ಪುತ್ತೂರು, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಪ್ರಮುಖರ ಪತ್ರಿಕಾಗೋಷ್ಠಿ

0

 • ಪಠ್ಯ ಪುಸ್ತಕವನ್ನು ಬಿಜೆಪಿ ಕೇಸರೀಕರಣಗೊಳಿಸುತ್ತಿದೆ: ಮಹಮ್ಮದ್ ಬಡಗನ್ನೂರು
 • ಏಕಾಏಕಿ ಪಠ್ಯಪುಸ್ತಕ ಪರಿಷ್ಕರಣೆಯ ಅಗತ್ಯತೆ ಏನಿತ್ತು: ಎಂ.ಬಿ.ವಿಶ್ವನಾಥ ರೈ
 • ನಾಡಗೀತೆಗೆ ಅವಮಾನ ಮಾಡಿದ ರೋಹಿತ್ ಚಕ್ರತೀರ್ಥ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷರಾಗಲು ಅರ್ಹರಲ್ಲ- ಡಾ.ರಾಜಾರಾಮ್ ಕೆ.ಬಿ
 •  ಶಾಲೆಗಳಿಗೆ ಮೂಲಸೌಕರ್ಯ ಒದಗಿಸಿ ಬಳಿಕ ಪಠ್ಯ ಪರಿಷ್ಕರಿಸಿ : ಅಮಳ ರಾಮಚಂದ್ರ
 •  ಮತೀಯ ವಿಭಜನೆಯೇ ಮೂಲಮಂತ್ರವೆಂಬಂತೆ ಬಿಜೆಪಿ ವರ್ತಿಸುತ್ತಿದೆ : ರಮಾನಾಥ ವಿಟ್ಲ


  ಪುತ್ತೂರು:ಬಿ.ಜೆ.ಪಿ ಸರ್ಕಾರವು ಆಡಳಿತಕ್ಕೆ ಬಂದ ಬಳಿಕ ಜನರ ಅವಶ್ಯಕತೆಗಳನ್ನು ಪೂರೈಸದೆ ಜನರಿಗೆ ಆರ್.ಎಸ್.ಎಸ್ ಸಿದ್ದಾಂತವನ್ನು ಹೇರಿಕೆ ಮಾಡುವ ಹುನ್ನಾರ ನಡೆಸಿ ಕುಖ್ಯಾತಿ ಗಳಿಸಿದೆ.ಭ್ರಷ್ಟಾಚಾರವೇ ತಾನು ಮಾಡುತ್ತಿರುವ ಅಭಿವೃದ್ದಿ ಎಂಬ ಭ್ರಮೆಯಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ.ಪ್ರಜೆಗಳ ಜೀವನದ ಬಹುಮುಖ್ಯ ಭಾಗವಾದ ಮೂಲಭೂತ ಶಿಕ್ಷಣಕ್ಕೂ ಬಿಜೆಪಿ ಸರ್ಕಾರ ಕಣ್ಣಿಟ್ಟಿದ್ದು ದೇಶದ ಹೋರಾಟದಲ್ಲಿ ಸಂಬಂಧವೇ ಇಲ್ಲದ, ಸ್ವಾತಂತ್ರ್ಯಕ್ಕಾಗಿ ಒಂದು ಹನಿ ರಕ್ತವನ್ನೂ ಸುರಿಸದ ಆರ್.ಎಸ್.ಎಸ್ ನಾಯಕರನ್ನು ಪಠ್ಯದಲ್ಲಿ ಸೇರಿಸಿ ಪಠ್ಯವನ್ನು ಕೇಸರೀಕರಣ ಮಾಡಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು ಆರೋಪಿಸಿದ್ದಾರೆ.

  ಪ್ರಸ್ತುತ ಸಂದರ್ಭದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆಯ ಅಗತ್ಯತೆ ಏನಿತ್ತು? ಬಿಜೆಪಿ ಪಕ್ಷ ಆಡಳಿತಕ್ಕೆ ಬಂದಾಗ ಮುಖ್ಯಮಂತ್ರಿಗಳಾಗಿ ರಾಜ್ಯವನ್ನು ಆಳಿದ ಯಡಿಯೂರಪ್ಪ, ಜಗದೀಶ್ ಶೆಟ್ಟರ್,ಡಿ.ವಿ.ಸದಾನಂದ ಗೌಡ, ಬಸವರಾಜ್ ಬೊಮ್ಮಾಯಿ ಈಗಿರುವ ಪಠ್ಯ ಪುಸ್ತಕವನ್ನು ಅಭ್ಯಾಸ ಮಾಡಿ ಉನ್ನತ ಸ್ಥಾನಕ್ಕೇರಿದ್ದಲ್ಲವೇ?ಅವರಿಗೆ ಶಿಕ್ಷಣದಲ್ಲಿ ಆಗದ ತೊಂದರೆ ಈಗ ಕಾಣಿಸಿಕೊಂಡಿದ್ದು ಹೇಗೆ? ಎಂದು ಮಹಮ್ಮದ್ ಬಡಗನ್ನೂರು ಪ್ರಶ್ನಿಸಿದರು.ಪುತ್ತೂರು ಬ್ಲಾಕ್ ಕಾಂಗ್ರೆಸ್ ಹಾಗೂ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಜಂಟಿ ಆಶ್ರಯದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮೇ೩೦ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

  ಬಿಜೆಪಿ ಸರ್ಕಾರವು ಪಠ್ಯದಲ್ಲಿ ಆರ್.ಎಸ್.ಎಸ್ ಸಿದ್ದಾಂತಗಳನ್ನು ಸೇರಿಸುತ್ತಿರುವುದು ಭವಿಷ್ಯದ ನಾಳೆಗಳಾದ ನಮ್ಮ ಮಕ್ಕಳಿಗೆ ವಿಷ ಕೊಟ್ಟು ಕೊಲ್ಲುವಂತಿದೆ.ಪರಿಷ್ಕರಣೆಯ ಹೆಸರಿನಲ್ಲಿ ಸರ್ಕಾರ ಕೋಮುವಾದದ ವಿಷಬೀಜ ಬಿತ್ತುವುದರೊಂದಿಗೆ ಇತಿಹಾಸದ ದಾಖಲೆಗಳನ್ನು ಮರೆಮಾಚುವ ಹುನ್ನಾರ ನಡೆಯುತ್ತಿದೆ.ಇದು ಮಕ್ಕಳ ಮೇಲೆ ಮಾಡುತ್ತಿರುವ ಬೌದ್ಧಿಕ ಭಯೋತ್ಪಾದಕತೆ ಎಂದ ಅವರು ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯ ಹತ್ತು ಜನರಲ್ಲಿ ಓರ್ವರನ್ನು ಬಿಟ್ಟು ಉಳಿದ ಒಂಭತ್ತು ಜನರೂ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ.ಬಿಜೆಪಿಯ ಈ ನಿರ್ಧಾರ ಅಲ್ಪಸಂಖ್ಯಾತ ಜನರನ್ನು ಇನ್ನಿಲ್ಲದಂತೆ ಮಾಡುವ ಹುನ್ನಾರವೆಂಬುದು ಸ್ಪಷ್ಟವಾಗುತ್ತದೆ.ಆದ್ದರಿಂದ ಕಾಂಗ್ರೆಸ್ ಪಕ್ಷವು ಸರ್ಕಾರದ ಈ ನೀತಿಯನ್ನು ವಿರೋಧಿಸುತ್ತಿದೆ ಹಾಗೂ ಕಟು ಶಬ್ದಗಳಿಂದ ಖಂಡಿಸುತ್ತೇವೆ ಎಂದು ಹೇಳಿದರು.

  ಜನರ ಮೇಲೆ ಆರ್‌ಎಸ್‌ಎಸ್ ಹೇರುವ ಕೆಲಸ: ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಮಾತನಾಡಿ, ಭಾರತವು ಪ್ರಜಾಪ್ರಭುತ್ವ ದೇಶ, ಇಲ್ಲಿನ ಸಂವಿಧಾನಕ್ಕೆ ವಿಶೇಷ ಮಾನ್ಯತೆ ಇದೆ.ಮಕ್ಕಳ ಶೈಕ್ಷಣಿಕ ಪಠ್ಯದಲ್ಲೂ ಸಂವಿಧಾನವನ್ನು ಅಳವಡಿಸಲಾಗಿದೆ.ಆದರೆ ಸಂವಿಧಾನದಲ್ಲಿ ಹೇಳುವ ಜಾತ್ಯಾತೀತತೆ ಮತ್ತು ಸಮಾನತೆಯೆಂಬ ವಿಚಾರ ಪರಿಷ್ಕೃತ ಪಠ್ಯಕ್ರಮದಲ್ಲಿ ಇಲ್ಲದಿರುವುದು ವಿಷಾದನೀಯ.ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ಸಂಘ ಪರಿವಾರದ ಹಿನ್ನೆಲೆ ಉಳ್ಳವರು ಆದ್ದರಿಂದ ಸಂಘದ ಸಿದ್ದಾಂತಗಳನ್ನು ವಿದ್ಯಾರ್ಥಿಗಳ ಮೇಲೂ ಹೇರುವಂತಹ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ಎಂಬ ಸಂಶಯ ಬರುತ್ತದೆ.ಇಲ್ಲವಾದಲ್ಲಿ ಏಕಾಏಕಿ ಪಠ್ಯ ಪುಸ್ತಕ ಪರಿಷ್ಕರಣೆಯ ಅಗತ್ಯತೆ ಏನಿತ್ತು?ಎಂದು ಪ್ರಶ್ನಿಸಿದರು.ಮತೀಯವಾದಿಗಳನ್ನು ಪಠ್ಯ ಪಸ್ತಕದಲ್ಲಿ ಆದರ್ಶವಾದಿಗಳೆಂದು ಬಿಂಬಿಸಲಾಗಿದೆ.ವಿದ್ಯಾಸಂಸ್ಥೆಯೊಳಗೆ ಕೋಮು ಭಾವನೆ ಮೂಡಿಸುತ್ತಿರುವುದಕ್ಕೆ ಇದೂ ಒಂದು ಉದಾಹರಣೆ.ಸಾಮಾಜಿಕ ಜಾಲತಾಣದಲ್ಲಿ ಬರೆಯುವ ರೋಹಿತ್ ಚಕ್ರತೀರ್ಥರು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷರಾಗಲು ಅನರ್ಹರು ಎಂದ ಅವರು,ಬಿಜೆಪಿಯವರು ಒಂದೊಂದೇ ಪ್ರಯೋಗಗಳನ್ನು ಮಾಡಿ ಜನರ ಮೇಲೆ ಆರ್.ಎಸ್.ಎಸ್ ತತ್ವ ಹೇರುವ ಕೆಲಸ ನಡೆಯುತ್ತಿದೆ. ಹೀಗೆ ಮುಂದವರಿದರೆ ಮುಂದೆ ರಾಷ್ಟ್ರ ಧ್ವಜದ ಸ್ಥಾನದಲ್ಲಿ ಭಗವಧ್ವಜವನ್ನೂ ತಂದು ನಿಲ್ಲಿಸಿಯಾರು, ಅಷ್ಟೇ ಯಾಕೆ ಸಂವಿಧಾನವನ್ನು ತಿದ್ದುವುದಕ್ಕೂ ಹಿಂಜರಿಯುವವರಲ್ಲ ಇಂತಹ ಬಿಜೆಪಿ ಸರ್ಕಾರದ ಇಬ್ಬಗೆಯ ನೀತಿಯನ್ನು ಪುತ್ತೂರು ಬ್ಲಾಕ್ ಕಾಂಗ್ರೆಸ್ ವಿರೋಧಿಸುತ್ತದೆ ಎಂದು ಅವರು ಹೇಳಿದರು.

  ದಾರ್ಶನಿಕರ ಪಠ್ಯ ಮರು ಅಳವಡಿಕೆಯಾಗಲಿ: ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್.ಕೆ.ಬಿ ಮಾತನಾಡಿ, ಮೌಲ್ಯಾಧಾರಿತ ಶಿಕ್ಷಣ ಮಕ್ಕಳ ಬದುಕಿಗೆ ದಾರಿದೀಪವಾಗುವಂತದ್ದು.ಶಾಲೆಯ ಪಠ್ಯವು ಮಕ್ಕಳ ಮನಸ್ಸನ್ನು ಅರಳಿಸುವಂತಿರಬೇಕೇ ಹೊರತು ಕೆರಳಿಸುವಂತಿರಬಾರದು,ಶಿಕ್ಷಣವು ಉತ್ತಮ ದಾರಿ ಹಿಡಿಯುವಲ್ಲಿ ಸಹಾಯವಾಗಬೇಕೇ ಹೊರತು ಮಕ್ಕಳ ದಾರಿ ತಪ್ಪಿಸಬಾರದು.ಬಿಜೆಪಿ ಸರ್ಕಾರದ ನೂತನ ಪಠ ಪುಸ್ತಕ ನೀತಿಯು ಮಕ್ಕಳ ದಾರಿ ತಪ್ಪಿಸುವಂತಿದೆ ಎಂದರು.ದಾರ್ಶನಿಕರ,ಸಾಹಿತಿಗಳ ಪಠ್ಯಗಳು ಜನರಿಗೆ ಆದರ್ಶಪ್ರಾಯವಾಗುತ್ತದೆ.ಆದರೆ ಪರಿಷ್ಕೃತ ಪಠ್ಯದಲ್ಲಿರುವ ಸಮಾಜಘಾತುಕರ ಪಠ್ಯಗಳು ಮಕ್ಕಳ ಮನಸ್ಸಿಗೆ ಘಾತುಕವಾದುದು.ಬಿಜೆಪಿ ಹಾಗೂ ನೂತನ ಪುಸ್ತಕ ಪರಿಷ್ಕರಣಾ ಸಮಿತಿಯು ತಮ್ಮ ಮೂಗಿನ ನೇರಕ್ಕೆ ಪಠ್ಯ-ಪುಸ್ತಕ ತಯಾರಿಸಿದ್ದಾರೆ ಎಂದ ಡಾ.ರಾಜಾರಾಮ್‌ರವರು, ನಾರಾಯಣ ಗುರುಗಳು ೧೮ನೇ ಶತಮಾನದಲ್ಲಿ ಸಮಾನತೆ ಸಾರಿದವರು.ಸಂಘರ್ಷದ ಹಾದಿ ತುಳಿಯದೆ ಸಮಾನತೆಯ ಮಂತ್ರ ಜಪಿಸಿ ಸ್ವಾಭಿಮಾನದ ಬದುಕು ಕಂಡವರು,ಆದರೆ ಬಿಜೆಪಿಯು ಅವರ ಪಠ್ಯಕ್ಕೆ ಕತ್ತರಿ ಹಾಕುವುದಲ್ಲದೆ ಇನ್ನೂ ಅನೇಕ ದಾರ್ಶನಿಕರ ಪಠ್ಯಕ್ಕೆ ಕತ್ತರಿ ಹಾಕಲಾಗಿದೆ,ರಾಷ್ಟ್ರ ಕವಿ ಕುವೆಂಪು ನಾಡಗೀತೆಯನ್ನು ಅವಹೇಳನ ಮಾಡಿದ,ಪ್ರಬುದ್ಧತೆ ಇಲ್ಲದ ರೋಹಿತ್ ಚಕ್ರತೀರ್ಥ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷರಾಗಲು ಅರ್ಹರಲ್ಲ.ಸರ್ಕಾರವು ಈ ಬಗ್ಗೆ ಮರುಪರಿಶೀಲನೆ ನಡೆಸಿ ಸರಿಪಡಿಸಬೇಕು ಹಾಗೂ ಈ ಹಿಂದೆ ಪಠ್ಯದಲ್ಲಿ ಅಳವಡಿಸಲಾಗಿದ್ದ ದಾರ್ಶನಿಕರ ಪಠ್ಯಗಳನ್ನು ಮರು ಅಳವಡಿಸಬೇಕು ಎಂದು ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಒತ್ತಾಯಿಸುತ್ತದೆ ಎಂದು ಹೇಳಿದರು.

  ಶಾಲೆಗಳಿಗೆ ಮೂಲಸೌಕರ್ಯ ಒದಗಿಸಿ ಬಳಿಕ ಪಠ್ಯ ಪರಿಷ್ಕರಣೆ ಮಾಡಲಿ: ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಳ ರಾಮಚಂದ್ರ ಮಾತನಾಡಿ ರಾಜ್ಯ ಬಿಜೆಪಿ ಸರ್ಕಾರಕ್ಕೆ ಶೈಕ್ಷಣಿಕ ಕ್ಷೇತ್ರದ ಮೂಲಭೂತ ಸೌಕರ್ಯಗಳ ಕೊರತೆ ಕಾಣುತ್ತಿಲ್ಲ.ಬದಲಾಗಿ ಪಠ್ಯ ಪರಿಷ್ಕರಣೆಗೆ ಟೊಂಕ ಕಟ್ಟಿ ನಿಂತಿದ್ದಾರೆ.ಕೊಳ್ತಿಗೆ ಗ್ರಾಂ.ಪಂ ವ್ಯಾಪ್ತಿಯ ಮಣಿಕ್ಕರ ಶಾಲೆಯಲ್ಲಿ ಕೊಠಡಿ ಸಮಸ್ಯೆ ಇತ್ತು.ಅಲ್ಲಿನ ಪೋಷಕರು,ಎಸ್.ಡಿ.ಎಂ.ಸಿ ಸದಸ್ಯರು ಸೇರಿಕೊಂಡು ಶಾಸಕರಿಗೆ ಕೊಠಡಿ ಸಮಸ್ಯೆ ಕುರಿತು ಮನವಿ ನೀಡಿದ್ದರು.ಆ ಭಾಗಕ್ಕೆ ಮೂರು ಬಾರಿ ಶಾಸಕರು ಆಗಮಿಸಿದರೂ ಮಣಿಕ್ಕರ ಶಾಲೆಗೆ ಶಾಸಕರ ಮುಖ ದರ್ಶನವಾಗಿಲ್ಲ.ಆ ಭಾಗದ ಕಾಂಗ್ರೆಸ್ ಬೆಂಬಲಿತ ಈರ್ವರು ಪಂಚಾಯತ್ ಸದಸ್ಯರು ಹಾಗೂ ಮಂಜುನಾಥ ಭಂಡಾರಿಯವರ ಸತತ ಪರಿಶ್ರಮದ ಫಲವಾಗಿ ಜಿಲ್ಲಾಧಿಕಾರಿಗಳು ೨ ಕೊಠಡಿಯನ್ನು ಮಂಜೂರು ಮಾಡಿದ್ದಾರೆ ಉಳಿದಂತೆ ಸ್ಥಳೀಯ ಉದ್ಯಮಿ ಸಂತೋಷ್ ಕುಮಾರ್ ರೈ ಹಾಗೂ ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ ತಲಾ ಒಂದು ಕೊಠಡಿ ನಿರ್ಮಾಣದ ಜವಾಬ್ದಾರಿ ವಹಿಸಿದ್ದಾರೆ.ಮುಂದಕ್ಕೆ ಈ ಕೊಠಡಿಗಳ ಉದ್ಘಾಟನೆಯ ಸಂದರ್ಭದಲ್ಲಿ ಶಾಸಕರು ಆಗಮಿಸಬಹುದು.ಬಿಜೆಪಿ ಸರ್ಕಾರ ಶಾಲೆಗಳಲ್ಲಿನ ಮೂಲಭೂತ ಸೌಕರ್ಯ ಸರಿಪಡಿಸಿ ಬಳಿಕ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಲಿ’ ಎಂದರು
  ಮತೀಯ ವಿಭಜನೆಯೇ ಮೂಲಮಂತ್ರವೆಂಬಂತೆ ವರ್ತಿಸುತ್ತಿದೆ: ಪುತ್ತೂರು ಕಾಂಗ್ರೆಸ್ ವಕ್ತಾರ ರಮಾನಾಥ್ ವಿಟ್ಲ ಮಾತನಾಡಿ ಬಿಜೆಪಿ ಮತೀಯ ವಿಭಜನೆಯೇ ತನ್ನ ಮೂಲಮಂತ್ರವೆಂಬಂತೆ ವರ್ತಿಸುತ್ತಿದೆ,ಬಿಜೆಪಿಗರು ತಮ್ಮ ಹುನ್ನಾರಗಳ ಮೂಲಕ ದೇಶವನ್ನು ಎಲ್ಲಿಗೆ ಮುಟ್ಟಿಸಲಿದ್ದಾರೆ? ಶೈಕ್ಷಣಿಕ ವಿಚಾರಗಳು ಪಕ್ಷಾತೀತವಾಗಿರಬೇಕು ಇಲ್ಲವಾದಲ್ಲಿ ಕಾಲೇಜುಗಳಲ್ಲಿ ನಡೆಯುತ್ತಿರುವ ವಿವಿಧ ಸಂಘಟನೆಗಳ ನಡುವಿನ ಸಂಘರ್ಷ ಪ್ರೌಢ ಶಿಕ್ಷಣಕ್ಕೂ ಕಾಲಿಡಲಿದೆ, ಅಪಾಯವನ್ನು ಅರಿತು ಮುನ್ನೆಚ್ಚರಿಕೆ ವಹಿಸಿಕೊಳ್ಳುವುದು ಒಲಿತು ಎಂದು ಹೇಳಿದರು.

LEAVE A REPLY

Please enter your comment!
Please enter your name here