ಬೆಟ್ಟಂಪಾಡಿ ಕಾಲೇಜಿನ ಎನ್‌ಎಸ್‌ಎಸ್ ಶಿಬಿರ ಸಂಪನ್ನ:  ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ – ಪದ್ಮಶ್ರೀ ಅಮೈ ಮಹಾಲಿಂಗ ನಾಯ್ಕ

0

ಪುತ್ತೂರು: ವ್ಯಕ್ತಿ ಬದುಕಿನ ಸಾಧನೆಗೆ ಕಠಿಣ ಪರಿಶ್ರಮ ಮತ್ತು ಅಛಲವಾದ ನಂಬಿಕೆ ಅತ್ಯಗತ್ಯ ಎಂದು ಪದ್ಮಶ್ರೀ ಅಮೈ ಮಹಾಲಿಂಗ ನಾಯ್ಕರು ಹೇಳಿದರು. ಇವರು ಮೂಡಂಬೈಲು ಶಾಲೆಯಲ್ಲಿ ಜರುಗಿದ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿಯ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಮತ್ತು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ಶಿಬಿರಾರ್ಥಿಗಳು ಸುರಂಗ ನಿರ್ಮಾಣ ಹಾಗೂ ಕೃಷಿ ಬದುಕಿನ ಬಗ್ಗೆ ಹಲವಾರು ಪ್ರಶ್ನೆಗಳನ್ನು ಕೇಳಿ ಸಂವಾದದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.



ಕಾಲೇಜಿನ ಪ್ರಾಂಶುಪಾಲರಾದ ಡಾ. ವರದರಾಜ ಚಂದ್ರಗಿರಿ ಇವರು ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡುತ್ತಾ ವ್ಯವಸ್ಥಿತವಾಗಿ ಆಯೋಜಿಸಿದ ಎನ್ನೆಸ್ಸೆಸ್ ಶಿಬಿರ ವಿದ್ಯಾರ್ಥಿಗಳಿಗೆ ಹಲವಾರು ವಿಷಯಗಳ ಬಗ್ಗೆ ಜ್ಞಾನ ಮತ್ತು ಕೌಶಲ್ಯಗಳನ್ನು ಪಡೆಯಲು ಸಹಕಾರಿಯಾಗಿದೆ ಎಂದರು. ಅಲ್ಲದೆ ಶಿಬಿರದ ಯಶಸ್ಸಿಗೆ ಸಹಕರಿಸಿದ ಮೂಡಂಬೈಲು ಶಾಲೆ, ಯುವಕ ಮಂಡಲ ಹಾಗೂ ಸಾರ್ವಜನಿಕರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಪುಣಚ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಲಾವಣ್ಯ, ಅಮೃತ ಸಮುದಾಯ ಅಭಿವೃದ್ಧಿ ಯೋಜನೆಯ ಭಾಗವಾಗಿ ಅನುಷ್ಠಾನಗೊಂಡ ಈ ವಾರ್ಷಿಕ ವಿಶೇಷ ಶಿಬಿರ ಬೆಟ್ಟಂಪಾಡಿ ಕಾಲೇಜು ಮತ್ತು ಪುಣಚ ಗ್ರಾಮ ಪಂಚಾಯಿತ್ ಜೊತೆಗೆ ಉತ್ತಮ ಸಂಬಂಧ ಬೆಳೆಯಲು ನಾಂದಿಯಾಗಿದೆ ಎಂದರು. ಶಿಬಿರದ ಕಾರ್ಯಕ್ರಮಗಳಿಗೆ ಆಶ್ರಯದಾತರಾದ ಮೂಡಂಬೈಲು ಯುವಕ ಮಂಡಲದ ಅಧ್ಯಕ್ಷರಾದ ರವಿಚಂದ್ರ ಪೂಜಾರಿ ಬಳಂತಿಮೊಗರು ಮಾತನಾಡುತ್ತಾ ಶಿಬಿರಾರ್ಥಿಗಳ ಶಿಸ್ತುಬದ್ಧ ಭಾಗವಹಿಸುವಿಕೆಗೆ ಪ್ರಶಂಸೆ ವ್ಯಕ್ತಪಡಿಸಿದರು.

ಸಮಾರೋಪ ಭಾಷಣಗೈದ ಮೂಡಂಬೈಲು ಶಾಲೆಯ ಅಧ್ಯಾಪಕರಾದ ಅರವಿಂದ ಕುಡ್ಲರು ಶಿಬಿರದಲ್ಲಿ ಆಯೋಜಿಸಿದ ವಿವಿಧ ಕಾರ್ಯಕ್ರಮಗಳ ಪ್ರಯೋಜನ ಮತ್ತು ಮುಂದುವರಿಕೆಯ ಬಗ್ಗೆ ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು. ಕೃತಜ್ಞತಾ ಮಾತುಗಳನ್ನಾಡಿದ ಶಿಬಿರಾಧಿಕಾರಿಗಳಾದ ಹರಿಪ್ರಸಾದ್ ಎಸ್ ಶಿಬಿರದ ಯಶಸ್ಸು ಶಾಲೆ, ಯುವಕ ಮಂಡಲ ಹಾಗೂ ಸಾರ್ವಜನಿಕರ ಸಹಕಾರದಿಂದ ಸಾಧ್ಯವಾಯಿತು ಈ ಸಹಕಾರ ಮುಂದೆಯೂ ಇರಲಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಿಬಿರಕ್ಕೆ ವಿವಿಧ ರೀತಿಯಲ್ಲಿ ಸಹಕರಿಸಿದವರನ್ನು ಗುರುತಿಸಿ ಗೌರವಿಸಲಾಯಿತು. ಶಿಬಿರದ ಸಂಪೂರ್ಣ ವರದಿಯನ್ನು ಶಿಬಿರಾರ್ಥಿಗಳಾದ ಶೈಲಜಾ ಎನ್ ಮತ್ತು ಅನನ್ಯ ಎಸ್ ವಾಚಿಸಿದರು, ಸಾರ್ಥಕ್ ಟಿ, ಲಿಖಿತಾ ಕೆ, ರಂಜಿತಾ ಜಿ ಶಿಬಿರದ ಅನುಭವ ಮತ್ತು ಕಲಿಕೆಗಳನ್ನು ಹಂಚಿಕೊಂಡರು.

ವೈಭವಿ ಕಲಾ ಭವನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಭಾ ಕಾರ್ಯಕ್ರಮದ ನಂತರ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು ಮತ್ತು ತದನಂತರದಲ್ಲಿ ಶಾಲಾ ಆವರಣದಲ್ಲಿ ನಡೆದ ಶಿಬಿರ ಜ್ಯೋತಿಯೊಂದಿಗೆ ಶಿಬಿರವು ಸಂಪನ್ನಗೊಂಡಿತು. ಸಹ ಶಿಬಿರಾಧಿಕಾರಿಗಳಾದ ವಸಂತ್ ಕುಮಾರ್ ಎಚ್ ಸ್ವಾಗತಿಸಿದರು, ಶಿಬಿರಾರ್ಥಿಗಳಾದ ಕೃತಿ ರೈ ಕೆ ವಂದಿಸಿದರು, ಅನುಪಮ ಕೆ ಮತ್ತು ಪುಣ್ಯಶ್ರೀ ರೈ ಜಿ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here