ಪತ್ರಿಕಾಗೋಷ್ಠಿ ವರದಿಗೆ ಕೋಡಿಂಬಾಡಿ ಗ್ರಾ.ಪಂ. ಅಧ್ಯಕ್ಷರ ಸ್ಪಷ್ಟನೆ

0

ಪುತ್ತೂರು: ಮೇ 27ರ ಸುದ್ದಿ ಬಿಡುಗಡೆ ಪತ್ರಿಕೆಯ 5ನೇ ಪುಟದಲ್ಲಿ ಮತ್ತು ಸುದ್ದಿ ವೆಬ್ಸೈಟ್ ವರದಿಯಲ್ಲಿ ಪ್ರಕಟವಾಗಿರುವ ‘ಕೋಡಿಂಬಾಡಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ ಅಸ್ತಿತ್ವಕ್ಕಾಗಿ ರಾಜಕೀಯ ಡೊಂಬರಾಟ’ ಎಂಬ ತಲೆ ಬರಹದ ಪತ್ರಿಕಾಗೋಷ್ಠಿಯ ವರದಿಗೆ ಕೋಡಿಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ. ರಾಮಚಂದ್ರ ಪೂಜಾರಿ ಸ್ಪಷ್ಟನೆ ನೀಡಿದ್ದಾರೆ‌.

ಗ್ರಾ.ಪಂ. ವಿರುದ್ಧ ಸುಳ್ಳು ಆರೋಪ ಹೊರಿಸಿ ಕಾಂಗ್ರೆಸ್ ಪಕ್ಷದವರು ನಡೆಸಿದ್ದ ಪ್ರತಿಭಟನೆಗೆ ಪ್ರತಿಯಾಗಿ ನಾವು ಪತ್ರಿಕಾಗೋಷ್ಠಿ ನಡೆಸಿದ್ದೆವು. ಈ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಕೋಡಿಂಬಾಡಿ ಬಿಜೆಪಿ ಶಕ್ತಿ ಕೇಂದ್ರದ ಸಂಚಾಲಕ ಮೋಹನ ಪಕ್ಕಳ ಕುಂಡಾಪು, ಗ್ರಾಮ ಪಂಚಾಯತ್ ಸದಸ್ಯ ರಾಮಣ್ಣ ಗೌಡ ಗುಂಡೋಲೆ ಮತ್ತು ನಾನು ಮಾತನಾಡಿದ್ದೆವು. ಈ ವಿಚಾರ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ.‌ ಆದರೆ, ನನ್ನ ಹೇಳಿಕೆಯಲ್ಲಿ ‘ಅರಣ್ಯ ಇಲಾಖೆಗೆ ಸುಮಾರು 3 ಲಕ್ಷದಷ್ಟು ಹಣವನ್ನು ಕಟ್ಟಿ ಅವರಿಂದ ಒಪ್ಪಿಗೆಯನ್ನು ಪಡೆದು, ಗುಡ್ಡವನ್ನು ಸಮತಟ್ಟುಗೊಳಿಸಿ ಗಡಿ ಗುರುತು ಮಾಡಿ ಕಾನೂನು ಬದ್ಧವಾಗಿ ನಿವೇಶನಗಳನ್ನು ಗುರುತಿಸಲಾಗಿದೆ….’ಎಂದು ವರದಿ ಪ್ರಕಟವಾಗಿದೆ. ಆದರೆ, ನಾನು ಅರಣ್ಯ ಇಲಾಖೆಗೆ 3 ಲಕ್ಷದಷ್ಟು ಹಣವನ್ನು ಕಟ್ಟಿದ್ದೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿಲ್ಲ. ಮಾತ್ರವಲ್ಲದೆ, ನಾವು ಅರಣ್ಯ ಇಲಾಖೆಗೆ ಹಣವನ್ನು ಕಟ್ಟಿಯೂ ಇಲ್ಲ, ಗುಡ್ಡವನ್ನು ಸಮತಟ್ಟುಗೊಳಿಸಿಯೂ ಇಲ್ಲ ಎಂದು ಗ್ರಾ.ಪಂ.ಅಧ್ಯಕ್ಷ ಕೆ.ರಾಮಚಂದ್ರ ಪೂಜಾರಿಯವರು ಸ್ಪಷ್ಟನೆ ನೀಡಿದ್ದು ಪತ್ರಿಕಾಗೋಷ್ಠಿಯ ವರದಿಯಲ್ಲಿನ ಉಳಿದ ಅಂಶಗಳು ಸರಿಯಾಗಿ ಪ್ರಕಟಗೊಂಡಿದೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here