ಕೋವಿ ತರಬೇತಿ ಮೂಲಕ ಸಂಘಪರಿವಾರ ಭಯೋತ್ಪಾದನೆ ಚಟುವಟಿಕೆಯಲ್ಲಿ ತೊಡಗಿದೆ : ಎಂ ಬಿ ವಿಶ್ವನಾಥ ರೈ ಆರೋಪ

0

 ಪುತ್ತೂರು: ಕೊಡಗು ಜಿಲ್ಲೆಯ ಶಾಲೆಯೊಂದರಲ್ಲಿ ಬಜರಂಗದಳದ ವತಿಯಿಂದ ತ್ರಿಶೂಲ ವಿತರಣೆ ಹಾಗೂ ಕೋವಿ ತರಬೇತಿ ಶಿಬಿರ ಕಾರ್ಯಕ್ರಮ ನಡೆದಿದೆ, ಶಾಲಾ ಅವರಣದ ಒಳಗೆ ಕೋವಿ ತರಬೇತಿ ಶಿಬಿರ ನಡೆಸಲು ಅನುಮತಿ ನೀಡಿದವರು ಯಾರು? ಅಲ್ಲಿಯ ಶಾಸಕರ ಉಪಸ್ಥಿತಿಯಲ್ಲಿ ನಡೆದಿರುವ ಈ ಕಾರ್ಯಕ್ರಮ ನೋಡಿದರೆ ಸಂಘ ಪರಿವಾರದ ಸಂಘಟನೆಗಳು ರಾಜ್ಯದಲ್ಲಿ ಭಯೋತ್ಪಾದನೆ ಕೃತ್ಯ ನಡೆಸುವ ಹುನ್ನಾರ ಮಾಡುತ್ತಿರುವ ಸಂಶಯ ಉಂಟಾಗಿದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಆರೋಪಿಸಿದರು.

ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗ್ಟೋಯಲ್ಲಿ ಮಾತನಾಡಿದ ಅವರು ಈ ಘಟನೆಯ ವಿರುದ್ಧ ಜನಾಕ್ರೋಶ ತೀವ್ರ ಗೊಂಡಾಗ ಬಿಜೆಪಿ ನಾಯಕರು ಇದು ಕೋವಿ ತರಬೇತಿಯಲ್ಲ, ಏರ್ ಗನ್ ತರಬೇತಿ ಎಂದು ಸಮಜಾಯಿಸಿ ನೀಡಿರುತ್ತಾರೆ ಮುಸಲ್ಮಾನರ ಮದ್ರಸದಲ್ಲಿ ಭಯೋತ್ಪಾದನಾ ತರಬೇತಿ ನಡೆಯುತ್ತಿದೆ ಎಂದು ಸದಾ ಸುಳ್ಳು ಗುಲ್ಲೆಬ್ಬಿಸಿ ತಿರುಗುವ ಸಂಘಪರಿವಾರದವರು ಇವತ್ತು ವಿದ್ಯಾ ದೇಗುಲದಲ್ಲಿ ಆವರಣದಲ್ಲಿ ರಾಜಾರೋಷವಾಗಿ ಬಂದೂಕು ತರಬೇತಿ ನಡೆಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಧಾರ್ಮಿಕ ಸಂಕೇತವಾದ ತ್ರಿಶೂಲವನ್ನು ಅನ್ಯ ವಿಚಾರಕ್ಕೆ ಬಳಕೆ ಮಾಡುವಂತಿಲ್ಲ ಎಂದು ಹೇಳಿದ ಅವರು ಹಿಜಾಬು ಪ್ರಕರಣದಲ್ಲಿ ಹೈಕೋರ್ಟ್ ಶಾಲೆಗಳಲ್ಲಿ ಯಾವುದೇ ಧಾರ್ಮಿಕ ಚಟುವಟಿಕೆ ನಡೆಸಬಾರದು, ಧರ್ಮದ ಕುರುಹು ಇರುವ ಯಾವುದೇ ಕೆಲಸ ಮಾಡಬಾರದು ಎಂದು ಆದೇಶ ಮಾಡಿದೆ. ಆದರೆ ನ್ಯಾಯಾಲಯದ ಈ ತೀರ್ಮಾನ ವಿರುದ್ಧವಾಗಿ ವಿಟ್ಲ ಸಮೀಪದ ಶಾಲೆಯೊಂದರಲ್ಲಿ ಗಣಹೋಮ ನಡೆಸಿರುವುದು ಹಾಗೂ ಸರಕಾರಿ ಜೂನಿಯರ್ ಕಾಲೇಜಿನ ಪ್ರಾರಂಭೋತ್ಸದಲ್ಲಿ ಶಾಸಕರ ನೇತೃತ್ವದಲ್ಲಿ ಶಾಲಾ ಮಕ್ಕಳಿಗೆ ಆರತಿ ಬೆಳಗಿ, ಕುಂಕುಮವಿಟ್ಟು ಸ್ವಾಗತಿಸುವ ಕಾರ್ಯಕ್ರಮ ನಡೆಸಿದ್ದು ನ್ಯಾಯಾಲಯದ ಆದೇಶದ ಉಲ್ಲಂಘನೆಯಲ್ಲವೇ? ಎಂದು ಪ್ರಶ್ನಿಸಿದ ಅವರು, ಕಾನೂನುಬಾಹಿರ ಆಟಗಳನ್ನು ಪೊಲೀಸ್ ಇಲಾಖೆ ಮತ್ತು ಶಿಕ್ಷಣ ಇಲಾಖೆ ನೋಡಿಯೂ ನೋಡದಂತೆ ಮಾಡುತ್ತಿದೆ ಎಂದರು.

ಬಿಜೆಪಿಯು ಜಾತ್ಯಾತೀತತೆಗೆ ಎಳ್ಳು ನೀರು ಬಿಡಲು ಮುಂದಾಗಿದೆ, ಇದರ ಅಂಗವಾಗಿ ಶಾಲಾ ಪಠ್ಯ ಪುಸ್ತಕದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಇತಿಹಾಸವನ್ನು ಕೈ ಬಿಟ್ಟು ಕೋಮುವಾದಿ ಹೆಗ್ಡೆವಾರರವರ ಭಾಷಣವನ್ನು ಸೇರಿಸಲು ಹೊರಟಿರೋದು ಖಂಡನೀಯ ಎಂದ ವಿಶ್ವನಾಥ ರೈಯವರು, ನಾರಾಯಣ ಗುರುಗಳ ಸಿದ್ಧಾಂತವನ್ನು ಪಠ್ಯ ಪುಸ್ತಕದಲ್ಲಿ ಅಳವಡಿಸದಿದ್ದಲ್ಲಿ ಜಿಲ್ಲೆಯ ಜನತೆ ಮುಂದಿನ ಚುನಾವಣೆಯಲ್ಲಿ ಖಂಡಿತ ಬುದ್ದಿ ಕಲಿಸಲಿದ್ದಾರೆ ಎಂದು ಹೇಳಿದರು. ಸುದ್ದಿಗ್ಟೋಯಲ್ಲಿ ಕಾಂಗ್ರೆಸ್ ವಕ್ತಾರ ಅಮಲರಾಮಚಂದ್ರ ಹಾಗೂ ಎಸ್ ಸಿ ಘಟಕದ ಅಧ್ಯಕ್ಷ ಕೇಶವ ಪಡೀಲ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here