ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ಕಾಮಗಾರಿ ಅವಾಂತರ

0

  • ಮುಚ್ಚಲ್ಪಟ್ಟ ಚರಂಡಿಗೆ ಕಂಟೈನರ್ ಮುಗುಚಿ ಬಿದ್ದು, ಸಂಚಾರಕ್ಕೆ ಅಡ್ಡಿ
  •  3 ತಾಸು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತಡೆ
  •  ಸ್ಥಳೀಯ ಟೀಂ ಚಕ್ರವರ್ತಿ ತಂಡದಿಂದ ಸಮಯೋಚಿತ ಸಹಾಯ

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವಾಂತರದಿಂದಾಗಿ ಕರ್‍ವೇಲ್ ಎಂಬಲ್ಲಿ 2 ಬೃಹತ್ ಕಂಟೈನರ್ ವಾಹನ ಇಕ್ಕಡೆಯಲ್ಲಿ ಚರಂಡಿಗೆ ಮಗುಚಿ ಬಿದ್ದ ಪರಿಣಾಮ ಸುಮಾರು 3 ತಾಸಿಗೂ ಅಧಿಕ ಹೊತ್ತು ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತಡೆ ಉಂಟಾಗಿದ್ದು, ವಾಹನ ಚಾಲಕರು, ಶಾಲಾ ವಿದ್ಯಾರ್ಥಿಗಳು ಸಮಸ್ಯೆಗೆ ಸಿಲುಕಿರುವ ಬಗ್ಗೆ ವರದಿಯಾಗಿದೆ.

ಕರ್‍ವೇಲ್ ಎಂಬಲ್ಲಿ ಹೆದ್ದಾರಿ ಚತುಚ್ಪಥ ಕಾಮಗಾರಿ ನಡೆಸುವವರು ರಸ್ತೆ ಬದಿಯಲ್ಲಿ ಅಗೆದು ಹಾಕಿದ್ದು, ಇದರ ಮಣ್ಣು ರಸ್ತೆ ಬದಿಯ ಚರಂಡಿಗೆ ಹಾಕಿದ್ದು, ಚರಂಡಿ ಸಂಪೂರ್ಣವಾಗಿ ಮುಚ್ಚಲ್ಪಟ್ಟಿದೆ. ಹೀಗಾಗಿ ವಾಹನ ಚಾಲಕರು ಇನ್ನೊಂದು ವಾಹನಕ್ಕೆ ಸೈಡ್ ಕೊಡುವ ಭರದಲ್ಲಿ ರಸ್ತೆಗೆ ಅಂಚಿಗೆ ಹೋದಾಗ ವಾಹನಗಳು ನೇರವಾಗಿ ಚರಂಡಿಯಲ್ಲಿ ಹೂತು ಹೋಗುವುದು, ಮಗುಚಿ ಬೀಳುವುದು ನಿರಂತರವಾಗಿ ನಡೆಯುತ್ತಿದ್ದು, ಮೇ. 23 ರಂದು ಬೆಳಿಗ್ಗೆ 2 ಕಂಟೈನರ್ ಲಾರಿ ರಸ್ತೆ ಬದಿಯಲ್ಲಿ ಮುಗುಚಿ ಬಿದ್ದು, ಈ ಅವಘಢ ಸಂಭವಿಸಿದೆ.

3 ತಾಸು ಸಂಚಾರಕ್ಕೆ ತಡೆ:
ಬೆಳಿಗ್ಗೆ 8 ಗಂಟೆಯ ಹೊತ್ತಿಗೆ ಮೊದಲ ಕಂಟೈನರ್ ಮುಗುಚಿ ಬಿದ್ದಿದ್ದು, ಸ್ವಲ್ಪ ಹೊತ್ತಿನ ನಂತರ ಬಂದ ಇನ್ನೊಂದು ಕಂಟೈನರ್ ಹೋಗುವಾಗ ಇನ್ನೊಂದು ಬದಿಯಲ್ಲಿ ಚರಂಡಿಯಲ್ಲಿ ಹೂತು ಹೋಗಿ ಸ್ಥಗಿತಗೊಂಡಿತು. ಹೀಗಾಗಿ ಹೆದ್ದಾರಿ ಸಂಪೂರ್ಣವಾಗಿ ಮುಚ್ಚಲ್ಪಟ್ಟಿತು. ಲಘು ವಾಹನಗಳೂ ಹೋಗಲಾಗದೆ, ಉದ್ಯೋಗಿಗಳು, ಕಾರ್ಮಿಕರು, ಶಾಲಾ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಯಿತು.

ಸುಮಾರು 3 ತಾಸಿಗೂ ಅಧಿಕ ಹೊತ್ತು ಹೆದ್ದಾರಿಯಲ್ಲಿ ವಾಹನ ಸ್ಥಗಿತಗೊಂಡಿದ್ದು, ಕರ್‍ವೇಳ್‌ನಿಂದ ಪೆರ್ನೆ ತನಕ ಮತ್ತು ಕರ್‍ವೇಳ್‌ನಿಂದ ನೆಕ್ಕಿಲಾಡಿ ತನಕ ವಾಹನಗಳು ನಿಲುಗಡೆಗೊಂಡಿದ್ದವು. ಬಳಿಕ ಕ್ರೇನ್ ತರಿಸಲಾಗಿ ಕಂಟೈನರ್‌ನ್ನು ಎಳೆದು ಬದಿಗೆ ಸರಿಸಲಾಗಿ ಬಳಿಕ ವಾಹನಗಳನ್ನು ಸಂಚಾರಕ್ಕೆ ರಸ್ತೆ ಮುಕ್ತಗೊಳಿಸಲಾಯಿತು.

ಕಂಟೈನರ್ ರಸ್ತೆಗೆ ಅಡ್ಡವಾಗಿ ಮಗುಚಿ ಬಿದ್ದು, ರಸ್ತೆಯಲ್ಲಿ ವಾಹನಗಳ ಸಂಚಾರ ಅಸ್ತವ್ಯಸ್ತಗೊಳ್ಳುತ್ತಿದ್ದಂತೆ ಸ್ಥಳೀಯ ಟೀಂ ಚಕ್ರವರ್ತಿ ಯುವಕರ ತಂಡದ ಹಕೀಂ ಮತ್ತು ಅಶ್ರಫ್ ನೇತೃತ್ವದಲ್ಲಿ ಲಘು ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಡಲಾಗಿ, ಸಂಚಾರಿ ಪೊಲೀಸರಿಗೆ ಮತ್ತು ಕ್ರೈನ್‌ನವರಿಗೆ ಮಾಹಿತಿ ನೀಡಿ ಸಮಯೋಚಿತ ಸಹಾಯ ಮಾಡಿದರು. ಬಳಿಕ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ, ಅಡ್ಡಾದಿಡ್ಡಿ ನಿಲ್ಲಿಸಲಾಗಿದ್ದ ವಾಹನಗಳನ್ನು ಬದಿಗೆ ಸರಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

LEAVE A REPLY

Please enter your comment!
Please enter your name here