ಫಿಲೋಮಿನಾದಲ್ಲಿ ರಾಷ್ಟ್ರಮಟ್ಟದ ನ್ಯೂಕ್ಲಿಯರ್ ವಿಕಿರಣ ಕಾರ್ಯಾಗಾರ

0

  • ವಿಜ್ಞಾನ ಅರಿತವನು ಹಳ್ಳಿಯ ಬೇರು ಮರೆಯಬಾರದು-ಪ್ರೊ|ಯೆರೋಲ್ ನಾರಾಯಣ

ಪುತ್ತೂರು: ವಿಜ್ಞಾನದ ಫಲಗಳನ್ನು ಅನುಭವಿಸುವುದಷ್ಟೇ ಜೀವನದ ಗುರಿಯಾಗಬಾರದು. ವಿಜ್ಞಾನದ ಫಲಗಳನ್ನು ಬಳಸಿಕೊಳ್ಳುವುದರೊಂದಿಗೆ ಹಳ್ಳಿಯ ಜೀವನದ ಬೇರುಗಳ ನಂಟನ್ನು ಉಳಿಸಿಕೊಳ್ಳುವಂತಾದಾಗ ಸಮುದಾಯ ವಿಜ್ಞಾನಿಗಳ ಅಭಿಪ್ರಾಯಕ್ಕೆ ಬೆಲೆ ಕೊಡುತ್ತದೆ ಎಂದು ಮಂಗಳೂರು ವಿವಿಯ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಯೆರೋಲ್ ನಾರಾಯಣರವರು ಹೇಳಿದರು.
ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ಭೌತಶಾಸ್ತ್ರ ವಿಭಾಗ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಮಂಗಳೂರು ವಿಶ್ವವಿದ್ಯಾಲಯ ಭೌತಶಾಸ್ತ್ರ ಅಧ್ಯಾಪಕರ ಸಂಘದ ಸಹಯೋಗದಲ್ಲಿ ಆಯೋಜಿಸಿದ ರಾಷ್ಟ್ರಮಟ್ಟದ ನ್ಯೂಕ್ಲಿಯರ್ ವಿಕಿರಣ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ದೆಹಲಿಯ ಇಂಟರ್‌ಯುನಿವರ್ಸಿಟಿ ಎಕ್ಸಲರೇಟರ್ ಕೇಂದ್ರದ ವಿಜ್ಞಾನಿ ಡಾ|ಬಿ.ಪಿ ಅಜಿತ್‌ಕುಮಾರ್‌ರವರು ಮಾತನಾಡಿ, ಪರಮಾಣು ಕೇಂದ್ರದಿಂದ ಹೊಮ್ಮುವ ನ್ಯೂಕ್ಲಿಯರ್ ವಿಕಿರಣವನ್ನು, ಕಣಗಳನ್ನು ಪತ್ತೆ ಮಾಡುವ ಮತ್ತು ಅಧ್ಯಯನಿಸುವ ವೈಜ್ಞಾನಿಕ ಉಪಕರಣಗಳನ್ನು ಬಳಸಿಕೊಂಡು ನಮ್ಮ ಸುತ್ತ ಎಷ್ಟು ಪ್ರಮಾಣದಲ್ಲಿ ವಿಕಿರಣದ ಮಟ್ಟವನ್ನು ಅಳೆಯಬೇಕು ಮತ್ತು ಇಂಥ ಅಧ್ಯಯನಗಳು ನ್ಯೂಕ್ಲಿಯರ್ ರಿಯಾಕ್ಟರ್ ಮತ್ತು ಅಣು ಶಕ್ತಿಯ ಕುರಿತು ಒಳನೋಟ ಒದಗಿಸುತ್ತವೆ ಎಂದು ಹೇಳಿದರು.
ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ವಂ|ಡಾ| ಆಂಟನಿ ಪ್ರಕಾಶ್ ಮೊಂತೇರೋ ಮಾತನಾಡಿ, ಕೋವಿಡ್ ಎಂಬ ದುರಿತ ಕಾಲದಿಂದ ಹೊರಬಂದು ಎಂದಿನಂತೆ ವಿಚಾರ ಸಂಕಿರಣಗಳು, ಕಾರ್ಯಾಗಾರಗಳು ಆರಂಭವಾಗಿರುವುದು ನೆಮ್ಮದಿ ತರುವ ಸಂಗತಿ. ವೈಚಾರಿಕ ಚಿಂತನ ಮಂಥನಗಳು ವೈಜ್ಞಾನಿಕ ಸಂಶೋಧನೆಯ ಭಾಗ. ಅಲ್ಲಿ ಹೊಸ ಹೊಳವು, ಅರಿವು ಮೂಡುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಫಿಲೋಮಿನಾ ಕಾಲೇಜಿನ ಸಂಚಾಲಕರಾದ ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನಗಳು ಪರಸ್ಪರ ಪೂರಕ. ವಿಜ್ಞಾನದ ಸಂಶೋಧನೆಗಳಿಂದ ತಂತ್ರಜ್ಞಾನ ಅಭಿವೃದ್ಧಿಯಾಗುತ್ತದೆ. ವಿಜ್ಞಾನದಲ್ಲಿ ನಡೆಯುತ್ತಿರುವ ಸಂಶೋಧನೆಗಳ ಕುರಿತು ಸದಾ ಚಿಂತನೆ ನಡೆಯುತ್ತಿರಬೇಕು. ಜನರಿಗೆ ವೈಜ್ಞಾನಿಕ ಸಂಶೋಧನೆಗಳ ಕುರಿತು ತಿಳುವಳಿಕೆ ನೀಡುವ ಕೆಲಸಗಳಿಗೆ ವಿಜ್ಞಾನಿಗಳು ಮತ್ತು ಅಧ್ಯಾಪಕರು ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಕಾರ್ಯಾಗಾರದ ಸಂಯೋಜಕರಾದ ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಡಾ|ಎ.ಪಿ.ರಾಧಾಕೃಷ್ಣ ಸ್ವಾಗತಿಸಿ, ಕಾರ್ಯಾಗಾರದ ಕುರಿತು ಪ್ರಸ್ತಾವಿಸಿದರು. ಪ್ರಮಿತಾ ಮತ್ತು ಬಳಗ ಪ್ರಾರ್ಥಿಸಿದರು. ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ|ಚಂದ್ರಶೇಖರ್ ಕಾರ್ಯಕ್ರಮ ನಿರ್ವಹಿಸಿದರು. ಕ್ಯಾಲಿಕಟ್ ವಿವಿ ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ.ವಿನೋದ್‌ಕುಮಾರ್, ದೆಹಲಿಯ ಸಿಸ್ಪಾರ್ಕ್ ಸಂಸ್ಥೆಯ ಡಾ|ಜಿತಿನ್ ಬಿಪಿ, ಇಂಟರ್‌ಯುನಿವರ್ಸಿಟಿ ಎಕ್ಸಲರೇಟರ್ ಸಂಸ್ಥೆಯ ವಿಜ್ಞಾನಿ ಡಾ|ಬಿಪಿ ಅಜಿತ್‌ಕುಮಾರ್‌ರವರು ಎರಡು ದಿನಗಳ ಈ ಕಾರ್ಯಾಗಾರದಲ್ಲಿ ನ್ಯೂಕ್ಲಿಯರ್ ಪ್ರಯೋಗಗಳ ಕುರಿತು ಪ್ರಾತ್ಯಕ್ಷಿಕೆ ಮತ್ತು ಉಪನ್ಯಾಸ ನೀಡಿದರು. ಪ್ರಾಧ್ಯಾಪಕರಾದ ಡಾ|ಪ್ರವೀಣ್ ಪ್ರಕಾಶ್ ಡಿಸೋಜ, ವಿಪಿನ್ ನಾಯಕ್, ಪೂಜಾಶ್ರೀ ಸಹಕರಿಸಿದರು.

LEAVE A REPLY

Please enter your comment!
Please enter your name here