ಕೋಡಿಂಬಾಡಿ: ಹಲವು ಸಮಸ್ಯೆಗಳನ್ನು ವಿರೋಧಿಸಿ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗ್ರಾ.ಪಂ. ಕಛೇರಿ ಎದುರು ಕಾಂಗ್ರೆಸ್ ಪ್ರತಿಭಟನೆ

0

ಪುತ್ತೂರು: ಗ್ರಾಮ ಪಂಚಾಯತ್ ಆಡಳಿತದ ವೈಫಲ್ಯ ವಿರೋಧಿಸಿ ಹಾಗೂ ಸ್ಥಳೀಯ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೋಡಿಂಬಾಡಿ ಗ್ರಾಮ ಪಂಚಾಯತ್ ಕಚೇರಿ ಎದುರು ವಲಯ ಕಾಂಗ್ರೆಸ್ ನೇತೃತ್ವದಲ್ಲಿ ಮೇ ೨೩ರಂದು ಪ್ರತಿಭಟನೆ ನಡೆಸಲಾಯಿತು. ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ನಮ್ಮ ಮನವಿ ಸ್ವೀಕರಿಸಬೇಕು, ಇಲ್ಲದಿದ್ದರೆ ನಮ್ಮ ಧರಣಿ ಸಂಜೆಯಾದರೂ ಹಿಂತೆಗೆಯುವುದಿಲ್ಲ ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದೇ ಇದ್ದರೆ ಪಂಚಾಯತ್ ಕಛೇರಿಗೆ ಬೀಗ ಜಡಿಯುವುದಾಗಿ ಎಚ್ಚರಿಸಿದರು. ಬೆಳಿಗ್ಗೆಯಿಂದ ಪ್ರತಿಭಟನಾ ಧರಣಿ ನಡೆಸಲಾಗಿದ್ದು ಮಧ್ಯಾಹ್ನದ ವೇಳೆಗೆ ಉಪ್ಪಿನಂಗಡಿ ನಾಡಕಚೇರಿಯ ಉಪ ತಹಶೀಲ್ದಾರ್ ಚೆನ್ನಪ್ಪ ಗೌಡ ಹಾಗೂ ಪುತ್ತೂರು ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕಿ ಶೈಲಜಾ ಪ್ರಕಾಶ್‌ರವರು ಭೇಟಿ ನೀಡಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್‌ನ ಆಡಳಿತದಲ್ಲಿ ವೈಫಲ್ಯವಾಗಿದೆ ಹಾಗೂ ಸ್ಥಳೀಯ ಸಮಸ್ಯೆಗಳ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಅಧಿಕಾರಿಗಳಿಗೆ ತಿಳಿಸಿದ ಪ್ರತಿಭಟನಾಕಾರರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. ಈ ಸಮಸ್ಯೆಗಳನ್ನು ಪರಿಶೀಲಿಸಿ, ಮೇಲಾಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ ಬಳಿಕ ಪ್ರತಿಭಟನೆ ವಾಪಸ್ ಪಡೆದುಕೊಳ್ಳಲಾಯಿತು. ಅಲ್ಲದೆ ನಿಗದಿತ ದಿನಗಳಲ್ಲಿ ನಮ್ಮ ಬೇಡಿಕೆ ಈಡೇರದೇ ಇದ್ದಲ್ಲಿ ತಾಲೂಕು ಪಂಚಾಯತ್ ಕಚೇರಿ ಮುಂಭಾಗದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಮತ್ತು ಬಡವರ ಹಕ್ಕು ಪತ್ರ ರದ್ದು ಮಾಡಿದರೆ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಈ ಸಂದರ್ಭದಲ್ಲಿ ಎಚ್ಚರಿಸಿದರು. ಬೆಳಿಗ್ಗೆ ಪ್ರತಿಭಟನೆ ಆರಂಭಿಸಿದ ಬಳಿಕ ಮಧ್ಯಾಹ್ನ ಪ್ರತಿಭಟನೆ ಮುಗಿಯುವವರೆಗೆ ಗ್ರಾ.ಪಂ. ಕಛೇರಿ ಎದುರು ಧರಣಿ ನಡೆಸಿದ ಪ್ರತಿಭಟನಾಕಾರರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಫಲಕಗಳನ್ನು ಪ್ರದರ್ಶಿಸಿದರು. ಅಲ್ಲದೆ, ಪ್ರಮುಖರು ನಿರಂತರವಾಗಿ ಭಾಷಣ ಮಾಡಿ ಪಂಚಾಯತ್ ಆಡಳಿತ ಮತ್ತು ಶಾಸಕರಾದಿಯಾಗಿ ಜನಪ್ರತಿನಿಧಿಗಳಿಗೆ ದಿಕ್ಕಾರ ಕೂಗಿದರು. ಬಿಜೆಪಿಗೂ ಧಿಕ್ಕಾರ ಹಾಕಿದ ಕಾಂಗ್ರೆಸ್ಸಿಗರು ಅಧಿಕಾರಿಗಳದ್ದು ತಪ್ಪಿಲ್ಲ, ಇಂತಹ ಸಮಸ್ಯೆ ಉಂಟಾಗಲು ಮತ್ತು ಆಡಳಿತ ವೈಫಲ್ಯ ಉಂಟಾಗಲು ಜನಪ್ರತಿನಿಧಿಗಳೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪುತ್ತೂರು ನಗರ ಠಾಣಾ ಎಸ್.ಐ ರಾಜೇಶ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

ಬಿಜೆಪಿ ಸರಕಾರ ಬಡವರಿಗೆ ಯಾವುದೇ ಸೌಲಭ್ಯ ನೀಡುವುದಿಲ್ಲ-ಎಂ.ಎಸ್:

ಪ್ರತಿಭಟನೆಯನ್ನು ಉದ್ದೇಶಿಸಿ ಜಿ.ಪಂ. ಮಾಜಿ ಸದಸ್ಯ ಎಂ.ಎಸ್ ಮಹಮ್ಮದ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ವಿದ್ಯಾಭ್ಯಾಸದ ಪ್ರಮಾಣ ಪತ್ರ ಬಗ್ಗೆ ಸಂಶಯವಿದೆ. ಅವರ ನೇತೃತ್ವದಲ್ಲಿರುವ ಬಿಜೆಪಿಗೆ ವಿದ್ಯಾಭ್ಯಾಸದ ಅಗತ್ಯವಿಲ್ಲ. ನಮ್ಮ ಜಿಲ್ಲೆಯ ಸಂಸದರಿಗೇ ಭಾಷೆಯ ಅರಿವಿಲ್ಲದೇ ಇರುವಾಗ ಸಂಜೀವಿನಿ ಒಕ್ಕೂಟಕ್ಕೆ ನೇಮಕ ಮಾಡುವಾಗ ವಿದ್ಯಾಭ್ಯಾಸ ಅರ್ಹತೆ ಬರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ದಲಿತರ ಮನೆ ಊಟ ಮಾಡಿ ಪ್ರಚಾರ ಮಾಡುವ ಬಿಜೆಪಿಯವರು ದಲಿತರಿಗೆ ಅವಮಾನ ಮಾಡುವ ಪಿತೂರಿ ನಡೆಸುತ್ತಿದ್ದಾರೆ. ದಲಿತರಿಗೆ ನೀಡಿದ ೯೪ಸಿ ಹಕ್ಕು ಪತ್ರ ರದ್ಧತಿಗೆ ಶಾಸಕರು ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದರೆ ಇವರ ಮನಸ್ಥಿತಿ ಹೇಗಿದೆ ಎಂದು ತಿಳಿದುಕೊಳ್ಳಬಹುದು ಎಂದ ಅವರು, ಉದ್ಯೋಗ ಖಾತರಿ ಯೋಜನೆಗೆ ಕತ್ತರಿ ಹಾಕುತ್ತಾರೆ. ಬಿಜೆಪಿಯವರಿಗೆ ಓಟಿಗೆ ಮಾತ್ರ ಬಡವರು. ಯಾವುದೇ ಸೌಲಭ್ಯವನ್ನು ಬಿಜೆಪಿ ಸರಕಾರ ನೀಡುತ್ತಿಲ್ಲ. ಕಳೆದ ವರ್ಷದಲ್ಲಿ ಬಿಜೆಪಿ ಸರಕಾರ ಮನೆ ನೀಡಿಲ್ಲ. ಅಧಿಕಾರಿಗಳು ಬಿಜೆಪಿಯ ಕೈಗೊಂಬೆಯಾಗಿ ಕೆಲಸ ಮಾಡಬಾರದು ಎಂದರು. ಧರ್ಮದ ಆಧಾರದಲ್ಲಿ ರಾಜಕೀಯ ಮಾಡುವ ಬಿಜೆಪಿಯವರಿಗೆ ಧಿಕ್ಕಾರ ಹಾಕುವ ವ ಕೆಲಸ ಬಲ್ನಾಡು ಉಪ ಚುನಾವಣೆಯಲ್ಲಿನಡೆದಿದೆ. ಇದು ಮುಂದಿನ ವಿಧಾನಸಭಾ ಚುನಾವಣೆಗೆ ಮುನ್ಸೂಚನೆಯಾಗಿದೆ. ಬಿಜೆಪಿಯವರಿಗೆ ವಿದ್ಯಾಭ್ಯಾಸ ಬೇಕಾಗಿಲ್ಲ. ೪೦% ಕಮೀಷನ್ ಮಾತ್ರ ಬೇಕಾಗಿರುವುದು ಎಂದು ಹೇಳಿದ ಎಂ.ಎಸ್. ಮಹಮ್ಮದ್‌ರವರು, ಈಶ್ವರಪ್ಪ ಕಳೆದ ೧೫ ದಿನಗಳಲ್ಲಿ ಹಣ ಎಣಿಕೆ ನಡೆಸಿದ್ದಾರೆ. ಲಂಚ, ಮಂಚವೇ ಬಿಜೆಪಿ ಆಡಳಿತ. ನೆಮ್ಮದಿಯ ಬದುಕಿಗೆ ಕಾಂಗ್ರೆಸ್ ಬೆಂಬಲಿಸಬೇಕು ಎಂದರು.

ಭ್ರಷ್ಟಾಚಾರ, ಅವ್ಯವಹಾರ ನಡೆಯುತ್ತಿದೆ-ಎಂ.ಬಿ:

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ ಮಾತನಾಡಿ, ಬಿಜೆಪಿ ಸರಕಾರದ ಆಡಳಿತ ವೈಫಲ್ಯಕ್ಕೆ ಬಲ್ನಾಡು ಉಪಚುನಾವಣೆ ನಿದರ್ಶನ. ಅವರ ಆಡಳಿತ ಇರುವಲ್ಲಿ ಭ್ರಷ್ಟಾಚಾರ, ಅವ್ಯಹಾರ ನಡೆಯುತ್ತಿದೆ. ಜನರಿಗೆ ಹಿತವಲ್ಲದ ಅಧಿಕಾರ ಇದ್ದು ಪ್ರಯೋಜನವಿಲ್ಲ. ಅವರು ಹಣಕ್ಕಾಗಿ ಕೆಲಸ ಮಾಡುತ್ತಾರೆ. ಎಲ್ಲಾ ಕಡೆಗಳಲ್ಲಿ ಕಳಪೆ ಕಾಮಗಾರಿಗಳು ನಡೆಯುತ್ತಿವೆ. ಎಲ್ಲಾ ಕಡೆ ಕಾಮಗಾರಿಗಳು ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ. ಹೆಸರಿಗಷ್ಟೆ ಉದ್ಘಾಟನೆ, ಶಿಲಾನ್ಯಾಸಗಳು ನಡೆಯತ್ತದೆ. ಕೋಮುವಾದದಲ್ಲಿ ಮತಕ್ಕಾಗಿ ಕೆಲಸ ಮಾಡುತ್ತಿರುವ ಬಿಜೆಪಿ ಜಗತ್ತಿನ ಶ್ರೀಮಂತ ಪಕ್ಷ ಹೀಗಾಗಿ ಜನ ಸಾಮಾನ್ಯರ ಕಷ್ಟ ಅವರಿಗೆ ಅರ್ಥವಾಗುವುದಿಲ್ಲ ಎಂದರು. ಜನ ಸಾಮಾನ್ಯರಿಗೆ ಬೇಕಾದ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಅನ್ಯಾಯ ತಡೆಯಬೇಕು. ನಮ್ಮ ಹಕ್ಕು, ಉzಶ ಪಡೆಯಲು ಹೋರಾಟ ನಿರಂತರವಾಗಿ ನಡೆಯಬೇಕು ಎಂದು ಅವರು ಹೇಳಿದರು.

ದಲಿತರಿಗೆ ಅನ್ಯಾಯ ಮಾಡುತ್ತಿದ್ದಾರೆ-ರಂಜಿತಾ:

ಫಲಾನುಭವಿ ರಂಜಿತಾ ಮಾತನಾಡಿ, ೯೪ಸಿಯಲ್ಲಿ ಹಕ್ಕು ಪತ್ರ ಪಡೆದ ನಿವೇಶನದಲ್ಲಿ ಪಂಚಾಯತ್‌ನಿಂದ ಅನುಮತಿ ಪಡೆದು ಮನೆ ಕಟ್ಟಲು ಮುಂದಾದರೆ ಅದನ್ನು ತಡೆ ಹಿಡಿಯುತ್ತಾರೆ. ನಮ್ಮ ಮನೆಗೆ ತೆರಳಲು ಸರಿಯಾದ ರಸ್ತೆಯಿಲ್ಲ. ಈಗಿರುವ ನಮ್ಮ ಮನೆ ಬೀಳುವ ಸ್ಥಿತಿಯಲ್ಲಿದೆ. ತಂದೆಯ ಸ್ವಾಧೀನದಲ್ಲಿರುವ ಜಾಗದಲ್ಲಿ ಮನೆ ಕಟ್ಟಲು ಮುಂದಾದರೆ ಅದನ್ನು ತಡೆಯುತ್ತಾರೆ. ತಹಶೀಲ್ದಾರರ ಮೂಲಕ ಒತ್ತಡ ತಂದು ಬೆದರಿಕೆ ಹಾಕಿದ್ದಾರೆ. ಪಂಚಾಯತ್ ಅಧ್ಯಕ್ಷರು ಓಟು ಕೇಳಲು ಎಲ್ಲರ ಮನೆಗೆ ಬರುತ್ತಾರೆ. ಕೂಲಿ ಮಾಡಿ ಮನೆ ನಿರ್ಮಾಣ ಮಾಡಲು ಮುಂದಾದರೆ ದಲಿತರಿಗೆ ಶೋಷಣೆ ಮಾಡುತ್ತಾರೆ. ಜಿ.ಪಂ ಮಾಜಿ ಸದಸ್ಯೆ ಶಯನಾ ಜಯಾನಂದರವರು ಇದಕ್ಕೆಲ್ಲಾ ಪ್ರಮುಖ ಕಾರಣರು. ಅವರು ಶಾಸಕರಿಗೆ ದೂರು ನೀಡಿ ತಡೆಯುತ್ತಿದ್ದಾರೆ. ದಲಿತರಿಗೆ ಮನೆ ಕಟ್ಟಲು ಬಿಡುತ್ತಿಲ್ಲ ಎಂದು ಆರೋಪಿಸಿದರು. ಬಿಜೆಪಿ ಸರಕಾರ ಅನ್ಯಾಯ ಮಾಡುತ್ತಿದೆ, ಪಂಚಾಯತ್‌ನ ನಿಯಮಗಳಂತೆ ಮನೆಕಟ್ಟಲು ಮುಂದೆಯೂ ದಲಿತರಿಗೆ ಅನ್ಯಾಯ ಮಾಡುತ್ತಿದ್ದಾರೆ. ನಮ್ಮ ಹಕ್ಕು ಪತ್ರ ಅಕ್ರಮವಾಗಿದ್ದರೆ ಗ್ರಾಮದಲ್ಲಿರುವ ಎಲ್ಲಾ ಹಕ್ಕು ಪತ್ರಗಳ ತನಿಖೆ ನಡೆಸಬೇಕು ಎಂದ ಅವರು ನಾವು ಅದೇ ಜಾಗದಲ್ಲಿ ಮತ್ತೆ ಮನೆ ನಿರ್ಮಿಸುತ್ತೇವೆ. ಯಾರೇ ಬಂದರೂ ನಾವು ಬಿಡುವುದಿಲ್ಲ ಎಂದರು.

ರಾಮರಾಜ್ಯದ ಕನಸು ನನಸಾಗಲು ಸಾಧ್ಯವಿಲ್ಲ-ಸುಭಾಶ್ಚಂದ್ರ ಶೆಟ್ಟಿ:

ಕಾಂಗ್ರೆಸ್ ಪಂಚಾಯತ್‌ ರಾಜ್ ಘಟಕದ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಮಾತನಾಡಿ, ಅಧಿಕಾರವನ್ನು ಅಭಿವೃದ್ಧಿಗಾಗಿ ಬಳಸಿಕೊಳ್ಳಬೇಕು. ರಾಜಕೀಯಕ್ಕೆ ಬಳಸಬಾರದು. ಇಲ್ಲಿನ ಆಡಳಿತ ಜನಹಿತ ಬಿಟ್ಟು ರಾಜಕೀಯ ದೃಷ್ಠಿಯಲ್ಲಿ ಕೆಲಸ ಮಾಡುತ್ತಿದೆ. ಪಂಚಾಯತ್‌ನ ದುರಾಡಳಿದಿಂದ ಗಾಂಧಿಯವರ ರಾಮರಾಜ್ಯದ ಕನಸು ನನಸಾಗಲು ಸಾಧ್ಯವಿಲ್ಲ. ರಾಮ ಭಕ್ತರಾಗಲು ಸಾಧ್ಯವಿಲ್ಲ. ಪಂಚಾಯತ್ ಆಡಳಿತ ವ್ಯವಸ್ಥೆಯ ಬಗ್ಗೆ ಜನತೆ ವಿಶ್ವಾಸ ಕಳೆದುಕೊಂಡಿದ್ದಾರೆ. ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಕೆಲಸ ಮಾಡಿದರೆ ಮುಂದೆ ನೀವೇ ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಬೇಕಾಗುತ್ತದೆ. ಹಿಂದಿನ ಅವಧಿಯಲ್ಲಿ ಹಕ್ಕು ಪತ್ರ ನೀಡಿದರೂ ಆಡಳಿತ ಬದಲಾವಣೆಯಾದ ಬಳಿಕ ಅದನ್ನು ಸ್ಥಗಿತಗೊಳಿಸಲಾಗಿದೆ. ಸ್ವಜನ ಪಕ್ಷಪಾತ ಆಡಳಿತ ವ್ಯವಸ್ಥೆಗೆ ವಿರುದ್ಧವಾಗಿದೆ. ಒತ್ತಡಕ್ಕೆ ಮಣಿದು ಕೆಲಸ ಮಾಡಿದರೆ ಮುಂದೆ ಅಧಿಕಾರಿಗಳೇ ಉತ್ತರ ಕೊಡಬೇಕು ಎಂದು ಹೇಳಿದರು.

ಬಿಜೆಪಿ ಸರಕಾರಕ್ಕೆ ಧಿಕ್ಕಾರ-ಡಾ. ರಾಜಾರಾಮ್:

ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜರಾಮ್ ಕೆ.ಬಿ. ಮಾತನಾಡಿ, ದಲಿತೋದ್ಧಾರ ಅಂದರೆ ಅವರ ಮನೆಯಲ್ಲಿ ಊಟ ಮಾಡುವುದಕ್ಕೆ ಸೀಮಿತವಲ್ಲ. ದಲಿತರಿಗೆ ನೀಡಿದ ಮನೆ ಕಸಿದುಕೊಳ್ಳುವುದು, ಮೀಸಲಾತಿಯ ಉದ್ಯೋಗ ನೀಡದಿರುವುದು ದಲಿತೋದ್ಧಾರವೇ ಎಂದು ಪ್ರಶ್ನಿಸಿದರು. ಸಂವಿಧಾನವನ್ನೇ ತಿರುಚಿ ದಲಿತರ, ಹಿಂದುಳಿದ ವರ್ಗದವರ ಹಕ್ಕನ್ನು ಕಸಿದುಕೊಳ್ಳುವ ಬಿಜೆಪಿ ಸರಕಾರಕ್ಕೆ ಧಿಕ್ಕಾರ ಎಂದರು. ಕಾಂಗ್ರೆಸ್ ಅವಧಿಯಲ್ಲಿ ನೀಡಿದ ೯೪ಸಿ ಹಕ್ಕು ಪತ್ರ ಕಸಿದುಕೊಳ್ಳುವುದಾದರೆ ಹೊಸತು ನೀಡಲು ಸಾಧ್ಯವೇ? ದಲಿತರ ಮನೆಗೆ ಹೋಗಿ ಊಟ ಮಾಡುವ ನಾಟಕ ಮಾಡಿ ಅವರ ಹಕ್ಕನ್ನು ಕಸಿದುಕೊಳ್ಳುವ ನಾಟಕವಾಡುತ್ತಿದ್ದಾರೆ. ತನ್ನೆಲ್ಲಾ ಆಡಳಿತ ವೈಫಲ್ಯ ಮರೆ ಮಾಚಲು ಬಿಜೆಪಿಯಿಂದ ಚುನಾವಣೆಯ ಸಂದರ್ಭದಲ್ಲಿ ಧರ್ಮದ ಆಧಾರದಲ್ಲಿ ವಿಘಟನೆ ಮಾಡುವ ನಾಟಕ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.

ಅಕ್ರಮಗಳು ನಡೆಯುತ್ತಿದೆ-ಶ್ರೀಪ್ರಸಾದ್:

ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ ಮಾತನಾಡಿ, ರಾಜ್ಯ, ಕೇಂದ್ರ ಸರಕಾರಗಳು ಅಕ್ರಮದಲ್ಲಿದ್ದು ಅದರ ಭಾಗವಾಗಿ ಇಂದು ಗ್ರಾಮೀಣ ಭಾಗದಲ್ಲೂ ಅಕ್ರಮಗಳು ನಡೆಯುತ್ತಿದೆ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು. ರಾಜಕೀಯವಾದ ಹೋರಾಟ ಇರುವುದು ಪಕ್ಷ ಪಕ್ಷಗಳ ಮಧ್ಯೆ. ಅದನ್ನು ಜನ ಸಾಮಾನ್ಯರ ಮೇಲೆ ಪ್ರಹಾರ ಮಾಡುವುದು ಬೇಡ. ಜಿಲ್ಲೆಯಲ್ಲಿ ಧರ್ಮ ಧರ್ಮಗಳ ಮಧ್ಯೆ ಬೇರ್ಪಡಿಸುವ ಕೆಲಸ ಮಾಡುತ್ತಾರೆ. ಪರಸ್ಪರ ದ್ವೇಷ ಸಾಧಿಸುತ್ತಾರೆ. ರಾಜಕೀಯವೆಂದರೆ ಹಣ ಮಾಡುವ ದಂಧೆಯಲ್ಲ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ರಾಜಕೀಯ ಎಂಬುದು ಹಣ ಮಾಡುವ ದಂಧೆಯಾಗಿದೆ. ಕಾಂಗ್ರೆಸ್‌ಗೆ ಅಧಿಕಾರವಿಲ್ಲದೇ ಸುಮ್ಮನಿರುವುದು ನಮ್ಮ ತಾಳ್ಮೆ. ಅದು ನಮ್ಮ ದೌರ್ಬಲ್ಯವಲ್ಲ. ಜನ ಸಾಮಾನ್ಯರಿಗೆ ನ್ಯಾಯ ದೊರೆಯುವ ತನಕ ನಾವು ಧ್ವನಿ ಎತ್ತಲಿದ್ದೇವೆ ಎಂದು ಅವರು ಹೇಳಿದರು.

ಸೌಲಭ್ಯ ನೀಡಿಲ್ಲ-ಬೇಬಿ;

ಫಲಾನುಭವಿ ಬೇಬಿ ಮಾತನಾಡಿ, ನಮ್ಮ ಮನೆ ಮಣ್ಣಿನ ಗೋಡೆಯ ಮನೆ. ಕಳೆದ ಮಳೆಗಾಲದಲ್ಲಿ ಮನೆ ಕುಸಿದುಹೋದ ಸಮಯದಲ್ಲಿ ನಮ್ಮ ನೆರೆಯವರು ಯಾರೂ ಸಹಾಯಕ್ಕೆ ಬಂದಿಲ್ಲ. ಅಸಹಾಯಕ ಸ್ಥಿತಿಯಲ್ಲಿದ್ದ ನನಗೆ ಜಯಪ್ರಕಾಶ ಬದಿನಾರು ಮೊದಲಾದವರು ಸಣ್ಣ ಗುಡಿಸಲು ನಿರ್ಮಿಸಿಕೊಟ್ಟಿದ್ದರು. ಸ್ವಲ್ಪ ಸಮಯದ ಬಳಿಕ ಅದೂ ಗಾಳಿಗೆ ಹಾರಿ ಹೋಗಿದೆ. ಆ ಸಂದರ್ಭದಲ್ಲಿ ನೆರೆಯ ಬ್ರಾಹ್ಮಣರೊಬ್ಬರು ಆಸರೆ ನೀಡಿದ್ದಾರೆ. ಈಗ ಜಯಪ್ರಕಾಶ್ ಬದಿನಾರು ನೇತೃತ್ವದಲ್ಲಿ ಮನೆ ಕಟ್ಟಿಕೊಡುತ್ತಿದ್ದಾರೆ. ಆದರೂ ಪಂಚಾಯತ್‌ನಿಂದ ಯಾವುದೇ ಸೌಲಭ್ಯಗಳನ್ನು ನೀಡಿಲ್ಲ ಎಂದು ಆರೋಪಿಸಿದರು.

ಜಿ.ಪಂ.ಮಾಜಿ ಸದಸ್ಯರು ಅಕ್ರಮ ಕಟ್ಟಡ ಕಟ್ಟುತ್ತಿದ್ದಾರೆ-ಜಗನ್ನಾಥ ಶೆಟ್ಟಿ:

ಕೋಡಿಂಬಾಡಿ ಗ್ರಾ.ಪಂ ಸದಸ್ಯ ಜಗನ್ನಾಥ ಶೆಟ್ಟಿ ನಡುಮನೆ ಮಾತನಾಡಿ, ದಲಿತ ಕುಟುಂಬಕ್ಕೆ ನೀಡಿದ ಹಕ್ಕುಪತ್ರ ಅಕ್ರಮವಾದರೆ ಗ್ರಾಮದಲ್ಲಿ ಇಂತಹ ಸಾಕಷ್ಟು ಪ್ರಕರಣಗಳಿವೆ. ಅವೆಲ್ಲವುಗಳನ್ನು ಸಮಗ್ರ ತನಿಖೆ ನಡೆಸಬೇಕು. ಜಿ.ಪಂ ಮಾಜಿ ಸದಸ್ಯರೋರ್ವರು ರಸ್ತೆ ಬದಿ ಅಕ್ರಮವಾಗಿ ಕಟ್ಟಡ ನಿರ್ಮಿಸುತ್ತಿದ್ದಾರೆ. ಅದರ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಬೇಡಿಕೆ ಈಡೇರದೇ ಇದ್ದರೆ ನಿರಂತರ ಹೋರಾಟ-ಜಯಪ್ರಕಾಶ್ ಬದಿನಾರು:

ಕೋಡಿಂಬಾಡಿ ಗ್ರಾ.ಪಂ ಸದಸ್ಯ ಜಯಪ್ರಕಾಶ್ ಬದಿನಾರು ಮಾತನಾಡಿ, ನಾವು ಗ್ರಾಮದ ಸಮಸ್ಯೆಗಳನ್ನು ಈಡೇರಿಸುವಂತೆ ಪ್ರತಿಭಟನೆ ನಡೆಸುತ್ತಿzವೆ. ಹೀಗಾಗಿ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ನಮ್ಮ ಮನವಿ ಸ್ವೀಕರಿಸಬೇಕು. ಅವರು ಸ್ಥಳಕ್ಕೆ ಬಾರದೇ ಇದ್ದರೆ ಸಂಜೆಯ ತನಕ ಇಲ್ಲಿ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು. ಬೇಡಿಕೆ ಈಡೇರದೇ ಇದ್ದರೆ ನಿರಂತರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಉಮಾನಾಥ ಶೆಟ್ಟಿ ಪೆರ್ನೆ, ಮುರಳೀಧರ ರೈ ಮಠಂತಬೆಟ್ಟು, ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಿರಂಜನ ರೈ ಮಠಂತಬೆಟ್ಟು, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಮೋಹನ್ ಗುರ್ಜಿನಡ್ಕ, ವಲಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯೋಗೀಶ್ ಸಾಮಾನಿ ಸಂಪಿಗೆದಡಿ, ದಲಿತ ಮುಖಂಡ ಸೇಸಪ್ಪ ನೆಕ್ಕಿಲು, ಪ್ರಮುಖರಾದ ಅಬ್ದುಲ್ ರಹಿಮಾನ್ ಯೂನಿಕ್, ಹರೀಶ್ ಕೋಟ್ಯಾನ್, ಮೈಕಲ್ ವೇಗಸ್ ಶಾಂತಿನಗರ, ಜಗದೀಶ್ ಕಜೆ, ಗೀತಾ ಬಾಬು ಮೊಗೇರ ಮೋನಡ್ಕ, ಮಲ್ಲಿಕಾ ಅಶೋಕ್ ಪೂಜಾರಿ ಕಾಂತಳಿಕೆ, ಪೂರ್ಣಿಮಾ ಯತೀಶ್ ಶೆಟ್ಟಿ ಬರಮೇಲು, ಬೋರ ಕೋಡಿ, ವಿಕ್ರಮ್ ಶೆಟ್ಟಿ ಕೋಡಿಂಬಾಡಿ, ಲೋಕೇಶ್ ಪೆಲತ್ತಡಿ, ಸಿಲ್ವೆಸ್ಟರ್ ವೇಗಸ್ ಬೆಳ್ಳಿಪ್ಪಾಡಿ, ಗಿರಿಯಪ್ಪ ಕಜೆ, ರಾಮಣ್ಣ ಕೋಡಿ, ಸಂತೋಷ್ ಕೃಷ್ಣಗಿರಿ, ನಾರಾಯಣ ನಾಯ್ಕ ನೆಕ್ಕರಾಜೆ, ಶಶಿಧರ ಕೃಷ್ಣಗಿರಿ, ಪ್ರಭಾಕರ್ ಸಾಮಾನಿ ಮಠಂತಬೆಟ್ಟು, ಶಿವಪ್ರಸಾದ್ ರೈ ಮಠಂತಬೆಟ್ಟು, ರಘುರಾಮ ಸಾಮಾನಿ ಸಂಪಿಗೆದಡಿ, ಇಬ್ರಾಹಿಂ ಸೇಡಿಯಾಪು, ಯತೀಶ್ ಶೆಟ್ಟಿ ಬರಮೇಲು, ಸುಲೈಮಾನ್ ಕೋಡಿಂಬಾಡಿ, ಗಣೇಶ್‌ರಾಜ್ ಬಿಳಿಯೂರು, ಶೀನಪ್ಪ ಪರನೀರು, ಪದ್ಮನಾಭ ಆಚಾರ್ಯ ಪರನೀರು, ಗುಲಾಬಿ ಶೆಟ್ಟಿ ಸೇಡಿಯಾಪು, ದಿವಾಕರ ಶೆಟ್ಟಿ ಕಾರ್ನೋಜಿ, ವಸಂತಿ ಕೃಷ್ಣಪ್ಪ ಪೂಜಾರಿ ಗುಡ್ಡೆಮನೆ, ನಾಗೇಶ್ ನಾಯ್ಕ ಮಠಂತಬೆಟ್ಟು, ಆನಂದ ಕೃಷ್ಣಗಿರಿ, ಕಬೀರ್ ಕರ್‍ವೇಲು, ಸೇರಿದಂತೆ ಹಲವು ಮಂದಿ ಭಾಗವಹಿಸಿದ್ದರು. ವಲಯ ಕಾಂಗ್ರೆಸ್ ಅಧ್ಯಕ್ಷ ಮೋನಪ್ಪ ಗೌಡ ಪಮ್ಮನಮಜಲು ಸ್ವಾಗತಿಸಿದರು.

ಪ್ರತಿಭಟನಾ ಸಭೆಯಲ್ಲಿ ಕೇಳಿ ಬಂದ ಬೇಡಿಕೆಗಳು

ಕೋಡಿಂಬಾಡಿ ಗ್ರಾಮ ಪಂಚಾಯತ್‌ಗೆ ೬ ಲಕ್ಷ ರೂ ವೆಚ್ಚದಲ್ಲಿ ಖರೀದಿಸಿರುವ ಘನತ್ಯಾಜ್ಯ ವಿಲೇವಾರಿ ವಾಹನವನ್ನು ಕೂಡಲೇ ಬಳಕೆಗೆ ಆರಂಭಿಸಬೇಕು, ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಬೆಳ್ಳಿಪ್ಪಾಡಿ ಗ್ರಾಮದ ಸರ್ವೆ ನಂಬರ್ ೭೪ರಲ್ಲಿ ಮೀಸಲಿಟ್ಟಿರುವ ೧೦ ಸೆಂಟ್ಸ್ ಜಾಗದಲ್ಲಿ ಘಟಕ ಆರಂಭಿಸಬೇಕು, ಸಂಜೀವಿನಿ ಒಕ್ಕೂಟದ ಎಂ.ಬಿ.ಕೆ. ಹುದ್ದೆಗೆ ನಿಯಮಾನುಸಾರ ಕನಿಷ್ಠ ಪಿಯುಸಿ ಪಾಸ್ ಆಗಿರುವ, ಎಸ್‌ಸಿ/ಎಸ್ಟಿ, ವಿಕಲಚೇತನರು ಅಥವಾ ವಿಧವೆಯರಿಗೆ ಪ್ರಾತಿನಿಧ್ಯ ನೀಡಬೇಕು, ಪಂಚಾಯತ್ ಮಟ್ಟದಲ್ಲಿ ೯/೧೧ ವ್ಯವಸ್ಥೆ ಮಾಡಬೇಕು, ಉದ್ಯೋಗ ಖಾತರಿ ಯೋಜನೆಯಲ್ಲಿ ಸೋಕ್ ಪಿಟ್ ಮಾಡಿದವರಿಗೆ ಮೆಟೀರಿಯಲ್ ಮೊತ್ತ ಕೂಡಲೇ ಪಾವತಿ ಮಾಡಬೇಕು, ದಾರಂದಕುಕ್ಕುವಿನಲ್ಲಿ ಶಾಸಕರ ಅನುದಾನದಲ್ಲಿ ನಿರ್ಮಾಣಗೊಂಡಿರುವ ಅಂಗನವಾಡಿ ಕೇಂದ್ರವನ್ನು ತಕ್ಷಣ ಉದ್ಘಾಟಿಸಬೇಕು, ಸ್ಟಾಕ್ ಇರುವ ಕಾಂಪೋಸ್ಟ್ ಪೈಪ್‌ಗಳನ್ನು ಅರ್ಹರಿಗೆ ವಿತರಿಸಬೇಕು, ಪರನೀರು ಎಂಬಲ್ಲಿ ರಸ್ತೆ ಸಮಸ್ಯೆ ಎದುರಿಸುತ್ತಿರುವವರ ನೋವಿಗೆ ಸ್ಪಂದಿಸಬೇಕು, ಕೋಡಿಂಬಾಡಿ ಗ್ರಾಮ ಪಂಚಾಯತ್ ಗೆ ಖಾಯಂ ಗ್ರಾಮಕರಣಿಕರನ್ನು ನೇಮಿಸಬೇಕು ಎಂಬಿತ್ಯಾದಿ ಬೇಡಿಕೆಗಳು ಸಭೆಯಲ್ಲಿ ಕೇಳಿ ಬಂತು.

ಶಕುಂತಳಾ ಶೆಟ್ಟಿ ಭೇಟಿ -ಪ್ರತಿಭಟನೆಗೆ ಬೆಂಬಲ

 

 

 


ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ಸೂಚಿಸಿದರು. ಸಾರ್ವಜನಿಕರಿಗೆ ತೊಂದರೆ ಕೊಡುವ, ಕಾನೂನು ಬಾಹಿರವಾಗಿ ನಡೆಯುವ ಪಂಚಾಯತ್ ಇದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ೯೪ ಸಿ ಹಕ್ಕುಪತ್ರ, ಮನೆ, ನಿವೇಶನಗಳನ್ನು ನೀಡುತ್ತಿಲ್ಲ. ಇಲ್ಲಿ ಕಾನೂನುಗಳು ಮೊದಲೇ ಇಲ್ಲ ಎಂದು ಆರೋಪಿಸಿದರು.

ಅಧಿಕಾರಿ ತರಾಟೆಗೆ:
ಪ್ರತಿಭಟನಾ ಸ್ಥಳಕ್ಕೆ ತಡವಾಗಿ ಬಂದ ತಾ.ಪಂ ಸಹಾಯಕ ನಿರ್ದೇಶಕಿ ಶೈಲಜಾ ಪ್ರಕಾಶ್‌ರವರನ್ನು ಜಿ.ಪಂ ಮಾಜಿ ಸದಸ್ಯ ಎಂ.ಎಸ್ ಮಹಮ್ಮದ್ ತರಾಟೆಗೆತ್ತಿಕೊಂಡರು. ನಾವು ಬೆಳಿಗ್ಗೆಯಿಂದ ಪ್ರತಿಭಟನೆ ನಡೆಸುತ್ತಿzವೆ. ಅಧಿಕಾರಿಗಳು ಬರುವಂತೆ ಆಗಲೇ ಮನವಿ ಮಾಡಿದ್ದರೂ ನೀವು ಇಷ್ಟು ತಡವಾಗಿ ಬಂದಿದ್ದೀರಿ ಎಂದು ತರಾಟೆಗೆತ್ತಿಕೊಂಡರು. ಪುತ್ತೂರಿನಲ್ಲಿ ಸಭೆಯಿದ್ದ ಕಾರಣ ಬರುವಾಗ ತಡವಾಗಿದೆ ಎಂದು ಶೈಲಜಾ ಪ್ರಕಾಶ್ ತಿಳಿಸಿದರು. ಬಳಿಕ ಮನವಿ ಸ್ವೀಕರಿಸಿದರು. ನಂತರ ಪ್ರತಿಭಟನೆ ವಾಪಸ್ ಪಡೆದುಕೊಳ್ಳಲಾಯಿತು.

LEAVE A REPLY

Please enter your comment!
Please enter your name here