ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಶಿಕ್ಷಣ

0

ಪುತ್ತೂರು: “ಭಾಷೆಗಾಗಿ ಶಿಕ್ಷಣ, ಮಾಧ್ಯಮ ಯಾವುದೇ ಆದರೂ ಭಾರತೀಯ ಸಂಸ್ಕೃತಿಗೆ ಅಗ್ರಸ್ಥಾನ’ ಇದು ವೃಂದಾವನಸ್ಥ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಪ್ರತಿಪಾದನೆ. ವಿಶ್ವ ವಿಖ್ಯಾತ ಯತಿಗಳಾಗಿದ್ದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಜನ್ಮಸ್ಥಳವಾಗಿರುವ ರಾಮಕುಂಜದಲ್ಲಿ ಆರಂಭಗೊಂಡ ಗುರುಕುಲ ಶೈಲಿಯ ವಿದ್ಯಾಸಂಸ್ಥೆಗಳು ಇಂದು ವಿದ್ಯೆ ಹಾಗೂ ಜ್ಞಾನ ಪ್ರಸಾರದ ಕೇಂದ್ರಗಳಾಗಿ ಬೆಳೆದಿವೆ. ಈ ಸಂಸ್ಥೆಗಳಲ್ಲಿ ಒಂದಾದ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯು ಅತಿ ಕಡಿಮೆ ಅವಧಿಯಲ್ಲಿ ಶೈಕ್ಷಣಿಕ, ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಉತ್ಕೃಷ್ಟತೆಯನ್ನು ಸಾಧಿಸಿವೆ.


2001ರಲ್ಲಿ ಆರಂಭ:
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆಂಗ್ಲಮಾಧ್ಯಮದಲ್ಲಿ ಕಡಿಮೆ ವೆಚ್ಚ ಹಾಗೂ ಗುಣಮಟ್ಟದ ಶಿಕ್ಷಣ ಸಿಗಬೇಕೆಂಬ ನಿಟ್ಟಿನಲ್ಲಿ 2001ರಲ್ಲಿ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆಯು ಆರಂಭಗೊಂಡಿತು. ಬಳಿಕ 2009ರಲ್ಲಿ ಶ್ರೀ ರಾಮಕುಂಜೇಶ್ವರ ಹಿರಿಯ ಪ್ರಾಥಮಿಕ ಶಾಲೆ, 2015ರಲ್ಲಿ ಶ್ರೀ ರಾಮಕುಂಜೇಶ್ವರ ಕಿಂಡರ್ ಗಾರ್ಟನ್, 2016ರಲ್ಲಿ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಆರಂಭಗೊಂಡಿತು. ಹೀಗೆ ಹಂತ ಹಂತವಾಗಿ ಆಂಗ್ಲ ಮಾಧ್ಯಮ ವಿಭಾಗದ ತರಗತಿಗಳು ಆರಂಭಗೊಂಡಿದ್ದು ಈಗ ಎಲ್‌ಕೆಜಿ, ಯುಕೆಜಿ, 1ನೇ ತರಗತಿಯಿಂದ 10ನೇ ತರಗತಿ ತನಕ ಪೂರ್ಣ ಪ್ರಮಾಣದಲ್ಲಿ ಆಂಗ್ಲಮಾಧ್ಯಮದಲ್ಲಿ ತರಗತಿಗಳು ನಡೆಯುತ್ತಿವೆ. ಈ ಮೂಲಕ ಗ್ರಾಮೀಣ ಪ್ರದೇಶದ ಸಾವಿರಾರು ವಿದ್ಯಾರ್ಥಿಗಳು ಆಂಗ್ಲ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಉನ್ನತ ವ್ಯಾಸಂಗ, ಉನ್ನತ ಉದ್ಯೋಗ ಪಡೆಯುವಂತಾಗಿದೆ. ಇದಕ್ಕೂ ಮೊದಲು 1995ರಲ್ಲಿ ಶ್ರೀ ರಾಮಕುಂಜೇಶ್ವರ ವಿದ್ಯಾರ್ಥಿನಿಲಯ, ಶ್ರೀ ರಾಮಕುಂಜೇಶ್ವರ ಕಂಪ್ಯೂಟರ್ ಶಿಕ್ಷಣ ಸಂಸ್ಥೆಯೂ ಇಲ್ಲಿ ಆರಂಭಗೊಂಡಿತ್ತು.

ಸುಂದರ ಪರಿಸರ:
ಪೇಟೆ ಪಟ್ಟಣದ ಜಂಜಾಟದಿಂದ ದೂರವಿದ್ದು ಸುಂದರ ಗ್ರಾಮೀಣ ಪ್ರದೇಶದಲ್ಲಿರುವ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ವಾತಾವರಣದಲ್ಲಿದೆ. ಸುಸಜ್ಜಿತ ಕಟ್ಟಡ, ವಿಶಾಲ ಕ್ರೀಡಾಂಗಣ, ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಸಂಸ್ಥೆಯೂ ವಿದ್ಯಾರ್ಥಿಗಳ ನೆಚ್ಚಿನ ಕಲಿಕಾ ತಾಣವಾಗಿದೆ. ಕನ್ನಡ ಮಾಧ್ಯಮದಿಂದ ಬರುವ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಕಲಿಕೆ, ಸಾಂಸ್ಕ್ರತಿಕ, ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಸಮರ್ಥ ಆಡಳಿತ ಮಂಡಳಿಯಿದ್ದು ಶಾಲೆಯ ಚಟುವಟಿಕೆಯಲ್ಲಿ ಸಕ್ರಿಯವಾಗಿದೆ. ಕಲಿಕೆಯೊಂದಿಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಇಲ್ಲಿನ ವಿದ್ಯಾರ್ಥಿಗಳು ಸಾಧನೆ ತೋರುತ್ತಿದ್ದಾರೆ. ಕ್ರೀಡೆ, ಸಾಂಸ್ಕೃತಿಕ, ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ.

ಉತ್ತಮ ಸಾಧನೆ:
ಎಲ್‌ಕೆಜಿ, ಯುಕೆಜಿ, 1ನೇ ತರಗತಿಯಿಂದ ೧೦ನೇ ತರಗತಿ ತನಕ ಆಂಗ್ಲಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದ್ದು ಸಂಸ್ಥೆಯಲ್ಲಿ ಕಲಿಯುತ್ತಿರುವ ಪ್ರತಿಯೊಂದು ಮಗುವಿನ ಕಲಿಕೆ ಬಗ್ಗೆ ವಿಶೇಷ ಆಸಕ್ತಿ ವಹಿಸಿ ಗಮನ ಹರಿಸಲಾಗುತ್ತಿದೆ. ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಪ್ರತಿ ವರ್ಷವೂ ವಿದ್ಯಾಸಂಸ್ಥೆಗೆ ಉತ್ತಮ ಫಲಿತಾಂಶ ಬರುತ್ತಿದೆ. 2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಸಂಸ್ಥೆಯ ವಿದ್ಯಾರ್ಥಿ ಧೀಮಂತ್ ಹೆಬ್ಬಾರ್ 632 ಅಂಕ ಪಡೆದುಕೊಂಡು ರಾಜ್ಯದಲ್ಲಿ 3ನೇ ರ‍್ಯಾಂಕ್ ಪಡೆದು ಸಂಸ್ಥೆಗೆ ಹೆಮ್ಮೆ ತಂದಿದ್ದಾರೆ. ಭೂಮಿಕಾ 4ನೇ ರ‍್ಯಾಂಕ್(622), ಜ್ಞಾನೇಶ್ ಜೆ.ಪಿ. 6ನೇ ರ‍್ಯಾಂಕ್(620), ಅನುಜ್ಞಾ ಕೆ. 7ನೇ ರ‍್ಯಾಂಕ್(619), ಅಂಜಲಿ 8ನೇ ರ‍್ಯಾಂಕ್(918), ವರುಣ್‌ಕುಮಾರ್ ಹೆಚ್.ಎಲ್. 11ನೇ ರ‍್ಯಾಂಕ್(615), ಅಂಜಲಿ ಎ.ಆರ್.ಭಟ್ 13ನೇ ರ‍್ಯಾಂಕ್(613), ಸಮೀಕ್ಷ 17ನೇ ರ‍್ಯಾಂಕ್(609) ಪಡೆದುಕೊಂಡು ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಯ ಹಿಂದೆ ಇಲ್ಲಿನ ಶಿಕ್ಷಕರ ಪರಿಶ್ರಮವೂ ಇದೆ.

ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತರಬೇತಿ:
ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಾಥಮಿಕ ತರಬೇತಿ, ಪ್ರೋತ್ಸಾಹ ನೀಡಲಾಗುತ್ತಿದೆ. ಕ್ರೀಡೆ, ವಿಜ್ಞಾನ, ಸಾಂಸ್ಕೃತಿಕ ಚಟುವಟಿಕೆಗಳಿಗೂ ಹೆಚ್ಚಿನ ಗಮನ ಕೊಡಲಾಗುತ್ತಿದ್ದು ಈ ವಿಭಾಗದಲ್ಲಿ ಇಲ್ಲಿನ ವಿದ್ಯಾರ್ಥಿಗಳು ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲೂ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಪರಿಣತ ಅಧ್ಯಾಪಕ ವೃಂದವಿದ್ದು ಮಕ್ಕಳ ಕಲಿಕೆ ಬಗ್ಗೆ ವಿಶೇಷ ಆಸಕ್ತಿ ವಹಿಸಿ ದುಡಿಯುತ್ತಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ತರಗತಿ ನಡೆಸಲಾಗುತ್ತಿದೆ.

ತುಳು ತರಗತಿ ಆರಂಭಿಸಿದ ಕೀರ್ತಿ:
ಆಂಗ್ಲಮಾಧ್ಯಮ ಶಾಲೆಯಾದರೂ ತುಳುನಾಡಿನ ಸಂಸ್ಕೃತಿ, ಆಚರಣೆಗೆ ಇಲ್ಲಿ ಒತ್ತು ನೀಡಲಾಗುತ್ತಿದೆ. ತುಳುವರ ಹಬ್ಬ, ಹರಿದಿನಗಳ ಆಚರಣೆ, ತುಳು ಅಧ್ಯಯನಕ್ಕೂ ಸಂಸ್ಥೆಯಲ್ಲಿ ಪ್ರೋತ್ಸಾಹ ನೀಡಲಾಗುತ್ತಿದೆ. ರಾಜ್ಯದಲ್ಲಿ ಪ್ರಥಮ ಬಾರಿಗೆ ತುಳು ತರಗತಿ ಆರಂಭಿಸಿದ ಕೀರ್ತಿ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯದ್ದಾಗಿದೆ. ಹೈಸ್ಕೂಲ್‌ನಲ್ಲಿ ತೃತೀಯ ಭಾಷೆ ತುಳು ಆಯ್ದು ಅಧ್ಯಯನ ನಡೆಸಿದ ಎಲ್ಲಾ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಶೇ.೧೦೦ ಫಲಿತಾಂಶ ದಾಖಲಾಗಿದೆ.

ಬಸ್ಸು, ಊಟದ ವ್ಯವಸ್ಥೆ:
ಕುಂತೂರು, ಆಲಂಕಾರು, ಉಪ್ಪಿನಂಗಡಿ, ಹಿರೇಬಂಡಾಡಿ, ಗೋಳಿತ್ತೊಟ್ಟು, ಕಾಂಚನ, ಸಬಳೂರು, ಕೊಯಿಲ ಭಾಗದಿಂದ ಬರುವ ಮಕ್ಕಳಿಗೆ ಶಾಲಾ ಬಸ್ಸಿನ ವ್ಯವಸ್ಥೆ ಇದೆ. ಶಾಲೆಯಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆಯೂ ಇದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯುತ್ತಿದ್ದಾರೆ.

ವಸತಿ ನಿಲಯ:
ನಾಲ್ಕನೇ ತರಗತಿಯಿಂದ ದ್ವಿತೀಯ ಪಿಯುಸಿ ತನಕ ವಸತಿ ನಿಲಯವಿದೆ. ಜಿಲ್ಲೆ, ಹೊರ ಜಿಲ್ಲೆಗಳ ನೂರಾರು ವಿದ್ಯಾರ್ಥಿಗಳು ವಸತಿ ನಿಲಯದಲ್ಲಿ ಉಳಿದುಕೊಂಡು ವ್ಯಾಸಂಗ ಮಾಡುತ್ತಿದ್ದಾರೆ. ಪಾಲಕರೊಂದಿಗೆ ಸತತ ಸಂಪರ್ಕ ಸಂಸ್ಥೆಯ ವೈಶಿಷ್ಟ್ಯವಾಗಿದೆ.

ಅತೀ ಕಡಿಮೆ ಶುಲ್ಕ, ಎಲ್ಲಾ ರೀತಿಯ ಸೌಕರ್ಯ, ವೈಶಿಷ್ಟ್ಯತೆಗಳನ್ನು ಹೊಂದಿರುವ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯು ಆಂಗ್ಲಮಾಧ್ಯಮದಲ್ಲಿ ಶಿಕ್ಷಣ ಪಡೆಯುವ ಮಕ್ಕಳಿಗೆ ಅತ್ಯುತ್ತಮ ಸಂಸ್ಥೆಯಾಗಿದೆ. ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಅಧ್ಯಕ್ಷರಾಗಿದ್ದಾರೆ. ಕೆ.ಸೇಸಪ್ಪ ರೈಯವರು ಆಂಗ್ಲಮಾಧ್ಯಮ ಶಾಲೆಯ ಕಾರ್ಯದರ್ಶಿಯಾಗಿ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಸಂಸ್ಥೆಯ ಸಂಪರ್ಕ ಮೊಬೈಲ್ ಸಂಖ್ಯೆ-೯೬೬೩೭೫೫೧೦೫, ೭೦೨೨೧೪೦೬೫೮ ಆಗಿದೆ.

LEAVE A REPLY

Please enter your comment!
Please enter your name here