ಶಾಲೆಯ ಗಂಗಾವತಿ ಮತ್ತು ಲತಾ ಕುಮಾರಿ ಅವರ ನೇತೃತ್ವದಲ್ಲಿ ಕಿರುಚಿತ್ರ ಮೂಡಿ ಬಂದಿದೆ.

ಜಿಲ್ಲೆಯಲ್ಲಿ ಅತೀ ಹೆಚ್ಚು ಶೇ.100 ಫಲಿತಾಂಶ ಪಡೆದ ತಾಲೂಕು ಪುತ್ತೂರು:

 

ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್ ಅವರು ಮಾತನಾಡಿ ಈ ಬಾರಿ ಎಸ್‌ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ಪುತ್ತೂರು ತಾಲೂಕಿನಲ್ಲಿ ಸಾಧಕರು ಬಹಳಷ್ಟು ಮಂದಿ ಇದ್ದಾರೆ.ಇದಲ್ಲದೆ ಜಿಲ್ಲೆಯಲ್ಲೇ ಶೇ.೧೦೦ ಫಲಿತಾಂಶ ಪಡೆದ ಶಾಲೆಗಳು ಪುತ್ತೂರು ತಾಲೂಕಿನಲ್ಲಿ ಹೆಚ್ಚಿವೆ.ಇದರ ಜೊತೆಗೆ ಹೊಸ ದಾಖಲಾತಿಯೂ ಹೆಚ್ಚಾಗಿದೆ.ಹಾರಾಡಿ ಶಾಲೆಯಲ್ಲೇ ೭೩೬ ವಿದ್ಯಾರ್ಥಿಗಳು ಇದ್ದಾರೆ ಎಂದರು. ಶಾಲಾ ಮುಖ್ಯಗುರು ಕೆ.ಕೆ.ಮಾಸ್ತರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಶಾಲೆಯ ಅವಶ್ಯಕತೆ ಪೂರೈಕೆ ಕುರಿತು ಮನವಿ ಮಾಡಿದರು.ವಿಧಾನ ಪರಷತ್ ಶಾಸಕ ಪ್ರತಾಪ್ ಸಿಂಹ ನಾಯಕ್, ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಸದಸ್ಯೆ ಪ್ರೇಮಲತಾ ನಂದಿಲ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಎಸ್.ಡಿ.ಎಮ್ ಸಿ ಅಧ್ಯಕ್ಷ ಕೃಷ್ಣ ನಾಯ್ಕ, ಶಿಕ್ಷಣ ಸಂಯೋಜಕ ಹರಿಪ್ರಸಾದ್, ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಮೇಶ್ ಶೆಟ್ಟಿ ಆನೆಮಜಲು, ಉದಯ ಕೋಲಾಡಿ, ಗುರುಪ್ರಸಾದ್, ಜಿನ್ನಪ್ಪ ಗೌಡ, ಪೂವಪ್ಪ ನಾಯ್ಕ, ರಾಧಾಕೃಷ್ಣ ರೈ ಅತಿಥಿಗಳನ್ನು ಗೌರವಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್ ಸ್ವಾಗತಿಸಿದರು. ಸಹಶಿಕ್ಷಕ ಬಾಲಕೃಷ್ಣ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.

 

ಕರ್ನಾಟಕ ಶಾಲೆಯಲ್ಲಿ ಮಾರ್ಕೆಟಿಂಗ್ ಫೇಲ್ ಆಗಿದೆ


ಕೆಲವು ಶಾಲೆಗಳು ದೊಡ್ಡ ದೊಡ್ಡ ಫ್ಲೆಕ್ಸ್ ಹಾಕುವುದನ್ನು ನೋಡುತ್ತೇವೆ.ಆದರೆ ಸರಕಾರಿ ಶಾಲೆಯ ಮಕ್ಕಳು ಎಷ್ಟೊಂದು ಸಾಧನೆ ಮಾಡಿದರೂ ಅದನ್ನು ಹೇಳಿಕೊಳ್ಳುವಲ್ಲಿ ಹಿಂದೇಟು ಹಾಕಿದ್ದೇವೆ. ಕರ್ನಾಟಕ ಶಾಲೆಯಲ್ಲಿ ಮಾರ್ಕೆಟಿಂಗ್‌ನಲ್ಲಿ ಫೇಲ್ ಆಗಿದ್ದೇವೆ.ಮಾರ್ಕೆಟ್ ಮಾಡಿಕೊಳ್ಳದೆ ಮಕ್ಕಳನ್ನು ಬೇರೆ ಬೇರೆ ಶಾಲೆಗಳಿಗೆ ಕಳುಹಿಸಿ ಆರ್ಥಿಕವಾಗಿ ಒದ್ದಾಡುವುದನ್ನು ನೋಡಿದ್ದೇವೆ. ದಕ್ಷಿಣ ಕನ್ನಡದಲ್ಲಿ ವಿಶೇಷವಾಗಿ ಏನಾದರೂ ಒಳ್ಳೆಯದು ಮಾಡಬೇಕೆಂದು ಖಾಸಗಿ ಶಾಲೆಗಳು ಕೂಡಾ ಹೆಚ್ಚು ಫೀಸ್ ಪಡೆಯದೆ ಸರಕಾರಿ ಶಾಲೆಯಂತೆ ಕೆಲಸ ಮಾಡುತ್ತಿದೆ., ಬಿ.ಸಿ.ನಾಗೇಶ್, ಶಿಕ್ಷಣ ಸಚಿವರು

 

 

 

LEAVE A REPLY

Please enter your comment!
Please enter your name here