ಕೊಳ್ನಾಡು: ಮನೆಯ ಮೇಲ್ಚಾವಣಿಯ ಹಂಚು ತೆಗೆದು ಚಿನ್ನಾಭರಣ ಕಳವು

0

ವಿಟ್ಲ: ಮನೆ ಮಂದಿ‌ ಸಂಬಂದಿಕರ ಮನೆಗೆ ತೆರಳಿದ್ದ ವೇಳೆ ಮನೆಯ ಮೇಲ್ಚಾವಣಿಯ ಹಂಚು ತೆಗೆದು ಒಳನುಗ್ಗಿದ ಕಳ್ಳರು ಚಿನ್ನಾಭರಣಗಳನ್ನು ಕಳವುಗೈದ ಘಟನೆ ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಕಟ್ಟೆ ಎಂಬಲ್ಲಿ ನಡೆದ ಬಗ್ಗೆ ವರದಿಯಾಗಿದೆ.

 


 
ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಕಟ್ಟೆ ಮನೆ ದಿ. ಅಬ್ದುಲ್ ಖಾದರ್ ರವರ ಪುತ್ರ ಕೆ.ಎಂ. ಮಹಮ್ಮದ್ ರವರ ಮನೆಯಲ್ಲಿ ಈ ಕಳವು ಕೃತ್ಯ ನಡೆದಿದೆ.
ಮೇ.೧೯ರಂದು ಸಾಯಂಕಾಲ ಮಹಮ್ಮದ್ ರವರು ತಮ್ಮ ಮನೆಯವರೊಂದಿಗೆ ಸಜೀಪಪಡು ಗ್ರಾಮದ ಗೋಳಿಪಡ್ಪು ಎಂಬಲ್ಲಿರುವ ತಮ್ಮ ತಂಗಿಯ ಮನೆಗೆ  ತೆರಳಿದ್ದರು. ಮೇ.೨೦ರಂದು ಸಾಯಂಕಾಲ ಮರಳಿ ಮನೆಗೆ ಬಂದು ನೋಡಿದಾಗ ಕಳವು ಕೃತ್ಯ ಬಯಲಾಗಿತ್ತು. ಮನೆಯೊಳಗೆ ಬಟ್ಟೆಗಳೆಲ್ಲ ಚೆಲ್ಲಾಪಿಲ್ಲಿಯಾಗಿತ್ತು ಮಾತ್ರವಲ್ಲದೆ ಮೇಲ್ಚಾವಣೆಯ ಹಂಚನ್ನು ತೆಗೆದಿರುವುದು ಕಂಡುಬಂತು. ಬಳಿಕ ಮಲಗುವ ಕೋಣೆಗೆ ತೆರಳಿ ನೋಡಿದಾಗ ಅಲ್ಲಿದ್ದ ಕಪಾಟ್ ಒಂದರ  ಬಾಗಿಲು ತೆರೆದಿರುವುದು ಕಂಡು ಬಂತು ಅದರಲ್ಲಿದ್ದ ಸುಮಾರು 5 ಪವನ್‌ ತೂಕದ ಒಂದು ಚಿನ್ನದ ನಕ್ಲೇಸ್‌,  ಒಂದು ಪವನ್‌ ತೂಕದ ಒಂದು ಚಿನ್ನದ  ಸರ, ಸುಮಾರು ಅರ್ದ ಪವನ್‌ ತೂಕದ ಒಂದು ಚಿನ್ನದ ಉಂಗುರ, ಹಾಗೂ ಕಪಾಟಿನ ಪಕ್ಕದಲ್ಲಿದ್ದ ಮೇಜಿನ ಡ್ರಾವರ್ ಒಳಗೆ ಇದ್ದ ಸುಮಾರು ೫೦೦೦ ರೂಪಾಯಿ  ನಗದು ಕಳವುಗೈದಿರುವುದು ಕಂಡುಬಂದಿದೆ. ಕಳವುಗೈದ ಸೊತ್ತಿನ ಒಟ್ಟು ಮೌಲ್ಯ ೧,೪೦,೦೦೦ ರೂಪಾಯಿ ಎಂದು ಅಂದಾಜಿಸಲಾಗಿದೆ.  ಘಟನೆಯ ಬಗ್ಗೆ ಮಾಹಿತಿ ಅರಿತ ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದಾರೆ‌. ಘಟನೆಗೆ ಸಂಬಂಧಿಸಿ ಮನೆ ಮಾಲಕ ಕೆ.ಎಂ.ಮಹಮ್ಮದ್ ನೀಡಿದ‌ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here