ಕೋಡಿಂಬಾಡಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ ಅಸ್ತಿತ್ವಕ್ಕಾಗಿ ರಾಜಕೀಯ ಡೊಂಬರಾಟ: ಮೋಹನ ಪಕಳ

0

  • ಶಾಸಕ ಮಠಂದೂರುರಿಂದ ಕೋಡಿಂಬಾಡಿಗೆ 9 ಕೋಟಿ ರೂ. ಅನುದಾನ ಕಾಂಗ್ರೆಸ್ ಶಾಸಕರು ಎಷ್ಟು ನೀಡಿದ್ದಾರೆ-ಮೋಹನ್ ಪಕಳ
  • ಕಾಂಗ್ರೆಸ್ ಸುಳ್ಳು ಆರೋಪ ಮಾಡುವ ಮೊದಲು ಸತ್ಯಾಸತ್ಯತೆ ತಿಳಿದುಕೊಳ್ಳಲಿ -ರಾಮಚಂದ್ರ ಪೂಜಾರಿ
  • ರಾಜಕೀಯ ಅಸ್ತಿತ್ವಕ್ಕಾಗಿ ಸುಳ್ಳು ಆರೋಪ ಮಾಡಬಾರದು-ರಾಮಣ್ಣ ಗೌಡ ಗುಂಡೋಲೆ

ಉಪ್ಪಿನಂಗಡಿ: ಯಾವುದೇ ನಿರ್ದಿಷ್ಟ ಕಾರಣವಿಲ್ಲದೆ ಜಿಲ್ಲಾ, ತಾಲೂಕು ಮಟ್ಟದ ನಾಯಕರನ್ನು ಒಗ್ಗೂಡಿಸಿಕೊಂಡು ಕೋಡಿಂಬಾಡಿ ಗ್ರಾ.ಪಂ. ಎದುರು ಕಾಂಗ್ರೆಸ್ ಮಾಡಿರುವ ಪ್ರತಿಭಟನೆಯು ಮುಂಬರುವ ಚುನಾವಣೆಯ ಪೂರ್ವಭಾವಿಯಾಗಿ ಮಾಡಿದ ರಾಜಕೀಯ ಡೊಂಬರಾಟವಾಗಿದ್ದು, ಇದು ನಾಚಿಕೆಗೇಡಿನ ಸಂಗತಿಯಾಗಿದೆ. ಅಧಿಕಾರವಿಲ್ಲದ ಕಾಂಗ್ರೆಸ್ ಈಗ ಭಯದ ವಾತಾವರಣದಲ್ಲಿದ್ದು, ನೀರಿನಿಂದ ಹೊರತೆಗೆದ ಮೀನಿನಂತೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಒದ್ದಾಡುತ್ತಿದೆ ಎಂದು ಕೋಡಿಂಬಾಡಿ ಬಿಜೆಪಿ ಶಕ್ತಿ ಕೇಂದ್ರದ ಸಂಚಾಲಕ ಮೋಹನ ಪಕಳ ಕುಂಡಾವು ಹೇಳಿದ್ದಾರೆ.
ಉಪ್ಪಿನಂಗಡಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಶಾಸಕರು ಹಾಗೂ ಕೋಡಿಂಬಾಡಿ ಗ್ರಾ.ಪಂ. ಆಡಳಿತ ಜನರ ಸಮಸ್ಯೆ, ಬೇಡಿಕೆಗಳಿಗೆ ತಕ್ಷಣದ ಸ್ಪಂದನೆ ನೀಡುತ್ತಿರುವುದರಿಂದ ಕೋಡಿಂಬಾಡಿ ಗ್ರಾಮದ ಜನರಿಗೆ ಯಾವುದೇ ಸಮಸ್ಯೆಗಳಾಗಲೀ, ತೊಂದರೆಗಳಾಗಲಿ ಇಲ್ಲ. ಹಾಗಾಗಿ ಕಳೆದ ಮೇ 23ರಂದು ಕೋಡಿಂಬಾಡಿ ಗ್ರಾ.ಪಂ. ನೆದುರು ಕಾಂಗ್ರೆಸ್ ನಡೆಸಿದ ಪ್ರತಿಭಟನೆಯಲ್ಲಿ ಅವರ ಜಿಲ್ಲಾ ಮಟ್ಟದ, ತಾಲೂಕು ಮಟ್ಟದ ನಾಯಕರನ್ನು ಬಿಟ್ಟರೆ, ಗ್ರಾಮದ ಜನರು ಇದ್ದದ್ದು ಕೆಲವೇ ಕೆಲವು ಮಂದಿ ಮಾತ್ರ ಎಂದರು. ಶಾಸಕ ಸಂಜೀವ ಮಠಂದೂರು ಅವರು ಆಯ್ಕೆಯಾಗಿ ಬಂದ ಬಳಿಕ ಕೋಡಿಂಬಾಡಿ ಗ್ರಾ.ಪಂ. ವ್ಯಾಪ್ತಿಗೆ ಸುಮಾರು 9 ಕೋಟಿ ರೂ.ನಷ್ಟು ಅನುದಾನವನ್ನು ತಂದಿದ್ದಾರೆ. ಅದೇ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಇದ್ದ ಸಂದರ್ಭದಲ್ಲಿ ಗ್ರಾಮಕ್ಕೆ ಎಷ್ಟು ಅನುದಾನವನ್ನು ನೀಡಿದ್ದಾರೆ ಎಂದು ಕಾಂಗ್ರೆಸ್‌ನವರು ಸ್ಪಷ್ಟಪಡಿಸಲಿ ಎಂದು ಮೋಹನ್ ಪಕಳ ಹೇಳಿದರು.
ಈಗಿನ ಬಿಜೆಪಿ ಶಾಸಕರ ಮುತುವರ್ಜಿಯಿಂದ ಕೇಂದ್ರ ಹಾಗೂ ರಾಜ್ಯದ ಹಲವು ಯೋಜನೆಗಳು ನಮ್ಮ ಗ್ರಾಮಕ್ಕೆ ಬಂದಿದ್ದು, ಗ್ರಾಮವು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಒಂದೊಮ್ಮೆ ಗ್ರಾ.ಪಂ. ಅಧಿಕಾರ ಹಿಡಿದಿದ್ದ ಕಾಂಗ್ರೆಸ್ ಮತ್ತೆ ಗ್ರಾಮದಲ್ಲಿ ಸಂಪೂರ್ಣ ನಿರ್ನಾಮವಾಗಿದೆ. ಮತ್ತೆ ಈಗ ಚುನಾವಣೆಗಳು ಹತ್ತಿರ ಬಂದಾಗ ಇಂತಹ ದೊಂಬರಾಟಗಳ ಮೂಲಕ ತನ್ನ ಅಸ್ತಿತ್ವಕ್ಕಾಗಿ ಕಾಂಗ್ರೆಸ್ ಹೋರಾಟ ನಡೆಸುತ್ತಿದ್ದು, ಇದಕ್ಕೆ ಗ್ರಾಮಸ್ಥರು ತಕ್ಕ ಪಾಠ ಕಲಿಸಲಿದ್ದಾರೆ. ಮುಂದಕ್ಕೆ ತಾ.ಪಂ., ಜಿ.ಪಂ., ಎಂಎಲ್‌ಎ ಚುನಾವಣೆಯೇ ಇರಲಿ ಇಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂಬ ಭರವಸೆ ನಮಗಿದೆ ಎಂದು ಮೋಹನ್ ಪಕಳ ಹೇಳಿದರು.

ಕಾಂಗ್ರೆಸ್ ಸುಳ್ಳು ಆರೋಪ ಮಾಡುವ ಮೊದಲು ಸತ್ಯಾಸತ್ಯತೆ ತಿಳಿದುಕೊಳ್ಳಲಿ: ರಾಮಚಂದ್ರ ಪೂಜಾರಿ


ಪ್ರತಿಭಟನೆಯ ಸಂದರ್ಭ ಕಾಂಗ್ರೆಸ್ ಮಾಡಿರುವ ಆರೋಪಕ್ಕೆ ಸ್ಪಷ್ಟನೆ ನೀಡಿದ ಕೋಡಿಂಬಾಡಿ ಗ್ರಾ.ಪಂ. ಅಧ್ಯಕ್ಷ ರಾಮಚಂದ್ರ ಪೂಜಾರಿ, ಕಜೆಯಲ್ಲಿ 94 ಸಿ ಜಾಗದಲ್ಲಿ ವ್ಯಕ್ತಿಯೋರ್ವರಿಗೆ ಮನೆ ಕಟ್ಟಲು ಗ್ರಾ.ಪಂ.ನವರು ಬಿಡುತ್ತಿಲ್ಲ ಎಂದು ಪ್ರತಿಭಟನಕಾರರು ಆರೋಪಿಸಿದ್ದಾರೆ. ಆದರೆ ಅವರು ಅದರ ವಾಸ್ತವಾಂಶ ತಿಳಿದುಕೊಂಡು ಮಾತನಾಡಬೇಕು. ಅದು ಇಬ್ಬರು ಸಹೋದರರ ಜಾಗವಾಗಿದ್ದು, 94ಸಿ ಫಲಾನುಭವಿ ಒಂದು ಕಡೆ ಜಾಗ ತೋರಿಸಿ ಹಕ್ಕುಪತ್ರ ಪಡೆದುಕೊಂಡು, ಇನ್ನೊಂದು ಕಡೆಯಲ್ಲಿ ಅಂದರೆ ತನ್ನ ಸಹೋದರನ ಜಾಗದಲ್ಲಿ ಮನೆ ಕಟ್ಟಲು ಮುಂದಾದಾಗ ಇದಕ್ಕೆ ಆತನ ಸಹೋದರ ಆಕ್ಷೇಪ ವ್ಯಕ್ತಪಡಿಸಿ, ಗ್ರಾ.ಪಂ.ಗೆ ದೂರು ನೀಡಿದ್ದರು. ಇದು ಕಾನೂನು ಉಲ್ಲಂಘನೆಯಾಗಿದ್ದರಿಂದ ಗ್ರಾ.ಪಂ. ನೀಡಿದ ಪರವಾನಿಗೆಯನ್ನು ರದ್ದುಪಡಿಸಲಾಗಿದೆ. ಅಲ್ಲದೇ, ಎಂಬಿಕೆಯವರನ್ನು ಗ್ರಾ.ಪಂ. ತಮ್ಮಿಷ್ಟದಂತೆ ನೇಮಕ ಮಾಡಿದೆ ಎಂದು ಈ ಬಗ್ಗೆ ಕನಿಷ್ಟ ಜ್ಞಾನವಿಲ್ಲದೆ ಕಾಂಗ್ರೆಸ್ ಆರೋಪಿಸಿದೆ. ಎಂಬಿಕೆಯೆನ್ನುವುದು ಸಂಜೀವಿನಿ ಒಕ್ಕೂಟದ ಸ್ವತಂತ್ರ್ಯ ವ್ಯವಸ್ಥೆ. ಅವರನ್ನು ನೇಮಕ ಮಾಡುವುದು ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳೇ ಹೊರತು ಗ್ರಾ.ಪಂ. ಅಲ್ಲ. ಸಂಜೀವಿನಿ ತಂಡಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವುದು ಮಾತ್ರ ಗ್ರಾ.ಪಂ.ನ ಕೆಲಸ ಎಂದರು.
ಕಾಂಗ್ರೆಸ್ ಬೆಂಬಲಿತ ಸದಸ್ಯರು ಗ್ರಾ.ಪಂ.ನ ಆಡಳಿತದಲ್ಲಿರುವಾಗ ತ್ಯಾಜ್ಯ ಘಟಕಕ್ಕಾಗಿ 10 ಸೆಂಟ್ಸ್ ಸ್ಥಳವನ್ನು ಕಾಯ್ದಿರಿಸಿದ್ದು, ಇದು ಜನವಸತಿ ಪ್ರದೇಶದಲ್ಲಿದೆಯಲ್ಲದೆ, ರಸ್ತೆ ಮಾರ್ಜಿನ್ ಕೂಡಾ ಆಗಿರುತ್ತದೆ. ಇಲ್ಲಿ ತ್ಯಾಜ್ಯ ಘಟಕ ನಿರ್ಮಾಣ ಸಾಧ್ಯವಿಲ್ಲವೆಂದು ಕಾಂಗ್ರೆಸ್‌ನವರಿಗೂ ಗೊತ್ತು ಆದರೂ ಇದರ ಬಗ್ಗೆ ಕಾಂಗ್ರೆಸ್‌ನವರು ಸುಳ್ಳು ಆರೋಪಗಳನ್ನು ಹೊರಿಸುತ್ತಿದ್ದಾರೆ ಎಂದ ಅವರು, ಕಾಂಗ್ರೆಸ್‌ನವರು ಗ್ರಾ.ಪಂ. ಅಧಿಕಾರದಲ್ಲಿರುವಾಗ ಮನೆ ನಿವೇಶನಕ್ಕೆಂದು ಗುಡ್ಡ ಪ್ರದೇಶದಲ್ಲಿ 1.25 ಎಕ್ರೆ ಜಾಗವನ್ನು ಕಾಯ್ದಿರಿಸಿದ್ದರು. ಅದು ಕೂಡಾ ಸಾಮಾಜಿಕ ಅರಣ್ಯದಲ್ಲಿ ಬರುವ ಜಾಗ. ಕಾಯ್ದಿರಿಸಿದ ಕೂಡಲೇ ಅದರ ಬಗ್ಗೆ ವ್ಯವಸ್ಥಿತವಾಗಿ ಮುಂದುವರಿಯಲಿಲ್ಲ. ಸ್ಪಷ್ಟವಾದ ಮಾನದಂಡ, ಯೋಜನೆಯನ್ನು ಹಾಕಿಕೊಳ್ಳದೇ, ನಿವೇಶನವನ್ನೂ ಗಡಿಗುರುತು ಮಾಡದೇ 29 ಜನರಿಗೆ ಹಕ್ಕು ಪತ್ರವನ್ನೂ ಕೊಟ್ಟಿದ್ದಾರೆ. ಇವರಿಗೆ ಹಕ್ಕು ಪತ್ರ ನೀಡಿದ್ದಾರೆ ಹೊರತು ನಿವೇಶನ ತೋರಿಸಿರಲಿಲ್ಲ. ಇದು ಆ ಸಂದರರ್ಭದಲ್ಲಿ ಬಂದಿದ್ದ ಚುನಾವಣೆಯಲ್ಲಿ ಗೆಲ್ಲಲು ಅವರು ಮಾಡಿದ್ದ ಕಸರತ್ತೇ ಹೊರತು, ನಿವೇಶನ ರಹಿತರ ಮೇಲಿನ ಕಾಳಜಿಯಿಂದಲ್ಲ. ಬಳಿಕ ನಾವು ಆಡಳಿತಕ್ಕೆ ಬಂದ ಬಳಿಕ ಅದನ್ನು ನಿವೇಶನ ಮಾಡಲು ಅರಣ್ಯ ಇಲಾಖೆ ಸೇರಿದಂತೆ ಹಲವು ಕಡೆಗಳಿಂದ ಹಲವಾರು ಸಮಸ್ಯೆಗಳು ಎದುರಾಯಿತು. ಅರಣ್ಯ ಇಲಾಖೆಗೆ ಸುಮಾರು ೩ ಲಕ್ಷದಷ್ಟು ಹಣವನ್ನು ಕಟ್ಟಿ ಅವರಿಂದ ಒಪ್ಪಿಗೆಯನ್ನು ಪಡೆದು, ಗುಡ್ಡವನ್ನು ಸಮತಟ್ಟುಗೊಳಿಸಿ, ಗಡಿಗುರುತು ಮಾಡಿ ಕಾನೂನು ಬದ್ಧವಾಗಿ ನಿವೇಶನವನ್ನು ಗುರುತಿಸಲಾಗಿದೆ. ಆಗ ಇವರು 29 ಮಂದಿಗೆ ಹಕ್ಕು ಪತ್ರ ನೀಡಿದ್ದರೂ, ಕಾನೂನು ಬದ್ಧವಾಗಿ ಇಲ್ಲಿ 21 ನಿವೇಶನಗಳನ್ನು ನೀಡುವಷ್ಟು ಮಾತ್ರ ಜಾಗ ಇದೆ. ಕೆಲವೇ ದಿನಗಳಲ್ಲಿ ಇಲ್ಲಿ ನಿವೇಶನ ಹಂಚಿಕೆ ಕಾರ್ಯ ಮಾಡಲಾಗುವುದು ಎಂದರಲ್ಲದೆ, ಗ್ರಾ.ಪಂ.ನ 8 ಅಂಗನವಾಡಿಗಳಲ್ಲಿ ಸುಂದರವಾದ ಅಂಗನವಾಡಿ ದಾರಂದಕುಕ್ಕುವಿನಲ್ಲಿ ಈಗಿನ ಶಾಸಕರ ಅನುದಾನದಲ್ಲಿ ನಿರ್ಮಾಣಗೊಂಡಿದೆ. ಇದರ ಉದ್ಘಾಟನೆಗೆ ದಿನ ನಿಗದಿ ಮಾಡಲಾಗಿತ್ತಾದರೂ, ಶಾಸಕರ ತುರ್ತು ಕಾರ್ಯದಿಂದ ಆ ದಿನ ಉದ್ಘಾಟನೆ ಸಾಧ್ಯವಾಗಲಿಲ್ಲ. ಬೇಗನೇ ಇದನ್ನು ಉದ್ಘಾಟಿಸಲಾಗುವುದು ಎಂದರು. ಪ್ರತಿಭಟನಕಾರರು ಆರೋಪ ಮಾಡಿದ ಹಾಗೆ ಜಿ.ಪಂ. ಮಾಜಿ ಸದಸ್ಯರು ಅಕ್ರಮ ಕಟ್ಟಡ ಕಟ್ಟುತ್ತಿಲ್ಲ. ಅದಕ್ಕೆ ಬೇಕಾದ ಎಲ್ಲಾ ದಾಖಲೆಗಳನ್ನು ಒದಗಿಸಿದ್ದಾರೆ. ಆದ್ದರಿಂದ ಕಾಂಗ್ರೆಸ್‌ನವರು ಸುಳ್ಳು ಆರೋಪಗಳನ್ನು ಮಾಡುವ ಮೊದಲು ಎಲ್ಲದರ ಸತ್ಯಾಸತ್ಯತೆ ತಿಳಿದುಕೊಳ್ಳಬೇಕು ಎಂದರು.

ರಾಜಕೀಯ ಅಸ್ತಿತ್ವಕ್ಕಾಗಿ ಸುಳ್ಳು ಆರೋಪ ಮಾಡಬಾರದು: ರಾಮಣ್ಣ ಗೌಡ


ಸದಸ್ಯ ರಾಮಣ್ಣ ಗೌಡ ಗುಂಡೋಲೆ ಮಾತನಾಡಿ, ನಮ್ಮ ಅಧಿಕಾರವಧಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಗ್ರಾ.ಪಂ. ವತಿಯಿಂದ ಪಂಚಾಯತ್ ವ್ಯಾಪ್ತಿಯಲ್ಲಿ 126 ಕಾಮಗಾರಿಗಳು ನಡೆದಿವೆ. ಶೇ.15 ಹಣಕಾಸಿನ ನಿಧಿ ಹಾಗೂ ಗ್ರಾ.ಪಂ.ನ ಸ್ವಂತ ನಿಧಿಯನ್ನು ಸೇರಿಸಿಕೊಂಡು 80 ಲಕ್ಷದಷ್ಟು ಅನುದಾನಗಳನ್ನು ಗ್ರಾ.ಪಂ.ನ ಕೋಡಿಂಬಾಡಿ ಹಾಗೂ ಬೆಳ್ಳಿಪ್ಪಾಡಿ ಗ್ರಾಮಗಳಿಗೆ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ `ಮನೆ- ಮನೆ ಗಂಗಾ’ ಯೋಜನೆಯಡಿ ಪ್ರತಿ ಮನೆಗೆ ನೀರು ನೀಡಲು ಕೋಡಿಂಬಾಡಿ ಗ್ರಾಮಕ್ಕೆ 80 ಲಕ್ಷ ಹಾಗೂ ಬೆಳ್ಳಿಪ್ಪಾಡಿ ಗ್ರಾಮಕ್ಕೆ 90 ಲಕ್ಷ ಅನುದಾನದ ಕ್ರಿಯಾಯೋಜನೆ ಮಾಡಲಾಗಿದ್ದು, ಇದರ ಕಾಮಗಾರಿ ಕೂಡಾ ಆರಂಭವಾಗಿದೆ. ಇದೆಲ್ಲಾ ಆಡಳಿತ ವೈಫಲ್ಯವೋ ಎಂಬುದನ್ನು ಕಾಂಗ್ರೆಸ್ ಸ್ಪಷ್ಟಪಡಿಸಬೇಕು. ಮೊದಲು ಕಾಂಗ್ರೆಸ್ ಸತ್ಯಾಂಶ ತಿಳಿದುಕೊಂಡು ಮಾತನಾಡಬೇಕು. ಕೇವಲ ರಾಜಕೀಯ ಅಸ್ತಿತ್ವಕ್ಕಾಗಿ ಸುಳ್ಳು ಆರೋಪಗಳನ್ನು ಮಾಡಬಾರದು. ಕಾಂಗ್ರೆಸ್‌ನ ಈ ನಾಟಕವನ್ನು ಗ್ರಾಮದ ಜನರೂ ನಂಬಲ್ಲ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಕೋಡಿಂಬಾಡಿ ಗ್ರಾ.ಪಂ. ಉಪಾ`ಕ್ಷೆ ಉಷಾ, ಸದಸ್ಯ ವಿಶ್ವನಾಥ ಕೃಷ್ಣಗಿರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here