ಫಿಲೋಮಿನಾ ಪಿಯು ಕಾಲೇಜಿನ ನೂತನ ಪ್ರಾಂಶುಪಾಲರಾಗಿ ವಂ|ಅಶೋಕ್ ರಾಯನ್ ಅಧಿಕಾರ ಸ್ವೀಕಾರ

0

 

ಪುತ್ತೂರು: ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ವಂ|ಅಶೋಕ್ ರಾಯನ್ ಕ್ರಾಸ್ತಾರವರು ನೇಮಕಗೊಂಡು ಮೇ. 23 ರಂದು ಅಧಿಕಾರ ಸ್ವೀಕರಿಸಿರುತ್ತಾರೆ.

ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ನೂತನ ಪ್ರಾಂಶುಪಾಲ ವಂ|ಅಶೋಕ್ ರಾಯನ್‌ರವರಿಗೆ ಹೂಗುಚ್ಛ ನೀಡುವ ಮೂಲಕ ಅಧಿಕಾರವನ್ನು ಹಸ್ತಾಂತರಿಸಿದರು. ಕಳೆದ 11 ವರ್ಷಗಳಿಂದ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದ ವಂ|ವಿಜಯ್ ಲೋಬೋರವರು ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರೂ ಹಾಗೂ ಕಥೋಲಿಕ್ ಬೋರ್ಡ್ ಆಫ್ ಎಜ್ಯುಕೇಶನ್‌ನ ಅಧ್ಯಕ್ಷರಾದ ಅತೀ|ವಂ|ಡಾ|ಪೀಟರ್ ಪಾವ್ಲ್ ಸಲ್ದಾನ್ಹರವರ ಆದೇಶದಂತೆ ಉಜಿರೆ ಅನುಗ್ರಹ ಪದವಿ ಪೂರ್ವ ಕಾಲೇಜಿಗೆ ಪ್ರಾಂಶುಪಾಲರಾಗಿ ವರ್ಗಾವಣೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅವರಿಂದ ತೆರವಾದ ಹುದ್ದೆಗೆ ವಂ|ಅಶೋಕ್ ರಾಯನ್ ಕ್ರಾಸ್ತಾರವರನ್ನು ನೇಮಿಸಲಾಗಿದೆ.

ಅಧಿಕಾರ ಹಸ್ತಾಂತರಿಸಿ ಮಾತನಾಡಿದ ಕಾಲೇಜಿನ ಸಂಚಾಲಕರಾದ ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು, ಫಿಲೋಮಿನಾ ಪಿಯು ಕಾಲೇಜು ಅನೇಕ ಸುಧಾರಣೆಗಳೊಂದಿಗೆ ಅಭಿವೃದ್ಧಿಯನ್ನು ಕಂಡಿದ್ದು, ಸಮಾಜಕ್ಕೆ ಅನೇಕ ಪ್ರತಿಭಾನ್ವಿತರನ್ನು ಕೊಡುಗೆಯಾಗಿ ನೀಡಿದೆ. ಇಂತಹ ಫಿಲೋಮಿನಾ ಪಿಯು ಕಾಲೇಜಿನ ಚುಕ್ಕಾಣಿಯನ್ನು ಉತ್ತಮ ಜ್ಞಾನ ಹಾಗೂ ವಿದ್ಯಾರ್ಹತೆಯನ್ನು ಹೊಂದಿರುವ ವಂ|ಅಶೋಕ್ ರಾಯನ್‌ರವರು ವಹಿಸಿಕೊಂಡಿದ್ದಾರೆ. ಈಗಾಗಲೇ ಎರಡು ವರ್ಷ ಈ ಕ್ಯಾಂಪಸ್‌ನಲ್ಲಿ ವಾರ್ಡನ್ ಮತ್ತು ಸಹಾಯಕ ಪ್ರಾಧ್ಯಾಪಕರಾಗಿ ಕಳೆದಿರುವ ವಂ|ಅಶೋಕ್‌ರವರಿಗೆ ಇಲ್ಲಿನ ವಿದ್ಯಾಮಾನಗಳ ಬಗ್ಗೆ ಸಂಪೂರ್ಣ ಅರಿವಿದೆ. ವಂ|ಅಶೋಕ್‌ರವರ ಮೇಲಿರುವ ಭರವಸೆಯಿಂದಲೇ ಪೂಜ್ಯ ಬಿಷಪರು ಅವರನ್ನು ಪ್ರಾಂಶುಪಾಲರಾಗಿ ನಿಯುಕ್ತಿಗೊಳಿಸಿರುತ್ತಾರೆ. ಮುಂದಿನ ದಿನಗಳಲ್ಲಿ ವಂ|ಅಶೋಕ್‌ರವರ ನಾಯಕತ್ವದಲ್ಲಿ, ಸಂಸ್ಥೆಯ ಸಿಬ್ಬಂದಿ ವರ್ಗದವರ ಪ್ರೋತ್ಸಾಹದಿಂದ ಸಂಸ್ಥೆಯು ಪ್ರಜ್ವಲಿಸಲಿ ಜೊತೆಗೆ ಕಳೆದ ೧೧ ವರ್ಷಗಳಿಂದ ಸಂಸ್ಥೆಯ ಏಳಿಗೆಗೆ ದುಡಿದು ಇದೀಗ ಉಜಿರೆ ಅನುಗ್ರಹ ಪಿಯು ಕಾಲೇಜಿಗೆ ವರ್ಗಾವಣೆಗೊಳ್ಳಲಿರುವ ವಂ|ವಿಜಯ್‌ರವರೋರ್ವರಿಗೂ ಮೇರಿ ಮಾತೆಯು ಆಶೀರ್ವದಿಸಲಿ ಎಂದು ಹೇಳಿ ಶುಭ ಕೋರಿದರು.

ನಿರ್ಗಮಿತ ಪ್ರಾಂಶುಪಾಲರಾದ ವಂ|ವಿಜಯ್ ಲೋಬೋರವರು ಮಾತನಾಡಿ, ಬೆಳಾ ಸೈಂಟ್ ಮೇರೀಸ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಅನುಭವ ಹೊಂದಿರುವ ನೂತನ ಪ್ರಾಂಶುಪಾಲರಾದ ವಂ|ಅಶೋಕ್ ರಾಯನ್‌ರವರು ಉತ್ತಮ ಆಡಳಿತ ಕೌಶಲ್ಯವಿರುವವರಾಗಿದ್ದಾರೆ. ಫಿಲೋಮಿನಾ ಪಿಯು ಕಾಲೇಜಿನಲ್ಲಿ ಸೇವೆ ನಿರ್ವಹಿಸಲು ಅಷ್ಟೊಂದು ಕಷ್ಟವಾಗದು ಯಾಕೆಂದರೆ ಇಲ್ಲಿ ಅಧ್ಯಾಪಕರ ಹಾಗೂ ಆಡಳಿತ ಸಿಬ್ಬಂದಿ ವರ್ಗದವರು ಉತ್ತಮ ಸಾಮರ್ಥ್ಯ ಹೊಂದಿದ್ದು, ಫಿಲೋ ಕುಟುಂಬ ಎನ್ನುವಂತೆ ಟೀಮ್ ವರ್ಕ್ ಮೂಲಕ ಕೆಲಸ ಸಾಗುತ್ತಿರುವುದು ವೈಶಿಷ್ಟ್ಯತೆಯಾಗಿದೆ. ಕಾಲೇಜಿನ ಉಪನ್ಯಾಸಕರ ಹಾಗೂ ಆಡಳಿತ ಸಿಬ್ಬಂದಿ ವರ್ಗದವರ ಉತ್ಸಾಹ ಹೀಗೆಯೇ ಮುಂದುವರೆಯಲಿ, ಅಲ್ಲದೆ ಕಳೆದ ೧೧ ವರ್ಷಗಳಿಂದ ಕಾಲೇಜಿನ ಅಭಿವೃದ್ಧಿ ನಿಟ್ಟಿನಲ್ಲಿ ನನ್ನೊಂದಿಗೆ ಜೊತೆಯಾಗಿ ಕಾರ್ಯನಿರ್ವಹಿಸಿದ ಕಾಲೇಜಿನ ಪ್ರತಿಯೋರ್ವರಿಗೂ ಕೃತಜ್ಞತೆ ಸಲ್ಲಿಸಿ, ನೂತನ ಪ್ರಾಂಶುಪಾಲ ವಂ|ಅಶೋಕ್ ರಾಯನ್‌ರವರಿಗೆ ಶುಭ ಕೋರಿದರು.

ಫಿಲೋಮಿನಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೋರವರು ನೂತನ ಪ್ರಾಂಶುಪಾಲ ವಂ|ಅಶೋಕ್ ರಾಯನ್ ಕ್ರಾಸ್ತಾರವರಿಗೆ ಹೂಗುಚ್ಛ ನೀಡುವ ಮೂಲಕ ಶುಭ ಹಾರೈಸಿದರು. ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋ, ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ಕಾಲೇಜು ನಿರ್ವಹಣಾ ಸಮಿತಿಯ ಸದಸ್ಯರಾದ ವಿ.ಜೆ ಫೆರ್ನಾಂಡೀಸ್, ಜೋನ್ ಕುಟಿನ್ಹಾ, ಜೆ.ಪಿ ರೊಡ್ರಿಗಸ್, ಝೇವಿಯರ್ ಡಿ’ಸೋಜ, ಡಾ|ನೋರ್ಬರ್ಟ್ ಮಸ್ಕರೇನ್ಹಸ್, ಕಾಲೇಜಿನ ಡೀನ್‌ಗಳಾದ ಯಶ್ವಂತ್ ಎಂ.ಡಿ, ಗೋವಿಂದ ಪ್ರಕಾಶ್, ಭರತ್ ಕುಮಾರ್ ಸಹಿತ ಕಾಲೇಜಿನ ಉಪನ್ಯಾಸಕ ವೃಂದ ಹಾಗೂ ಆಡಳಿತ ಸಿಬ್ಬಂದಿ ವೃಂದ ಉಪಸ್ಥಿತರಿದ್ದರು. ಉಪನ್ಯಾಸಕ ಸಂತೋಷ್ ಕ್ಲ್ಯಾರೆನ್ಸ್ ಡಿ’ಸೋಜ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಸಂಸ್ಥೆಯನ್ನು ಎತ್ತರಕ್ಕೇರಿಸುವುದು ನನ್ನ ಕನಸಾಗಿದೆ…
ಫಿಲೋಮಿನಾ ಪಿಯು ಕಾಲೇಜಿನ ಚುಕ್ಕಾಣಿಯನ್ನು ತೆಗೆದುಕೊಳ್ಳಬಲ್ಲೀರ ಎಂದು ಸಂಚಾಲಕರಾದ ವಂ|ಲಾರೆನ್ಸ್‌ರವರು ನನ್ನಲ್ಲಿ ಹೇಳಿದಾಗ ನಾನು ಸಂತೋಷದಿಂದ `ಎಸ್’ ಅಂದಿದ್ದೆ. ಯಾಕೆಂದರೆ ಸಂಸ್ಥೆಯನ್ನ ಮುನ್ನೆಡೆಸಬಲ್ಲೆ ಎಂಬ ನಂಬಿಕೆ, ವಿಶ್ವಾಸ ನನ್ನಲ್ಲಿತ್ತು. ಯಾವುದೂ ಅಸಾಧ್ಯವಲ್ಲ ಎಂಬುದನ್ನು ನಿರ್ಗಮಿತ ಪ್ರಾಂಶುಪಾಲ ವಂ|ವಿಜಯ್‌ರವರು ಅದ್ಭುತಗಳೊಂದಿಗೆ ತೋರಿಸಿಕೊಟ್ಟಿದ್ದಾರೆ. ಅದೇ ನಂಬಿಕೆ, ವಿಶ್ವಾಸದೊಂದಿಗೆ ದೊಡ್ಡ ಜವಾಬ್ದಾರಿಯೊಂದಿಗೆ ಪ್ರಾಂಶುಪಾಲ ಹುದ್ದೆಯನ್ನು ಸ್ವೀಕರಿಸಿರುತ್ತೇನೆ. ಸಂಸ್ಥೆಯನ್ನು ಇನ್ನೂ ಎತ್ತರಕ್ಕೇರಿಸುವುದು ನನ್ನ ಕನಸಾಗಿದೆ. ಈ ಕಾಲೇಜಿನ ಅತ್ತ್ಯುತ್ತಮ ತಂಡವು ಹೇಗೆ ಸಂಪೂರ್ಣ ಸಾಮರ್ಥ್ಯದೊಂದಿಗೆ ವಂ|ವಿಜಯ್‌ರವರಿಗೆ ಸಹಕಾರ ನೀಡಿದ್ದೀರೋ, ಅದೇ ಸಾಮರ್ಥ್ಯವನ್ನು ಮುಂದಿನ ದಿನಗಳಲ್ಲಿ ಮುಂದುವರೆಸಿ ಸಂಸ್ಥೆಯ ಅಭಿವೃದ್ಧಿಯಲ್ಲಿ ಕೈ ಜೋಡಿಸೋಣ. ವಂ|ಅಶೋಕ್ ರಾಯನ್ ಕ್ರಾಸ್ತಾ, ನೂತನ ಪ್ರಾಂಶುಪಾಲರು, ಸಂತ ಫಿಲೋಮಿನಾ ಪಿಯು ಕಾಲೇಜು

LEAVE A REPLY

Please enter your comment!
Please enter your name here